ದಾಯಿ ಹಾಲನೆ ನಂಬಿ ಬಾಯಾರಿ ಬಸವಳಿದು
ತಾಯೆ ಎಂದರಚಲುಂ ಮಿಸುಕದಿರೆ ರಸನೆ,
ನೀನೆಮ್ಮನರಸುತಯ್ತಂದು ತೊಡೆಯಲಿ ತಳೆದು
ಮೊಲೆಯಿನಿಂತೆಮ್ಮ ಬಾಯ್ದುಂಬಿಸಲು ಸಸಿನೆ, ೪
ಧನ್ಯರಾವೆಮ! ದಾಯಿಯೂಡಿಸಿದ ಮಗು ಮುಂದು
ತನ್ನ ತಾನರಿತೆದ್ದು ನಿಡುನಿಲ್ಲಲಹುದೇ?
ರವಿ ಚಿತ್ರಿಪಂತೆ ಚಿತ್ರಿಪನೆ ಪುಷ್ಪಮನಿಂದು?
ನೀನೀನ ಜೀವ ದಾಯಿಯಿನೆಮಗೆ ಬಹುದೇ? ೮
ತಾಯೆ ನಿನ್ನಯ ಪುಣ್ಯಪೀಯೂಷಸ್ತನ್ಯಂ
ಸೂಸುತಿದೆ, ರಾಷ್ಟ್ರೀಯ ಶಿಕ್ಷಣಮನನ್ಯಂ ?
ನವಜೀವನದ ಬುಗ್ಗೆಯಿದನೊಂದನೆಮ್ಮ
ಹೃದಯದ ನಿದಾಘದಿಂ ಬತ್ತಿಸದಿರಮ್ಮ! ೧೨
ಕತ್ತಲೆ ಕವಿದ ನಮ್ಮ ಕಂಗಳಿಗೆ ಪರೆ ನೆರೆಯೆ,
ನಮ್ಮ ನಾವ್ಮರೆತು ನಮ್ಮವರ ಮರೆವನ್ನಂ,
ಚೆದರಿ ನಮ್ಮೊಳಗೆ ಜಗಳಾಡಲೇನಚ್ಚರಿಯೆ?
ಸಾಕಿನಿತು! ರಾಷ್ಟ್ರೀಯ ಶಿಕ್ಷಣಮೆ ನಿನ್ನ ೧೬
ದೀಧಿತಿಯಿನೆಮ್ಮಯ ಮನೋನಯನಮಂ ತೆರೆದು,
ಭೇದಗಳ ಬಿರುವರೆಯ ಹೆರೆಯಿಸುವುದಲ್ಲಿ!
ನಾನೆ ನಾ ನೀನೆ ನೀನಿದನೆಮ್ಮೆದೆಯಿನರೆದು
ನಾವು ನಾವೆಂಬ ಭಾಷೆಯ ಕೆತ್ತಿಸಲ್ಲಿ! ೨೦
ಕ್ರೈಸ್ತ ಪಾರಸಿ ಜೈನ ಮುಸಲಮಾನ್ ಹಿಂದು
ವೆಮಗೆಲ್ಲರಿಗೆ ನಮ್ಮ ಭಾರತಮಿದೊಂದು
ತವರು ಗಡ! ರಾಷ್ಟ್ರೀಯ ಶಿಕ್ಷಣಮೆ ಬಂದು
ಒಟ್ಟಿನ ತವರ್‍ತನವನೆಸಗಿನ್ನು ಮುಂದು! ೨೪
ಎದ್ದೇಳಿರೈ ಬಂಧುಗಳಿರ! ಕೆಲವರಿಯುತಿದೆ
ರಾಷ್ಟ್ರೀಯ ಶಿಕ್ಷಣದ ಸಪ್ತಾಹಮಿಂದು!
ತಂತನೂಳಿಗವ ಗೆಯ್ಯಿರಿಮೆಂದು ಕರೆಯುತಿದೆ,
ಬಂಗಾರಮಪ್ಪುದು ಭವಿಷ್ಯ ವಲಮೆಂದು! ೨೮
ತನ್ನ ತಾಯ್ನುಡಿಯಿಂದ ದುಡಿದ ಬಿಜ್ಜೆಯೆ ಬಿಜ್ಜೆ!
ಹೆರರ ನಾಲಗೆಯೆಂಜಲೆನ್ನೆಗಂ ಸವಿಯೊ?
ತನ್ನ ಮುಂಗತಿ ತೋರೆ ತನ್ನ ಹಿರಿಯರ ಹೆಜ್ಜೆ!
ಹೆರರ ಬೆಳಕೊಳೆ ಕಾಂಬ ತನ್ನವರ ೧ ಕವಿಯೊ? ೩೨
ಅವರವರ ನುಡಿಗಳಿಂದವರವರ ಜಾಣಿ
ಕೆಯನೆಚ್ಚರಿಸುವ ನುಡಿಗಳ ತಾಯೆ ವಾಣಿ!
ನಿರವಶೇಷ ಜ್ಞಾನದರ್‍ಜನವನೆಮ್ಮ
ನುಡಿಯಿನೆಮಗಿತ್ತು ಭಾರತವ ಸಲಹಮ್ಮ! ೩೬
*****
ದ್ರುಷ್ಟಾರ (seer)