ನನ್ನೊಳಗೆ ನೂರಾರು ಹಕ್ಕಿಗಳಿದ್ದವು. ಅವುಗಳಿಗೆ
ಅವುಗಳದೇ ನೂರಾರು ಹಕ್ಕುಗಳಿದ್ದವು. ಒಂದು ದಿನ
ದೇವತೆಗಳು ಬಂದರು. ಸ್ವರ್ಗಕ್ಕೆ ಕರೆದರು.
ಹಕ್ಕಿಗಳು ನಾವು ಸ್ವಚ್ಛಂದ ಅಲೆದೆವು. ಹಾರಲು ನೀಲ ಆಕಾಶ
ಪದ ಊರಲು ಇಂದ್ರಾಸನ. ದೇವತೆಗಳು ಬೆರಗಾದರು.
ನಮ್ಮ ನಿಷ್ಕಳಂಕ ಹಾಡುಗಳಿಗೆ ಅಪ್ಸರೆಯರ ನರ್ತನ
ಹೋಮದಿಂದ ಮೇಲೆದ್ದ ಧೂಮ ! ಈ ಮನುಷ್ಯನ ಮಿತಿ
ಈತನ ತೀರಲಾರದ ಕಾಮ ನಮ್ಮ ಹೆಗಲಿನ ಮೇಲೆ ಈತನ ಭೂಮಿಯ ಭಾರ!
ಎಲೆ ನಹುಷನೇ ಬೀಳು – ಮರಳಿ ಪೃಥ್ವಿಗೆ ದ್ಯೆತ್ಯಸರ್ಪವಾಗಿ.
ನನ್ನ ಸುಡುತ್ತಿದೆ ಅಯ್ಯೋ
ಋಷಿಗಳ ಶಾಪ. ಕರುಣೆಯಷ್ಟೇ ಸರಳ
ಸುರರ ಕೋಪ ದೇವತೆಗಳೇ ಕ್ಷಮಿಸಿ. ನನ್ನ ನೋವಿಗೆ ಕೈ
ಕಾಲುಗಳಿಲ್ಲ. ವೇದನೆಗೆ ವಿಷದ ಹಲ್ಲುಗಳು !
ನಹುಷ ಬೀಳುತ್ತಲೇ ಇದ್ದಾನೆ ಸ್ವರ್ಗದಿಂದ. ಅವನು ತಲುಪುವ ಭೂಮಿ
ಎಷ್ಟು ದೂರ ? ಅವನ ಉದ್ದರಿಸುವವತಾರ ಎಷ್ಟು ದೂರ?
ಹಕ್ಕಿಗಳು ನಾವು ಸಾರೋಣವೇ ಅವನು ಬೀಳುವ ನೆಲಕ್ಕೆ ?
ಏರೋಣವೇ ಅವನು ನೆಗೆಯುವ ನಭಕ್ಕೆ ?
ಆದರೆ
ನಾವೀಗ ಹಕ್ಕಿಗಳಲ್ಲ ನಮಗೀಗ ಹಕ್ಕುಗಳಿಲ್ಲ
ನಮ್ಮ ಏರಿಸಿ ಇಳಿಸುವ ಆಟದ ಓ ನಭದ ಜಗವೇ
ನೀನು ನೀಡಬಹುದಾದದ್ದು ಶಾಪವಲ್ಲ ನೀಡಬಹುದಾದ
ಕರುಣೆ ಪ್ರೀತಿಗೆ ಇಲ್ಲಿ ಲೆಕ್ಕವಿಲ್ಲ.
*****