ಬೆಂಗಳೂರಿನಲ್ಲಿ ಒಂದು ಮಾವಿನ ತೋಪು. ಆ ತೋಪಿನಲ್ಲಿ ಒಂದು ಹಿಂಡು ಕಪಿಗಳು ಇದ್ದವು. ಅವು ತಮ್ಮ ಮರಿಗಳನ್ನೆಲ್ಲಾ ಕಟ್ಟಿಕೊಂಡು ದಿನವೂ ತಿಂಡಿಗಾಗಿ ಬೀದಿಬೀದಿ ಆಲೆಯುತ್ತಿದ್ದವು. ತಾಯಿತಂದೆ ಕಪಿಗಳು, ಮರಿಗಳನ್ನು ಕರೆದು “ಜೊಕೇ! ಹಿಂಡು ಬಿಟ್ಟು ಹೋದೀರಿ!” ಎಂದು ಆಗಾಗ ಹೇಳುತ್ತಿದ್ದವು.
ಆ ಹಿಂಡಿನಲ್ಲಿ ತಿಮ್ಮ ಎಂಬ ಒಂದು ಮರಿ ಇತ್ತು. ಆದು ಒಂದು ದಿನ “ಯಾವಾ ಗಲೂ ಇವರ ಜೊತೆಯಲ್ಲಿಯೇ ಏಕೆ ಹೋಗಬೇಕು? ಇಂದು ನಾನೇ ಬೇರೆ ಹೋಗುತ್ತೇನೆ” ಎಂದುಕೊಂಡಿತು. ಅಂದು ಹಾಗೆಯೇ, ಅವರೆಲ್ಲರೂ ಹೋಗುತ್ತಿದ್ದ ದಾರಿಯನ್ನು ಬಿಟ್ಟು, ಮತ್ತೊಂದು ಹಾದಿಯನ್ನು ಹಿಡಿಯಿತು. ಎಂದಿನಂತೆ ಮರಿಗಳೆಲ್ಲ ಜತೆಯಲ್ಲಿ ಬರುತ್ತಿವೆ ಎಂದು ದೊಡ್ಡ ಕಪಿಗಳೂ ಮುಂದು ಮುಂದಕ್ಕೆ ಹೋದವು. ತಿಮ್ಮನು ಹಿಂದೆ ಉಳಿದುದು ಯಾರಿಗೂ ತಿಳಿಯದು.
ತಿಮ್ಮನು ಕೊಂಚದೂರ ಹೋಗುವುದರೊಳಗಾಗಿ, ಒಂದು ನಾಯಿ ಬಂತು; ತಿಮ್ಮನನ್ನು ಕಂಡು ಬೊಗಳಿತು. ಅದನ್ನು ಕಂಡು ಕೆಲವರು ತುಂಟ ಹುಡುಗರು ಬಂದರು. ತಿಮ್ಮನನ್ನು ಬೇಕಾದಷ್ಟು ಕೀಟಲೆ ಮಾಡಿದರು. ಕೆಲವರು ಮುಖವನ್ನು ಉದ್ದಮಾಡಿ, “ಗುರ್‌ಗುರ್” ಎಂದು ಅಣಕಿಸಿದರು. ಮತ್ತೆ ಕೆಲವರು ಕೈಚಪ್ಪಾಳೆಯಿಟ್ಟು “ಕೋತೀ ತಿಮ್ಮಾ! ಲೇ! ಕೋತೀ ತಿಮ್ಮಾ!” ಎಂದು ಅದನ್ನು ರೇಗಿಸಿದರು. ಇನ್ನು ಕೆಲವರು ಕಲ್ಲಿನಿಂದ ಹೊಡೆದರು. ಇದನ್ನೆಲ್ಲಾ ಕಂಡು ತಿಮ್ಮನಿಗೆ ಬಲು ದಿಗಿಲಾಯಿತು. ಅರಿಚಿಕೊಂಡಿತು; ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು ಹೇಗೋ ತಿಳಿಯದೆ, ಸುಮ್ಮನೆ “ಕಿಚಿಕಿಚಿ” ಎಂದು ಒರಲಿಕೊಂಡಿತು.
ಅಷ್ಟರಲ್ಲಿ ಅದರ ಅರಚಾಟವು ದೊಡ್ಡ ಕಪಿಗಳಿಗೆ ಕೇಳಿಸಿತು. ಕೂಡಲೇ ಹಿಂಡಿಗೆ ಹಿಂಡೇ ತಿಮ್ಮನಿರುವ ತಾವಿಗೆ ಓಡಿಬಂದವು. ಅವು ಬರುತ್ತಲೇ ಹುಡುಗರೂ ಓಡಿಹೋದರು. ನಾಯಿಯೂ ಓಡಿಹೋಯಿತು.
ಆಗ ಅದಕ್ಕೆ ಬುದ್ಧಿ ಬಂತು. ತಿಮ್ಮನು ಅಲ್ಲಿಂದ ಮುಂದೆ ಎಂದೂ ಅವಿಧೇಯನಾಗಿ ನಡೆಯಲಿಲ್ಲ. ಹಿಂಡಿನಲ್ಲಿ ಯಾರಾದರೂ ತಾಯಿತಂದೆಗಳು ಹೇಳಿದ ಮಾತು ಕೇಳದೆ ಹೋದರೆ, ತಿಮ್ಮನು ಅವರಿಗೆ ತನ್ನ ಕಥೆಯನ್ನು ಹೇಳಿ ದಾರಿಗೆ ತರುತ್ತಿತ್ತು.
*****