ನನ್ನ ಕೈಗಡಿಯಾರದ ಹಸಿರು ಹೂತೋಟದಲ್ಲಿ
ದಿವಸಗಳ ಮೊಗ್ಗುಗಳು ಅರಳುತ್ತವೆ
ಸೆಕೆಂಡು ನಿಮಿಷ ಗಂಟೆಗಳ ದುಂಬಿಗಳು ಸುತ್ತು
ಮುತ್ತು ಮಧುರ ಆಘಾತಕ್ಕೆ
ಪದವಾಗಿ ಹಿತವಾಗಿ
ಲೆಕ್ಕಕ್ಕೆ ಸಿಕ್ಕದ ನಾನಾ
ಬಣ್ಣದ ಹಕ್ಕಿಗಳು ಬಂದು
ಹೂವುಗಳ ಅಡಿಗೆ ತಲೆಮರೆಸಿ
ಹಾಡಲಾರಂಭಿಸುತ್ತವೆ
ಕೂಜನದ ಅನುರಣನ
ವಿತ್ವದ ವಿಸ್ತಾರಕ್ಕೆ
ಹನ್ನೆರಡು ಬರಿಯ ಲೆಕ್ಕಕ್ಕೆ
ಗೋಪಿಕಾ ಸ್ತ್ರೀಯರು
ಮುದ್ದು ಕೃಷ್ಣನ ಹುಡುಕುತ್ತ
ನಂದಗೋಕುಲ ಅರಸಿದ್ದಾರೆ
ಈ ಗೋಪಿಕೆಯರ ಹಾಡಲಾಗದ ಹಾಡು
ನಿನ್ನ ಚಿಕ್ಕ ಜಗತ್ತಿನ ಜೀವಸ್ವರ
ಈ ದೃಶ್ಯದ ವರ್ತಮಾನದಾಚೆಯ
ಕಾಲನ ಕುದುರೆಯ ಖರಪುಟದ ಸಪ್ಪಳ
ನನ್ನ ಕಿವಿಯನ್ನು ಭೇದಿಸುತ್ತಿದೆ
ಅದು ತಳ್ಳುತ್ತಿದೆ ನನ್ನನ್ನು
ಅನಂತದಾಚೆಯ ಆತೀತ
ವಾಸ್ತವದ ಸತ್ಯಕ್ಕೆ –
*****