ಕಂಪ್ಯೂಟರು ಮೂಲಕ ನಿಮ್ಮ ಧಾರ್ಮಿಕ ಸಮಸ್ಯೆಗಳಿಗೆ ಅಷ್ಟಮಂಗಲ ಪ್ರಶ್ನೆ ಹಾಕಿ ನಾವು ಪರಿಹಾರ ಸೂಚಿಸುತ್ತೇವೆ. ನಮ್ಮ ವೆಬ್‌ಸೈಟ್: www cnnglobal computerasthamangala dot comಎಂಬ ಜಾಹೀರಾತೊಂದು ವೃತ್ತ ಪತ್ರಿಕೆಗಳಲ್ಲಿ ಕಾಣಿಸಿಕೊಂಡದ್ದೇ ಕಪಿಲಳ್ಳಿಗೆ ಕಪಿಲಳ್ಳಿಯೇ ಎದ್ದು ಕೂತು ಅನಾದಿ ಅನಂತ ಚರ್ಚೆಯಲ್ಲಿ ತನ್ನನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಬಿಟ್ಟಿತು.
ಕಪಿಲಳ್ಳಿಯ ಏಕಮಾತ್ರ ಸಂರಕ್ಷಕ ಕಪಿಲೇಶ್ವರನ ಸುತ್ತು ಗೋಪುರ ಜೀರ್ಣವಾಗ ತೊಡಗಿ, ಒಂದು ದಿನ ತಪಸ್ವಿನಿ ತುಂಬಿ ಹರಿದು ಅದು ಕುಸಿದುಬಿದ್ದು, ನದಿ ನಮಸ್ಕಾರ ಮಂಟಪದವರೆಗೆ ತನ್ನ ಸೆರಗನ್ನು ಚಾಚಿದಂದು ನಾಗರಹಾವೊಂದು ಮಂಟಪಕ್ಕೆ ಹತ್ತಿ ನೀರು ಪೂರ್ತಿಯಾಗಿ ಇಳಿಯುವವರೆಗೂ ಅಲ್ಲೇ ಝುಂಡಾ ಊರಿದ್ದು ಊರಿಡೀ ಭಯದ ಸುದ್ದಿಯಾಗಿ ಅಷ್ಟಮಂಗಲ ಪ್ರಶ್ನೆ ಹಾಕಿ ಪರಿಹಾರ ಕಂಡುಕೊಳ್ಳುವುದೇ ಸೂಕ್ತವೆಂಬ ದೇವಾಲಯದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯರ ಸಲಹೆಯನ್ನು ದುಸರಾ ಮಾತಿಲ್ಲದೆ ಕಪಿಲಳ್ಳಿ ಒಪ್ಪಿಕೊಂಡು ಬಿಟ್ಟಿತು.
ಅಷ್ಟಮಂಗಲ ಪ್ರಶ್ನೆಗೆ ಕರೆಯುವುದು ಯಾರನ್ನು ಎಂಬ ಜಿಜ್ಞಾಸೆ ಎದ್ದಾಗ ಈವರೆಗೆ ಅದನ್ನು ನೋಡಿರದ ಶೂದ್ರರು ಮತ್ತು ಅತಿಶೂದ್ರರು, “ದುಡ್ಡು ಹೇಗಾದರೂ ಮಾಡುವ. ಮಂತ್ರ ತಂತ್ರವೆಲ್ಲಾ ನಮಗೆ ತಿಳಿಯದು. ಇದರಲ್ಲಿ ನೀವು ಹೇಳಿದ ಹಾಗೆ ನಾವು” ಎಂದು ಸಮಸ್ತ ಭಾರವನ್ನು ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯರ ಮೇಲೆ ಹಾಕಿ ಬಿಟ್ಟರು. ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯರು ತಮ್ಮ ಸಂಬಂಧಿ ವೇದಮೂರ್ತಿ ಬ್ರಹ್ಮಶ್ರೀ ಹರಿನಾರಾಯಣ ತಂತ್ರಿಗಳು ಅಷ್ಟಮಂಗಲ ಬ್ರಹ್ಮವಿದ್ಯಾನಿಪುಣರೆಂದೂ ಅವರ ಅಷ್ಟಮಂಗಲ ಹದಿನಾರಾಣೆಯಷ್ಟು ಖಚಿತವೆಂದೂ ಏಕಪಕ್ಷೀಯ ಅಭಿಪ್ರಾಯ ಮಂಡಿಸಿದರು. ಕಪಿಲೇಶ್ವರನ ಅರ್ಚಕ ಪುರೋಹಿತ ಗಣಪತಿ ಸುಬ್ರಾಯ ಜೋಯಿಸರು, ವೇದಮೂರ್ತಿ ಬ್ರಹ್ಮಶ್ರೀ ಬಾಲಮುರಳೀಕೃಷ್ಣ ಚಂಪಕತ್ತಾಯರಷ್ಟು ಅನುಭವಿಗಳು ಅಣುರೇಣು ತೃಣಕಾಷ್ಟಗಳಲ್ಲಿ ಇಲ್ಲವೆಂದೂ ಅವರ ತಂತ್ರ ವಿದ್ಯೆಗೆ ಗಾಳಿಯನ್ನೆ ನಿಲ್ಲಿಸಿ ಬಿಡುವ ತಾಕತ್ತಿದೆಯೆಂದೂ ಘಂಟಾಘೋಷವಾಗಿ ಹೇಳಿದ್ದೇ ಕಪಿಲಳ್ಳಿಯ ವಿಪ್ರಾತಿವಿಪ್ರರು, “ಹೇಗೂ ಮೊದಲ ಬಾರಿಗೆ ಅಷ್ಟಮಂಗಲ ಪ್ರಶ್ನೆ ಇಡುತ್ತಿರುವುದರಿಂದ ಅನುಭವಿಯೂ, ಸೀನಿಯರೂ ಆದ ವೇದಮೂರ್ತಿ ಬ್ರಹ್ಮಶ್ರೀ ಬಾಲ ಮುರಳೀಕೃಷ ಚಂಪಕತ್ತಾಯರೇ ಸರಿ” ಎಂಬ ಸಾಮೂಹಿಕ ತೀರ್ಮಾನಕ್ಕೆ ಬರಲಾಗಿ ಅನ್ಯ ದಾರಿ ಕಾಣದೆ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯರು ಒಪ್ಪಿಕೊಂಡುಬಿಟ್ಟರು.
ಕಪಿಲಳ್ಳಿಯ ಶೂದ್ರರಲ್ಲಿ ಇಬ್ಬರು ದೂರದ ಹಸಿರಂಗಡಿ ಕಾಲೇಜಿಗೆ ಹೋಗಿ ಬಿ.ಎ. ಕೋರ್ಸು ಮುಗಿಸಿ ಮಹಮ್ಮದ್ ಘೋರಿಯಂತೆ ಪದೇ ಪದೇ ಏಪ್ರಿಲ್-ಅಕ್ಟೋಬರ್ ದಂಡಯಾತ್ರೆ ಮಾಡಿ ಮಾಡಿ ಸುಸ್ತಾಗಿ ಪದವಿ ಪಡೆಯದಿದ್ದರೂ ಇಂಗ್ಲಿಷ್ ಮಾತಾಡಲು ಕಲಿತದ್ದರಿಂದ ಇಂಗ್ಲಿಷ್ ಶೂದ್ರರೆಂಬ ಭಾಷಾಂತರಿತ ಖ್ಯಾತಿಗೆ ಪಾತ್ರರಾಗಿದ್ದರು. ಕಪಿಲೇಶ್ವರ ದೇವಾಲಯದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯರ ಪುಣ್ಯೋದರ ಸಂಭೂತ, ಏಕಮಾತ್ರ ಪುತ್ರರತ್ನ ಭವಾನಿಶಂಕರರಾಯನು ಹಸಿರಂಗಡಿಯ ಇಂಗ್ಲಿಷು ಕಾನ್ವೆಂಟು ಶಾಲೆಯಲ್ಲಿ ಹತ್ತರವರೆಗೆ ಓದಿ, ಹತ್ತು ಸಲ ಎಸ್ಸೆಸ್ಸೆಲ್ಸಿಗೆ ಕಟ್ಟಿ ಕಪಿಲಳ್ಳಿಯಲ್ಲಿ ವಿಶ್ವವಿಕ್ರಮ ಸ್ಥಾಪಿಸಿದವನು, ಇಂಗ್ಲಿಷ್ ಶೂದ್ರರಿಗೆ ಸದಾ ಪೈಪೋಟಿ ಕೊಟ್ಟು ವಿಪ್ರಾತಿವಿಪ್ರರ ಮೆಚ್ಚುಗೆಗೆ ಪಾತ್ರನಾಗಿದ್ದನು. ಹೆಣ್ಣುಗಳ ಮಟ್ಟಿಗೆ ಜಾತ್ಯತೀತ ದೃಷ್ಟಿ ಬೆಳೆಸಿಕೊಂಡಿದ್ದ ಭವಾನಿಶಂಕರನು ಎಲ್ಲಾ ಹೆಣ್ಣುಗಳನ್ನು ಏಕತ್ರ ಬದನೆ – ನುಗ್ಗೆಕಾಯಿ ಪಳದ್ಯದ ಹಾಗೆ ನೋಡುವ ಅಪ್ಪಟ ಸಮತಾವಾದಿಯಾಗಿದ್ದರೂ ಶೂದ್ರ ವರ್ಗದಿಂದ ಬೋದಾಳ ಸಂಕರನೆಂದೇ ಕರೆಯಲ್ಪಡುತ್ತಿದ್ದನು. ಭವಾನಿಶಂಕರನ ದಂಡಯಾತ್ರೆಗಳು ವಿಫಲವಾಗಲು ಕಪಿಲೇಶ್ವರನು ಇನ್ನೂ ಕಣ್ಣುಬಿಡದ್ದು ಮತ್ತು ಮಗನ ಅಷ್ಟಮದಲ್ಲಿ ಪ್ರವೇಶಿಸಿದ ಏಳುವರೆ ಶನಿ ಅಲ್ಲೇ ಠಿಕಾಣಿ ಹೂಡಿ ಒಂದಿಂಚೂ ಕದಲಲೊಪ್ಪದ್ದೇ ಕಾರಣವೆಂದು ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯನವರು ಅತ್ಯಾಪ್ತರಲ್ಲಿ ಹೇಳಿ ಹಗುರಾಗುತ್ತಿದ್ದುದುಂಟು.
ಇಂತಹ ಭವಾನಿಶಂಕರನು ತನ್ನ ಸೃಷ್ಟಿಕಾರ್ಯಕ್ಕೆ ಕಾರಣಕರ್ತರಾದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯನವರು ಏಳೇಳು ಜನ್ಮ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಘನ ಕಾರ್ಯವೊಂದಕ್ಕೆ ಕಾರಣನಾಗಿ ಅಪ್ಪಯ್ಯನ ಹೃದಯ ಸಿಂಹಾಸನ ದಲ್ಲಿ ಶಾಶ್ವತವಾಗಿ ವಿರಾಜಮಾನನಾಗಿಬಿಟ್ಟನು. ಭವಾನಿಶಂಕರನು ತಾನು ಪದೇ ಪದೇ ತೈಮೂರಲಂಗನಂತೆ ದಂಡಯಾತ್ರೆಗೆ ಹೋಗಿ ಬರುತ್ತಿದ್ದ ಹೈಸ್ಕೂಲಿನಲ್ಲಿ ಹೆಡ್ಮಾಸ್ಟರರ ಕಛೇರಿ ಮುಂದುಗಡೆ ಮೋಹನದಾಸ ಅಡ್ಯಂತಾಯ, ಎಂ ಎ ಬಿ.ಎಡ್ ಎಂಬ ನೇಮ್ ಪ್ಲೇಟು ಇರುವುದನ್ನು ಗಮನಿಸಿ ಕಪಿಲಳ್ಳಿ ದೇವಸ್ಥಾನದ ಎದುರಿನ ಗೋಪುರದ ಎಡ ಬದಿಯಲ್ಲಿನ ಏಕೈಕ ಖಾಸಗಿ ಆಫೀಸಿನ ಎದುರುಗಡೆ ಶ್ರೀ ಶ್ರೀ ಶ್ರೀ ಧರ್ಮದರ್ಶಿ ಅನಂತಪದ್ಮನಾಭಯ್ಯ, ಏ ಎಂ ಎಂದಿರುವ ನೇಮ್ ಪ್ಲೇಟು ತಂದು ತೂಗ ಹಾಕಿದ್ದ. ತನ್ನ ಹೆಸರಿನ ಮುಂದುಗಡೆಯ ಏ ಎಂ ಎಂದರೇನೆಂದು ಅಪ್ಪ ಕೇಳಿದಾಗ ಅದು ಆನುವಂಶಿಕ ಮೊಕ್ತೇಸರದ ಇಂಗ್ಲಿಷ್ ರೂಪ ಎಂದು ಮಗ ಹೇಳಿದ್ದೇ ಇವನು ತನ್ನ ಬಳಿಕ ಈ ದೇವಸ್ಥಾನದ ಆನುವಂಶಿಕ ಮೊಕ್ತೇಸರನಾಗಿ ಇದನ್ನು ಖಂಡಿತವಾಗಿಯೂ ತನಗಿಂತ ಚೆನ್ನಾಗಿ ನಡೆಸಿಕೊಂಡು ಹೋಗುತ್ತಾನೆ ಮತ್ತು ಎಸ್ಸೆಸ್ಸೆಲ್ಸಿ ಹೋದರೇನಂತೆ ಈ ಏ ಎಂ ಡಿಗ್ರಿ ಇವನಿಗೆ ಸಿಕ್ಕೇ ಸಿಗುತ್ತದೆ ಎಂಬುದು ಖಾತ್ರಿಯಾಗಿ ಬ್ರಹ್ಮಾನಂದದಲ್ಲಿ ತೇಲಿಹೋಗಿದ್ದರು. ಆದರೆ ಅಂದಿನಿಂದ ಇಂಗ್ಲಿಷ್ ಶೂದ್ರರು ಇಂಗ್ಲಿಷೆಂಬುದು ಆನುವಂಶಿಕ ಮೊಕ್ತೇಸರರೊಬ್ಬರ ಸೊತ್ತಾಗಬಾರದೆಂದು ಅಗತ್ಯ ಬಿದ್ದವರಿಗೆಲ್ಲಾ ಡಿಗ್ರಿ ಕೊಡಲು ಆರಂಭಿಸಿಬಿಟ್ಟರು. ಅರ್ಚಕ ಪುರೋಹಿತರು ಈಗ ಶ್ರೀ ಶ್ರೀ ಶ್ರೀ ಗಣಪತಿ ಸುಬ್ರಾಯ ಜೋಯಿಸ, ಏ.ಪಿ. ಎಂದಾದರೆ ವೇದಮೂರ್ತಿ ಬ್ರಹ್ಮಶ್ರೀ ಬಾಲಮುರಳೀಕೃಷ್ಣ ಚಂಪಕತ್ತಾಯರ ಅಷ್ಟಮಂಗಲವು ವೇದಮೂರ್ತಿ ಬಿ.ಬಿ.ಸಿ ಅಷ್ಟಮಂಗಲವಾಗಿ ಬಿಟ್ಟಿತು. ಅದು ಆರಂಭದಲ್ಲಿ ವಿಪ್ರವರ್ಗಕ್ಕೆ ಅಸಹನೀಯವಾದರೂ ಪದೇ ಪದೇ ವೇದಮೂರ್ತಿ ಬ್ರಹ್ಮಶ್ರೀ ಬಾಲಮುರಳೀ ಕೃಷ್ಣ ಚಂಪಕತ್ತಾಯರ ಅಷ್ಟಮಂಗಲವೆಂದು ಹೇಳುವ ಸಂಕಷ್ಟಕ್ಕಿಂತ ವೇದಮೂರ್ತಿ ಬಿ.ಬಿ.ಸಿ ಅಷ್ಟಮಂಗಲವೆಂದು ಹೇಳುವುದೇ ಸುಲಭವೆಂದು ಅದನ್ನೆ ಅನುಷ್ಠನಗೊಳಿಸಿ ನಾಲಿಗೆಯ ಕಸರತ್ತನ್ನು ಕಡಿಮೆ ಮಾಡಿಕೊಂಡರು.
ಹಾಗೆ ಆರಂಭವಾದ ವೇದಮೂರ್ತಿ ಬಿಬಿಸಿ ಅಷ್ಟಮಂಗಲ ಪ್ರಶ್ನಾ ಕಾರ್ಯಕ್ರಮ ಮುಗಿದು ಅದರಲ್ಲಿ ಕಂಡುಬಂದಂತೆ ಶೂದ್ರರು ಮತ್ತು ಅತಿಶೂದ್ರರು ಶ್ರಮದಾನ ಮಾಡಿ ದೇವಸ್ಥಾನದ ಎಡಬದಿಯಲ್ಲಿ ಹೊಳೆ ದಂಡೆಗೆ ಕಲ್ಲು ಕಟ್ಟಿ, ಎದುರು ಗೋಪುರವನ್ನು ಪೂರ್ತಿ ಬದಲಾಯಿಸಿ, ಸುಣ್ಣ ಬಣ್ಣ ಬಳಿದು ಹೊಸದೊಂದು ರಂಗಿನ ಲೋಕವನೆನ್ನೇ ಸೃಷ್ಟಿಸಿದರು. ಬ್ರಹ್ಮಕಲಶೋತ್ಸವ ಏಳು ದಿನ ನಡೆದು ಪ್ರತಿದಿನಕ್ಕೊಬ್ಬರಂತೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶ್ರೀಪಾದಂಗಳು ಮತ್ತು ಮಂತ್ರಿಮಹೋದಯರುಗಳು ಈವರೆಗೆ ತಾವು ಕಂಡಿರದ, ಕೇಳಿರದ ಕಪಿಲಳ್ಳಿಗೆ ಮಿರಿಮಿರಿ ಮಿಂಚುವ ಹಡಗುಗಳಂತಹ ಕಾರುಗಳಲ್ಲಿ ಬಂದು ಆಚೆ ದಡದಲ್ಲಿ ಇಳಿದವರನ್ನು ಪಿಂಡಿಯಲ್ಲಿ ಈಚೆ ದಡಕ್ಕೆ ತರುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿ ಆ ಹೊತ್ತಿಗೆ ಸರಿಯಾಗಿ ಇಕ್ಕೆಲಗಳಲ್ಲಿ ಜನ ತುಂಬಿತುಳುಕುತ್ತಿದ್ದರು. ಪರಮಪೂಜ್ಯ ಶ್ರೀ ಶ್ರೀ ಶ್ರೀ ಶ್ರೀಪಾದಂಗಳವರುಗಳು ಎತ್ತರದ ವಿಶಾಲವಾದ, ಪ್ರತ್ಯೇಕವಾದ ಭವ್ಯ ಸಿಂಹಾಸನದೆದುರು ಅಡ್ಡಬಿದ್ದವರನ್ನು ಕರುಣಾಪೂರಿತ ದೃಷ್ಟಿಯಿಂದ ನೋಡಿ ಅವರ ಪಾದ ನಮಸ್ಕಾರಗಳನ್ನು ಸ್ವೀಕರಿಸುತ್ತಿದ್ದರು. ಸಿಂಹಾಸನದಲ್ಲಿ ಪದ್ಮಾಸನದಲ್ಲೇ ಕೂತವರ ಬಾಯಿಗೆ ತಾಗುವಂತೆ ಇರಿಸುತ್ತಿದ್ದ ಧ್ವನಿವರ್ಧಕದಲ್ಲಿ ಶ್ರೀಪಾದಂಗಳವರು, “ಆತ್ಮ ನಶ್ವರ, ಪರಮಾತ್ಮ ಶಾಶ್ವತ. ಈ ನಶ್ವರ ಪ್ರಪಂಚದ ಸಮಸ್ತ ಆದಿವ್ಯಾಧಿಗಳಿಗೆ ಭಗವನ್ನಾಮ ಸ್ಮರಣೆ ಮಾತ್ರವೇ ಏಕೈಕ ಪರಿಹಾರ”ವೆಂದು ಕುಳಿತುಕೊಂಡೇ ಪ್ರವಚನ ನೀಡಿ, ಸಾಮೂಹಿಕ ಪಾದಪೂಜೆ ಮಾಡಿಸಿಕೊಂಡು ಕಪಿಲಳ್ಳಿಯ ಹುಲುಮಾನವರ ಪಾಪಗಳನ್ನು ಕಳೆದು ಅವರನ್ನು ಸಾಯುಜ್ಯಕ್ಕೆ ಅರ್ಹರನಾನಗಿ ಮಾಡಿಬಿಟ್ಟಿದ್ದರು. ಹಿರಿ, ಕಿರಿ, ಮರಿ ಪುಢಾರಿಗಳು ಮತ್ತು ಮಂತ್ರಿ ಮಹೋದಯರುಗಳು ಗಂಜಿ ಇಸ್ತ್ರಿ ಮಾಡಿದ ಬಿಳಿ ಬಿಳಿ ಬಟ್ಟೆಗಳೊಳಗೆ ತಮ್ಮ ಅಕರಾಳ, ವಿಕರಾಳ ಶರೀರಗಳನ್ನು ತುರುಕಿಸಿಕೊಂಡು, “ನಾವಿರುವುದೇ ಹಳ್ಳಿಗಳ ಸೇವೆಗೆ. ಮುಂದಿನ ಜಾತ್ರೆಯೊಳಗೆ ತಪಸ್ವಿನಿ ಗೊಂದು ಸೇತುವೆ ಮಾಡಿಸುತ್ತೇವೆ” ಎಂದು ನಿಂತುಕೊಂಡು ಮಾಡಿದ ಭಾಷಣ ಮಧ್ಯದಲ್ಲಿ ಭರವಸೆ ನೀಡಿ, ಕೊನೆಯಲ್ಲಿ ಕಷ್ಟಪಟ್ಟು ಶ್ರೀಪಾದಂಗಳವರುಗಳಿಗೆ ಉದ್ದಕ್ಕೆ ಅಡ್ಡಬಿದ್ದು, ಆಪ್ತ ಸಹಾಯಕರ ಸಹಾಯದಿಂದ ಹೇಗೋ ಮೇಲಕ್ಕೆದ್ದು ಕತ್ತಲಲ್ಲಿ ಧೂಳೆಬ್ಬಿಸಿ ಬಂದ ಹಾಗೆ ವಾಪಾಸಾಗಿದ್ದರು. ವೈಭವದ ಬ್ರಹ್ಮಕಲಶೋತ್ಸವದಲ್ಲಿ ವಿಪ್ರರಿಗೆ ಗೋ ದಾನ ಮತ್ತು ಸುವರ್ಣ ದಾನ, ವಿಪ್ರ ಸ್ತ್ರೀಯರಿಗೆ ವಸ್ತ್ರ ದಾನ ಮಾಡಿ ಶೂದ್ರರೂ, ಅತಿಶೂದ್ರರೂ ತಮ್ಮ ಪೂರ್ವಾರ್ಜಿತ ಕರ್ಮ ಪಾಪಫಲವನ್ನು ವಿಪ್ರವರ್ಗಕ್ಕೆ ವರ್ಗಾಯಿಸಿ ಹಗುರಾಗಿದ್ದರು. ಆದರೆ ಪ್ರತಿ ಮನೆಯವರು ಬ್ರಹ್ಮ ಕಲಶಕ್ಕೆಂದು ಐದು ಸಾವಿರ ನೀಡಬೇಕಾಗಿ ಬಂದುದರಿಂದ ಇದ್ದ ಚಿನ್ನ ಪನ್ನ ಮಾರಿ ಸುಸ್ತಾದರೂ ಸದ್ಯ ಕಪಿಲೇಶ್ವರನ ಗುಡಿ ಸುಭದ್ರವಾಯಿತಲ್ಲಾ, ತಪಸ್ವಿನಿಗೊಂದು ಸೇತುವೆ ಯಾಗುತ್ತದಲ್ಲಾ ಎಂದು ಸಂತೋಷವಾಗಿದ್ದರು.
ಅಂಥ ಪ್ರಶಾಂತ ಕಪಿಲಳ್ಳಿಯೆಂಬ ಜೇನುಗೂಡಿಗೆ ಕಲ್ಲು ಬಿದ್ದದ್ದು ಧರ್ಮದರ್ಶಿ ಅನಂತಪದ್ಮನಾಭಯ್ಯ, ಏ.ಎಂ ಕಪಿಲೇಶ್ವರನ ಗರ್ಭಗುಡಿಯ ಮೆಟ್ಟಿಲಲ್ಲಿ ನೂರಕ್ಕೆ ನೂರರಷ್ಟು ಪರಿಶುದ್ಧವಾದ ನಾಗರಹಾವೊಂದು ಕಾಣಿಸಿಕೊಂಡಿದೆಯೆಂದೂ, ಕಳೆದ ಬ್ರಹ್ಮಕಲಶದಲ್ಲಿ ಎಲ್ಲೋ ಮಡಿಮೈಲಿಗೆಯಾಗಿ ಬ್ರಹ್ಮಕಾರ್ಯಗಳು ಅಶುದ್ಧವಾಗಿರಬೇಕೆಂದೂ, ವೇದಮೂರ್ತಿ ಬಿಬಿಸಿ ಯವರಿಗಿಂತಲೂ ಮಡಿವಂತರಾದ ವೇದಮೂರ್ತಿ ಬ್ರಹ್ಮಶ್ರೀ ಹರಿನಾರಾಯಣ ತಂತ್ರಿಯವರನ್ನು ಕರೆಸಿ ಪ್ರಶ್ನೆ ಇಟ್ಟು ಇನ್ನೊಂದು ಬ್ರಹ್ಮಕಲಶ ನಡೆಸುವ ಅಗತ್ಯವಿದೆಯೆಂದೂ ಕಂಡ ಕಂಡವರೊಡನೆಲ್ಲಾ ಹೇಳುತ್ತಾ ಬಂದಾಗ. ಈ ಕರ್ಣಭಯಂಕರ ಸುದ್ದಿಯನ್ನು ಕೇಳಿ ಬ್ರಹ್ಮಕಲಶಕ್ಕೆ ದೇಣಿಗೆಯೆಂದು ಐದು ಸಾವಿರ ಸಾಲ ಮಾಡಿದ್ದವರು ಆಕಾಶ ನೋಡತೊಡಗಿದರೆ ಗಣಪತಿ ಸುಬ್ರಾಯ ಜೋಯಿಸ, ಏ.ಪಿ.ಯವರು ಧರ್ಮದರ್ಶಿ ಅನಂತಪದ್ಮನಾಭಯ್ಯ, ಏ.ಎಂ.ರ ಹೊಸ ವರಸೆಯೆದುರು ಕಂಗಾಲಾಗಿ ಕುಳಿತುಬಿಟ್ಟರು. ಆಗ ಕಾಣಿಸಿಕೊಂಡದ್ದು ವೃತ್ತಪತ್ರಿಕೆ ಗಳಲ್ಲಿ ಕಂಪ್ಯೂಟರು ಅಷ್ಟಮಂಗಲದ ಜಾಹೀರಾತು.
ಇನ್ನೊಂದು ಅಷ್ಟಮಂಗಲವೂ ಬೇಡ, ಬ್ರಹ್ಮ ಕಲಶವೂ ಬೇಡವೆಂದು ತಿರುಗಿ ಬಿದ್ದರೆ ನಾಸ್ತಿಕ, ಕಮ್ಯುನಿಷ್ಟ ಎಂದೆಲ್ಲಾ ಕರೆಸಿಕೊಳ್ಳಬೇಕಾಗುತ್ತದೆಂದು ಹೆದರಿದ ಇಂಗ್ಲಿಷ್ ಶೂದ್ರರು “ವೇದಮೂರ್ತಿ ಬಿಬಿಸಿ ಅಷ್ಟಮಂಗಲವೇ ಅಶುದ್ಧವೆಂದಾದರೆ ಬೇರೆ ಯಾರ ಅಷ್ಟಮಂಗಲ ಸರಿಯಿರಲು ಸಾಧ್ಯ? ಆದಾಗ್ಯೂ ಇನ್ನೊಂದು ಅಷ್ಟಮಂಗಲ ಬೇಕೇ ಬೇಕೆಂದಿದ್ದರೆ ಸಿ.ಎನ್.ಎನ್ ಅಷ್ಟಮಂಗಲವನ್ನೆ ತರಿಸಿ ನೋಡೋಣ” ಎಂದರು. ತಕ್ಷಣ ಗಣಪತಿ ಸುಬ್ರಾಯ ಜೋಯಿಸ, ಏ.ಪಿ. ಯವರು, “ಅದೂ ಸರಿಯೇ. ಆಧುನಿಕ ವಿದ್ಯೆಯೊಡನೆ ಸನಾತನ ವಿದ್ಯೆಯು ಜೋಡಿಸಲ್ಪಟ್ಟರೆ ಹೊಸ ಚಿಗುರು ಹಳೆಬೇರಿನಂತಾಗುತ್ತದೆ. ಅಷ್ಟಮಂಗಲ ಬ್ರಹ್ಮವಿದ್ಯೆಯು ಹೇಗೆ ದೇವಸೃಷ್ಟಿಯೋ ಕಂಪ್ಯೂಟರೂ ಹಾಗೆಯೇ. ಲಲಿತಾ ಸಹಸ್ರನಾಮದಲ್ಲಿ, ‘ಉನ್ಮೇಷ ನಿಮಿಷೋತ್ಪನ್ನ ವಿಪನ್ನ ಭುವನಾವಲಿಃ’ ಎಂಬ ಸಾಲು ಬರುತ್ತದೆ. ಇಡೀ ವಿಶ್ವವೇ ಆ ಮಹಾಶಕ್ತಿಯ ಸೃಷ್ಟಿಯಾಗಿರುವಾಗ ಅಷ್ಟಮಂಗಲಕ್ಕೆ ಕಂಪ್ಯೂಟರನ್ನು ಬಳಸಿದರೆ ತಪ್ಪೇನಿಲ್ಲ ಎಂದದ್ದೇ ವೇದಮೂರ್ತಿ ಬ್ರಹ್ಮಶ್ರೀ ಹರಿನಾರಾಯಣ ತಂತ್ರಿಗಳನ್ನು ಈ ಬಾರಿಯಾದರೂ ಕರೆಸಬೇಕೆಂದು ಕೊಂಡಿದ್ದವರೆಲ್ಲಾ ಮುಚ್ಚಿಕೊಂಡು ಸುಮ್ಮನಾಗಿಬಿಟ್ಟರು.
ಈಗ ಇಂಗ್ಲಿಷ್ ಶೂದ್ರರು ಎದ್ದು ನಿಂತರು. “ಅಷ್ಟಮಂಗಲ ನಡೆದು ಊರಿಗೆ ಒಳಿತಾಗುವುದಾದರೆ ಆಗಲಿ. ಅಷ್ಟೆಲ್ಲಾ ಮಂತ್ರಿಗಳು ಬಂದು ಸೇತುವೆ ಮಾಡಿಸುತ್ತೇವೆಂದು ಬುರುಡೆ ಬಿಟ್ಟು ಚಪ್ಪಾಳೆ ಗಿಟ್ಟಿಸಿದರಲ್ಲಾ, ಏನಾಯಿತು ಅವರ ಮಾತು? ಅಷ್ಟೊಂದು ಶ್ರೀಪಾದಂಗಳವರುಗಳು ಚಿತ್ರೈಸಿ, ಆಶೀರ್ವಚನ ನೀಡಿದ ಬ್ರಹ್ಮಕಲಶವೂ ಸರಿಯಾಗಿಲ್ಲ ವೆಂದರೆ ಈ ಊರಿನ ಪಾಪ ಕಳೆಯಲು ಇನ್ನೆಷ್ಟು ಅಷ್ಟಮಂಗಲ, ಬ್ರಹ್ಮಕಲಶ ಬೇಕು? ಮೂರು ವರ್ಷದ ಹಿಂದೆ ತಲಾ ಐದು ಸಾವಿರದಂತೆ ಬ್ರಹ್ಮಕಲಶಕ್ಕೆ ಸಂಗ್ರಹ ಮಾಡಿದ್ದೇ ದೊಡ್ಡ ಹೊರೆಯಾಗಿ ಕೂತಿರುವಾಗ ಈಗ ಸಂಗ್ರಹಕ್ಕೆ ಹೊರಟರೆ ಕಪಿಲೇಶ್ವರ ಮೆಚ್ಚುತ್ತಾನಾ?
ಇಂಗ್ಲಿಷ್ ಶೂದ್ರರ ಬಾಯಿಯಿಂದ ಈ ಮಾತು ಬಂದುದು ಧರ್ಮದರ್ಶಿ ಅನಂತ ಪದ್ಮನಾಭಯ್ಯ, ಏ.ಎಂ.ರ ಮಗ ಬೋದಾಳ ಶಂಕರನಿಗೆ ಇಷ್ಟವಾಗದೆ, “ಊರೆಂದರೆ ನೀವಿಬ್ಬರೇ ಅಲ್ಲ. ಉಳಿದವರು ತಮ್ಮ ತಮ್ಮ ಅಭಿಪ್ರಾಯ ಹೇಳಲಿ. ಏನೋ ದೋಷ ಇಲ್ಲದಿದ್ದರೆ ದೇವಸ್ಥಾನದಲ್ಲಿ ನಾಗರಹಾವು ಕಾಣಿಸಿಕೊಳ್ಳುವುದುಂಟಾ? ದೋಷ ಉಂಟು ಎಂದಾದರೆ ಇನ್ನೊಂದು ಬ್ರಹ್ಮಕಲಶ ಆಗದೆ ನಮ್ಮ ಪೂಜೆಯನ್ನು ಕಪಿಲೇಶ್ವರ ಸ್ವೀಕರಿಸುತ್ತಾನಾ? ಎಂದು ಆಗಮ ಶಾಸ್ತ್ರಸಮ್ಮತವಾಗಿ ಕೇಳಿದಾಗ ಏನು ಉತ್ತರಿಸಬೇಕೆಂದು ತಿಳಿಯದ ಶೂದ್ರ ವರ್ಗ ಗರಬಡಿದಂತೆ, ಬಾಯಿಗೆ ಬೀಗ ಜಡಿದು ಕುಳಿತಿರಲು, ಇನ್ನೀಗ ವೇದಮೂರ್ತಿ ಬ್ರಹ್ಮಶ್ರೀ ಹರಿನಾರಾಯಣ ತಂತ್ರಿಗಳನ್ನು ಇವನು ಕರೆಸಿಯೇ ಬಿಡುತ್ತಾನೆಂಬುದು ಖಚಿತವಾಗಿ “ಹಾಗಾದರೆ ಸಿಎನ್‍ಎನ್ ಅಷ್ಟಮಂಗಲವೇ ಆಗಲಿ. ತೀರಾ ಅಗತ್ಯಬಿದ್ದರೆ ಸಿಂಪಲ್ಲಾಗಿ ಬ್ರಹ್ಮಕಲಶವನ್ನ್ನೂ ಮಾಡೋಣ” ಎಂದು ಇಂಗ್ಲಿಷ್ ಶೂದ್ರರು ಹೇಳಿದ್ದು ಸರ್ವಾನುಮತ ದಿಂದ ಅಂಗೀಕಾರವಾಯಿತು.
* * * *
ಅಷ್ಟಮಂಗಲ ಪ್ರಶ್ನಾಕಾರ್ಯಕ್ರಮ ನಡೆಯುವುದಕ್ಕೆ ಒಂದು ವಾರವಿದೆಯೆನ್ನುವಾಗ ಸಿಎನ್‍ಎನ್ ಅಷ್ಟಮಂಗಲದ ಸಂಪೂರ್ಣ ಜಾತಕ ಕಪಿಲಳ್ಳಿಯ ಸಮಸ್ತ ಆಸ್ತಿಕ ಭಕ್ತಾಭಿಮಾನಿ ಗಳಿಗೆ ತಿಳಿದು ಹೋಯಿತು. ಸಿಎನ್‍ಎನ್ ಎಂದರೆ ಚಿಂಡನಾನರಾಯಣ ನಾಯರ್ ಎಂದೂ, ಅವನ ಮಗ ಅಮೇರಿಕೆಯಲ್ಲಿ ಸಾಫ್ಟುವೇರು ಎಂಜಿನಿಯರೆಂದೂ ಕೇರಳದ ಉತ್ತರದ ತುದಿ ಮತ್ತು ಕರ್ನಾಟಕದ ಕಡಲ ಜಿಲ್ಲೆಗಳಲ್ಲಿ ಅಷ್ಟಮಂಗಲ ಪ್ರಶ್ನಾಕಾರ್ಯಕ್ರಮವು ಬಹಳ ಪಾಪ್ಯುಲರ್ ಆಗಿರುವುದರಿಂದ ಅಷ್ಟಮಂಗಲ ತಜ್ಞರನ್ನು ಮತ್ತು ಕಂಪ್ಯೂಟರು ಸ್ಪೆಷಲಿಸ್ಟು ಗಳನ್ನು ಒಂದೆಡೆ ಕಲೆಹಾಕಿ ಅದ್ಭುತವಾದ ಅಷ್ಟಮಂಗಲ ಪ್ರೋಗ್ರಾಂವೊಂದನ್ನು ರೂಪಿಸಿ ಅದಕ್ಕೆ ಅಪ್ಪನ ಹೆಸರಿಟ್ಟು, ಅಪ್ಪನಿಗೊಂದು ಕಂಪ್ಯೂಟರು ತೆಗೆದುಕೊಟ್ಟು, ಕಂಪ್ಯೂಟರ್ ಅಷ್ಟಮಂಗಲದ ಬಗ್ಗೆ ವೆಬ್ ಸೈಟೊಂದನ್ನು ಆರಂಭಿಸಿ ಇಂಥದ್ದೊಂದು ವಿದ್ಯೆ ಭಾರತದಲ್ಲಿದೆ ಯೆನ್ನುವುದನ್ನು ಅಮೇರಿಕನ್ನರಿಗೆ, ಯೂರೋಪಿಯನ್ನರಿಗೆ ತಿಳಿಸುವಲ್ಲಿ ಸಫಲನಾಗಿದ್ದನು. ಮಗ ಸೃಷ್ಟಿಸಿದ ಸೀಡಿಯನ್ನು ಕಂಪ್ಯೂಟರಿಗೆ ಹಾಕಿ ಗುಂಡಿಯೊತ್ತಿ ಪರದೆ ನೋಡಿ ಸಿಎನ್‍ಎನ್ ಎಂಥಾ ಪ್ರಶ್ನೆಯನ್ನಾದರೂ ಬಿಡಿಸುತ್ತಾನೆಂದು ಗೊತ್ತಾದದ್ದೇ ಕಪಿಲಳ್ಳಿ ಜನ ಬ್ರಹ್ಮಾನಂದೋ ದ್ರೇಕಿತರಾಗಿ ಸಿಎನ್‍ಎನ್ ಬರುವಿಕೆಗಾಗಿ ಚಾತಕ ಪಕ್ಷಿಗಳಂತೆ ಕಾದುಕುಳಿತರು.
ಸಿಎನ್‍ಎನ್ ತಾನು ಕಾರಲ್ಲಿ ಕಂಪ್ಯೂಟರು ಸಮೇತನಾಗಿ ನೇರವಾಗಿ ದೇವಸ್ಥಾನದ ಎದುರಿನ ದಂಡೆಗೆ ಬಂದಿಳಿಯುವುದಾಗಿಯೂ, ಕಂಪ್ಯೂಟರು ಬಹಳ ಸೂಕ್ಮ ಸಾಧನವಾದುದರಿಂದ ಅದನ್ನು ಧೂಳಿನಿಂದ ರಕ್ಷಿಸಲು ಅದಕ್ಕೊಂದು ಪ್ರತ್ಯೇಕ ಏರ್ ಕಂಡೀಶನ್ಡ್ ಕೋಣೆಯ ಅಗತ್ಯವಿದೆಯೆಂದೂ, ಕಳೆದ ಬ್ರಹ್ಮಕಲಶದ ಸಂದರ್ಭದಲ್ಲಿ ದೂರವಾಣಿ ಇಲಾಖೆ ಮುಫತ್ತಾಗಿ ದೇವಾಲಯಕ್ಕೆ ನೀಡಿದ್ದ ದೂರವಾಣಿಯಲ್ಲಿ ತಿಳಿಸಿದ್ದೇ ಒಂದು ದೊಡ್ಡ ಸಮಸ್ಯೆಯಾಗಿ ಅದನ್ನು ಪರಿಹರಿಸಲು ಮತ್ತೆ ಕಪಿಲಳ್ಳಿ ಪ್ರಮುಖರು ಗೋಪುರದಲ್ಲಿ ಸೇರಿದರು. ದೇವಸ್ಥಾನದ ಗೋಪುರದ ಮೂಲೆಯಲ್ಲಿ ಧರ್ಮದರ್ಶಿ ಅನಂತಪದ್ಮನಾಭಯ್ಯ, ಏ.ಎಂ. ಎಂಬ ಬೋರ್ಡು ಲಗತ್ತಿಸಿಕೊಂಡಿರುವ ಕೋಣೆಯೊಂದನ್ನು ಬಿಟ್ಟರೆ ಬೇರಾವ ಕೋಣೆಯೂ ಇರಲಿಲ್ಲ. ಕಳೆದ ಬಾರಿಯ ಬ್ರಹ್ಮಕಲಶ ಸಂದರ್ಭದಲ್ಲಿ ಹೊರತಂದ ಬ್ರಹ್ಮಕಲಶ ಸ್ಮರಣಸಂಚಿಕೆಯ ಮಾರಾಟವಾಗದ ಪ್ರತಿಗಳಿಂದ ಅದು ತುಂಬಿ ಹೋಗಿ ಬಾವಲಿ, ಜಿರಲೆ, ಹಲ್ಲಿ, ಇಲಿ, ಹೆಗ್ಗಣಗಳ ಸಾಮ್ರಾಜ್ಯವಾಗಿ ಒಳಹೊಕ್ಕಾಗಲೆಲ್ಲಾ ಗಬ್ಬು ವಾಸನೆಯಿಂದ ವಾಂತಿ ಬರುವಂತಾಗುವಂತಿತ್ತು. ಧರ್ಮದರ್ಶಿ ಅನಂತಪದ್ಮನಾಭಯ್ಯ, ಏ.ಎಂ.ಗೆ ಇದರ ವಿಲೇವಾರಿ ದೊಡ್ಡ ತಲೆನೋವಾಗಿ, “ಒಂದು ಪೈಸೆ ಕೊಡಬೇಡಿ. ಇವನ್ನು ನಿಮ್ಮ ನಿಮ್ಮ ಮನೆಗಾದರೂ ಒಯ್ದು ಪುಣ್ಯ ಕಟ್ಟಿಕೊಳ್ಳಿ” ಎಂದು ಕೈ ಮುಗಿದು ಕೇಳಿಕೊಂಡರೂ ಪುಸ್ತಕಗಳೆಂದರೆ ಕನಸಲ್ಲೂ ಬೆಚ್ಚಿ ಬೀಳುವ ಶೂದ್ರರು, “ಅಯ್ಯಯೋ ದೇವರ ಪುಸ್ತಕ ಹಾಗೆಲ್ಲಾ ನಮ್ಮ ಮೈಲಿಗೆಯ ಮನೆಗಳಲ್ಲಿಟ್ಟರೆ ದೇವರಿಗೆ ಅಪಚಾರವಾಗಿ ಬಿಡುತ್ತದೆ” ಎಂದು ಗಲ್ಲಗಲ್ಲ ಬಡಿದು
ಧರ್ಮದರ್ಶಿಗಳ ಯಾಚನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಅಲ್ಲೀಗ ಕಾಲೂರಲೂ ಕಷ್ಟವಾಗಿರುವಾಗ ಕಂಪ್ಯೂಟರಿಗೆ ಬೇರೆಯೇ ಕೋಣೆ ಬೇಕಾಗುತ್ತದೆ. ಹೊಸದಾಗಿ ಏರು ಕಂಡೀಶನ್ಡು ರೂಮು ಒಂದು ವಾರದಲ್ಲಿ ದಿಢೀರೆಂದು ಸಿದ್ಧಪಡಿಸುವುದು ಹೇಗೆ? ಅದಕ್ಕೆ ರೊಕ್ಕ ತರುವುದು ಎಲ್ಲಿಂದ?
ಸೇರಿದ್ದ ಜನರೆದುರು ಧರ್ಮದರ್ಶಿ ಅನಂತಪದ್ಮನಾಭಯ್ಯ, ಏ.ಎಂ. ನಿಂತು ಗಂಟಲು ಸರಿಪಡಿಸಿಕೊಂಡು ಸಿಎನ್‍ಎನ್ ಕಂಪ್ಯೂಟರ್ ಅಷ್ಟಮಂಗಲಕ್ಕೆ ಏರುಕಂಡೀಶನ್ಡು ಕೋಣೆಯ ಅಗತ್ಯವಿರುವುದನ್ನು ತಿಳಿಸಿ, “ಇದಕ್ಕೇ ನೋಡಿ ನಾನು ಹೇಳಿದ್ದು ವೇದಮೂರ್ತಿ ಬ್ರಹ್ಮಶ್ರೀ ಹರಿ ನಾರಾಯಣ ತಂತ್ರಿಗಳ ಅಷ್ಟಮಂಗಲವೇ ಒಳ್ಳೆಯದಿತ್ತೆಂದು. ಅದು ಸಂಪ್ರದಾಯ ಬದ್ಧವಾದದ್ದು. ಮಿಂದು ಮಡಿಮಡಿಯಾಗಿ ಪ್ರಾರ್ಥನೆ ಸಲ್ಲಿಸಿ ತುಪ್ಪದ ಕಾಲ್ದೀಪ ಹಚ್ಚಿ ಕವಡೆ ಹಾಕಿ ಸಾಂಪ್ರದಾಯಿಕ ಬ್ರಹ್ಮವಿದ್ಯೆಯಾದ ಅಷ್ಟಮಂಗಲ ಪ್ರಶ್ನೆ ಇಡುವುದೆಲ್ಲಿ? ಅದೇನೇನೋ ಡಬ್ಬ ತಂದು ಸ್ವಿಚ್ಚು ಹಾಕಿ ಏನೇನೋ ಒತ್ತಿ ಆ ಫರಂಗಿ ಚರ್ಮದ ಅಮೇರಿಕನ್ನರು ಸೃಷ್ಟಿಸಿದ ಯಂತ್ರದಿಂದ ಅಷ್ಟಮಂಗಲ ಪ್ರಶ್ನೆಗೆ ಉತ್ತರ ಹೇಳಿಸುವುದೆಂದರೇನು? ಸಿಎನ್‍ಎನ್ ಅಷ್ಟಮಂಗಲವೇ ಬೇಕೆಂದು ಮೊನ್ನೆ ಗಂಟಲು ಹರಿದುಕೊಂಡ್ರಲ್ಲಾ, ಈಗ ಏರುಕಂಡೀಶನ್ಡು ಕೋಣೆಗೆ ಎರಡು ಲಕ್ಷ ಕಕ್ಕಿ” ಎಂದು ತಮ್ಮ ತಲೆನೋವನ್ನು ಜನರಿಗೆ ದಾಟಿಸಿದರು.
ಗಣಪತಿ ಸುಬ್ರಾಯ ಜೋಯಿಸ, ಏ.ಪಿ. ಇಂಗ್ಲಿಷ್ ಶೂದ್ರರೆಲ್ಲೆಂದು ನೋಡುತ್ತಿರಲು ಅವರಲ್ಲೊಬ್ಬನು ಎದ್ದು ನಿಂತನು. “ವೇದಮೂರ್ತಿ ಬಿಬಿಸಿ ಅಷ್ಟಮಂಗಲವೇ ಸರಿಯಾಗಲಿಲ್ಲವೆಂದರೆ ಅವರಿಗಿಂತ ಜೂನಿಯರಾದ, ಹೆಚ್ಚು ಚಾಲ್ತಿಯಲ್ಲಿಲ್ಲದ ಎಕ್ಸ್‌ಪೀರಿಯನ್ಸು ಕಡಿಮೆ ಯಿರುವ ವೇದಮೂರ್ತಿ ಬ್ರಹ್ಮಶ್ರೀ ಹರಿನಾರಾಯಣ ತಂತ್ರಿಗಳ ಅಷ್ಟಮಂಗಲ ಸರಿಯಾಗಿರುತ್ತದೆಂದು ಏನು ಗ್ಯಾರಂಟಿ? ಅಷ್ಟು ಖರ್ಚು ಮಾಡಿ ಅಂದು ದೇವಸ್ಥಾನದ ಒಳಗೆ ಅಷ್ಟಮಂಗಲ ಇಡಿಸಿದಿರಲ್ಲಾ? ಎಷ್ಟು ಮಂದಿ ಶೂದ್ರರಿಗೆ, ಅತಿಶೂದ್ರರಿಗೆ ಮತ್ತು ಹೆಂಗಸರಿಗೆ ಅದನ್ನು ನೋಡಲು ಸಿಕ್ಕಿತು? ದೇವತಾ ಕಾರ್ಯಕ್ಕೆ ಎಲ್ಲರೂ ಹಣ ಕೊಡಬೇಕೆಂದ ಮೇಲೆ ಅಷ್ಟಮಂಗಲವನ್ನು ಎಲ್ಲರೂ ನೋಡಲಿ. ಸಿಎನ್‍ಎನ್ ಅಷ್ಟಮಂಗಲದಲ್ಲಿ ಪಾರದರ್ಶಕತೆ ಇದೆ. ಅದು ಓಪನ್ ಆಗಿ ಎಲ್ಲರೆದುರು ನಡೆಯುವ ಪ್ರಶ್ನಾಕಾರ್ಯ. ಒಂದಷ್ಟು ಜನ ಸೇರಿ ಗುಟ್ಟು ಗುಟ್ಟಾಗಿ ನಡೆಸುವ ರಹಸ್ಯವಲ್ಲ. ಇನ್ನು ಕಪಿಲೇಶ್ವರನ ದೇವಸ್ಥಾನದ ಎದುರು ನಾಗಬನ, ಬಲಕ್ಕೆ ಬಯಲು, ಹಿಂಭಾಗಕ್ಕೆ ತೋಟ, ಎಡಕ್ಕೆ ತಪಸ್ವಿನಿ ಹರಿಯುತ್ತಾಳೆ. ಇಲ್ಲಿಗೆ ಪಿಂಡಿಯಲ್ಲೇ ಬರಬೇಕಲ್ಲದೆ ವಾಹನ ಬರುವುದು ಹೇಗೆ? ಎಂದ ಮೇಲೆ ಧೂಳು ಎಲ್ಲಿಂದ ಬರಬೇಕು? ಹಾಗಂತ ಸ್ಪಷ್ಟವಾಗಿ ಫೋನಿನಲ್ಲಿ ಸಿಎನ್‍ಎನ್‍ಗೆ ಹೇಳಿಬಿಟ್ಟರೆ ಮುಗಿದು ಹೋಯ್ತಲ್ಲಾ? ಇಲ್ಲದ ರಾಮಾಯಣ ಯಾಕೆ? ನಿಮಗೆ ಆಗದಿದ್ದರೆ ನಾನು ಫೋನಿನಲಿ ಹೇಳಿ ಬಿಡುತ್ತೇನೆ. ಮತ್ತೆ ಫರಂಗಿಗಳು ಮಾಡಿದ್ದನ್ನು ದೇವಸ್ಥಾನದಲ್ಲಿ ಬಳಸಲೇಬಾರದು ಎಂದಾದರೆ ಇಲ್ಲಿನ ಫೋನು ಮತ್ತು ಕರೆಂಟನ್ನು ಏನು ಮಾಡುತ್ತೀರಿ? ನಿಮ್ಮ ಆನುವಂಶಿಕ ಮೊಕ್ತೇಸರ ಎಂದಿರುವುದನ್ನು ಏ.ಎಂ. ಮತ್ತು ಅರ್ಚಕ ಪುರೋಹಿತ ಎಂದಿರುವುದನ್ನು ಏ.ಪಿ. ಎಂದು ಹಾಕಿಕೊಳ್ಳುವುದು ಸರಿಯಾ?”
ಇದಕ್ಕೆ ಯಾರೂ ಪ್ರತಿಯಾಡಲಿಲ್ಲ. ಕಂಪ್ಯೂಟರು ಅಷ್ಟಮಂಗಲವನ್ನು ನೋಡಲು ಅವರೆಲ್ಲರಲ್ಲಿ ಅಪಾರ ಕುತೂಹಲವಿತ್ತು. ಕೊನೆಗೆ ಗೋಪುರದ ಮಧ್ಯಭಾಗದಲ್ಲಿ ಸಮಸ್ತ ಜಾತಿ, ಉಪಜಾತಿಗಳ ಆಸ್ತಿಕ ಭಕ್ತಾಭಿಮಾನಿಗಳಿಗೆ ಕಾಣುವಂತೆ ಕಂಪ್ಯೂಟರನ್ನು ಇರಿಸಿ, ಮೈಕು ಹಾಕಿ ಎಲ್ಲರಿಗೂ ಕೇಳುವಂತೆ ಅಷ್ಟಮಂಗಲ ಪ್ರಶ್ನಾಕಾರ್ಯ ನಡೆಸುವುದೆಂದು ಮತ್ತೆ ಸರ್ವಾನುಮತಿಯಿಂದ ತೀರ್ಮಾನಿಸಿ ಸಿಎನ್‍ಎನ್‍ನ ಆಗಮನಕ್ಕೆ ಹಸಿರು ನಿಶಾನೆ ತೋರಿಸಲಾಯಿತು.
* * * *
ಕೊನೆಗೂ ಸಿಎನ್‍ಎನ್ ತನನ ನಾಲ್ವರು ಸಹಾಯಕರು ಮತ್ತು ಕಂಪ್ಯೂಟರಿನೊಂದಿಗೆ ಕಪಿಲೇಶ್ವರನ ದೇವಸ್ಥಾನಕ್ಕೆಂದು ತಪಸ್ವಿನಿಯ ಆಚೆ ದಡದಲ್ಲಿ ಬಂದಿಳಿದವನನ್ನು ಪಿಂಡಿಯಲ್ಲಿ ನದಿ ದಾಟಿಸಿ ವೈಭವದಿಂದ ಬರಮಾಡಿಕೊಳ್ಳಲಾಯಿತು. ನದಿ ದಾಟಿಸುವಾಗ ಸಿಎನ್‍ಎನ್‍ನ ಸಹಾಯಕರು ಕಂಪ್ಯೂಟರನ್ನು ಮಾನವಾತೀತ ಗುಹ್ಯಾತಿಗುಹ್ಯ ಅಪೌರುಷೇಯ ಸಾಧನ ವೆಂಬಂತೆ ಪರಮ ಜಾಗರೂಕತೆಯಿಂದ ಎತ್ತಿಕೊಂಡೇ ಇದ್ದುದನ್ನು ಕಪಿಲಳ್ಳಿಯ ಆಸ್ತಿಕ ಭಕ್ತಾಭಿಮಾನಿಗಳು ಎರಡೂ ದಡಗಳಲ್ಲಿ ನಿಂತು ನೋಡಿ ಕಣ್ಮನ ತಣಿಸಿಕೊಂಡರು. ಕಂಪ್ಯೂಟರ್ ಅಷ್ಟಮಂಗಲವನ್ನು ನೇರವಾಗಿ ನೋಡುವ ಸೌಭಾಗ್ಯಕ್ಕಾಗಿ ಕಪಿಲಳ್ಳಿಯ ಸಮಸ್ತ ಶೂದ್ರ, ಅತಿಶೂದ್ರ ಮತ್ತು ಮಹಿಳಾ ಸಮುದಾಯ ಜಮಾಯಿಸಿ ಜಾತ್ರೆಯ ವಾತಾವರಣ ಸೃಷ್ಟಿಸಿಬಿಟ್ಟರು.
ಗೋಪುರದ ಹೃದಯ ಭಾಗದಲ್ಲಿ ಮೇಜಿನ ಮೇಲೆ ಕಂಪ್ಯೂಟರನ್ನು, ಅದರ ಎಡಭಾಗದಲ್ಲಿ ಸೀಡಿ ಪ್ಲೇಯರನ್ನು, ಬಲಭಾಗದಲ್ಲಿ ಪ್ರಿಂಟರನ್ನು ಇರಿಸಿ, ವಿವರಣೆಗೆ ಮೈಕ್ರೋ ಫೋನ್ ಸಿಕ್ಕಿಸಿ ಹತ್ತೇ ನಿಮಿಷಗಳಲ್ಲಿ ಅಷ್ಟಮಂಗಲ ಪ್ರಶ್ನಾಪೂರ್ವ ವಿಧಿಗಳನ್ನೆಲ್ಲಾ ಪೂರೈಸಿದುದನ್ನು ನೋಡಿ ಸಿಎನ್‍ಎನ್ ತಂಡದ ಚಾಕಚಕ್ಯತೆಗೆ ಕಪಿಲಳ್ಳಿಗೆ ಕಪಿಲಳ್ಳಿಯೇ ಬೆಕ್ಕಸ ಬೆರಗಾಯಿತು. ಪ್ಲೇಯರಿಗೆ ಸೀಡಿಯೊಂದನ್ನು ತುರುಕಿಸಿ ಬಟನ್ ಒತ್ತಿ ಮೌಸ್ ಓಡಾಡಿಸಿದಾಗ ಕಂಪ್ಯೂಟರ್ ಪರದೆಯಲ್ಲಿ ವೆಲ್‍ಕಂ ಟು ಚಿಂಡನ್ ನಾರಾಯಣನ್ ನಾಯರ್ ಕಂಪ್ಯೂಟರ್ ಅಷ್ಟಮ್ಂಗಲವೆಂಬ ಅಕ್ಷರಗಳು ಮೂಡಿದವು. ಸ್ವಲ್ಪ ಹೊತ್ತು ಬಿಟ್ಟ ಮೇಲೆ www cnnglobal computerasthamangala dot com ಮೂಡಿ ಲಾಗ್ ಇನ್ಫ಼್ ಕಾಣಿಸಿಕೊಂಡಾಗ ಚಿಂಡನ್ನಾರಾಯಣ ನಾಯರ್ “ಇಂಗ್ಲಿಷು ಗೊತ್ತಿರುವವರು ಡೈರೆಕ್ಟು ಓದಬಹುದು. ಆಗದವರಿಗೆ ನಾವು ಅರ್ಥ ಹೇಳಿಗೊಡುತ್ತೇವೆ” ಎಂದನು. ಅದನ್ನು ಕೇಳಿದ ಇಂಗ್ಲಿಷ್ ಶೂದ್ರರ ಮತ್ತು ಬೋದಾಳ ಶಂಕರನ ಮುಖ ಬ್ರಹ್ಮಾನಂದದಿಂದ ಬೆಳಗಿದರೆ, ಉಳಿದವರು ಮುಖ ಸೊಟ್ಟಗೆ ಮಾಡುತ್ತಿರುವಾಗ ಚಿಂಡನ್ನಾರಾಯಣ ನಾಯರ್ ಕೇಳಿದ. “ನಿಮ್ಮದು ಎಂದಾ ಪ್ರಶ್ನಂ?”
ಎಂಟು ಬೆರಳುಗಳಲ್ಲಿ ಉಂಗುರ, ಎರಡೂ ಕೈಗಳಿಗೆ ಚಿನ್ನದ ಕಡಗ, ಕೊರಳಲ್ಲಿ ಸರಪಣಿ ಸರ, ಚಿನ್ನದ ಕವಚದ ರುದ್ರಾಕ್ಷಿ ಮಾಲೆ, ಕಿವಿಯಲ್ಲಿ ಥಳಥಳಿಸುವ ವಜ್ರದ ಟಿಕ್ಕಿ, ಅಂಗಿ ಹಾಕದ ಬ್ರಹ್ಮಾಂಡೋದರಕ್ಕೆ ಅಲ್ಲಲ್ಲಿ ಚಂದನ ಲೇಪನ, ಚಿನ್ನದ ಅಂಚಿನ ಮಡಿ ಜರಿತಾರಿ, ನೀಲಿ ಪೀತಾಂಬರ, ಹೆಗಲುಗಳಿಂದ ಇಳಿಬಿಟ್ಟ ಜರತಾರಿ ಕೆಂಪು ಪಟ್ಟೆ ಶಾಲು, ತಾಂಬೂಲ ಚರ್ವಿತ ಕುಂಕುಮ ವರ್ಣದಿಂದ ಶೋಭಿಪ ಅಧರದ, ಥೇಟ್ ಯಕ್ಷಗಾನದ ಬಕಾಸುರನಿಗೆ, ಶೃಂಗಾರ ರಾವಣನ ವೇಷಭೂಷಣ ತೊಡಿಸಿದಂತೆ ಕಂಗೊಳಿಸುವ ಧರ್ಮದರ್ಶಿ ಅನಂತಪದ್ಮನಾಭಯ್ಯ, ಏ.ಎಂ ಮುಂದಕ್ಕೆ ಬಂದು ಎಲ್ಲರಿಗೂ ಕೈ ಮುಗಿದರು. “ಮೂರು ಮಳೆಗಾಲಗಳ ಹಿಂದೆ ನಾವು ವೇದಮೂರ್ತಿ ಬ್ರಹ್ಮಶ್ರೀ ಬಾಲಮುರಳೀಕೃಷ್ಣ ಚಂಪಕತ್ತಾಯರನ್ನು ಕರೆಸಿ ಅಷ್ಟಮಂಗಲ ಪ್ರಶ್ನೆ ಇರಿಸಿ ಕಂಡುಬಂದ ದೋಷ ಪರಿಹಾರಾರ್ಥ ಬ್ರಹ್ಮ ಕಲಶೋತ್ಸವ ನಡೆಸಿದ್ದಕ್ಕೆ ಸಂಪ್ರೀತನಾದ ಕಪಿಲೇಶ್ವರ ಊರಿಗೆ ಮಳೆ ಬೆಳೆ ಭೋಗ ಭಾಗ್ಯಗಳನ್ನು ಕರುಣಿಸಿ ಈ ವರೆಗೆ ಕಾಪಾಡಿಕೊಂಡು ಬಂದಿದ್ದಾನೆ. ಆದರೆ ಮೂರು ವಾರಗಳ ಹಿಂದೆ ಕಪಿಲೇಶ್ವರನ ಗರ್ಭಗುಡಿಯ ಮೆಟ್ಟಿಲಲ್ಲಿ ನಾಗರಹಾವಿನ ದರ್ಶನವಾದಂದಿನಿಂದ ಊರಲ್ಲಿ ಕೆಲವು ದುರ್ಘಟನೆಗಳು ನಡೆಯುತ್ತಿರುವ ಸುದ್ದಿಯಾಗಿದೆ. ಇದಕ್ಕೆ ಇನ್ನೊಂದು ಅಷ್ಟಮಂಗಲ ಪ್ರಶ್ನೆ ಅಗತ್ಯವಿದೆ ಯೆಂದು ಊರವರೆಲ್ಲಾ ಸೇರಿ ನಿರ್ಣಯಿಸಿದ್ದಾರೆ. ನಾವೆಲ್ಲಾ ನಂಬಿರುವ ಆ ದೈವವೇ ನಿಮ್ಮನ್ನು ಇಲ್ಲಿಗೆ ಕರೆಸಿಕೊಂಡಿರುವುದರಿಂದ ದೈವೇಚ್ಛೆ ಕಂಪ್ಯೂಟರಿನಿಂದ ಏನನ್ನು ಹೊರಡಿಸುತ್ತದೆಯೋ ಅದನ್ನು ಮಾಡುತ್ತೇವೆ.”
ಸಿಎನ್‍ಎನ್ ಚಕಚಕೆಂದು ಗುಂಡಿಗಳನ್ನು ಒತ್ತುತ್ತಾ ಹೋದಂತೆ ಕಂಪ್ಯೂಟರು ಪರದೆಯ ಮೇಲೆ ಅಕ್ಷರಗಳು ಮೂಡತೊಡಗಿದವು. “ಸಂಪಗದ್ದಾಯ ಅಷ್ಟಮಂಕಲಂ… ಬ್ರಹ್ಮಗಲಶಂ… ಗರ್ಭಗುಡಿ ನಾಗದರ್ಶನಂ… ಓ ನಾಗದರ್ಶನಂ… ಸರಿ. ಅಂಬಲದ ಮೂಡುದಿಕ್ಕಿಗೆ ನಾಗಬನ ಇದೆ. ಇದು ನಾಗನನ್ನೇ ಕುತ್ತಿಗೆಯಲ್ಲಿ ಆಭರಣವಾಗಿ ಮಾಡಿಕೊಂಡಿರುವ ಈಶ್ವರ ದೇವರ ಅಂಬಲಂ. ಹಾಗಾಗಿ ಒಳಗೆ ನಾಗ ಕಾಣಿಸಿಕೊಂಡರೆ ಅದರಿಂದ ದೋಷವೇನಿಲ್ಲ. ನಾಗ ದೇವಸ್ಥಾನಕ್ಕೆ ಬಂದಿದ್ದರೆ ಇಲ್ಲಿ ಇಲಿಗಳು ತುಂಬಿರಬೇಕು. ಮತ್ತೆ ನೀವಾಗಿ ಉಪದ್ರಕೊಡದಿದ್ದರೆ ನಾಗ ಅದಾಗಿ ನಿಮ್ಮ ಉಪದ್ರಕ್ಕೆ ಬರುವುದಿಲ್ಲ. ಸರಿಯಾಯಲ್ಲೊ? ಇನ್ನು ಊರಿಗೆ ಬಂದ ದೋಷವೇನು?”
ಧರ್‍ಮದರ್‍ಶಿ ಅನಂತಪದ್ಮನಾಭಯ್ಯ ಏ.ಎಂ. ತಮ್ಮ ಶಾಲನ್ನು ಸರಿಪಡಿಸಿಕೊಳ್ಳುತ್ತಾ ಸ್ವಲ್ಪ ಗಾಬರಿಯಿಂದ, “ಹ್ಹೆ ಹ್ಹೆ… ದೊಡ್ಡ ದೋಷವೇನೂ ಈವರೆಗೆ ಕಂಡುಬಂದಿಲ್ಲ. ಆದರೆ ಇನ್ನು ಕಂಡುಬರಬಾರದಲ್ಲಾ? ಶೀತ, ವಾತ, ಪಿತ್ಥ ಕೆಲವರಿಗೆ ಜಾಸ್ತಿಯಾದದ್ದು ನಿಜ. ಫಲ ಜ್ಯೋತಿಷ್ಯವೂ ಅಷ್ಟಮಂಗಲ ಪ್ರಶ್ನಾ ಪರಿಹಾರ ಸೂಚಿಸಿದ್ದಕ್ಕೆ ನಿಮ್ಮನ್ನು ಅಲ್ಲಿಂದ ಇಲ್ಲಿಗೆ ಕರೆಸಬೇಕಾಯಿತು” ಎಂದರು. ಚಿಂಡನ್ನಾರಾಯಣ ನಾಯರ್ ಮತ್ತೊಂದಷ್ಟು ಗುಂಡಿ ಒತ್ತುತ್ತಾ “ಆಯುರ್‍ವೇದದ ಪ್ರಕಾರ ವಾದ ಪಿದ್ದ ಗಫಾದಿ ದ್ರಿದೋಷಗಳು ಎಲ್ಲರಲ್ಲೂ ಆಗಾಗ ಗಾಣಿಸಿಗೊಳ್ಳೂತ್ತವೆ. ವಯಸ್ಸಾದವರಲ್ಲಿ ಹೆಚ್ಚು ಗಾಣಿಸಿಗೊಳ್ಳಲೇ ಬೇಗಲ್ಲಾ? ಫುಡ್ಡು ಗಂಟ್ರೋಲು ಮಾಡಿದರೆ ಇವು ಸರಿಯಾಗುತ್ತದೆಂದು ಆಯುರ್‍ವೇದದಲ್ಲಿ ಪರಿಹಾರವೂ ಉಂಟು. ವಾದಕ್ಕೆ ವಾದನಾಶಿನೀ ತೈಲಂ, ಪಿದ್ದಕ್ಕೆ ಗೂಷ್ಮಾಂಡ ಪಾಷಾಣಂ, ಗಫಕ್ಕೆ ದ್ರಿಫಲಾದಿ ಗಷಾಯಂ ಕೊಡಬೇಕೆಂದು ಆಯುರ್ವೇದ ಹೇಳುತ್ತದೆ. ಶೀದಕ್ಕೆ ಇಂಜಿ ಗಷಾಯಂ ದ ಬೆಸ್ಟು. ಆಂ…. ನೋಡಿ…. ನೋಡಿ…. ಇಲ್ಲಿ ಸಿಗ್ಗಿತು” ಎಂದಾಗ ಕಪಿಲಳ್ಳಿಗೆ ಕಪಿಲಳ್ಳಿಯೇ ಏನು ಸಿಕ್ಕಿತೆಂದು ತುದಿಗಾಲಲ್ಲಿ ನಿಂತು ನೋಡತೊಡಗಿತು.
“ನಿಮ್ಮದು ಗಬಿಲೇಶ್ವರ ದೇವರು. ಮೂಡು ವನದೇವದಾ, ವಡಗು ಜಲದೇವದಾ. ಸೊಲ್ಪ ವಾಸ್ತು ದೋಷವುಂಟು. ಪಡು ಜಲದೇವದಾ ಆಗಿರುತ್ತಿದ್ದರೆ ಈ ಅಂಬಲಂ ದಿರುಪದಿ ವೆಂಗಡ್ರಮಣ ಅಂಬಲಕ್ಕಿಂತಲೂ ಪ್ರಸಿದ್ಧಿ ಪಡೆದು ದೇಶದಲ್ಲಿ ನಂಬರ್ ವನ್ ಆಗುತ್ತಿತ್ತು. ಅಲ್ಲಿಗಿಂತ ಹೆಚ್ಚು ಜನ ಇಲ್ಲಿಗೆ ಬಂದು ಮುಡಿಗೊಟ್ಟು ತಪಸ್ವಿನಿಯಲ್ಲಿ ಮಿಂದು ಪಾಪ ಪರಿಹಾರ ಮಾಡಿ ಹೋಗುತ್ತಿದ್ದರು. ಆದರೆ ಗಬಿಲೇಶ್ವರನಿಗೆ ಭಾಗ್ಯಮಿದ್ದರೂ ಗಬಿಲಳ್ಳಿಗೆ ಭಾಗ್ಯಮಿಲ್ಲ. ಈಗಾಗಲೇ ಸಂಪಗದ್ದಾಯರ ಅಷ್ಟಮಂಕಲವಾಗಿ ಬ್ರಹ್ಮಗಲಶವಾದ ಮೇಲೆ ಮತ್ತೆ ಇಪ್ಪತೈದು ವರ್ಷ ಅಷ್ಟಮಂಕಲ, ಬ್ರಹ್ಮಗಲಶ ವೇಂಡಾ. ಆದರೆ ಸಂಪಗದ್ದಾಯರ ಅಷ್ಟಮಂಕಲ, ಬ್ರಹ್ಮ ಗಲಶದಲ್ಲಿ ಅಪಚಾರವಾಗಿದ್ದರೆ ಒಂದು ದ್ರಿಗಾಲ ಬೂಜೆ ಮಾಡಿದರೆ ಸರಿ ಎಲ್ಲ ಹೋಗುತ್ತದೆ.”
ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯನವರು ಸ್ತಂಭೀ ಭೂತರಾಗಿ, “ದೇವರಿಗಿರುವ ಭಾಗ್ಯ ಜನರಿಗಿಲ್ಲ ಎನುನತ್ತಿದ್ದೀರಿ? ಹಾಗೆಂದರೇನು? ದೇವರ ಭಾಗ್ಯವನ್ನು ಜನರಿಗೆ ಬಾರದಂತೆ ತಪ್ಪಿಸಿದವರು ಯಾರು?” ಎಂದು ಜಬರದಸ್ತಿನಿಂದ ಪ್ರಶ್ನಿಸಿದರು. ಚಿಂಡನಾನರಾಯಣ ನಾಯರ್ ಕಂಪ್ಯೂಟರ್ ಪರದೆ ನೋಡುತ್ತಾ ಮುಂದುವರಿಸಿದ: “ಅಂಬಲದ ಭಾಗ್ಯ ಅಂಬಲಕ್ಕೆ ಮರಳಿದರೆ ದೇವರ ಭಾಗ್ಯದಲ್ಲಿ ಜನಕ್ಕೆ ಪಾಲು ಸಿಗುತ್ತದೆ. ಈ ಅಂಬಲಕ್ಕೆ ಸಾಕಷ್ಟು ಹುಟ್ಟುವಳಿಯಿದ್ದರೂ ಅದು ಯಾರ್ಯಾರದೋ ಪಾಲಾಗಿ ಹೋಗಿರುವುದರಿಂದ ಅಂಬಲಕ್ಕಾಗಿ ಊರ ಜನ ಆಗಾಗ ಖರ್ಚು ಮಾಡುತ್ತಲೇ ಇರಬೇಕಾಗಿದೆ. ಕಳೆದ ಬ್ರಹ್ಮಗಲಶದಲ್ಲಿ ಜಮಾವಣೆಯಾದ ಹಣ ಎಲ್ಲರ ಪ್ರಯೋಜನಕ್ಕೆ ಬಾರದೆ ಕೆಲವರ ಪಾಲಾಗಿದೆಯೆಂದು ಗಂಪ್ಯೂಟರ್ ಅಷ್ಟಮಂಕಲ ಹೇಳುತ್ತಿದೆ.”
ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯನವರಿಗೆ ಇನ್ನಿಲ್ಲದ ಸಿಟ್ಟು ಬಂತು. “ಚಿಂಡನ್ನಾರಾಯಣ ನಾಯರ್ರೇ, ಇಲ್ಲದ ಅಧಿಕಪ್ರಸಂಗ ನಿಮಗೆ ಬೇಡ. ನಿಮ್ಮನ್ನು ನಾವೆಲ್ಲಾ ಕರೆಸಿದ್ದು ಈ ಹಿಂದೆ ಏನು ನಡೆದಿದೆಯೆಂದು ಹೇಳಲಿಕ್ಕಲ್ಲ; ಮುಂದೇನಾಗಬೇಕೆಂದು ಪರಿಹಾರ ಸೂಚಿಸಲು. ಅದು ಬಿಟ್ಟು ಏನೇನೋ ಹೇಳಿ ಊರಿನ ಒಗ್ಗಟ್ಟು ಹಾಳು ಮಾಡಬೇಡಿ.”
ತಕಣ ಇಂಗ್ಲಿಷ್ ಶೂದ್ರರು ಎದ್ದು ನಿಂತು, “ಅನಂತಪದ್ಮನಾಭಯ್ಯರೇ, ಚಿಂಡನ್ನಾರಾಯಣ ನಾಯರರು ಹೇಳಿದ್ದರಲ್ಲಿ ತಪ್ಪೇನಿದೆ? ಸುತ್ತು ಗೋಪುರ, ಕಲ್ಲಕಟ್ಟ, ನಾವು ಶೂದ್ರರು, ಅತಿಶೂದ್ರರು ಶ್ರಮದಾನದಿಂದ ಮಾಡಿದ್ದು. ಊಟಕ್ಕೆ ಬೇಕಾದ್ದನ್ನು ನಾವೇ ಹಸಿರುವಾಣಿ ಹೊರೆಕಾಣಿಕೆಯಾಗಿ ತಂದು ಹಾಕಿದ್ದು. ಇದರ ಮೇಲೆ ನಾವೆಲ್ಲಾ ತಲಾ ಐದು ಸಾವಿರದಂತೆ ಕೊಟ್ಟೆವಲ್ಲಾ, ಆ ಹಣ ಎಲ್ಲಿಗೆ ಹೋಯಿತೆಂದು ಲೆಕ್ಕ ತೋರಿಸಿದ್ದೀರಾ? ಮಂತ್ರ, ತಂತ್ರ, ಗೋವು, ವಸ್ತ್ರ, ಸುವರ್ಣ ದಾನವೆಂದು ಪ್ರಯೋಜನ ಪಡೆದದ್ದು ಯಾರು, ಶ್ರಮದಾನ ವೆಂದು ದುಡಿದದ್ದು ಯಾರು? ಹೋಗಲಿ ಅಂದರೆ ನೀವೆಲ್ಲಾ ಒಳಗೆ ಸೇರಿ ಪಟ್ಟಾಗಿ ಎರಡು ಗಂಟೆ ಎಡೆಬಿಡದೆ ತಿಂದು ಉಳಿದುದನ್ನು ತಂದು ನಮಗೆ ಹಾಕಿದಿರಲ್ಲಾ, ಇದು ಕಪಿಲೇಶ್ವರನಿಗೆ ಮೆಚ್ಚುಗೆಯಾದೀತಾ? ಕೆಲಸಕ್ಕೆ ಮಾತ್ರ ನಾವು ಬೇಕು, ಊಟಕ್ಕಾಗುವಾಗ ಬೇಡವಾದೆವಲ್ಲಾ? ಈಗ ಇನ್ನೊಂದು ಬ್ರಹ್ಮಕಲಶದ ಅಗತ್ಯವಿಲ್ಲ; ಕಳೆದ ಬಾರಿ ಅಪಚಾರ ದೋಷವಾಗಿದ್ದರೆ ಅದರ ನಿವಾರಣೆಯಾಗಬೇಕೆಂದು ಚಿಂಡನ್ನಾರಾಯಣ ನಾಯರರು ಹೇಳಿದರಲ್ಲಾ? ಅವರೇ ಪರಿಹಾರ ಸೂಚಿಸಲಿು ಎಂದದ್ದೇ ಗುಂಪು “ಹೌದು, ಹೌದು” ಎಂದು ದನಿಗೂಡಿಸಿತು.
“ಯಾರೂ ಗಲಾಟೆ ಮಾಡದೆ ಕೇಳಬೇಕು. ಗಂಪ್ಯೂಟರಲ್ಲಿ ಕಾಣುವ ಹಾಗೆ ಒಂದು ಕಾಲದಲ್ಲಿ ಅಂಬಲಕ್ಕೆ ತುಂಬಾ ಆಸ್ತಿ ಇದ್ದದ್ದು ಯಾರ್ಯಾರದೋ ಪಾಲಾಗಿದೆ. ಅಂಬಲದ ಆಸ್ತಿಯೆಂದರೆ ಅದು ಊರ ಸಮಸ್ತರ ಆಸ್ತಿ. ಅಂಬಲಕ್ಕೆ ಯಾವುದೇ ಸೇವೆಗೆ ತೊಂದರೆ ಬಾರದಿರಲು ಊರ ಹಿರಿಯರು ಮಾಡಿದ ಒಂದು ವ್ಯವಸ್ಥೆ ಅದು. ಅಂಬಲದ ಆಸ್ತಿ ಇಟ್ಟು ಕೊಂಡವರು ಮಾತ್ರ ಅಷ್ಟಮಂಕಲ, ಬ್ರಹ್ಮಗಲಶಕ್ಕೆ ಖರ್ಚು ಹಾಕಲು ಬಾಧ್ಯರು. ಬೇರೆಯವರಿಂದ ಸಂಗ್ರಹಿಸಬೇಕೆಂದಿಲ್ಲ. ಈ ಹಿಂದೆ ಸಾಕಷ್ಟು ಸಂಗ್ರಹವಾಗಿದೆ. ಆದರೆ ಅದು ಎಲ್ಲರಿಗಾಗಿ ವ್ಯಯ ಆಗಲಿಲ್ಲ. ಅದುವೇ ಇಲ್ಲಿ ಕಂಡುಬರುವ ಅಪಚಾರ ದೋಷ. ಇನ್ನು ಮುಂದಿನ ದೇವತಾ ಕಾರ್ಯಗಳಿಗೆಲ್ಲಾ ಅಂಬಲದ ಆಸ್ತಿಯಿಟ್ಟುಕೊಂಡವರು ಮಾತ್ರವೇ ಖರ್ಚು ಹಾಕುವುದು ಅಪಚಾರ ದೋಷ ನಿವಾರಣಾ ಮಾರ್ಗವಾಗಿರುತ್ತದೆ. ಸಂಪಗದ್ದಾಯರ ಬ್ರಹ್ಮಗಲಶದಲ್ಲಿ ತಪ್ಪಾಗಲು ಸಾಧ್ಯವೇ ಇಲ್ಲ. ಇನ್ನು ಇಪ್ಪತೈದು ವರ್ಷ ಬ್ರಹ್ಮಗಲಶ ಬೇಕಾಗಿಲ್ಲ. ಅಷ್ಟಾಗಿಯೂ ನೀವು ಮನಶ್ಶಾಂತಿಗೆ ಬ್ರಹ್ಮಗಲಶ ಬೇಕೇ ಬೇಕೆಂದು ಹೇಳೋದಾದರೆ, ಗಪಿಲೇಶ್ವರನ ಆಸ್ತಿಯಿಟ್ಟು ಕೊಂಡವರೇ ಪೂರ್ತಿ ಹಣ ಹಾಕಿ ಮಾಡಿಸಬೇಕಾಗುತ್ತದೆಂದು ನನ್ನ ಅಷ್ಟಮಂಕಲ ಹೇಳುತ್ತದೆ.”
ಚಿಂಡನ್ನಾರಾಯಣ ನಾಯರನ ಮಾತು ಮುಗಿಯುತ್ತಿದ್ದಂತೆ ಮುಂದಕ್ಕೆ ನುಗ್ಗಿ ಬಂದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯರು, “ಎಲವೊ ಮಲೆಯಾಳೀ ಮ್ಲೇಂಚ್ಛನೇ, ಸಾಕು ನಿನ್ನ ಲಡಕಾಸು ಕಂಪ್ಯೂಟರು ಪೆಟ್ಟಿಗೆಯೂ, ಪೊಟ್ಟು ಲಟ್ಟೂಸು ಅಷ್ಟಮಂಗಲ ಪ್ರಶ್ನೆಯೂ” ಎಂದು ಭೂತ ಸಂಚಾರವಾದಂತೆ ಆರ್ಭಟಿಸುತ್ತಾ ಕಂಪ್ಯೂಟರನ್ನು ಬಲವಾಗಿ ತಳ್ಳಿದ್ದೇ ಅದು ಕೆಳಕ್ಕೆ ಬಿದ್ದು ಠಳ್ಳೆಂದು ಒಡೆದು ಹೋಯಿತು. ಅದೇ ಸ್ಪೀಡಲ್ಲಿ ಮುನ್ನುಗ್ಗಿ ಅವರು ಚಿಂಡನ್ನಾರಾಯಣ ನಾಯರನ ಕಪಾಳಕ್ಕೆ ಬಲವಾಗಿ ಒಂದು ಬಿಗಿದರು. ಜನರಲ್ಲಿ ಎರಡು ಗುಂಪುಗಳಾಗಿ ಬೊಬ್ಬೆ, ನೂಕಾಟ, ತಳ್ಳಾಟ ಜೋರಾಗ ತೊಡಗಿದಾಗ ಕಾಲಿಗೆ ಬುದ್ಧಿ ಹೇಳಿದ ಚಿಂಡನ್ನಾರಾಯಣ ನಾಯರನ ತಂಡ ಪಿಂಡಿ ಹತ್ತಿ, ಆಚೆ ದಡ ಸೇರಿ ಅಲ್ಲಿದ್ದ ಕಾರಲ್ಲಿ ಕೂತು ವಾಯು ವೇಗದಲ್ಲಿ ನಗರದತ್ತ ಧಾವಿಸಿತು.
* * * *
ಇಡೀ ಪ್ರಕರಣದ ತನಿಖೆಗಾಗಿ ತಾನೇ ಸ್ವಯಂ ನಾಳೆ ಕಪಿಲೇಶ್ವರ ದೇವಸ್ಥಾನಕ್ಕೆ ಬರುವುದಾಗಿ ಸಾಕ್ಷಾತ್ ಹಸಿರಂಗಡಿ ಪೋಲಿಸ್ ಸಬಿನಿಸ್ಪೆಕ್ಟರು ದೂರವಾಣಿಯಲ್ಲಿ ನೇರವಾಗಿ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯರಿಗೆ ತಿಳಿಸಿದಾಗ ಅವರು ನಖ ಶಿಖಾಂತ ನಡುಗಿ ಹೋಗಿ ದೇವಸ್ಯಂ ಟ್ರಸ್ಟಿನ ಸದಸ್ಯರಿಗೆ ವಿಷಯ ತಿಳಿಸಿದರು. ಅದು ಊರಿಡೀ ಪ್ರಚಾರವಾಗಿ ಕಪಿಲೇಶ್ವರನ ದೇವಸ್ಥಾನಕ್ಕೆ ಮರುದಿನ ಜನ ಹಿಂಡು ಹಿಂಡಾಗಿ ಬರತೊಡಗಿದರು. ಪೋಲಿಸು ಪಟಾಲಮ್ಮನ್ನು ಮತ್ತು ಚಿಂಡನ್ನಾರಾಯಣ ನಾಯರನ ಜತೆಗಿದ್ದ ಹದಿನೈದು ಮಂದಿಯನ್ನು ನದಿ ದಾಟಿಸಲು ಪಿಂಡಿ ಒಟ್ಟು ಆರು ಬಾರಿ ಅತ್ತಣಿಂದಿತ್ತ, ಇತ್ತಣಿಂದತ್ತ ಸಂಚರಿಸಬೇಕಾಗಿ ಬಂತು. ಅಷ್ಟೊಂದು ಮಂದಿ ಪೋಲಿಸರು ಕಪಿಲಳ್ಳಿಯ ಇತಿಹಾಸದಲ್ಲಿ ಒಮ್ಮೆಯೂ ಊರಿಗೆ ಬಂದವರಲ್ಲವಾಗಿ ಏನು ಗ್ರಹಚಾರ ಕಾದಿದೆಯೋ ಎಂದು ವಯಸ್ಸಾದವರು ಚಿಂತಿಸಿದರೆ, ಚಿಂಡನ್ನಾರಾಯಣ ನಾಯರನ ಕಡೆಯ ಯಮದೂತರಂತಹ ಹದಿನೈದು ಮಂದಿಗಳನ್ನು ನೋಡಿ ಇವರು ಯಾಕಾಗಿ ಬಂದರೋ ಎಂಬ ದೀರ್ಘಾಲೋಚನೆಯಲ್ಲಿ ಹೊಂತಕಾರಿಗಳು ಮುಳುಗಿ ಹೋದರು. ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತ ಪದ್ಮನಾಭಯ್ಯನವರು ತಮ್ಮ ಘಟೋತ್ಕಚನಂತಹ ಬೃಹದಾಕೃತಿಯನ್ನು ಹಿಡಿಯಾಗಿಸಿಕೊಂಡು ನಗಲಾರದೆ ನಗುತ್ತಾ, ಅಗತ್ಯ ಕ್ಕಿಂತ ಹೆಚ್ಚು ನಮಸ್ಕಾರ ಮಾಡುತ್ತಾ ಇನ್ನಿಲ್ಲದ ಅನುನಯದಿಂದ ಸಬಿನಿಸ್ಪೆಕ್ಟರರನ್ನು ಸ್ವಾಗತಿಸಿ ಗೋಪುರದಲ್ಲಿ ಸ್ಟೀಲು ಕುರ್ಚಿ ತಂದು ಹಾಕಿ ಕೂರಿಸಿದರು. ಕಳೆದ ರಾತ್ರೆ ಸಬಿನಿಸ್ಪೆಕ್ಟರರಿಂದ ಫೋನು ಬಂದಾಗಿನಿಂದ ಆರಂಭವಾಗಿದ್ದ ಅವರ ತೊಡೆಗಳ ನಡುಕ ಇನ್ನೂ ನಿಂತಿರಲಿಲ್ಲ.
“ಧರ್ಮದರ್ಶಿ ಅನಂತಪದ್ಮನಾಭಯ್ಯನವರೇ, ನೀವು ಈ ಊರ ಹಿರಿಯರು. ಎಷ್ಟೋ ತಲೆಮಾರುಗಳಿಂದ ದೇವಸ್ಥಾನದ ಮೊಕ್ತೇಸರಿಕೆ ನಿಮ್ಮ ಕುಟುಂಬಕ್ಕೆ ಸಿಕ್ಕಿದೆ. ನೀವು ಹಿರಿಯರು ಎಂಬ ಗೌರವ ನನ್ನಲ್ಲಿದೆ. ಆದರೆ ನಾನು ನನ್ನ ಕರ್ತವ್ಯವನ್ನು ಮಾಡಲೇ ಬೇಕಾಗಿ ಬಂದಿರುವುದಕ್ಕೆ ನೀವು ನನ್ನನ್ನು ಕಮಿಸಬೇಕು. ಹಸಿರಂಗಡಿ ಪೋಲಿಸು ಸ್ಟೇಷನಿನ ನಲ್ಲಿ ನಿಮ್ಮ ಮೇಲೆ ಮೂರು ಮೊಕದ್ದಮೆಗಳು ದಾಖಲಾಗಿವೆ. ನಿಮ್ಮನ್ನು ಅರೆಸ್ಟು ಮಾಡಿ ಕರಕೊಂಡು ಹೋಗಲು ನಾನು ಬಂದಿದ್ದೇನೆ.”
ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯರು ದೊಡ್ಡ ದನಿ ತೆಗೆದು ಗೋಳೋ ಎಂದು ಸಾರ್ವಜನಿಕವಾಗಿ ಅತ್ತದ್ದನ್ನು ಕಪಿಲಳ್ಳಿಯ ಜನ ಮೊದಲ ಬಾರಿಗೆ ಕರುಣೆಯಿಂದ ನೋಡಿದರು. ಪರಿಸ್ಥತಿಯ ಗಂಭೀರತೆಯನ್ನು ಗಮನಿಸಿ ಚಿಂಡನ್ನಾರಾಯಣ ನಾಯರನ ಪಟಾಲಂ ಸುಮ್ಮನೆ ಎಲ್ಲವನ್ನೂ ನಿಂತು ನೋಡುತ್ತಿತ್ತು. ಕೊನೆಗೆ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯನವರು ತಮ್ಮನ್ನು ತಾವೇ ಸಂಭಾಳಿಸಿ ಕೊಂಡು ಪಟ್ಟೆಶಾಲಿ ನಲ್ಲಿ ಕಣ್ಣು, ಮೂಗು, ಬಾಯಿ ಒರೆಸಿಕೊಂಡು ಅತ್ಯಂತ ದೀನತೆಯಿಂದ ಕೈ ಮುಗಿದರು. “ನಾನು ಕಪಿಲೇಶ್ವರ ದೇವಸ್ಥಾನದ ಆನುವಂಶಿಕ ಮೊಕ್ತೇಸರ. ನಿಷ್ಟಾವಂತ, ಕರ್ಮಠ, ಬ್ರಾಹ್ಮಣ. ಧರ್ಮದರ್ಶಿಯಾದ ನನ್ನ ಮರ್ಯಾದೆಯನ್ನು ಖಾವಂದರು ದಯವಿಟ್ಟು ಕಳೆಯಬಾರದು.”
“ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯನವರೇ, ನಿಮ್ಮ ಮೇಲೆ ನನಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ಕಾನೂನಿನ ಚೌಕಟ್ಟಿನಲ್ಲಷ್ಟೇ ನಾನು ವ್ಯವಹರಿಸುತ್ತಿರುವುದು. ನೀವು ಕಳೆದ ಬಾರಿ ನಡೆದ ಬ್ರಹ್ಮಕಲಶದಲ್ಲಿ ಸಂಗ್ರಹವಾದ ಅಪಾರ ಹಣದ ಲೆಕ್ಕ ಕೊಡದೆ, ನಿಮ್ಮ ಸಂಬಂಧಿಕರಿಗೆ ಅದೇನೇನೋ ಸ್ವಲ್ಪ ದಾನಕೊಟ್ಟು ದೊಡ್ಡ ಮೊತ್ತವನ್ನು ಮನೆಯಲ್ಲಿ ಪೆಟ್ಟಿಗೆಗಳಲ್ಲಿ ಕೂಡಿಟ್ಟೀದ್ದೀರಂತೆ. ಇದು ೩೦೯ ಮತ್ತು ೪೨೦ ರ ಕೇಸಾಗುತ್ತದೆ. ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವಗಳಲ್ಲಿ ಸಹಪಂಕ್ತಿ ಭೋಜನಕ್ಕೆ ಅವಕಾಶ ನೀಡದೆ ಊರನ್ನು ಜಾತಿ ಆಧಾರದಲ್ಲಿ ಒಡೆದದ್ದು ಜಾತಿ ನಿಂದನೆಯ ಕೇಸಾಗಿ ದಾಖಲಾಗಿದೆ. ದೇವರ ಜಾಗವನ್ನು ನೀವು ಮತ್ತು ನಿಮ್ಮ ಬಂಧುಬಳಗ ಕಬಳಿಸಿ ಕೂತು ದೇವರಿಗೇ ಅನ್ಯಾಯ ಮಾಡಿದ್ದಲ್ಲದೆ ಸಣ್ಣಪುಟ್ಟ ಕಾರಣ ನೀಡಿ ಆಗಾಗ ದೇವರ ಹೆಸರಲ್ಲಿ ಹಣ ಕಲೆಕ್ಷನ್ ಮಾಡುತ್ತೀರೆಂದು ನಿಮ್ಮ ಊರವರು ನನಗೆ ಫೋನಿನಲ್ಲಿ ದೂರು ಸಲ್ಲಿಸಿದ್ದಾರೆ. ಇನ್ನು ಚಿಂಡನ್ನಾರಾಯಣ ನಾಯರರು ಲಿಖಿತ ರೂಪದಲ್ಲಿ ಸ್ಟೇಶನ್ನಿಗೆ ಸಲ್ಲಿಸಿದ ದೂರಿನಲ್ಲಿ, ನೀವು ಅವರ ಕಂಪ್ಯೂಟರನ್ನು ಒಡೆದು ಹಾಕಿ ಮಲೆಯಾಳೀ ಮ್ಲೇಂಚ್ಛನೆಂದು ತುಚ್ಛೀಕರಿಸಿ, ಥಳಿಸಿ ಕೊಲೆ ಮಾಡಲು ಯತ್ನಿಸಿದ್ದೀರಿ ಎಂದಿದೆ. ಇದು ೩೬೩ ಮತ್ತು ೩೬೪ರ ಕೇಸಾಗಿ ದಾಖಲಾಗಿದೆ. ಜಾತಿ ನಿಂದನೆಯ ಕೇಸನ್ನು ಬದಿಗಿಟ್ಟರೂ ನಿಮ್ಮ ಮೇಲೆ ೩೨೩, ೩೨೪, ೩೦೯ ಮತ್ತು ೪೨೦ ರ ಕೇಸು ಹಾಕಿ ಎಳಕೊಂಡು ಹೋಗಲೇಬೇಕಾಗುತ್ತದೆ.”
ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯನವರ ಕಾಲುಗಳ ಬಲ ಪೂರ್ತಿ ಕುಂದಿ ಅವರು ಕುಸಿದು ಕುಳಿತರು. ಅವರ ದೈನ್ಯಾವಸ್ಥೆ ನೋಡಿ ಕಪಿಲಳ್ಳಿಯ ಇಂಗ್ಲಿಷ್ ಶೂದ್ರರು ಮುಂದೆ ಬಂದು, “ಸಾಹೇಬರು ನಮ್ಮ ಅನಂತಪದ್ಮನಾಭಯ್ಯನವರ ಅಕೃತ್ಯಗಳ ಬಗ್ಗೆ ಹೇಳಿದ್ದೆಲ್ಲಾ ನೂರಕ್ಕೆ ನೂರರಷ್ಟು ನಿಜವೆ. ಕಂಪ್ಯೂಟರು ಹುಡಿ ಮಾಡಿ ಚಿಂಡನ್ನಾರಾಯಣ ನಾಯರರ ಮೇಲೆ ಕೈ ಮಾಡಿದ್ದಕ್ಕೆ ಊರಿಗೆ ಊರೇ ಸಾಕ್ಷಿಯಿದೆ. ಆದರೆ ನಮ್ಮ ಅನಂತಪದ್ಮನಾಭಯ್ಯರು ತಮ್ಮ ಸ್ವಭಾವವನ್ನು ತಿದ್ದಿಕೊಳ್ಳಲು ಒಂದು ಅವಕಾಶವನ್ನು ಸಾಹೇಬರು ದಯಪಾಲಿಸಬೇಕು. ನಮ್ಮ ಅನಂತಪದ್ಮನಾಭಯ್ಯನವರು ದೇವರ ಹೆಸರಲ್ಲಿ ಹಣ ಸಂಗ್ರಹಿಸಿ, ಎಲ್ಲಾ ದಾನಗಳ ಪ್ರಯೋಜನ ತಮ್ಮ ವರ್ಗಕ್ಕೆ ಮಾತ್ರ ದಕ್ಕುವಂತೆ ಮಾಡಿ, ದೊಡ್ಡ ಮೊತ್ತವನ್ನು ತಾವೇ ನುಂಗಿದ್ದು ದೊಡ್ಡ ಅಪರಾಧ. ಹತ್ತು ಸಮಸ್ತರ ಹಣದಿಂದ ಪ್ರತಿದಿನ ನಡೆಯುತ್ತಿದ್ದ ಭೋಜನವ್ಯವಸ್ಥೆಯಲ್ಲಿ ಜಾತಿಭೇದ ಮಾಡಿ, ಸಹಪಂಕ್ತಿ ಭೋಜನಕ್ಕೆ ಅವಕಾಶ ನಿರಾಕರಿಸಿ, ಊರನ್ನು ಜಾತಿಯ ಆಧಾರದಲ್ಲಿ ಒಡೆದದ್ದು ತೀರಾ ಅಕ್ಷಮ್ಯ. ಈ ರೀತಿಯ ಮಾನವ ಹಕ್ಕುಗಳ ಉಲ್ಲಂಘನಾ ಅಪರಾಧ ನಮ್ಮ ಅನಂತಪದ್ಮನಾಭಯ್ಯನವರಿಂದ ಮತ್ತೆ ಸಂಭವಿಸುವುದಿಲ್ಲವೆಂದು ಅವರು ಕಪಿಲೇಶ್ವರನ ಮೇಲೆ ಆಣೆ ಹಾಕಿ ಹೇಳಿದರೆ ಊರು ಅವರನ್ನು ಕ್ಷಮಿಸಲು ಸಿದ್ಧವಿದೆ. ಇನ್ನು ಚಿಂಡನ್ನಾರಾಯಣ ನಾಯರರಿಗಾದ ನಷ್ಟವನ್ನು ಅನಂತಪದ್ಮನಾಭಯ್ಯನವರು ತುಂಬಿಕೊಡುವುದಾದರೆ ಅವರ ಅಕ್ಷಮ್ಯ ಅಪರಾಧವನ್ನು ಸಾಹೇಬರು ಕಮಿಸಿ ೩೨೩ ಮತ್ತು ೩೨೪ ರ ಕೇಸನ್ನು ಕೈ ಬಿಡಬಹುದು” ಎಂದು ವಿನಂತಿಸಿದರು.
ಈಗ ಚಿಂಡನ್ನಾರಾಯಣ ನಾಯರ್ ಮಾತಾಡಿದ. “ಅನಂದಪಲ್ಪನಾಭಯ್ಯನವರು ದೇವರ ಜಾಕ ಲಪಟಾಯಿಸಿದ್ದು, ಊರನ್ನು ಜಾದಿಯ ಆಧಾರದಲ್ಲಿ ಒಡೆದದ್ದು, ಬ್ರಹ್ಮಗಲಶದ ಹಣ ನುಂಗಿದ್ದು ಈ ಊರಜನಕ್ಕೆ ಸಂಬಂಧಿಸಿದ ಪ್ರಶ್ನಂ. ನನಗೂ ಅದಕ್ಕೂ ಸಂಬಂಧ ಇಲ್ಲ. ನಾನು ಅದರಲ್ಲಿ ಮಧ್ಯಕ್ಕೆ ಬಾಯಿ ಹಾಕುವುದಿಲ್ಲ. ನನ್ನ ಗಂಪ್ಯೂಟರು ಹುಡಿಯಾಗಿ, ಪ್ರೋಗ್ರಾಮು ಡೇಮೇಜಾಗಿ ಹೋಗಿದೆ. ಪ್ರೋಗ್ರಾಮನ್ನು ಅಮೇರಿಗಾದಲ್ಲಿರುವ ನನ್ನ ಮಗ ಮತ್ತೆ ಮಾಡಿಕೊಡಬೇಕಾಗುತ್ತದೆ. ಗಂಪ್ಯೂಟರು ಬೆಲೆ, ಪ್ರೋಗ್ರಾಮು ತಯಾರಿಯ ಖರ್ಚು, ನನ್ನ ಫೀಸು, ಎರಡು ಸಲ ಗಪಿಲಳ್ಳಿಗೆ ಬಂದು ಹೋಗುವ ಗಾರು ಬಾಡಿಗೆ ಎಂದು ಒಂದು ಲಕ್ಷದ ಎಪ್ಪತ್ತೆಂಟು ಸಾವಿರವನ್ನು ಅನಂದಪಲ್ಪನಾಭಯ್ಯನವರು ತಮ್ಮ ಸ್ವಂತ ಹಣದಿಂದ ನನಗೆ ಕೊಡಬೇಕು. ಅದಕ್ಕೆಂದು ಇಲ್ಲಿರುವ ಮಹಾಜನರಿಂದ ಹಣ ಗಲೆಕ್ಷನ್ನು ಮಾಡಬಾರದು. ಇವತ್ತು ಗುರುವಾರ, ಮುಂದಿನ ಗುರುವಾರದೊಳಗೆ ಅಷ್ಟು ಹಣವನ್ನು ತಂದು ಹಸಿರಂಗಡಿ ಪೋಲಿಸು ಸ್ಟೇಶನ್ನಿನ ಸಾಯೇಬ್ರ ಮೂಲಕ ಹಸ್ತಾಂತರ ಮಾಡುವುದಾಗಿ ಮುಚ್ಚಳಿಗೆ ಬರೆದು ಗೊಟ್ಟರೆ ನಾನು ೩೨೩ ಮತ್ತು ೩೨೪ ರ ಕೇಸನ್ನು ಹಿಂದಕ್ಕೆ ಪಡೆಯುತ್ತೇನೆ.”
ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂದಪಲ್ಪನಾಭಯ್ಯನವರು ತಮ್ಮ ಆಫೀಸಿಗೆ ಹೋಗಿ ಲೆಟರ್‌ಹೆಡ್ಡು ತಂದು ಮಗ ಬೋದಾಳ ಶಂಕರನಿಂದ ಮುಚ್ಚಳಿಕೆ ಪತ್ರ ಬರೆಸಿ ರುಜು ಹಾಕಿ ಸಬಿನಿಸ್ಪೆಕ್ಟರರಿಗೆ ಕೊಟ್ಟರು. ಅವರದನ್ನು ಓದಿ ನೋಡಿ, “ಈ ಏ.ಎಂ. ಯಾವ ಡಿಗ್ರಿ ಧರ್ಮದರ್ಶಿಗಳೇ” ಎಂದು ಕೇಳಿದ್ದಕ್ಕೆ ಮಗ ಬೋದಾಳ ಶಂಕರ, “ಅದು ಆನುವಂಶಿಕ ಮೊಕ್ತೇಸರದ ಶಾರ್‍ಟ್ ಫಾರ್‍ಮ್” ಎಂದದ್ದು ಸಬ್ಬಿನಿಸ್ಪೆಕ್ಟರರ ಮುಖದಲ್ಲಿ ನಗು ಮೂಡಿಸಿತು. ಅವರು ಮುಚ್ಚಳಿಕೆ ಪತ್ರವನ್ನು ಚಿಂಡನ್ನಾರಾಯಣ ನಾಯರರ ಕೈಯಲ್ಲಿಡಲು ಹೋದಾಗ ಅವನು, “ಎನಕ್ಕ್ ವೇಂಡಾ ಸರೇ. ಅದು ಸಾಯೇಬ್ರಲ್ಲೇ ಇರ್‍ಬೇಗು. ಅನಂದಪಲ್ಪನಾಭಯ್ಯ ಏಳಿದ ಡೇಟಿಗೆ ಪಣಂ ತಂದು ಗೊಡದಿದ್ದರೆ ಸಾಯೇಬ್ರೇ ಏಗ್ಷನ್ನು ತೆಗೆದುಗೊಳ್ಳಬೇಗು” ಎಂದು ಪತ್ರವನ್ನು ನಿರಾಕರಿಸಿದ.
ಸಬ್ಬಿನಿಸ್ಪೆಕ್ಟರರು ನಕ್ಕು ಪೇದೆಯೊಬ್ಬನನ್ನು ಕರೆದು ಮುಚ್ಚಳಿಕೆ ಪತ್ರವನ್ನು ಅವನ ಕೈಗಿತ್ತರು. “ನೋಡಿ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯ ನವರೇ, ದೇವರ ಹೆಸರು ಹೇಳಿ ನೀವು ಜನರಿಗೆ ಮಾಡಿದ ಮೋಸ ಮತ್ತು ಅನ್ಯಾಯವನ್ನು ಆ ಕಪಿಲೇಶ್ವರ ಕಮಿಸಲಿಲ್ಲ ಎನ್ನುವುದಕ್ಕೆ ನಿಮ್ಮ ಇಂದಿನ ಈ ಸ್ಥತಿಯೇ ಸಾಕ್ಷಿ. ದೇವಸ್ಥಾನ ಇರುವುದೇ ಜನರನ್ನು ಒಗ್ಗೂಡಿಸಲಿಕ್ಕೆ. ಇಲ್ಲಿ ಸಹಪಂಕ್ತಿ ಭೋಜನ ನಿರಾಕರಿಸುವುದು ದೇವರಿಗೆ ಮಾಡುವ ದ್ರೋಹವಾಗುತ್ತದೆ. ಹುಟ್ಟಿನಿಂದ ಯಾರೂ ಶ್ರೇಷ್ಠರಾಗುವುದಿಲ್ಲ. ಇದೇ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿ ಹುಟ್ಟಲು ಸಾಧ್ಯವೂ ಇಲ್ಲ. ಇನ್ನು ಮುಂದೆ ಜಾತಿ ಬೇಧ ಮಾಡಬೇಡಿ. ದೇವರ ಹೆಸರು ಹೇಳಿ ಬಡವರನ್ನು ಸುಲಿಯುವುದು ತಪ್ಪು. ದೇವರ ಜಾತ್ರೆಗೆ, ಅಷ್ಟಮಂಗಲ, ಬ್ರಹ್ಮಕಲಶ ಇತ್ಯಾದಿಗಳಿಗೆ ದೇವರ ಆಸ್ತಿ ನುಂಗಿದವರು ಮತ್ತು ಶ್ರೀಮಂತರು ಮಾತ್ರ ಹಣ ಹಾಕುವಂತೆ ನೋಡಿಕೊಂಡು ಇಲ್ಲಿ ಸಹಪಂಕ್ತಿ ಭೋಜನಕ್ಕೆ ವ್ಯವಸ್ಥೆ ಮಾಡಿ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ.”
ಪೋಲಿಸು ಪಟಾಲಂ ಮತ್ತು ಚಿಂಡನ್ನಾರಾಯಣ ನಾಯರನ ದಂಡು ಪಿಂಡಿಯಲ್ಲಿ ತಪಸ್ವಿನಿಯನ್ನು ದಾಟುವವರೆಗೂ ಕೈ ಮುಗಿದುಕೊಂಡೇ ನಿಂತಿದ್ದ ಆನುವಂಶಿಕ ಮೊಕ್ತೇಸರ ಧರ್ಮದರ್ಶಿ ಅನಂತಪದ್ಮನಾಭಯ್ಯರ ಕಣ್ಣುಗಳಿಂದ ಧಾರಾಕಾರವಾಗಿ ನೀರು ಕೆಳಗಿಳಿಯುತ್ತಿತ್ತು.
*****