ಚೋಳ ಕಡಿತು ನನಗೊಂದು ಚೋಳ ಕಡಿತು
ಕಾಳಕತ್ತಲದೊಳಗ ಕೂತಿತ್ತು ನನಕಂಡು ಬಂತು || ಪ ||
ಎಷ್ಟು ದಿನದ ಸಿಟ್ಟು ಇಟ್ಟಿತ್ತು ತೀರಿಸಿಬಿಟ್ಟಿತು
ಯಾರಿಗೆ ಹೇಳಿದರ ಏನ ಆದೀತು
ಗುರುತಾತು ಈ ಮಾತು
ಹುಟ್ಟಿದ ಮಗಳು ಕಂಡಿದ್ಧಿಲ್ಲ
ಇದರ ಕಷ್ಟ ಶಿವನೇ ಬಲ್ಲ
ಘಟ್ಟಿಯಾಗಿ ಮುಳ್ಳು ಚುಚ್ಚಿತ್ತು ಮಾಯವಾಗಿ ಹೋತು || ೧ ||
ಮೂರು ದೇಹದೊಳಗೆ ತಾನಿತ್ತ
ಪರಮಾತ್ಮನಾದದೊಳು ತಾನು ಬೆಳದಿತ್ತ
ಸಾರಿಬಂದು ಎನ್ನನೋಡುತ
ಮೂರು ಲೋಕ ಬೆಳಗು ಮೇಲು ಮೀರಿದುನ್ಮನಿ ಹಾರಿ ನಿ೦ತಿತು || ೨ ||
ದೇವರಮನಿ ಮೂಲೆಯೊಳಗಿತ್ತು
ಆಧಾರ ಹಿಡಿದು ಊಧ್ವ೯ಮುಖದಿ ಕೊಂಡಿ ಮಾಡಿತ್ತು
ಕಾಲ ಕಳೆದು ಸ್ಥೂಲದೇಹದೊಳಗ ಮಲಗಿತ್ತು
ಕಲಿಕಮ೯ ನುಂಗಿತ್ತು
ದೇವಶಿಶುನಾಳಧೀಶನ ಧ್ಯಾನದೊಳಗಾ ಚೋಳು ಇತ್ತು
ಕಚ್ಚುತಿರಲು ಎಚ್ಚರಾದಿತು ಹುಚ್ಚು ಹಿಡಿದಂಗಾತು ||೩||