ಬಾಗಿಲ ತೆಗೆ ಮಗೂ
ಗಾಳಿ ಸ್ವಚ್ಚಂದ ಓಡಾಡಲಿ
ಕಿಟಕಿಯ ಬಾಗಿಲು ತೆರೆದು
ಕಣ್ಣಿನ ಬಾಗಿಲು ತೆರೆದು
ತುಂಬಿಕೋ, ನೋಡಿಕೋ ನೂರಾರು ನೋಟ
ಅರಿತುಕೋ
ಬಹಳಷ್ಟು ಇವೆ ಕಲಿಯಬೇಕಾದ ಪಾಠ
ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು
ಕಣ್ಣು ಕಿವಿ ಮೂಗು ಎಲ್ಲಾ
ಮುಚ್ಚಿದ ಬಾಗಿಲು ತೆರೆದು
ಮನ ಬಿಚ್ಚಿ ನೋಡು
ಕಂಡ ಕತ್ತಲೆಯು ಬೆಳಕೆಂದು
ಭ್ರಮಿಸುವ ಕಣ್ಣುಮುಚ್ಚಾಲೆ
ಬೇಡವೇ ಬೇಡ ಮರಿ ಸಾಕು ಮಾಡು
ಎಲ್ಲಾ ಬಂಧನ ಕಳಚಿ
ಸರಪಳಿ ಬಿಚ್ಚಿದ ನಾಯಿ
ಒಮ್ಮೆಲೇ ಜಿಗಿದಾಡುವಂತೆ
ಉಲ್ಲಾಸ, ಸಂತೋಷ ತುಂಬಿ
ಹಿಗ್ಗಿ ಕುಣಿದಾಡು
ಯಾವತ್ತಿಗೂ ಬೇಡ, ಬೇಡ ಬೇಡ
ಬಂಧನದ ನಾಯಿ ಪಾಡು
ಆಕಾಶ ನೋಡು, ಆಕಾಶದ ತುಂಬಾ
ನಕ್ಕಿ ಚಂದ್ರ ತಾರೆಗಳ ಉಲ್ಲಾಸ ನೋಡು
ಹನ್ನೆರಡು ಗಂಟೆಯ ಬಿಸಿಲು
ನಿಮ್ಮೂರ ಗುಡ್ಡದ ತುದಿಯ
ಮೇಲೆ ಹತ್ತಿ ನಿನ್ನೂರು ನೋಡು
ನಿನ್ನೂರು
ಎಷ್ಟು ಸಣ್ಣದು ಮರೀ
ಕಂಡೆಯಾ?
ಒಳಗೊಳಗೇ ಕುಳಿತು
ಇದೇ ಬ್ರಹಾಂಡ ಎಂದುಬಿಟ್ಟಿವಲ್ಲ
ಅಯ್ಯೊ ಮಗು
ಅದ್ಭುತ ಗೋಲಾಕಾರ ಈ ಭೂಮಿ
ಭೂಮಿಯನ್ನು ಮೀರಿ ವಿಶ್ವ-
ವಿಶ್ವಾತ್ಮಗಳ ಎದುರು
ನಾನೂ ನೀನೂ
ಹೇಳು, ಅಣುವಾಗಿಯಾದರೂ ಉಳಿಯಬಹುದೇನು ?
ಮಗೂ, ಅಂಗಿ ಚಡ್ಡಿ ಎಲ್ಲಾ ಕಳಚು
ಈ ಗೋಡೆ, ಈ ಬಾಗಿಲು, ಈ ಕಿಟಕಿ
ಎಲ್ಲಾ ಗೌರವದ ಬಂಧನ
ಬಂಧಿಸಿದ
ಆತ್ಮೀಯ ಆಕ್ರಮಣ
ಬಾಗಿಲು ತೆರೆಯೋಣ ಮಗೂ ಬಾ ಬಾ
ಬಾಗಿಲು ತೆರೆದು
ಮುಟ್ಟೋಣ ಈ ಭೂಮಿಯಿಂದ ಆ ಮುಗಿಲು
ತುಂಬಿದ ನಿಗಿ ನಿಗಿ ಹಗಲು
ಅಂಥ ದಿವ್ಯ ತೇಜಸ್ಸಿನೊಡಲು
*****