ಸತ್ಯಾನ್ವೇಷಣೆ ಮಾಡುವುದೇ…
ಕಥೆಗಳು ರೈಲುಬಿಡುವ ಚಿತ್ರಣದೊಳಗೆ
ತನ್ನವೇ ವಜ್ರಖಚಿತ ವಸ್ತ್ರ ಒಡವೆ ನೋಡಿ
ತಾನೇ ಮುಖವಾಡವಾಗುತ
ಕಿರೀಟದೊಳಗೆ ದೇವರು ಹುದುಗಿ ಉಸಿರುಗಟ್ಟಿ
ನಡುರಾತ್ರಿಗೆ ಎದ್ದೋಡಿದ ಬಗೆಗೆ ಮೂರ್ಖನಾಗಿ
ನಿಂತಲ್ಲೇ ನಿಂತು ಯೋಗದಲಿ ತೊಡಗಿ
ಸೂರ್‍ಯಪಾನ ಚಿತ್ತಚಂಚಲವೊ
ಮತ್ತೇರಿದ ಮನದ ಗೊಂಚಲವೊ
ಗಜಿಬಿಜಿ ಗೀಜಗನ ಗೂಡಿನೊಳಹೊರಗೆ
ಕೂಡಿಸಿ ಕಳೆದು ಗುಣಿಸಿ ಭಾಗಿಸಿದ ಪರಿಗೆ
ಮೂಡಿದ ಭಿತ್ತಿಚಿತ್ರಗಳು ಹಗುರಾಗಿ ಹಾರುವ ಚಿಟ್ಟೆಗಳು
ಹಂಜಿಯಾಗಿ ತೇಲುವ ಮೋಡಗಳ ಚಿತ್ತಾಪಹಾರಕೆ
ಪ್ರಶ್ನೆ ಪ್ರಶ್ನೆ ಮೊಳಗೆ ಭಾರವೊ.
ನೆಲದಗಲ ಚಿತ್ತಚಂಚಲ ಕಲ್ಮಶಗಳ ನಿಗೂಢ
ಮೂಕವಿಸ್ಮಿತ ಮನದಬಣ್ಣಗಳ ಅಂಕುಡೊಂಕು
ಗಿರಕಿ ಹೊಡೆದು ಮುಳ್ಳಾಗಿಸುವ
ಮಗದೊಮ್ಮೆ ಮೃದುವಾಗಿಸುವ ತೆರನಕೆ
ಭಾವಚಿತ್ತದ ಸೋಪಾನ ಕಡಲತಡಿಯ ಕಂಪನಗಳ
ಉತ್ತರದಂತಹ ಪ್ರಶ್ನಾರ್ಥಕ ಪ್ರಶ್ನೆ.
*****