ಬೆಂಗಳೂರಿನಲ್ಲಿ
ಜನಾರ್ದನಪುರದ ಸಬ್ ರಿಜಿಸ್ಟ್ರಾರವರ ಕಚೇರಿಯಲ್ಲಿ ಪತ್ರ ರಿಜಿಸ್ಟರ್ ಆಗಿ ಹನುಮನ ಹಳ್ಳಿಯ ಜಮೀನಿನ ಭಾಗ ಇಲಾಖೆಯವರ ವಶಕ್ಕೆ ಬಂದಿತು. ರಂಗಣ್ಣ ಎಲ್ಲ ಸಮಾಚಾರಗಳನ್ನೂ ತಿಳಿಸಿ ಮೇಲಿನ ಅಧಿಕಾರಿಗಳಿಗೆ ವರದಿಯನ್ನು ಕಳಿಸಿ, ತಾನು ಮಾಡಿದ ಏರ್ಪಾಟಿಗೆ ಮಂಜೂರಾತಿಯನ್ನು ಕೊಡಬೇಕೆಂದು ಕೇಳಿಕೊಂಡನು. ಸಾಹೇಬರಿಂದ ಮಂಜೂರಾತಿಯ ಹುಕುಂ ಬಂದುದೊಂದೇ ಅಲ್ಲ; ಏರ್ಪಾಟಿನ ಬಗ್ಗೆ ಪ್ರಶಂಸೆಯೂ ಬಂದಿತು. ರಂಗಣ್ಣನಿಗೆ ಪರಮ ಸಂತೋಷವಾಯಿತು. ನಾಗೇನಹಳ್ಳಿಗೊಂದು ಸರಕಾರದ ಸ್ಕೂಲು ಸಹ ಮಂಜೂರಾಯಿತು. ಅಲ್ಲಿಯ ಪಂಚಾಯತಿ ಮೆಂಬರುಗಳು ಜನಾರ್ದನಪುರಕ್ಕೆ ಬಂದು ಇನ್‌ಸ್ಪೆಕ್ಟರ್ ಸಾಹೇಬರಿಗೆ ತಮ್ಮ ಕೃತಜ್ಞತೆಯನ್ನು ಸೂಚಿಸಿದರು. ಅವರ ಜೊತೆಯಲ್ಲಿ ಕರಿಹೈದನೂ ಬಂದಿದ್ದನು. `ಸೋಮಿ! ಗಾಡಿಗೆ ಕಮಾನು ಕಟ್ಟಿವ್ನಿ, ತಾವು ಬರೋ ದಿವಸ ಮುಂದಾಗಿ ತಿಳ್ಳಿದ್ರೆ ಗಾಡಿ ತಂದು ಕರಕೊಂಡು ಹೋಗ್ತಿವ್ನಿ. ಆರಾಮಾಗಿ ಕುಂತುಕೊಂಡು ಬರಬೋದು. ಈಗ ನೀರ ಹರವುಗಳ ಕಾಟಾನು ಇಲ್ಲ ಸೋಮಿ!’ ಎಂದು ಹೇಳಿದನು. ರಂಗಣ್ಣನಿಗೆ ತಾನು ಮೊತ್ತ ಮೊದಲು ಕಂಬದಹಳ್ಳಿಗೆ ಭೇಟಿ ಕೊಟ್ಟಿದ್ದರ ಕಥೆಯೆಲ್ಲ ಸ್ಮರಣೆಗೆ ಬಂತು. ಕರಿಹೈದನಿಗೆ ತಾನು ಕೊಟ್ಟಿದ್ದ ಮಾತಿನಂತೆ ನಾಗೇನಹಳ್ಳಿಗೆ ಒಂದು ಸ್ಕೂಲನ್ನು ಕೊಡುವ ಸುಯೋಗ ಉಂಟಾಯಿತಲ್ಲ ಎಂದು ರಂಗಣ್ಣನು ಸಂತೋಷಪಟ್ಟನು. `ಮುಂದಿನ ವಾರ ಪ್ರಾರಂಭೋತ್ಸವ ಇಟ್ಟುಕೊಳ್ಳಿ ; ಕರಿಹೈದ ಗಾಡಿ ತರಲಿ; ಬರುತೇನೆ’ ಎಂದು ಹೇಳಿ ಅವರನ್ನು ಬೀಳ್ಕೊಟ್ಟನು.
ಮೇಲೆ ಹೇಳಿದ ಸಂತೋಷದ ವಾತಾವರಣ, ಆ ದಿನ ಟಪ್ಪಾಲಿನಲ್ಲಿ ಬಂದ ಒಂದು ಕಾಗದದಿಂದ ಸ್ವಲ್ಪ ಕಲುಷಿತವಾಯಿತು. ಬೆಂಗಳೂರಿನ ದೊಡ್ಡ ಸಾಹೇಬರು – ಡೈರೆಕ್ಟರ್ ಸಾಹೇಬರು – ರಂಗಣ್ಣನನ್ನು ಕೆಲವು ರಿಕಾರ್ಡು ಗಳೊಂದಿಗೆ ಕೂಡಲೇ ಬಂದು ತಮ್ಮನ್ನು ಕಾಣಬೇಕೆಂದೂ ಕೆಲವು ವಿಚಾರಗಳಿಗೆ ನೇರಾಗಿ ಸಮಜಾಯಿಷಿಗಳನ್ನು ಕೊಡಬೇಕೆಂದೂ ಕಾಗದ ಬರೆದಿದ್ದರು. ದೊಡ್ಡ ಬೋರೇಗೌಡರು ತನಗೆ ಹೇಳಿದ ವಿಷಯಗಳೆಲ್ಲ ರಂಗಣ್ಣನಿಗೆ ಜ್ಞಾಪಕಕ್ಕೆ ಬಂದುವು. ಅವನು ಚಿತಾಭರಿತನಾಗಿ ಆಲೋಚಿಸುತ್ತಿದ್ದಾಗ ಜನಾರ್ದನಪುರದ ಪ್ರೈಮರಿ ಸ್ಕೂಲಿನ ಹೆಡ್ ಮೇಷ್ಟ್ರು ಬಂದು ಕೈ ಮುಗಿದನು.
`ಏನು ಹೆಡ್ ಮೇಷ್ಟ್ರೆ! ಈಗ ಸ್ಥಿತಿ ಹೇಗಿದೆ? ಆ ಮನುಷ್ಯ ದಾರಿಗೆ ಬಂದಿದಾನೆಯೋ?’ ಎಂದು ರಂಗಣ್ಣ ಕೇಳಿದನು.
`ಸ್ವಾಮಿ! ಆ ಮನುಷ್ಯ ದಾರಿಗೆ ಬರುವುದೆಂದರೇನು! ಆತನಿಗೆ ಯಾರೂ ಲಕ್ಷವಿಲ್ಲ. ತಮ್ಮನ್ನೂ ಇಲಾಖೆಯ ಎಲ್ಲ ಅಧಿಕಾರಿಗಳನ್ನೂ ಬಾಯಿಗೆ ಬಂದ ಹಾಗೆ ಬಯ್ಯುತ್ತ – ಇವರಿಗೆಲ್ಲ ಕೆಲವು ದಿನಗಳಲ್ಲೇ ಮಾಡ್ತೇನೆ; ಬಿಸಿ ಮುಟ್ಟಿಸ್ತೇನೆ – ಎಂದು ಹೇಳಿಕೊಳ್ಳುತ್ತಿದ್ದಾನೆ. ಪಾಠ ಶಾಲೆಯಲ್ಲಿ ಮನಸ್ಸು ಬಂದಾಗ ಒಂದಿಷ್ಟು ಪಾಠಮಾಡುತ್ತಾನೆ; ಮನಸ್ಸಿಲ್ಲ ದಾಗ ಹುಡುಗರನ್ನು ಹೊರಕ್ಕೆ ಬಿಟ್ಟು ತಾನು ಬೆಂಚುಗಳನ್ನು ಜೋಡಿಸಿಕೊಂಡು ಮಲಗಿಬಿಡುತ್ತಾನೆ!’
`ಆತನಿಂದ ಏನಾದರೂ ಸಮಜಾಯಿಷಿ ಕೇಳಿದ್ದೀರಾ? ಬರೆವಣಿಗೆಯಲ್ಲಿ ಏನಾದರೂ ಕೊಟ್ಟಿದ್ದಾನೆಯೇ?’
`ಮೆಮೋ ಮಾಡಿ ಕಳಿಸಿದೆ ಸ್ವಾಮಿ! ಸಮಜಾಯಿಷಿ ಕೊಡಲಿಲ್ಲ. ಮೆಮೋ ಪುಸ್ತಕವನ್ನೇ ಕಿತ್ತಿಟ್ಟುಕೊಂಡು ಜವಾನನನ್ನು ವಾಪಸು ಕಳಿಸಿ ಬಿಟ್ಟಿದ್ದಾನೆ! ಈಗ ಮೆಮೊ ಮಾಡುವುದಕ್ಕೆ ಪುಸ್ತಕವೇ ನನಗಿಲ್ಲ!’
`ನನ್ನನ್ನು ಕಾಣಬೇಕೆಂದು ನೀವು ಆತನಿಗೆ ಹೇಳಲಿಲ್ಲವೇ?’
`ಹೇಳಿದೆ ಸ್ವಾಮಿ – ನಾನೇಕೆ ಹೋಗಲಿ ಅವರನ್ನು ಕಾಣುವುದಕ್ಕೆ! ಕಾಲಿಗೆ ಬೀಳೋದಕ್ಕೆ! ಬೇಕಾಗಿದ್ದರೆ ಅವರೇ ನನ್ನನ್ನು ಬಂದು ಕಾಣಲಿ! ಭೇಟಿ ಕೊಡುತ್ತೇನೆ!- ಎಂದು ಜವಾಬು ಹೇಳಿದನು.’
`ಒಳ್ಳೆಯದು ಹೆಡ್ ಮೇಷ್ಟ್ರೆ! ನಿಮ್ಮ ರಿಪೋರ್ಟಿನ ಮೇಲೆಯೇ ನಾನೇನನ್ನೂ ಮಾಡುವುದಕ್ಕಾಗುವುದಿಲ್ಲ. ನಾನು ಆತನ ಸಮಜಾಯಿಷಿ ತೆಗೆದು ಕಳಿಸಬೇಕೆಂದು ಆರ್ಡರ್ ಮಾಡುತ್ತೇನೆ. ಅದರ ನಕಲನ್ನು ಆತನಿಗೆ ಕೊಡಿ. ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳಿಸಿ ದಾಖಲೆಯಿಟ್ಟು ಕೊಳ್ಳಿ. ಆಮೇಲೆ ಮುಂದಿನ ಕಾರ್ಯಕ್ರಮವನ್ನು ಆಲೋಚಿಸುತ್ತೇನೆ. ಈಗ ನಾನು ಬೆಂಗಳೂರಿಗೆ ಹೋಗಿ ಬರಬೇಕು.’
ರಂಗಣ್ಣ ಹೆಡ್ ಮೇಷ್ಟರನ್ನು ಕಳಿಸಿಬಿಟ್ಟು ಉಗ್ರಪ್ಪನ ವಿಚಾರದಲ್ಲಿ ಆರ್ಡರ್ ಮಾಡಿ, ಆವಶ್ಯಕವಾದ ರಿಕಾರ್ಡುಗಳನ್ನು ಪೆಟ್ಟಿಗೆಯಲ್ಲಿ ಹಾಕಿಕೊಂಡು ಬೆಂಗಳೂರಿಗೆ ಪ್ರಯಾಣ ಮಾಡಿದನು. ತಾನು ನಿಸ್ಪೃಹನಾಗಿ ನಿರ್ವಂಚನೆಯಿಂದ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದರೂ ದೊಡ್ಡ ಸಾಹೇಬರುಗಳನ್ನು ಕಾಣುವುದು ಉತ್ಸಾಹಕರವಾದ ವಿಚಾರವಲ್ಲ ಎನ್ನುವುದು ಅವನಿಗೆ ತಿಳಿದಿತ್ತು. ಅವರಿಂದ ಸಹಾಯ ಸಲಹೆ ಮತ್ತು ಪ್ರೋತ್ಸಾಹಗಳಿಗೆ ಬದಲು ಬೈಗಳು, ಟೀಕೆಗಳು ಮತ್ತು ತೇಜೋವಧೆಗಳೇ ದೊರೆಯುವ ಫಲಗಳೆಂದು ಮನಸ್ಸು ಗಟ್ಟಿ ಮಾಡಿ ಕೊಂಡಿದ್ದನು. ತಾವೇದಾರನ ಕರ್ತವ್ಯಪಾಲನೆ ನಡೆಯಲೆಂದು ಡೈರೆಕ್ಟರನ್ನು ನೋಡಿದ್ದಾಯಿತು; ವಿಷಯಗಳನ್ನು ವಿವರಿಸಿದ್ದಾಯಿತು; ದಾಖಲೆಗಳನ್ನು ತೋರಿಸಿದ್ದಾಯಿತು; ಪಾಟಿ ಸವಾಲಿನ ಅಗ್ನಿ ಪರೀಕ್ಷೆಗೆ ಸಿಕ್ಕಿ ಕೊಂಡದ್ದೂ ಆಯಿತು. `ಎಲ್ಲವೂ ಸರಿಯೆ, ಟ್ಯಾಕ್ಟ್ ಇಲ್ಲ’ ಎಂದು ಅನ್ನಿಸಿಕೊಂಡು ಹಿಂದಿರುಗಿದ್ದಾಯಿತು. ಇನ್ನು ತಿಮ್ಮರಾಯಪ್ಪನನ್ನು ಕಂಡು ತನ್ನ ಮನಸ್ಸಿನಲ್ಲಿರುವುದನ್ನೆಲ್ಲ ಕಕ್ಕಿಬಿಟ್ಟು ಹೊರಟುಹೋಗೋಣವೆಂದು ಜುಗುಪ್ಸೆಯಿಂದ ರಂಗಣ್ಣನು ತಿಮ್ಮರಾಯಪ್ಪನ ಮನೆಗೆ ಹೋದನು. ಅವನು ಮನೆಯಲ್ಲೇ ನಿರೀಕ್ಷಣೆ ಮಾಡುತ್ತಾ ಕುಳಿತಿದ್ದನು. ಸ್ನೇಹಿತನು ಬರುವನೆಂದು ಸಂತೋಷಭರಿತನಾಗಿ, ಆ ದಿನ ಕಚೇರಿಯಿಂದ ಬರುತ್ತಾ ಆನಂದಭವನಕ್ಕೆ ಹೋಗಿ ತಿಂಡಿಗಳ ಪೊಟ್ಟಣಗಳನ್ನು ಕಟ್ಟಿಸಿಕೊಂಡು ಚೀಲದಲ್ಲಿ ಹಾಕಿಕೊಂಡು ಮನೆಗೆ ಬಂದಿದ್ದನು!
`ಏನು ರಂಗಣ್ಣ! ಚೆನ್ನಾಗಿದ್ದೀಯಾ? ಮನೆಯಲ್ಲಿ ಆಕೆ ಸೌಖ್ಯವಾಗಿದ್ದಾಳೆಯೆ? ಮಕ್ಕಳು ಹೇಗಿದ್ದಾರೆ? ಈ ದಿನದ ಭೇಟಿಯ ಪರಿಣಾಮ ಏನು?’ ಎಂದು ತಿಮ್ಮರಾಯಪ್ಪ ಕೇಳಿದನು.
`ಎಲ್ಲಾರೂ ಚೆನ್ನಾಗಿದ್ದಾರೆ! ಸೌಖ್ಯವಾಗಿದ್ದಾರೆ! ಭೇಟಿಯ ಪರಿಣಾಮ ಏನು? ಎಂದು ಕೇಳುತ್ತೀಯೆ. ಎಲ್ಲವನ್ನೂ ಕಕ್ಕಿಬಿಡೋಣ ಎಂದು ಇಲ್ಲಿಗೆ ಬಂದಿದ್ದೇನೆ!’
’ಹಾಗೆಯೇ ಮಾಡು ರಂಗಣ್ಣ! ಹೊಟ್ಟೆಯಲ್ಲಿರುವುದನ್ನೆಲ್ಲ ಕಕ್ಕಿಬಿಟ್ಟು ಖಾಲಿ ಮಾಡಿಕೋ! ಆಮೇಲೆ ಈ ಪೊಟ್ಣಗಳನ್ನೆಲ್ಲ ಹೊಟ್ಟೆಗೆ ಭರ್ತಿ ಮಾಡಬಹುದು!’ ಎಂದು ತಿಮ್ಮರಾಯಪ್ಪನು ನಗುತ್ತಾ ಚೀಲದಲ್ಲಿದ್ದ ಪೊಟ್ಣಗಳನ್ನೆಲ್ಲ ತೆಗೆದು ತಟ್ಟೆಗಳಲ್ಲಿಟ್ಟನು. ಜಿಲೇಬಿ, ಮೈಸೂರು ಪಾಕು, ಸೋನಾಹಲ್ವ, ಉದ್ದಿನ ವಡೆ, ಕಾರದವಲಕ್ಕಿ, ಕಾರದ ಗೋಡಂಬಿ ಬೀಜ- ಅವನು ತಂದಿದ್ದ ತಿಂಡಿಗಳು! ಅವು ಸಾಲದೆಂದು ಒಳಗೆ ಹೋಗಿ ರಸಬಾಳೆಹಣ್ಣು, ಬಿಸ್ಕತ್ತುಗಳು ಮತ್ತು ಕಾಫಿಯನ್ನು ತಂದು ಮೇಜಿನ ಮೇಲಿಟ್ಟನು.
`ಇದೇನಿದು ತಿಮ್ಮರಾಯಪ್ಪ ! ಈ ಭಾರಿ ಸಮಾರಾಧನೆ?’
`ಅಹುದಪ್ಪ! ಡೈರೆಕ್ಟರು ತಮ್ಮನ್ನು ಕಾಣುವುದಕ್ಕೆ ಬರಹೇಳಿದ್ದಾರೆ ಎಂದು ನೀನು ಕಾಗದ ಬರೆದಿರಲಿಲ್ಲವೇ? ನೀನು ನಿನ್ನ ಹೊಟ್ಟೆಯಲ್ಲಿರುವುದನ್ನೆಲ್ಲ ಕಕ್ಕುವುದಕ್ಕೆ ಇಲ್ಲಿಗೆ ಬರುತ್ತೀಯೆಂದು ನನಗೆ ತಿಳಿದಿಲ್ಲವೇ? ಖಾಲಿ ಹೊಟ್ಟೆಗೆ ಸಮಾರಾಧನೆಯ ಏರ್ಪಾಟನ್ನು ಮಾಡಬೇಡವೆ!’
`ಕೈಗೆ ನೀರು ಕೊಡು ತಿಮ್ಮರಾಯಪ್ಪ! ಕೈ ತೊಳೆದುಕೊಂಡು ನನ್ನ ಆಗ್ರಹವನ್ನೆಲ್ಲ ತೀರಿಸಿಕೊಳ್ಳುತ್ತೇನೆ!’
ತಿಮ್ಮರಾಯಪ್ಪನು ನೀರನ್ನು ತಂದು ಕೊಟ್ಟನು. ಸ್ನೇಹಿತರಿಬ್ಬರೂ ಕೈ ತೊಳೆದುಕೊಂಡು ಧ್ವಂಸನ ಕಾರ್ಯದಲ್ಲಿ ನಿರತರಾದರು.
`ನೋಡು ತಿಮ್ಮರಾಯಪ್ಪ! ಇವರಿಗೆಲ್ಲ ಆ ರಾಜಕೀಯ ಮುಖಂಡರ ಪಿಶಾಚಿಗಳು ಬಲವಾಗಿ ಹಿಡಿದುಬಿಟ್ಟಿವೆ! ಹದರಿಕೊಂಡು ಸಾಯುತ್ತಾರೆ!- ನನ್ನನ್ನೇ ಅವರು ಲಕ್ಷ್ಯಮಾಡುವುದಿಲ್ಲ; ಇನ್ನು ಜುಜುಬಿ ಇನ್ಸ್‌ಪೆಕ್ಟರನ್ನು ಲೆಕ್ಕದಲ್ಲಿಡುತ್ತಾರೆಯೆ? ನೀವೇಕೆ ಅವರನ್ನೆಲ್ಲ ವಿರೋಧ ಮಾಡಿಕೊಂಡಿರಿ? ನಿಮ್ಮ ರಿಕಾರ್ಡು ಕಟ್ಟಿಕೊಂಡು ಏನು? ನಿಮ್ಮ ಕೆಲಸ ಮತ್ತು ದಕ್ಷತೆ ಕಟ್ಟಿಕೊಂಡು ಏನು? ಆ ಮುಖಂಡರೆಲ್ಲ ದಿವಾನರಿಗೆ ಬೇಕಾದವರು, ದಿನಾಗಲೂ ಮೇಲಿಂದ ನಿಮ್ಮ ವಿಚಾರದಲ್ಲಿ ಕಾಗದಗಳು ಬರುತ್ತವೆ! ನಾನೇನು ಸಮಾಧಾನ ಬರೆಯುತ್ತಿರಬೇಕು!- ಎಂದು ಮುಂತಾಗಿ ನನ್ನನ್ನು ಝಂಕಿಸಿದರು. ನನಗೆ ಕೋಪ ಬಂತು. ಏನು ಸಾರ್! ಬದ್ಮಾಶುಗಳೆಲ್ಲ ಮುಖಂಡರು! ಅವರ ಮಾತು ನಿಮಗೆ ಮುಖ್ಯ, ಮನಸ್ಸಾಕ್ಷಿಗನುಸಾರವಾಗಿ ಕಷ್ಟ ಪಟ್ಟು ಕೆಲಸ ಮಾಡುವುದನ್ನು ನೋಡುವುದಿಲ್ಲ. ತಮಗೆ ತೃಪ್ತಿಯಿಲ್ಲದಿದ್ದರೆ ಈ ಕ್ಷಣ ಕೆಲಸಕ್ಕೆ ರಾಜೀನಾಮ ಕೊಟ್ಟು ತೊಲಗಿ ಹೋಗುತ್ತೇನೆ!- ಎಂದು ಜವಾಬು ಕೊಟ್ಟು ಬಿಟ್ಟೆ. ಅವರು ತಾಳ್ಮೆಗೆಡದೆ – ಉದ್ರೇಕಗೊಳ್ಳಬೇಡಿ ರಂಗಣ್ಣ! ಕಾಲಸ್ಥಿತಿ ತಿಳಿದುಕೊಂಡು ನಾವು ನಡೆದುಕೊಳ್ಳಬೇಕು. ನಮ್ಮಲ್ಲಿ ಮುಖಂಡರ ನೈತಿಕ ಮಟ್ಟ ಬಹಳ ಕೆಳಕ್ಕಿದೆ! ಮೇಲಿನವರಿಗೆ ಆ ಮುಖಂಡರ ಬೆಂಬಲ ಮತ್ತು ಓಟುಗಳು ಬೇಕಾಗಿವೆ! ಸರಿಯಾದ ನೈತಿಕ ವಾತಾವರಣವಿಲ್ಲ, ಗುಣಗ್ರಾಹಿಗಳು ಯಾರೂ ಇಲ್ಲ. ಸ್ವಾರ್ಥಪರರ ಕೈವಾಡ ಪ್ರಬಲವಾಗಿದೆ. ನಮ್ಮಂಥವರಿಗೇನೆ ಕಿರುಕುಳಗಳಿವೆ; ಮರ್ಯಾದೆ ಕೊಡುವುದಿಲ್ಲ, ಆದ್ದರಿಂದ ಟ್ಯಾಕ್ಟ್ ಉಪಯೋಗಿಸಬೇಕು ಎಂದು ನಿಮಗೆ ಬುದ್ದಿ ಹೇಳಿದೆ ಎಂದರು. ತಿಮ್ಮರಾಯಪ್ಪ! ಅದೇನು ಹಾಳು ಟ್ಯಾಕ್ಟೋ! ಒಬ್ಬರಾದರೂ ಹೀಗೆ ಮಾಡಿದರೆ ಟ್ಯಾಕ್ಟ್ ಎಂದು ತಿಳಿಸಿದವರಿಲ್ಲ. ಆ ಪದವನ್ನು ಕಂಡರೆ ನನಗೆ ಮೈಯೆಲ್ಲ ಉರಿದು ಹೋಗುತ್ತದೆ! ನಿಘಂಟಿನಲ್ಲಿ ಆ ಪದವೇ ಇಲ್ಲದಂತೆ ಅದನ್ನು ಹರಿದುಬಿಡೋಣ ಎನ್ನಿಸಿದೆ!’
`ಅಯ್ಯೋ ಶಿವನೇ! ಇದೇನು ನಿನಗೆ ಹುಚ್ಚು ರಂಗಣ್ಣ! ನಿನ್ನ ನಿಘಂಟನ್ನು ಹರಿದು ಹಾಕಿಕೊಂಡರೆ ಇಂಗ್ಲಿಷು ಭಾಷೆಯಿಂದ ಅದು ಹಾರಿ ಹೋಗುತ್ತದೆಯೆ? ಆಕ್ಸಫರ್ಡ್ ಡಿಕ್ಷನರಿಯಿಂದ ವೆಬ್‌ಸ್ಟರ್ ಡಿಕ್ಷನರಿಯಿಂದ ವಜಾ ಆಗಿಬಿಡುತ್ತದೆಯೆ? ನೀನೂ ಟ್ಯಾಕ್ಟ್ ಇರೋ ಮನುಷ್ಯನೇ! ಗರುಡನ ಹಳ್ಳಿ ಹನುಮನ ಹಳ್ಳಿಗಳ ವ್ಯಾಜ್ಯವನ್ನು ನೀನು ಪರಿಹಾರ ಮಾಡಿದೆಯಲ್ಲ! ಅದು ಟ್ಯಾಕ್ಟ್ ಅಲ್ಲದ ಮತ್ತೆ ಏನು!’
`ಹಾಗಾದರೆ ನನ್ನನ್ನು ಇವರೆಲ್ಲ ಏಕೆ ಟೀಕಿಸುತ್ತಾರೆ? ಟ್ಯಾಕ್ಟ್ ಉಪಯೋಗಿಸಬೇಕು ಎಂದು ಏಕೆ ಹೇಳುತ್ತಾರೆ.’
`ಹಾಗೆ ಹೇಳುವುದು ಸಾಹೇಬರುಗಳ ರೂಢಿ. ನಾವು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟು ಬಿಡಬೇಕು. ಅವರು ಏನಾದರೂ ಝಂಕಿಸಿದರೆ ಮನಸ್ಸಿಗೆ ಹಚ್ಚಿಸಿಕೊಳ್ಳಬಾರದು.’
`ನನ್ನ ಅನುಭವ ಹೇಳುತ್ತೇನೆ ಕೇಳು ತಿಮ್ಮರಾಯಪ್ಪ! ಒಬ್ಬ ಸಾಹೇಬರಾದರೂ ಕೆಳಗಿನವರಿಗೆ ಈ ರೀತಿ ಪಾಠಮಾಡಿ; ತೋರಿಸುತ್ತೇನೆ ತಿಳಿದುಕೊಳ್ಳಿ ಎಂದು ಕಾರ್ಯತಃ ತೋರಿಸಿಕೊಟ್ಟವರಿಲ್ಲ! ಹೀಗೆ ತಿದ್ದಿಕೊಳ್ಳಿ – ಎಂದು ಸಲಹೆಗಳನ್ನು ಕೊಟ್ಟವರಿಲ್ಲ! ಮರದ ತುಂಡಿನಂತೆ ಮರದ ಕುರ್ಚಿಯ ಮೇಲೆ ಕುಕ್ಕರಿಸಿದ್ದು, ತಮ್ಮ ಕೈ ಪುಸ್ತಕದಲ್ಲಿ ಏನನ್ನೂ ಕಿರಿಕಿಕೊಂಡು ಹೋಗುವುದು; ದೊಡ್ಡ ದೊಡ್ಡದಾಗಿ ಇನ್ಸ್‌ಪೆಕ್ಷನ್ ರಿಪೋರ್ಟುಗಳನ್ನು ಬರೆದು ಮೊದಲಿಂದ ಕಡೆಯವರೆಗೂ ದೋಷೋದ್ಘಾಟನೆಮಾಡಿ ಹಳಿದುಬಿಡುವುದು! ನಮ್ಮ ಕಚೇರಿಗಳಿಗೆ ಬರುವುದು! ಒಂದು ಇಪ್ಪತ್ತು ರುಪಾಯಿ ಸಂಬಳದ ಗುಮಾಸ್ತೆ ಬರೆದಿಟ್ಟ ತನಿಖೆಯ ವರದಿಗಳನ್ನು ನಂಬಿಕೊಂಡು ಟೀಕಿಸುವುದು! ತಾವು ಏತಕ್ಕೆ ನೋಡಬಾರದು? ನಮ್ಮನ್ನು ಕೂಡಿಸಿ ಕೊಂಡೋ ನಿಲ್ಲಿಸಿ ಕೊಂಡೋ ಏತಕ್ಕೆ ಕೇಳ ಬಾರದು ? ನಾವು ಅನನುಭವಿಗಳಾಗಿದ್ದು ತಪ್ಪು ಮಾಡಿದ್ದರೆ, ಈ ರೀತಿ ತಪ್ಪು ಮಾಡಬೇಡಿ, ಎಂದು ಸಮಾಧಾನಚಿತ್ತದಿಂದ ಏತಕ್ಕೆ ಬುದ್ದಿ ಹೇಳ ಬಾರದು ? ಹಿಂದೆ ಒಬ್ಬರು ಸಾಹೇಬರು ಒಂದು ಕಡೆ ಹೈ ಸ್ಕೂಲ್ ಇನ್ಸ್‌ಪೆಕ್ಷನ್ನಿಗೆ ಹೋದರು. ಅಲ್ಲಿ ಒಬ್ಬ ಸೈನ್ಸ್ ಮೇಷ್ಟರಿಗೆ ವರ್ಗವಾಗಿ ಬೇರೊಬ್ಬನು ಬಂದಿದ್ದನು. ಹೊಸಬನು ಬಂದು ಒಂದು ತಿಂಗಳು ಮಾತ್ರ ಆಗಿತ್ತು. ತನ್ನ ಕೆಲಸವನ್ನು ಶ್ರದ್ದೆಯಿಂದ ಮಾಡಿಕೊಂಡು ಹೋಗುತ ಹೆಡ್ ಮಾಸ್ಟರವರ ಮೆಚ್ಚುಕೆಯನ್ನು ಪಡೆದಿದ್ದನು. ಸಾಹೇಬರು ಪ್ರಾಕ್ಟಿಕಲ್ ವರ್ಕಿನ ಪುಸ್ತಕಗಳನ್ನು ತನಿಖೆ ಮಾಡಿದಾಗ ಹಿಂದಿನ ಅಭ್ಯಾಸಗಳನ್ನು ತಿದ್ದದೇ ಬಿಟ್ಟಿದ್ದುದು ಅವರ ಗಮನಕ್ಕೆ ಬಂತು. ಸೈನ್ಸ್ ಮೇಷ್ಟರನ್ನು ಕರೆದು ಕೇಳಿದರು. ಆತ,- ಸಾರ್! ನಾನು ಬಂದು ಒಂದು ತಿಂಗಳು ಮಾತ್ರ ಆಯಿತು. ನಾನು ದೀರ್ಘ ಖಾಯಿಲೆ ಬಿದ್ದಿದ್ದು ಈಚೆಗೆ ಸ್ವಲ್ಪ ಗುಣ ಹೊಂದಿ ಕೆಲಸಕ್ಕೆ ಬಂದವನು, ಹೆಡ್ ಮಾಸ್ಟರಿಗೂ ತಿಳಿದಿದೆ. ತಿದ್ದದೇ ಬಿಟ್ಟಿರುವ ಅಭ್ಯಾಸಗಳೆಲ್ಲ ಹಿಂದಿನ ಸೈನ್ಸ್ ಮೇಷ್ಟರ ಕಾಲದ್ದು. ನನ್ನ ಕಾಲದವನ್ನೆಲ್ಲ ನಾನು ತಿದ್ದಿದೇನೆ. ಹಿಂದಿನದನ್ನು ಕ್ರಮವಾಗಿ ಅವಕಾಶವಾದಾಗ ತಿದ್ದುತ್ತೇನೆ ಎಂದು ಸಮಜಾಯಿಷಿ ಹೇಳಿದನು. ಸಾಹೇಬರು ಸುಮ್ಮನೇ ಇದ್ದು ಎರಡು ತಿಂಗಳ ನಂತರ ರಿಪೋರ್ಟು ಕಳಿಸಿದಾಗ ಅದರಲ್ಲಿ ಆ ಹೊಸ ಮೇಷ್ಟರಿಗೆ ಗೂಟಗಳನ್ನು ಹಾಕಿರೋದೇ! ಹಿಂದಿನ ಅಭ್ಯಾಸಗಳನ್ನು ಏಕೆ ತಿದ್ದಲಿಲ್ಲ? ಆ ಹೊಸ ಮೇಷ್ಟರಿಗೆ ದಂಡನೆ ಏಕೆ ಮಾಡಬಾರದು? ಎಂಬ ಬಗ್ಗೆ ಸಮಜಾಯಿಷಿ ತೆಗೆದು ಕಳಿಸಬೇಕೆಂದು ಹೆಡ್ಮೇಷ್ಟರಿಗೆ ತಾಕೀತು ಕೊಡೋದೇ! ಯಾರು ಮಾಡಿದ ತಪ್ಪಿಗೆ ಯಾರಿಂದ ಸಮಜಾಯಿಷಿ? ಯಾರಿಗೆ ದಂಡನೆ? ಆತ ನನ್ನ ಸ್ನೇಹಿತ. ನನ್ನ ಹತ್ತಿರ ಬಂದು ಹೇಳಿಕೊಂಡನು. ಇದೆಂತಹ ಹುಚ್ಚು ಆಡಳಿತ!’
`ಚೆನ್ನಾಗಿದೆ ! ನಮ್ಮ ಇಲಾಖೆ ಬಹಳ ಸುಧಾರಿಸಬೇಕು ರಂಗಣ್ಣ!’
`ಈಗ ನಿನ್ನನ್ನೊಂದು ಸಲಹೆ ಕೇಳ ಬೇಕು ನೋಡು!’
`ಕೇಳಪ್ಪ ಕೇಳು ! ಮತ್ತೆ ಯಾವನಾದರೂ ತಿರುಗಿ ಬಿದ್ದಿದ್ದಾನೋ? ಅಲ್ಲಿ ಇರುವವರು ಇಬ್ಬರು, ಮೂರನೆಯವನು ಯಾವನೂ ಇಲ್ಲವಲ್ಲ!’
’ಮೂರನೆಯವನು ಆ ಇಬ್ಬರ ಏಜೆಂಟು ! ಒಬ್ಬ ಮೇಷ್ಟ್ರು! ಹಿಂದೆ ಡೆಪ್ಯುಟಿ ಕಮಿಷನರ್ ಸಾಹೇಬರನ್ನೆ ಲಕ್ಷ್ಯ ಮಾಡದೆ ಒರಟು ಜವಾಬು ಕೊಟ್ಟ ಸಿಪಾಯಿ!’
`ಏನು ಆವನ ವಿಚಾರ?’
`ಅವನನ್ನು ಸಸ್ಪೆಂಡ್ ಮಾಡಿ ಬಿಡೋಣವೆಂದಿದ್ದೇನೆ.’
`ಅಯ್ಯೋ ಶಿವನೇ! ಏಕ್ ದಂ ಸಸ್ಪೆಂಡ್ ಮಾಡುತ್ತೀಯಾ? ಒಳ್ಳೆಯದಲ್ಲವಲ್ಲ! ಜುಲ್ಮಾನೆ ಗಿಲ್ಮಾನೆ ಹಾಕಿ ನೋಡು.’
`ಅಷ್ಟಕ್ಕೆಲ್ಲ ಸಗ್ಗುವ ಮನುಷ್ಯನಲ್ಲ. ನೀನು ಎಂದರೆ ನಿಮ್ಮಪ್ಪ ಎನ್ನುವ ಗಟ್ಟಿಪಿಂಡ!’
`ಉಪಾಯದಲ್ಲಿ ವರ್ಗಮಾಡಿಸಿಬಿಡು.’
`ಹಿಂದೆ ಎರಡು ಬಾರಿ ವರ್ಗ ಆಗಿದ್ದು, ಸಾಹೇಬರುಗಳ ಹತ್ತಿರ ನಿಮ್ಮ ಮುಖಂಡರು ಹೋಗಿ ಅದನ್ನು ರದ್ದು ಮಾಡಿಸಿದರು. ಅವನು ತಲೆಯೆತ್ತಿಕೊಂಡು ಮೆರೆಯುತ್ತಿದ್ದಾನೆ! ಒಂದು ವೇಳೆ ಈಗ ಮೇಲಿನವರಿಗೆ ಹೇಳಿ ವರ್ಗ ಮಾಡಿಸಿದೆ ಅನ್ನು. ಅವನು ರಜಾ ತೆಗೆದು ಕೊಂಡು ಜನಾರ್ದನಪುರದಲ್ಲೇ ನಿಲ್ಲುತ್ತಾನೆ. ಅವನ ಮೇಲೆ ನನ್ನ ಅಧಿಕಾರ ಏನೂ ಇರುವುದಿಲ್ಲ. ಅವನು ಕಿರುಕುಳ ಹೆಚ್ಚಾಗಿ ಕೊಡುತ್ತಾನೆ. ಜೊತೆಗೆ ಅವನು ಬಹಳ ಪುಂಡ; ಅವನದು ಹೊಲಸು ಬಾಯಿ; ಮೇಲೆ ಬೀಳುವುದಕ್ಕೂ ಹಿಂಜರಿಯೋ ಮನುಷ್ಯನಲ್ಲ!’
`ಹಾಗಾದರೆ ಅವನ ತಂಟೆಗೆ ಹೋಗಬೇಡ! ಬೇಕಾಗಿದ್ದರೆ ನೀನು ಎರಡು ತಿಂಗಳು ಕಾಲ ರಜಾ ತೆಗೆದುಕೊಂಡು ಬೆಂಗಳೂರಿಗೆ ಬಂದು ಬಿಡು. ಇಲ್ಲದಿದ್ದರೆ ಪುನಃ ಸಾಹೇಬರನ್ನು ಕಂಡು ಜನಾರ್ದನಪುರದಿಂದ ವರ್ಗ ಮಾಡಿಸಿಕೊ, ಬೇರೆ ರೇಂಜಿನಲ್ಲಿ ಕೆಲಸ ಮಾಡು.’
`ಈ ಹೇಡಿ ಸಲಹೆಯನ್ನು ನನಗೆ ಕೊಡುತಿಯಾ! ನಿನಗೆ ನಾಚಿಕೆಯಿಲ್ಲ!’
`ಅಯ್ಯೋ ಶಿವನೇ! ಶಿವನೇ! ಕುಳಿತುಕೋ ರಂಗಣ್ಣ! ಇದೇನು ಉಗ್ರಾವತಾರ! ಕುಳಿತುಕೊಂಡೇ ನನ್ನನ್ನು ಬಯ್ಯಿ; ಬಯ್ಸಿಕೊಳ್ಳುತ್ತೇನೆ! ಹೊಡಿ, ಹೊಡಿಸಿಕೊಳ್ಳುತ್ತೇನೆ!’
`ಆವನಿಗೆ ಹದರಿಕೊಂಡು ರಜಾ ತೆಗೆದುಕೋ ಎಂದು ನನಗೆ ಹೇಳುತ್ತೀಯಲ್ಲ! ಹೆಡ್ ಮೇಷ್ಟ್ರ ಮಾತನ್ನು ಆ ಪುಂಡ ಕೇಳುವುದಿಲ್ಲ; ಪಾಠ ಶಾಲೆಯಲ್ಲಿ ಪಾಠ ಮಾಡುವುದಿಲ್ಲ ; ಹುಡುಗರನ್ನ ತರಗತಿಯಿಂದ ಅಟ್ಟಿ ಬಿಡುತ್ತಾನೆ ; ಮೆಮೋ ಮಾಡಿದರೆ ಅಂಗೀಕರಿಸುವುದಿಲ್ಲ, ಜವಾನನಿಗೆ ಕೆನ್ನೆಗೆ ಹೊಡೆದು ದೂಡಿಬಿಡುತ್ತಾನೆ; ಆ ಮೆಮೋ ಪುಸ್ತಕವನ್ನೇ ಕಿತ್ತಿಟ್ಟು ಕೊಂಡು ಹೆಡ್ ಮೇಷ್ಟ್ರನ್ನು ಸತಾಯಿಸುತ್ತಾನೆ ; ತನ್ನ ಮಾತಿಗೆ ಬಂದರೆ ಹೊಡೆದು ಅಪ್ಪಳಿಸುತ್ತೇನೆ ಎಂದು ಹೆಡ್ಮೇಷ್ಟರಿಗೆ ಹೆದರಿಸುತ್ತಾನೆ. ಈಗ ನೀನು ಕೊಡೋ ಸಲಹೆ ನೋಡು ! ಆ ದುಷ್ಟ ಮೇಷ್ಟರನ್ನು ಬಲಿ ಹಾಕಿ ಶಿಸ್ತು ಕಾಪಾಡುವುದಕ್ಕೆ ಬದಲು ಹೇಡಿಯಂತೆ ರೇಂಜು
ಬಿಟ್ಟು ನಾನು ಓಡಿ ಹೋಗಬೇಕೇ ?
`ಸಮಾಧಾನಮಾಡಿಕೋ ರಂಗಣ್ಣ! ನಿನ್ನ ಕ್ಷೇಮಕ್ಕಾಗಿ ನಾನು ಹೇಳಿದೆ. ಹಾಳು ಗುಲಾಮಗಿರಿಗೋಸ್ಕರ ಯಾರೂ ಮೆಚ್ಚದ ಈ ತಾವೇದಾರಿ ಕೆಲಸಕ್ಕೊಸ್ಕರ ನೀನು ಅಪಾಯಕ್ಕೊಳಗಾಗಬಾರದು ಎನ್ನುವ ಅಭಿಪ್ರಾಯದಿಂದ ಹೇಳಿದೆ. ಈಗಾಗಲೇ ನೀನು ಆ ಮುಖಂಡರ ಬಲವದ್ವಿರೋಧ ಕಟ್ಟಿ ಕೊಂಡಿದ್ದೀಯೆ. ಯಾವ ಕಾಲಕ್ಕೆ ಏನು ಕೆಡು ಕಾಗುವುದೋ ಎಂದು ನಾನು ಹೆದರುತ್ತಿದೇನೆ. ನೀನು ಒಂಟಿಯಾಗಿ ಕಾಡುದಾರಿಗಳಲ್ಲಿ ಸುತ್ತಾಡುತ್ತಾ ಇರುತ್ತೀಯೆ. ಅವರೋ ಮಹಾದುಷ್ಟರು ! ಪ್ರಬಲರು ! ನಿನ್ನದು ಇನ್ನೂ ಎಳೆಯ ಸಂಸಾರ! ಆಲೋಚನೆ ಮಾಡು.’
`ನಾನು ಸಾಯುವುದಾದರೆ ಜನಾರ್ದನಪುರದಲ್ಲಿ ಸಾಯುತ್ತೇನೆ! ಅಲ್ಲೇ ಭಸ್ಮವಾಗಿ ಹೋಗುತ್ತೇನೆ ! ನನ್ನ ಹಣೆಯಲ್ಲಿ ದುರ್ಮರಣ ಬರೆದಿದ್ದರೆ ಅದನ್ನು ತಪ್ಪಿಸುವುದಕ್ಕಾಗುತ್ತದೆಯೇ? ಹೇಡಿಯಾಗೆಂದು ಮಾತ್ರ ನನಗೆ ಹೇಳಬೇಡ, ಆ ದುಷ್ಟನನ್ನು ಬಲಿಹಾಕದ ಹೊರತು ನನಗೆ ಸಮಾಧಾನವಿಲ್ಲ. ಪಾಪ! ಬಡ ಮೇಷ್ಟರುಗಳು ಎಷ್ಟೋ ಜನ ಇದ್ದಾರೆ! ಭಯ ಭಕ್ತಿಗಳಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ! ಅವರ ವಿಷಯದಲ್ಲಿ ಕರುಣೆ ತೋರಿಸು ಎಂದು ಹೇಳು; ಶಿರಸಾವಹಿಸಿ ನಡೆಯುತೇನೆ. ನೀನು ಹೇಳದೆಯೇ ನಾನು ಅವರ ತಪ್ಪುಗಳನ್ನೆಲ್ಲ ಮನ್ನಿಸಿ ರಕ್ಷಣೆ ಮಾಡಿಕೊಂಡು ಬರುತ್ತಿದೇನೆ. ಆ ಉಗ್ರಪ್ಪ! ದೊಡ್ಡ ಪುಂಡ ! ಆ ಮುಖಂಡರ ಏಜೆಂಟು ! ಶುದ್ಧ ಅವಿಧೇಯ ! ಅವನ ವಿಚಾರದಲ್ಲಿ ಕರುಣೆ ತೋರಿಸುವುದಿಲ್ಲ. ಅವನಿಗೆ ದಂಡನೆಯೇ ಔಷಧ! ಅವನಿಗೆ, ಅವನ ಮುಖಂಡರಿಗೆ ನಾನು ಹೆದರುವುದಿಲ್ಲ!’
`ಹಾಗಾದರೆ ಸಸ್ಪೆಂಡ್ ಮಾಡಲೇಬೇಕೆಂದು ತೀರ್ಮಾನಿಸಿದ್ದೀಯಾ?’
`ಅವನು ತನ್ನ ನಡತೆ ತಿದ್ದಿಕೊಳ್ಳದಿದ್ದರೆ!’
`ಅವನು ತನ್ನ ನಡತೆಗಿಡತೆ ತಿದ್ದಿ ಕೊಳ್ಳೋದಿಲ್ಲ ರಂಗಣ್ಣ! ಅವನು ಬೇಕುಬೇಕೆಂತಲೇ ನಿನ್ನೊಡನೆ ಜಗಳಕ್ಕೆ ನಿಂತಿದ್ದಾನೆ. ಅದೆಲ್ಲ ಒಳ ಸಂಚು. ನಿನಗೆ ಅರ್ಥವಾಗುವುದಿಲ್ಲ. ನಿನ್ನನ್ನು ಅವಮಾನಗೊಳಿಸಿ ಕಡೆಗೆ ಅಪಾಯಕ್ಕೂ ಈಡು ಮಾಡಬೇಕು ಎಂಬುದು ಅವರ ಸಂಕಲ್ಪ. ಹಾಗಿಲ್ಲದಿದ್ದರೆ ಈಚೆಗೆ ಅವನೇಕೆ ತುಂಟಾಟವನ್ನು ಪ್ರಾರಂಭಿಸಿದ! ಮೊದಲು ಸುಮ್ಮನೇ ಇದ್ದನಲ್ಲ!’
`ನನಗೂ ಅರ್ಥವಾಗಿದೆ ತಿಮ್ಮರಾಯಪ್ಪ! ಆದ್ದರಿಂದಲೇ ಅವರಿಗೆ ಹೆದರಿಕೊಳ್ಳದೆ ಬಲಿಹಾಕಿಬಿಡೋಣವೆಂದು ತೀರ್ಮಾನಿಸಿದ್ದೇನೆ.’
`ಹಾಗಾದರೆ ಕೇಳು ರಂಗಣ್ಣ! ನಿನಗೆ ಆಪ್ತರಾದವರು, ನಿನ್ನಲ್ಲಿ ವಿಶ್ವಾಸ ಗೌರವವುಳ್ಳವರು ರಂಜಿನಲ್ಲಿ ಯಾರು ಯಾರು ಇದ್ದಾರೆ? ಹೇಳು.’
`ನಾನು ಅವರ ಮನಸ್ಸುಗಳನ್ನೆಲ್ಲ ಒಳ ಹೊಕ್ಕು ಪರೀಕ್ಷಿಸಿಲ್ಲ ತಿಮ್ಮರಾಯಪ್ಪ ! ಬಹಳ ಜನ ಗ್ರಾಮಾಂತರಗಳಲ್ಲಿ ನನ್ನ ಬಗ್ಗೆ ವಿಶ್ವಾಸ ಮತ್ತು ಗೌರವಗಳನ್ನಿಟ್ಟಿದ್ದಾರೆ ; ಹೋದಾಗೆಲ್ಲ ಆದರಿಸುತ್ತಾರೆ. ಮುಖ್ಯವಾಗಿ ರಂಗನಾಥಪುರದ ಗಂಗೇಗೌಡರು, ಆವಲಹಳ್ಳಿಯ ದೊಡ್ಡ ಬೋರೇಗೌಡರು ನನಗೆ ಆಪ್ತರೆಂದು ತಿಳಿದುಕೊಂಡಿದ್ದೇನೆ.’
`ಅವರು ನಮ್ಮ ಜನರಲ್ಲಿ ಭಾರೀ ಕುಳಗಳು ರಂಗಣ್ಣ ! ನನಗೆ ಬಹಳ ಸಂತೋಷ, ಆವರಿಗೆ ವರ್ತಮಾನ ಕೊಡು. ಆಮೇಲೆ ಪೊಲೀಸ್ ಇನ್ಸ್‌ಪೆಕ್ಟರನ್ನು ಗುಟ್ಟಾಗಿ ಕಂಡು ಮಾತನಾಡು. ನಿನ್ನ ಕಚೇರಿಯ ಹತ್ತಿರ, ಮನೆಯ ಹತ್ತಿರ ಕಾನ್ಸ್‌ಟೇಬಲ್ಲುಗಳನ್ನು ಅವರು ಕಾವಲು ಹಾಕುತ್ತಾರೆ. ಉಗ್ರಪ್ಪನ ಓಡಾಟಗಳನ್ನು ಗಮನದಲ್ಲಿಡಲು ಗುಪ್ತಚಾರರನ್ನು ಬೆನ್ನು ಹಿಂದೆ ಹಾಕುತ್ತಾರೆ. ನೀನು ಆರ್ಡರನ್ನು ಹೊರಡಿಸಿದ ಕೂಡಲೆ ನನಗೆ ವರ್ತಮಾನ ಕೊಡು. ಒಂದು ತಿಂಗಳ ಕಾಲ ಸರ್ಕಿಟು ರದ್ದು ಮಾಡು, ಆಮೇಲೆ ಆಲೋಚನೆ ಮಾಡೋಣ.’
`ನೀನು ಹೇಳಿದ್ದೆಲ್ಲ ಸರಿ ತಿಮ್ಮರಾಯಪ್ಪ ! ಆದರೆ, ಹೆದರಿಕೊಂಡು ಸರ್ಕಿಟನ್ನು ಮಾತ್ರ ನಾನು ರದ್ದು ಮಾಡುವುದಿಲ್ಲ ಉಳಿದ ಎಲ್ಲ ಸಲಹಗಳಂತೆ ನಡೆಯುತ್ತೇನೆ. ಸಿದ್ದಪ್ಪನವರನ್ನು ಭೇಟಿ ಮಾಡಿಸುತ್ತೇನೆಂದು ಹಿಂದೆ ಬರೆದಿದ್ದೆಯಲ್ಲ, ಅವರೇಕೆ ಇಲ್ಲಿಗೆ ಬರಲಿಲ್ಲ?’
`ಆತನಿಗೆ ಊರು ಬಿಟ್ಟು ಹೋಗುವ ಜರೂರು ಕೆಲಸ ಗಂಟು ಬಿತ್ತು. ಹೋಗಿದ್ದಾನೆ ; ನಾಳೆ ನಾಳಿದ್ದರಲ್ಲಿ ಬರುತ್ತಾನೆ. ಆತ ಮೇಲಿನವರನ್ನೆಲ್ಲ ಕಂಡು ಮಾತಾಡಿದ್ದಾನೆ. ಧೈರ್ಯವಾಗಿರು ; ಮೇಲಿನವರು ದಡ್ಡರೇನಲ್ಲ ; ಅವರಿಗೂ ನಿಜಾಂಶಗಳು ತಿಳಿದಿದೆ. ಅವರೆಲ್ಲ ಉಪಾಯ ದಿಂದ ವರ್ತಿಸುತ್ತಾರೆ.’
`ನಿನ್ನ ಸಿದ್ದಪ್ಪ ಎಂತಹ ಮನುಷ್ಯ ? ನನಗಂತೂ ಆತನ ಪರಿಚಯವೇ ಇಲ್ಲ. ನನ್ನ ವಿಚಾರದಲ್ಲಿ ಆತನು ಆಸಕ್ತಿವಹಿಸುತ್ತಾನೆಯೇ ? ಎಂದು ನನಗೆ ಸಂದೇಹವಿದೆ.’
`ಆತ ಒಳ್ಳೆಯ ಮನುಷ್ಯ! ಆಲೋಚನೆ ಮಾಡಬೇಡ, ಸ್ವಜನಾಭಿಮಾನ ಸ್ವಲ್ಪ ಇದೆ. ಆದರೆ ನಿಚತನ ಇಲ್ಲ. ಕಲ್ಲೇಗೌಡ, ಕರಿಯಪ್ಪ ಮುಂತಾದವರ ದುರ್ವಿದ್ಯೆಗಳು ಆತನಿಗೆ ಸರಿಬೀಳುವುದಿಲ್ಲ.’
ತಿಂಡಿ ಮುಗಿಯಿತು, ಮಾತೂ ಮುಗಿಯಿತು.
`ನಾನು ನನ್ನ ತಂಗಿಯ ಮನೆಗೆ ಹೋಗಬೇಕು. ಊಟ ಬೇಕಾಗಿಲ್ಲ; ಹೊಟ್ಟೆ ಭರ್ತಿ ಯಾಗಿದೆ. ಆದರೆ ನನಗಾಗಿ ಆಕೆ ಏನಾದರೂ ಬಿಸಿ ಅಡುಗೆ ಮಾಡಿಟ್ಟು ಕೊಂಡಿದ್ದರೆ ಆಗ ಹೊಟ್ಟೆಗೆ ಸ್ವಲ್ಪ ತ್ರಾಸ ಕೊಡ ಬೇಕಾದೀತು!’ ಎಂದು ಹೇಳುತ್ತ ರಂಗಣ್ಣ ಎದ್ದು ನಿಂತುಕೊಂಡನು.
`ಒಳ್ಳೆಯದು! ಹೊರಡು ರಂಗಣ್ಣ! ಪೊಲೀಸ್ ಇನ್ಸ್‌ಪೆಕ್ಟರನ್ನು ಕಂಡು ಮುಂದಾಗಿ ಏರ್ಪಾಟು ಮಾಡಿಕೋ. ನನಗೆ ಆದಷ್ಟು ಬೇಗ ವರ್ತಮಾನ ಕೊಡು, ಬಹಳ ಎಚ್ಚರಿಕೆಯಿಂದ ಇರು’ ಎಂದು ಹೇಳಿ ಬೆನ್ನು ತಟ್ಟಿ ತಿಮ್ಮರಾಯಪ್ಪ ಗೇಟಿನವರೆಗೂ ಜೊತೆಯಲ್ಲಿ ಬಂದು ರಂಗಣ್ಣನನ್ನು ಬೀಳ್ಕೊಟ್ಟನು.
*****
ಮುಂದುವರೆಯುವುದು