ಕವಿತೆ ಮತಿಜಲ ನಲಿನ,
ವ್ಯಸನ ವನಧಿಯ ಪುಲಿನ,
ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ,
ಕವಿತೆ ನವರಸ ರಂಗ
ವದು ತ್ರಿವೇಣಿಯ ಸಂಗ
ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬
ಧ್ಯಾನ ಗನಿಗಳ ರನ್ನ,
ಪ್ರಣಯ ಭಿಕ್ಷುವಿನನ್ನ,
ಕವಿತೆ ಜೀವನಸಮರ ಯೋಧರ ತುತೂರಿ,
ಕರುಣೆಯ ನಯನ ಬಿಂದು
ವೇಕಾಂತತೆಯ ಬಂಧು-
ಬಹುರೂಪದಿಂ ಸುಖಿಸುವುದು ಮನಮನವ ಸೇರಿ. ೧೨
ಇಂದುವುರುಗುವುದೇಕೆ?
ತಾರೆ ಮಿರುಗುವುದೇಕೆ?
ಕುಕಿಲು ಕರಗುವುದೇಕೆ ವಿರಹ ವಿಸ್ಮೃತಿಗೆ ?
ಅವರವರಿಗದೆ ಧರ್‍ಮ
ವಿದು ವಿಧಾತನ ಮರ್‍ಮ –
ಕವಿಯ ಹೃದಯವೆ ನರ್‍ಮಕುಂಜ ಕವಿತಾಸತಿಗೆ. ೧೮
ಪ್ರಾಸದಕ್ಷರ ಕೆಲವು
ತೊಡವುಗಳ ಕಿಲಕಿಲವು,
ಶೈಲಿಯಂಗದ ಚೆಲುವು, ಛಂದಸಂಚಲವು
ಅರ್‍ಥಲಾಲಿತ್ಯವೆನು
ವ ಸತೀತ್ವವಿರದೊಡನು
ಗೊಳಿಸುವಳೆ ಕವಿತಾರಮಣಿ ರಸಿಕನಿಗೆ ನಲವು? ೨೪
ವಿಪುಲ ಮಾನುಷ ಜೀವ
ನದ ಯಥಾರ್‍ಥ ಸಮಾವ
ಲೋಕನಂ ಕವಿತೆ ಎನೆ ಪಡುದೀವಿಯವರು,೧
ಕವಿತೆ ಬಡಗಣ ತಾರೆ
ಯಂತೆ ದಾರಿಯ ತೋರೆ,
ಎನಿತು ಧನ್ಯರೊ ಸಂಸ್ಕೃತಿಯ ನಾವನೇರ್‍ದವರು! ೩೦
ಸಂಪಗೆಗೆ ಕಂಪಿಹುದೆ?
ಇಂಗೋಲಿಗಿಂಪುಹುದೆ?
ಮಳೆವಿಲ್ಗೆ ಸೊಂಪಿಹುದೆ? ಕದಿರಿಹುದೆ ರವಿಗೆ?
ತಿಂಗಳಿಗೆ ತಂಪಿಹುದೆ?
ಸಾಗರಕ ಪೆಂಪಿಹುದೆ?
ಇಲ್ಲದಡೆ ಪೇಳು ಪೊಸ ಸೃಷ್ಟಿರಚಿಸುವ ಕವಿಗೆ ೩೬
ಕಂಬದಿಂ ಕವಿವಂದು,
ದಶತಿರನ ತಿವಿವಂದು,
ಫಲುಗುಣಗೆ ಕೊಳುಗುಳದಿ ಗೀತೆಯೊರೆವಂದು,
ಅರಳಿಯಡಿ ತಪಿಪಂದು,
ಸಿಲುಬೆಯಿಂ ಕ್ಷಮಿಪಂದು…
ರವಿಯೊ ಮೇಣ್ ಕವಿಯೊ ಕಾಣಿಸುವನಂದುಮನಿಂದು? ೪೨
ಮನದನ್ನನಿನೆಯಳಿಗೆ,
ಮನದನ್ನೆ ಇನೆಯನಿಗೆ,
ತಂದೆತಾಯನಗಲ್ದವರ ತಾಯಿತಂದೆ,
ತಂಗಿಯಳಿದರ ತಂಗಿ,
ಬಂಧುಗಳನು ಮರುಂಗಿ
ಶೂನ್ಯಮಾದೆದೆಯ ಪಡಿವಾವಿ ಕವಿತೆಯದೊಂದೆ! ೪೮
ಜಗದುದಯ ನಡುವಗಲು
ಸಂಜೆ ರಜನಿಯ ಮಿಗಿಲು
ನೆನಸು ಕನಸುಗಳನರಿಯಲು ಮನಸನೀಯೆ,
ಗುರುವಿನಾಶ್ರಮದಂತೆ
ಕವಿತೆ ವಿದ್ಯೆಯ ಸಂತೆ-
ಭುವನ ಕವಿತೆಗೆ ಕವಿಯ ಕವಿತೆಯೊಪ್ಪುವ ಛಾಯೆ. ೫೪
ಕವಿಗಿಂತ ಪಗೆಯಿಲ್ಲ
ಪರವಶತೆ ಒಗೆಗೆಲ್ಲ-
ಕವಿಯೆ ಸ್ಪಾತಂತ್ರ್ಯ ಮಧು ಕುಡಿವ ಮಧುಕರನು,
ಆದಿಕವಿ ಹರಿಯಿಂದ
ಕಲಿತು ಪರಿಪರಿಯಿಂದ
ಪರಹಿತವ ಬೆದರದೆಸಗುವನವನೆ ಕವಿವರನು ೬೦
ಅಬಲೆಯರ ತೋಳ್ಗಳನು
ಪರವಶರ ಬಾಳ್ಗಳನು
ಹುರಿದುಂಬಿಪುದು ನಾಡಿನಾಡಿಯಲಿ ಹರಿದು,
ಉದ್ಧರಿಸಿ ಪತಿತರನು,
ತಡೆದು ದುಶ್ಚಂತರನು,
ಧರ್‍ಮಪಥಕೊಯ್ಯುವುದು ಕವಿತೆಗಿದು ದಿಟ ಬಿರಿದು! ೬೬
ದಿನಭುವನನನು ಪದೆದು
ಹಾಸುಹೊಕ್ಕಂತೆ ಪದು
ಪಿಂದಲೊಂದಿಸುತೊಂದೆ ಮಗ್ಗದಲಿ ನೇತ
ಕವಿತೆ ಶಬಲಾಂಶುಕವ
ನುಡುತ ಕವಿಗತಿಸುಖವ
ನೀಡು ದೇವಕಿಕಂದ ಕವಿಚಂದ್ರ ದಿನನಾಧ! ೭೨
*****
1 Poetry is the criticism of Life’ (Matthew Arnold)