ಕಸಕಸಿ ಕೊಬ್ಬರಿ ಹಸನುಳ್ಳ ಜಿಲಿಬಿಲಿ|
ಬಿಸಿಯ ಹೂರಣಗಡಬ ಬಿಳಿಯ ಬೆಲ್ಲಽಽ|
ರಸಬಾಳಿ ಖಬ್ಬ ಸುಲಿದು ಮುಂದಿಟ್ಟರ|
ಇಸಮಾಡಿ ಒಂದ ತುತ್ತ ತಿಂದೇನ ತಾಯಿ|
ಬಂಕಿ ಕಾಡತಾವ ತಾಯಿ ಪರಿಪರಿಯಿಂದ
ಬಂಕಿ ಕಾಡತಾವ ||೧||
ಆಕಳ ಹಾಲಾಗ ದುಮ್ಮಸ ಮಾಡ|
ಪರಡಿ ಸವತೀಬೀಜ ಪಾಯಸ ಮಾಡ|
ಯಾಲಕ್ಕಾಯ ಪತ್ತುರಿ ಜಾಜಿಕಾಯಿ ಮೊದಲುಮಾಡಿ|
ಇಷ್ಟ ಸಾಹಿತನೆಲ್ಲ ಹದಮಾಡ ತಾಯಿ|
ಬಂಕಿ ಕಾಡತಾವ ||೨||
ಗಂಗಾಳ ಝರಗಿ ಝಳಝಳ ಬೆಳಗ|
ತೆಂಬೀಗಿ ತುಂಬಿ ಬದಿಯಲ್ಲಿ ಇಡಽ|
ಡೊಣ್ಣಿ ತುಂಬ ತುಪ್ಪ ತಂದು ಮುಂದಿಟ್ಟಿರ|
ಬಟ್ಟೆದ್ದಿ ಬಾಯಾಗ ಇಟ್ಟೀನ ತಾಯಿ|
ಬಂಕಿ ಕಾಡತಾವ ||೩||
ಎಳ್ಳ ಹಚ್ಚಿದ ರೊಟ್ಟಿ ಎಣ್ಣಿ ಬದನೀಕಾಯಿ|
ಮಸರ ಕಲಸಿದ ಬುತ್ತಿ ಬಿಸಿಯ ಬಾನ|
ಅಲ್ಲ, ಮಾಗುಣಿ ಬೇರ, ಬೆಲ್ಲ, ಬೆಳವಲದ್ಹಣ್ಣ|
ಮನ ಬೇಡಿ ನನ ಜೀವ ಬಗಸ್ಯಾದ ತಾಯಿ|
ಬಂಕಿ ಕಾಡತಾವ ||೪||
ಹೋಳಿಹೆಣ್ಣಿವಿ ಸುತ್ತ ತನುಗಾಳಿ ಬೀಸ್ಯಾವ|
ಮಾಳೀಗಿ ಏರಿ ಬೆಳಖಿಂಡಿ ಮುಚ್ಚ|
ಬಣ್ಣಽದ ಹಚ್ಚಡ ಬಿಗಿಬಿಗಿದು ಹೊಚ್ಚಿದರ|
ಕಣ್ತುಂಬ ಒಂದು ನಿದ್ದಿ ಮಾಡೇನ ತಾಯೀ|
ಬಂಕಿ ಕಾಡತಾವ ||೫||
ಕುಂತಽರ ಆಕಡಿಕಿ ನಿಂತರ ತೂಕಡಿಕಿ|
ತಾಳಲಾರೆನೆ ತಾಯಿ ತೋಳಾರೆ ತಾರ|
ಮಂಚಕ ಒಪ್ಪತ ಹಾಸೀಗಿ ಮಾಡ|
ಮಂಚಕ ಎನ್ನ ಎಳದ್ಹಾಕ ತಾಯೀ|
ಬಂಕಿ ಕಾಡತಾವ ||೬||
*****
ಬಯಕೆಯ ಹಾಡು
ಒಬ್ಬ ಗರ್ಭಿಣಿಗೆ ಬಯಕೆಗಳು ಕಾಡುತ್ವೆ. ಅವಳು ತಾಯಿಯಲ್ಲಿ ತನ್ನ ಬಯಕೆಗಳನ್ನೆಲ್ಲ ಬೇಡುತ್ತಾಳೆ. ಅವಳ ಸಲಿಗೆಯ ಮಾತು ಹೇಳುವ ಬಗೆ ಎಶ್ಟು ಸೊಗಸಾಗಿವೆ; `ಕಸಕಸಿ ಕೊಬ್ಬರಿ, ಹೆಸನುಳ್ಳ ಜಿಲಿಬಿಲಿ, ಬಿಳಿಯ ಬೆಲ್ಲದ ಬಿಸಿಯ ಹೊರಣಗಡುಬು… ಇವನ್ನು ಮುಂದಿಟ್ಟರೆ ಇಸಮಾಡಿ ಒಂದು ತುತ್ತ ತಿಂದೇನು’ ಎನ್ನುತ್ತಾಳೆ! ಇದರಂತೆಯೆ `ಬಟ್ಟೆದ್ದಿ ಬಾಯಾಗ ಇಟ್ಟೇನು ತಾಯಿ’ `ತಾಳಲಾರೆನೆ ತಾಯಿ ತೋಳಾರೆ ತಾರ’-ಮೊದಲಾದುವು.
ಛಂದಸ್ಸು:- ಕುಸುಮಷಟ್ಟದಿಗೆ ಹೊಂದುತ್ತದೆ.
ಶಬ್ದ ಪ್ರಯೋಗಗಳು:- ಇಸ=ವಿಷ. ದುಮ್ಮಸ ಮಾಡ=ಅದರಲ್ಲಿ ಅಡಿಗೆ ಮಾಡು. ಮಸರ=ಮೊಸರು. ಬಾನ=ಬೋನ. ತನುಗಾಳಿ=ತಂಪುಗಾಳಿ.