ಕೋಳಿ ಕೂಗಿ ನಸುಕನೆಚ್ಚರಿಸುವ ಮುನ್ನ,
ಹೊಂಗದಿರನೆದ್ದು ವಸುಧೆಯ ನೋಡಿ ನಗುವ ಮುನ್ನ,
ಹಗಲ ಮುಗಿಲುಗನಸಿನಲಿ ಬೆಂಗದಿರ ಮಾಯವಾಗುವ ಮುನ್ನ,
ನನ್ನ ಕಿಟಕಿಯ ಬಳಿ ರೆಂಬೆಯ ಮೇಲೆ ಕುಳಿತು
ಕೊಂಬು ಹಿಡಿದಿತ್ತು ಕೋಗಿಲೆಯೊಂದು
ನಿದ್ದೆ ತೊಲಗಿತು; ಕಿವಿ ಸೋತವು; ಮನಸ್ಸು ಹಾತೊರೆಯಿತು,
‘ಕುಹೂ ಕುಹೂ’ ಎಂದು ಗಾನದ ಮಳೆ ಸುರಿಸುವ ಸ್ವರವೇ ಓಂಕಾರವಾಯ್ತು
ನನ್ನ ಬಾಳುವೆಯ ಕೋಯಿಲವ ಬೆಳಗಲು ಬಂದಿದೆಯೆಂದೆ ಕೋಗಿಲವಿದು
ನನ್ನ ಜೀವದ ಹಕ್ಕಿ ಹಾರಿ ಪಡೆಯಲೆಳಸಿತು ಸಂದೇಶವನ್ನು.
‘ಕುಹೂ ಕುಹೂ’ ಎಂದು ಕೊಂಬು ಹಿಡಿದಿದ್ದ ಕೋಗಿಲೆಯ,-
ಭೋಂಕನೆದ್ದು ಭೌಂವ್ವೆಂದು ಬೆದರಿಸಿತು ನೋಡು
ಗಿರಣಿಯ ಭೋಂಗಾನಾದ!
ಸಮಾಧಿಭಂಗವಾಗಿ ಕೋಗಿಲೆಯು ಹಾರಿತ್ತು.
ಆಶಾಭಂಗವಾಗಿ ಜೀವವು ಮರಳಿತ್ತು.
ಸೈರನ್ನಿನ ಮಾಯೆ ಜೀವಯುಗಲವನಗಲಿಸಿತ್ತಯ್ಯ!
ಅಗಲಿಸಿ ಬಂಧಿಸಿತ್ತು!
*****