– ಪಲ್ಲವಿ –
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲವಿಖ್ಯಾತೇ !
ಜಯ ಸತ್ಯಸಾರ ಸಂಭೂತೇ….
ಜಯ ಜಯ ಭಾರತ ಭೂಮಾತೇ !
೧
ವರುಣದೇವ ವರವಾಗಿ ನೀಡಿರುವ
ಶರನಿಧಿಗಳು ಘೂರ್ಣಿಸುತ….
ಮೊರೆಯುತಿಹವು ಹಗಲಿರುಳನು ಗಣಿಸದೆ
ನಿನ್ನ ಯಶದ ಸಂಗೀತ !
ಮೂಡಣ ಪಡುವಣ ತೆಂಕಣ ಗಡಿಯೊಳು
ಎಲ್ಲೆಲ್ಲಿಯು ಜಲದೂತ-
ಹೂಡಿಯಿರುವ ಕಾಸಿನ ಕಡುಗೋಂಟೆಯ
ನಿನ್ನ ರಾಜ್ಯ ನಿರ್ಭೀತ !
ಹೆಣೆದಿವೆ ಅಲೆಗಳ ಮಾಲೆ….ರ-
ಕ್ಷಣೆಯನ್ನು ಪಡೆದಿವೆ ವೇಲೆ….ಓ
ಜನನಿ, ನಿನಗಿರದು ಸೋಲೇ !
ಜಯ ಜಯ ಭಾರತ ಭೂಮಾತೇ-ಜಯ-
ಜಯ ಮಹಿಮಾಕುಲವಿಖ್ಯಾತೇ !
೨
ಗಿರಿಯ ರಾಜ ಪರಿವಾರ ಸಹಿತ ನಿಂ-
ತಿರುವ ಬಡಗಲಲ್ಲಿ….
ಹೊರೆಯುತಿರುವ ದಿಗ್‌ನಾಗನಾಗಿ ನಿಡು-
ನೋಟಗಳನು ಚೆಲ್ಲಿ ;
ಹರಿಸುತಿಹನು ನಿರ್ಝರಿಣಿಗಳನು ನೂ-
ರಾರು ರೂಪಗಳಲಿ….
ಸಿರಿಯಿಂದಲಿ ನಿನ್ನರಮನೆ ತುಂಬುವ
ಹೃದಯಾಕೂತಿಯಲಿ.
ಸುರಗಂಗೆಯನಿಳುಹಿರುವ-ಸುಧೆ-
ಯೊರತೆಯನ್ನು ಬಲಿದಿರುವ-ಬಲ-
ದರಿಮೆಯನ್ನು ಬೆಳಸಿರುವ…
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ !
೩
ಮೊದಲು ನಿನ್ನಂಗಣದಲಿ ಹರಡಿದನು
ರವಿಯು ಕಿರಣ ಜಾಲಾ…
ಮೊದಲ ಬೆಳಕು ಕಂಡವಳು ನೀನೆ ತೋ-
ರಿದೆಯೆ ಲೋಕಕೆಲ್ಲಾ !
ನಿನ್ನ ಸಂತಾನ ಮನು-ಮುನಿ ವಿತಾನ
ಹಾಡಿ ಸಾಮಗಾನಾ….
ಬನ್ನಗಳನ್ನು ನೀಗಿಸಿತು ಬಾಳಿನೊಳೆ
ಮಾಡಿ ಅಮೃತಪಾನಾ !
ಜಗವು ಜಡತಿಯಲ್ಲಿರಲು-ನಿನ-
ಗೊಗೆಯಿತಂದೆ ಮುಂಬಗಲು-ಇದು
ನಿನ್ನ ವುಣ್ಯದೊಂದರಳು….
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ!
೪
ಧರ್ಮದೈವತದ ಮರ್ಮವರಿದು ಕೈ –
ಗೊಡುತ ಕರೆದು ತಂದೆ….
ಕರ್ಮದಾ ಹುರುಳ ಮೊರ್ಮೆದಲೆ ತಿಳಿದು
ದುರ್ಮತಿಯನೆಲ್ಲ ಕೊಂದೆ.
ನೂರು ನೂರು ತರೆಯೂರಿನಲ್ಲಿ ಮರೆ-
ಗೊಂಡ ಸತ್ಯ ಮುಖವ…
ಏರಿ ಮೇಲೆ, ತರೆಹಾರಿಸುತ ಜಗಕೆ
ತೋರಿದೆ ನಿಜಸುಖವ.
ಕವಿರಾಜರ ನೀ ಕರೆದೆ-ನವ-
ನವ ಕಾವ್ಯದ ಮಳೆಗರೆದೆ-ಭುವಿ-
ಗೆಲ್ಲ ಜೀವಕಳೆಯೆರೆದೆ….
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ !
*****