ಮುತ್ತುಗದ ಮರವು ಮರಗಳಿಗೆಲ್ಲಾ ಗುರುವಂತೆ. ಮರಗಳೆಲ್ಲಾ ಅದರ ಬಳಿಗೆ ಓದು ಕಲಿಯಲು ಹೋಗುತ್ತಿದ್ದವಂತೆ. ಅದು ಹಣ್ಣಿನ ಗಿಡಗಳಿಗೇ ಒಂದು ತರಗತಿ, ಹೂವಿನ ಗಿಡಗಳಿಗೇ ಒಂದು ತರಗತಿ ಎಂದು ಬೇರೆ ಬೇರೆ ಮಾಡಿದ್ದಿತಂತೆ. ಅಂತೂ ಪಾಠಗಳೇನೋ ಕ್ರಮವಾಗಿ ನಡೆಯುತ್ತಿದ್ದವು. ಹುಡುಗರು ಗುರುಗಳು ಹೇಳಿದಂತೆ ಕೇಳಿಕೊಂಡು ವಿದ್ಯೆ ಕಲಿಯುತ್ತಿದ್ದರು.
ಹಣ್ಣಿನ ಗಿಡಗಳಲ್ಲಿ ಬಾಳೆಯೂ, ಹೂವಿನ ಗಿಡಗಳಲ್ಲಿ ಸುಗಂಧರಾಜನೂ ಇಬ್ಬರೂ ಗೆಳೆಯರಾದವು. ಅವರಿಬ್ಬರಿಗೂ ಕೊಂಚ ಜಂಭ. “ಮುತ್ತುಗದ ಎಲೆಗಿಂತ ನನ್ನ ಎಲೆ ದೊಡ್ಡದು; ಅಲ್ಲದೆ ಜನರು ಮುತ್ತುಗದ ಎಲೆಗಿಂತ ನನ್ನ ಎಲೆಗೆ ಬೆಲೆಯನ್ನು ಕೊಡುವರು” ಎಂದು ಬಾಳೆಗೆ ಜಂಭ. “ಮುತ್ತುಗದ ಹೂ ಎಷ್ಟು ಅಂದವಾಗಿದ್ದರೇನು? ವಾಸನೆಯೇ ಇಲ್ಲ, ನನ್ನ ಹೂವಿನ ಮುಂದೆ ಹೂವೇ?” ಎಂದು ಸುಗಂಧರಾಜನಿಗೆ ಜಂಭ. ಈ ಜಂಭವು ಬಲಿಯಿತು. ಬಾಳೆಯೂ ಸುಗಂಧರಾಜನೂ ಬರುಬರುತ್ತ ಅವಿಧೇಯರಾದರು. ಅವು ಗುರುಗಳು ಹೇಳಿದ ಮಾತನ್ನು ಕೇಳದೆ ಹೋದವು.
ಮುತ್ತುಗವೂ ಇದನ್ನು ಕಂಡು, ಅವರಿಬ್ಬರನ್ನೂ ಕರೆದು “ನೀವು ಹೀಗೆ ಮಾಡಬಾರದು. ಹೇಳಿದ ಮಾತು ಕೇಳದಿದ್ದರೆ ನಿಮಗೇ ಕಷ್ಟ” ಎಂದು ಹೇಳಿತು. ಅವು ಕೇಳಲಿಲ್ಲ. ಆಗ ತರಗತಿಯಲ್ಲಿ “ಕವಲು ಬಿಡುವುದು” ಎಂಬ ಪಾಠವು ಆಗುತ್ತಿತ್ತು. ಅವಿಧೇಯರಾದ ಬಾಳೆ, ಸುಗಂಧರಾಜಗಳು ಪಾಠವನ್ನು ಗಮನಿಸಲಿಲ್ಲ.
ಕೆಲವು ದಿನವಾಯಿತು. ಮಲ್ಲಿಗೆ, ಜಾಜಿ, ಸಂಪಿಗೆ, ಪಾದರಿ, ಸುರಗಿ, ಪಗಡೆ, ಮೊದಲಾದ ಹೂವಿನ ಗಿಡಗಳೂ, ಮಾವು, ಬೇಲ, ಸೇಬು, ದ್ರಾಕ್ಷಿ, ಕಿತ್ತಳೆ, ಮೊದಲಾದ ಹಣ್ಣಿನ ಗಿಡಗಳೂ ಕವಲೊಡೆದವು. ಏನೇನು ಮಾಡಿದರೂ ಬಾಳೆಯೂ ಸುಗಂಧರಾಜನೂ ಕವಲು ಬಿಡಲಾಗಲಿಲ್ಲ. ಅವುಗಳಿಗೆ ಬಹಳ ದುಃಖವಾಯಿತು. “ಗುರುವು ಹೇಳಿದ ಮಾತು ಕೇಳಲಿಲ್ಲವಲ್ಲ! ಕೆಟ್ಟೆವಲ್ಲಾ!” ಎಂದು ಬಹಳ ನೊಂದುಕೊಂಡವು. ಈಗಲೂ ನೀವು ಬಾಳೆಯನ್ನೂ ಸುಗಂಧರಾಜನನ್ನೂ ನೋಡಿ. ಹಣ್ಣು ಹೂವು ಆದಮೇಲೆ ಮಿಕ್ಕ ಗಿಡಗಳು, ಕವಲೊಡೆದು ಸಂತೋಷದಿಂದ ಬೆಳೆಯುತ್ತಿದ್ದರೆ, ಅವೆರಡೂ ದುಃಖದಿಂದ ಬಾಡಿ ಬಳಲಿ ಒಣಗಿ ಹೋಗುವುವು.
*****