ಮಳೆಯಜೋಳಿಗೆ ಹರಿದುಬಿತ್ತಿಲ್ಲಿ
ಹಿಡಿತಕೆ ಸಿಗದೆ ಸವೆದ ಬಟ್ಟೆಯೊಳಗಿಂದ
ದೇವನ ಮಳೆಯ ಜೋಳಿಗೆ ಹರಿದುಬಿತ್ತಿಲ್ಲಿ.
ಕಪ್ಪು ಕಡುರಾತ್ರಿಗೆ ಊಹಿಸದ
ಹಳ್ಳಹೊಳೆಗಳ ನೆರೆತೊರೆ ಒಡ್ಡುಗಳು
ಒಡೆದೋಡುವ ಹುಚ್ಚು ರಭಸ
ಹಾದಿಬೀದಿಗಳಿಗೂ ನಡುಕ
ಕ್ಷಣಕ್ಷಣಕೂ ದ್ವೀಪಗಳಾಕೃತಿ.
ದಿಕ್ಕುತಪ್ಪಿತೆಲ್ಲೊ
ಚೀತ್ಕಾರ ಆಕ್ರಂದನ ನೀರೆಲ್ಲ ನೆತ್ತರು
ಗುಡಿಗುಂಡಾರ ಮನೆಮಠಗಳೆಲ್ಲ ಮುಳುಗಿ
ಸ್ಮಶಾನ, ಮೇಲೆ ಧಾರಾಕಾರ ಮಳೆ
ಚಂದ್ರತಾರೆಯರು ಸಾಕ್ಷಿಯಾಗದೆ
ಅದೆಲ್ಲೋ ತಿರುಗಾಟ
ತೇಪೆಹಚ್ಚಿದ ಹಿಡಿಕೆ ಹರಿದ ಜೋಳಿಗೆ
ಒಳಗೆಲ್ಲ ಆಕ್ರಂದದ ಕೂಗು ಹೆಣಗಳ ರಾಶಿರಾಶಿ
ಕೆಂಪು ಕರಿನೀರು ಮಣ್ಣೀರು ಕಣ್ಣೀರು
ತುಂಬಿಕೊಂಡು ಮತ್ತೆಲ್ಲೋ ದೇವ ನಡೆದೇಬಿಟ್ಟ.
ಸೂತಕದ ಮನೆ ಮನಗಳಿಗೀಗ
ಕರಿನೆರಳಿನಾ ಛಾಯೆ ಸರಿಸಿ
ಸಾಂತ್ವನಕೊಡಲು ಬಂತು ಬಂತು
ತುಂಬಿಬಂತು ಕರುಣಾಳು
ಹೃದಯವಂತರ ನೋಟಿನ ಜೋಳಿಗೆ
ಬೆಂದ ಹೃದಯಗಳಿಗೊಂದಿಷ್ಟು ಉಸಿರು
ನೆತ್ತಿಗೊಂದು ಸೂರು
ಹೆಜ್ಜೆಗಳಿಗಳಿಗೊಂದಷ್ಟು ಭರವಸೆಗಳಿಗೆ…
ಆದರೆಲ್ಲೋ ನರಿ ನಾಯಿಗಳ ಕಿವಿ ನಿಮಿರಿ
ವಾಸನೆ ಬಡಿದು ಜೋಳಿಗೆ ಎಳೆದಾಡಿ
ಹರಿದು ಹಿಂಜುವ ಮುನ್ನ
ಇಲಿ ಹೆಗ್ಗಣಗಳು ತಿಂದು ತೇಗುವ ಮುನ್ನ
ಬೇಕೀ ಜೋಳಿಗೆಗಳಿಗೆ
ಡಬ್ಬಣ ಸುತಳಿ
ಕಳ್ಳನಲ್ಲದ ಕಾವಲಗಾರನೂ ಕೂಡಾ.
*****