ದಿವಸಗಳು ಬೋರಾಗಿ
ಮಾಡಲಾಗದೆ ಏನೂ
ಜೀವಗಳು ನಿರ್ಜೀವ
ನರಳುತ್ತವೆ
ತಮ್ಮಲ್ಲಿ ಹುಟ್ಟಿದ ಬೆಂಕಿ
ತಮ್ಮನ್ನೇ ಸುಡುತ್ತಿರುವಾಗ
ಮಿಣುಕಿ ಹುಳುಗಳ ಹಾಗೆ
ಉರುಳುತ್ತವೆ
ಆಸೆಗಳು ಚೂರಾಗಿ
ಹೆಣ ಬಿದ್ದ ಮಣ್ಣಲ್ಲಿ
ಮುಗ್ದ ಹೂಗಳು ಮಾತ್ರ
ಅರಳುತ್ತವೆ
ಎಲ್ಲವೂ ಕ್ಷೇಮ ಎಂಬಂತೆ
ಸಂದಿದ್ದ ದಿವಸಗಳು
ಹೊಸ ವೇಷವನು ಧರಿಸಿ
ಮರಳುತ್ತವೆ
ಇಂಥಲ್ಲಿ
ಹಾಗಲ್ಲ ಹೀಗೆ
ಹೀಗಲ್ಲ ಹಾಗೆ
ನಿನಗೇನು ತಿಳದೀತು ಹೋಗೆ
ಎನ್ನುತ್ತ ಕುಳಿತರೆ ಹೇಗೆ ?
*****