ಗುಂಡು

ಗುಂಡು

ರಾತ್ರಿ ಮೂರು ಗಂಟೆ! ಈಗತಾನೆ ಮುಗಿಯಿತು ಆ ಕನಸು! ಕನಸು ಮುಗಿದರೂ ಖಾಸೀಂ ಮುಗಿದಿಲ್ಲ! ಕುದುರೆ ಲಗಾಂ ಹಿಡಿದು ಕೊಂಡು ಅವನು ಓಡಾಡುತ್ತಲೇ ಇದ್ದಾನೆ. ಅವನ ಹಿಂದೆ ಆ ಕುದುರೆಯೂ ಖಲ್ ಖಳಕ್ ಖಳ್ ಖಲಕ್-ಎಂತ ಗೊರಸು ತೂಗಿಡುತ್ತಾ ನನ್ನ ಮೆದುಳಲ್ಲೆಲ್ಲ ಸುತ್ತಾಡುತ್ತ ಇದೆ. ಈಗ ಅವನಿಗೂ ಅದಕ್ಕೂ ಅಕ್ಷರ ಸಮಾಧಿ! ಹಾಗಾದರೆ ಕಾಟವಿಲ್ಲ ನನಗೆ ಇನ್ನು ಮುಂದೆ.
* * *

ಶಿವರಾಂಪೇಟೆಯಲ್ಲಿ ನಮ್ಮ ಮನೆ. ನಮ್ಮ ಅಣ್ಣ ಅಲ್ಲಿಗೆ ವರ್‍ಗ ಮಾಡಿಸಿಕೊಂಡು ಬಂದರು. ಅವರ ಹಿಂದೆ ಕುದುರೆ ಬಂತು. ಅದರ ಸಂಗಡ ಖಾಸೀಂ ಬಂದ; ಮತ್ತು ಪಿಚ್ಚಾಟಿ ಎಂತ ನಾಯಿ ಬಂತು; ಹಾಗು ಬಿರ್ರಾಲಿ ಎಂತ ಬೆಕ್ಕು ಬಂತು; ಇನ್ನೂ ತಿಮ್ಮಣ್ಣ ಎಂತ ಕೋತಿ, ಮಿಠ್ಠಿ ಎಂತ ಗಿಣಿ ರಾಮ-ಹೀಗೆ ಏನೇನೋ ಬಂದವು. ಅವೆಲ್ಲ ಈ ಖಾಸೀಮನ ಕುದುರೆಗೆ ಸೇರಿದ ಮಕರ ರಾಶಿ! ಇವೆರಡು ವ್ಯಕ್ತಿಗಳಂತೆ ನನ್ನ ಮೆದುಳಿನ ದಿವಾನಖಾನೆಯಲ್ಲಿ ಠಲಾಯಿಸುವುದಕ್ಕೇಂತ ಹಠಮಾಡಿದ ದಿನವೇ ಅವಕ್ಕೂ ಅಕ್ಷರ ಗೋರಿ. ಆದರೆ ಈ ದಿನ ಅವರ ವಿಚಾರ ಬೇಡ.
* * *

ಅಣ್ಣ ಭಂಡಾರಪ್ಪನ ಸಂಗಡ ಒಂದು ಖಾಸ ಬಂಗಲೀನೇ ಬಂದಿತ್ತು. ಆದ್ದರಿಂದ ಬಾಡಿಗೆ ಇದ್ದವರನ್ನ ಬಿಡಿಸಿ ಇಡಿಯ ಮನೆಯನ್ನೇ ಅವರಿಗೊಪ್ಪಿಸಿಬಿಟ್ಟೆವು. ಆ ಖಾಸ್ ಬಂಗಲಿಯಲ್ಲಿ ನಾವೂನೂ ಸೇರಿ ಕೊಂಡೆವು.

ಖಾಸೀಂ ಹುಡುಗತನದಿಂದ ಈ ನಮ್ಮಣ್ಣನ ಮೋರೆ, ಮೀಶೆ, ಗಂಡು ಠೀವಿಗಳಿಗೆ ಬೆರಗಾಗಿ ಗಿರಿಯೂರಿಂದ ಇಲ್ಲಿಗೆ ಬಂದಿದ್ದನು. ಕುದುರೆಗೆ ಹುರುಳಿ, ನಾಯಿಗೆ ಖಂಡ, ಗಿಳಿಗೆ ಹಣ್ಣು ಮುಂತಾಗೆಲ್ಲ ಸರಬರಾಜು ವಿವರವನ್ನೆಲ್ಲ ಖಾಸೀಂ ಬಲ್ಲ ಮತ್ತು ಅವನು ಅದನ್ನೆಲ್ಲ ನಿಭಾಯಿಸಬಲ್ಲ. ಖಾಸೀಂ ನಮ್ಮ ಶಿವರಾಂಪೇಟೆಗೆ ಬಂದಾಗ್ಗೆ ಚಿಗುರು ಮೀಸೆ ಗೆಣೆಯ. ತೆಳ್ಳಗೆ ಕೆಂಪಗೆ ರಸದಾಳೆ ಕಬ್ಬಿನ ಹಾಗೆ ಇದ್ದ! ಅಂದಕ್ಕೆ ಹಾಗಾದರೆ ಶಕ್ತಿ ಗಂತು ಉಕ್ಕಿನ ಕೈಕಾಲುಗಳು. ಎಲ್ಲ ವಿಚಾರಕ್ಕೂ ನಮ್ಮೊಂದಿಗೆ ಹಿಂದು ವಾದರೂ ನಮಾಜು ಸಮಯದಲ್ಲಿ ಅಂಗಳದಲ್ಲಿನ ಗುಲಾಬಿ ಗಿಡದ ಬಳಿಗೆ ಓಡಿಬಿಡುವನು. ನಮ್ಮಣ್ಣ ಅತ್ತಿಗೆ ಅವನಿಗೆ ಅಡ್ಡಿ ಬರುವುದಿರಲಿ ಅವನಿದ್ದಲ್ಲಿ ಆ ಕಾಲದಲ್ಲಿ ಯಾವ ಸದ್ದೂ ಮಾಡರು, ನಮಾಜು ಮುಗಿಸಿ ಬಂದಾಗ ಅವನ ಮುಖ ಆನಂದದಿಂದ ಬೆಳಗುತ್ತ ಇರುತ್ತಿತ್ತು. ಖಾಸೀಮನಿಗೆ ನಮ್ಮನ್ನು ಕಂಡರೆ ಸದರ, ಮಕ್ಕಳನ್ನು ಕಂಡರೆ ಆದರ, ಕುದುರೆ ಕಂಡರೆ ಹೆಮ್ಮೆ, ರಾಯರನ್ನು ಕಂಡರೆ ಭಕ್ತಿ, ಮತ್ತೆ ಅಮ್ಮಾವರನ್ನು ಕಂಡರೆ ಭಯ.

ಕಾಶಿ ಕೆಂಪು ಕುದುರೆ, ಹೆಣ್ಣು! ಬಾಬಾಬುರ್ಡನ್‌ರವರ ಬಿಜಲಿ ಕುದುರೆಯ ದೂರದ ಸಂಬಂಧದ ರಕ್ತ, ಕಾಶಿಯ ಮೈಯಲ್ಲಿ ಹರಿಯುತಿತ್ತು. ಆ ಹೆಮ್ಮೆಯ ವಿಚಾರವನ್ನು ಬಲ್ಲದೋ ಏನೋ ಎಂಬಂತೆ ಅದು ಠೀವಿಯಿಂದ ಹೆಜ್ಜೆ ಹಾಕುತ್ತಿತ್ತು, ಮತ್ತು ಅದು ಪ್ರೀತಿಯನ್ನು ತನ್ನದೇ ಆದ ಒಂದು ವಿಶೇಷ ರೀತಿಯಲ್ಲಿ ವ್ಯಕ್ತಪಡಿಸುತ್ತಿತ್ತು.

ಕಾಶಿ ನಮ್ಮ ಪಕ್ಷಕ್ಕೆ ಕಾಮಧೇನು, ಅದು ಗಂಡು ಕುದುರೆ ಎಂತ ಭಾವಿಸಿದಿರೇನು? ಮಿಲಿಟೆರಿ ಇಲಾಖೆಯಲ್ಲಿದ್ದು ಬಂದಿದ್ದುದರಿಂದ ಅದು ತೋರಿಕೆಯಲ್ಲಿ ಹೆಣ್ಣಾಗಿದ್ದರೂ, ಚಟುವಟಿಕೆಯಲ್ಲಿ ಗಂಡು. ಚೇಷ್ಟೆಯಲ್ಲಿ ಹೆಣ್ಣು, ತನಗೆ ಬೇಕಾದವರ ದನಿ ಕೇಳಿಸಿದರೆ ಹು ಹು ಹು ಗುಟ್ಟಿ ಹತ್ತಿರ ಕರೆಯುವುದು. ಪಾಯಸ ಮಾಡಿದ ದಿವಸ ಬರಿ ಪಾತ್ರೆಯನ್ನಾದರೂ ನೆಕ್ಕಿಸಿದಹೊರತು ಬಿಡದು.

ಕಡೆಗೆ ಅದು ನಮ್ಮಜ್ಜಿಯ ದೆಸೆಯಿಂದ ಕಾಶಿಯಾಗಿಬಿಟ್ಟಿತ್ತು. ಅದು ಲಕ್ಷ್ಮಿಯೇ ಆಗಿ ನಮ್ಮ ಮನೆ ಸೇರಿತೆಂದೂ, ಅದರ ಕಾಲುಬುಡದಲ್ಲಿ ಏಳೇಳು ಕೊಪ್ಪರಿಗೆ ಹಣವುಂಟೆಂದೂ ನಮ್ಮಜ್ಜಿ ಹೇಳುತ್ತಿದ್ದರು ಮತ್ತು ಅದಕ್ಕೆ ಪ್ರದಕ್ಷಿಣೆಮಾಡಿ ಹೂವು ಕುಂಕುಮ ಏರಿಸಿ, ಕಡಲೆ ಬೆಲ್ಲ ತಿನ್ನಿಸಿದ ಹೊರತು, ಅವರು ಊಟವೇ ಮಾಡರು. ನಮ್ಮಜ್ಜಿ ಮುತ್ತುಗದೆಲೆ ಹಚ್ಚಿ ಅಂಗಡಿಗೆ ಕಳಿಸಿ ದುಡು ತರಿಸಿಯಾದರೂ ಕುದುರೆಗೆ ನೈವೇದ್ಯ ಮಾಡುವರು. ನಾವು ಆ ಸಮಯಕ್ಕೆ ಅಲ್ಲೇ ಇದ್ದು ಲಾಭ ಪಡೆಯುತ್ತಿದ್ದೆವು.

ಖಾಸೀಂ ರಜಹೋದ. ಕೂಸಪ್ಪ ಬದಲಿ ಬಂದ. ಪಾಪ, ಅವನು ಈ ಏಳು ಕೊಪ್ಪರಿಗೆಯ ಕಾಶಿಯ ಸಂಗಡ ಏಗಲಾರದೆ ಹೋದ.

ಒಂದು ದಿನ ಬೆಳಗ್ಗೆ ಬಂದ ಕೂಸಪ್ಪ, ಅಮ್ಮಾವರ ಹತ್ತಿರ ಕೇಳಿ ಹುರುಳಿ ಇಸುಗೊಂಡ. ತೋಪಡದ ಚೀಲಕ್ಕೆ ತುಂಬಿ ಇಟ್ಟು ಗೊಂಡ, ಗೋದಲಿ ಒಳಗಿದ್ದ ಹುಲ್ಲೆಲ್ಲ ತೆಗೆದುಬಿಟ್ಟ. ಕರಾರು ತೆಗೆದುಕೊಂಡ ಕೆರೆಯಲಿಕ್ಕಾರಂಭಿಸಿದ. ಬುರುಸ್ ಹೊಡೆದು ತೆಂಗಿನ ನಾರಿನ ಚೀಲದಲ್ಲಿ ಉಜ್ಜುವುದಕ್ಕಾರಂಭವಾಗಬೇಕಾಗಿತ್ತು. ಕರಾರಿಂದ ಕೆರೆಕೆರೆದು ಮಾಲೀಷ್ ರಂಗೋಲಿ ಹಾಕುವುದಕ್ಕಾರಂಭಿಸಿದ್ದ. ಕೂಸಪ್ಪ ಮುತುವರ್‍ಜಿಯಿಂದ ಕೆಲಸಮಾಡುತ್ತಿದ್ದ. ಅವನ ಕೆಲಸವೆಲ್ಲ ಮಿಲಿಟರಿ ಕೆಲಸವಾದರೂ ಅವನು ಮಾತ್ರ ಹುರಿಹಿಟ್ಟಿನಹಾಗೇ ಇದ್ದ.

ಕಾಶಿಗೆ ಅದೆಲ್ಲ ಏನುಗೊತ್ತು. ಅದಕ್ಕೆ ಮೊದಲು ಬೇಕಾಗಿದ್ದುದು ಹುರುಳಿ-ಬೆಂದ ಹುರುಳಿ-ಗೂಟದಲ್ಲಿ ನೇತಾಡುತ್ತಿದ್ದ ಘಮ ಘಮ ಹುರುಳಿ, ಅನಂತರ ಈರುಳ್ಳಿ-ಬೆಲ್ಲ. ಅದರ ಬದಲಾಗಿ ಕೂಸಪ್ಪ ಬೇಡದುದೆಲ್ಲ ಮಾಡುತಿದ್ದ. ಕೂದಲೆಲ್ಲ ಸಿಕ್ಕಾಗಿದ್ದರೆ ನಮ್ಮ ರಂಬೆ ಹೇಗಾಡುವಳೊ ಅಮ್ಮನ ಬಾಚಣಿಗೆ ಕಂಡಾಗ, ಹಾಗೇ ಆಡಲಾರಂಭಿಸಿತು ಕಾಶಿ. ಅಮ್ಮ ಹೇಗೆ ರಂಬೆಗೆ ಬಿಸಿ ಬಿಸಿ ಗುದ್ದು ಕೊಡುವಳೋ ಹಾಗೇ ಕೂಸಪ್ಪ ಕೊಟ್ಟ ಕಾಶಿಗೆ, ಖರ್‍ಚಿಗೆ ನಾಲ್ಕು ಬೆನ್ನು ಕಡುಬು. ತಲೆ ಕೊಡವಿ, ಬೆನ್ನು ಬಿಲ್ಲುಮಾಡಿ, ಬಾಲದಲ್ಲಿ ಅಪ್ಪಳಿಸಿ, ಕಟಕಟ ಲಗಾಮು ಕಡಿದು ಎಡಕ್ಕೆ ಬಲಕ್ಕೆ ಮುಸುಡಿ ಬೀಸಿ ತನ್ನ ಸಿಟ್ಟೆಲ್ಲ ತೋರಿಸಿತು ಕಾಶಿ. ಕೂಸಪ್ಪ ಅದರ ದವಡೆಗೂ, ಬಾಲಕ್ಕೂ, ಕಾಲಿಗೂ ಸಿಗದೆ ನೆಗೆದಾಡಿ ಮಾಲೀಸು ಮಾಡುತ್ತಿದ್ದ. ನಾನು ಹೋಗಿ ನೋಡಿ ಹೇಳಿದೆ- “ಕೂಸಪ್ಪ, ಇದೇಕೋ ಈ ದಿನ ಕಾಶಿಗೆ ಸಿಟ್ಟೋ ಏನೋ ಬಂದಿದೆ, ಮೊದಲು ಹುರುಳಿ ತಿನ್ನಿಸಿಬಿಡು. ಅನಂತರ, ನೀನು ಅದರ ಮೈ ಬಾಚೂವಂತೆ!” ಅದಕ್ಕೆ ಕೂಸಪ್ಪ ನೆಟ್ಟಗೆ ನಿಂತು ಸಲಾಮುಮಾಡಿ ಹೇಳಿದ- “ಇದು ಮಿಲಿಟರೇ ಗೋಡಾ, ಮರೆತೈತೆ ಸಿಸ್ತೆಲ್ಲ. ಕಂತ್ರಿ ಆಗಿದೆ! ನಾನೇನು ಬಿಡೋನಲ್ಲ
ಬುಡಿ, ಕಲಿಸೇಬಿಡುತ್ತೇನೆ ನೋಡಿ ಸಿಸ್ತು!” ಹೀಗೆಂದವನು ಮಾಲೀಷಿಗಾರಂಭಿಸಿದ. ಕಾಶಿ ಹಾಗಿದ್ದರೆ ಈ ದಿನ ಬುದ್ದಿ ಕಲಿತೇನೋ ಎಂದು ಕೊಂಡು ಒಳಗೆ ಹೋದೆ. ನಮ್ಮ ತಾಯಿ-ಈರುಳ್ಳಿ ಬೆಲ್ಲ ಜಜ್ಜಿ ಕೊಡಪ್ಪ ಕೊಡಪ್ಪ, ಕುದುರೆ ಮಾಲಕುಮೀಗೆ. ಹೊತ್ತಾದರೆ ಇನ್ನೇನು ಮಾಡಿ ಯಾಳೊ ಕಾಣೆ. ಅವನೂ ಹೊಸಬಕಣಪ್ಪ, ಕೂಸಪ್ಪ, ಹೀಗೆಂದರು. ನಾನು ಉತ್ತರ ಜೋಡಿಸಿ ಹೇಳುವುದರಲ್ಲಿದ್ದೆ. ಅಷ್ಟರಲ್ಲೇ ಕುದುರೆಯು – “ಹೀ ಇ ಇ ಈ !” ಎಂದು ಸದ್ದೂ ಮತ್ತೆ ಪುನಹಾ-ಅಯ್ಯೋ, ಅಂಭಾ ಆ ಆ ಆ!” ಎಂದ ಕೂಸಪ್ಪನ ಆರ್‍ತನಾದವೂ ಕೇಳಿಬಂದವು. “ಹೋಗಪ್ಪಾ, ಕೂಸಪ್ಪ ಹೋದನೋ ಏನೋ ಸತ್ತೂ! ಅದೇನು ರಣಗುದರೆ ಆಹುತಿ ತಗೊಂಡು ಬಿಡುತ್ತೆ, ಎರಡು ದಿನ ಸವಾರೀ ಇಲ್ಲದಿದ್ದರೆ”- ಎಂಬ ಮಾತೆಲ್ಲ ನಮ್ಮಮ್ಮನ ಬಾಯಿಂದ ಹೊರಡುವಷ್ಟರಲ್ಲೇ ನಾನು ಹಾರಿಹೋದೆ.

ಅಲ್ಲೇನಾಗಿತ್ತೇ? ರಣನೋಟ! ಕುದುರೆ ಅಗಾಡಿ ಪಿಚಾಡಿ ಕಿತ್ತು ಕೊಂಡಿತ್ತು. ಕೂಸಪ್ಪನ ಗಡ್ಡವನ್ನೇ ಹಿಡಿದುಬಿಟ್ಟಿತ್ತು! ನಾನು ನೀರುಳ್ಳಿ ಬೆಲ್ಲವನ್ನು ಅದರ ಮುಂದೆ ಮುದ್ದೆ ಮಾಡಿ ಹಾಕಿದೆ. ಹುರುಳಿ ಚೀಲವನ್ನು ಗೂಟದಿಂದ ತೆಗೆದೆ, ಹಸುರು ಹುಲ್ಲಿನ ಚೀಲವನ್ನು ಅದರ ಕಡೆಗೆ ಉರುಳಿಸಿದೆ. ಅನಂತರ ಒಳಗೆ ಓಡಿಹೋಗಿ ಎಲ್ಲ ಹೇಳಿದೆ ನಮ್ಮ ತಾಯಿಗೆ.

ಕೂಸಪ್ಪ ಆಸ್ಪತ್ರೆಗೆ ಹೋಗಿ ವಾಸಿಮಾಡಿಕೊಂಡನಾದರೂ, ನಮ್ಮಲ್ಲಿಗೆ ಹಿಂತಿರುಗಲಿಲ್ಲ. ಅವನ ವಿಚಾರಕ್ಕೆ ಹಾಗಾದರೂ, ಈ ಕುದುರೆ ಕಾಶಿಯು ಖಾಸೀಮನ ಹಿಂದೆ ಮಾತ್ರ ನಾಯಿ ಮರಿಯಂತೆ ತೋರುತ್ತಿತ್ತು. ಅವನದಕ್ಕೆ ಸರ್‍ಕಸ್ ಕೆಲಸವೆಲ್ಲ ಕಲಿಸುವೆನೆಂದು ರೌಂಡ್ ಹೊಡೆಸುತ್ತಿದ್ದ. ಲಾಠಿಯ ಮೇಲೆ ಹಾರಿಸುತ್ತಿದ್ದ, ಬೆಂಕಿ ಉಂಗುರದಲ್ಲಿ ಹಾರಿಸಲೂ ಕಲಿಸಬೇಕೆಂದಿದ್ದ. ನಮ್ಮ ಅಗ್ರಜರು ಆ ಕುದುರೆಗೆ ನಿತ್ಯ ಒಂದೊಂದು ಸವಾರಿ ಹೊಡೆದು ಮೈ ನೊರೆ ಕಾರುವಂತೆಮಾಡಿ ತರುತ್ತಿದ್ದರು. ನಮ್ಮ ತಾಯಿ ನಡು ಹಗಲು ಅದಕ್ಕೆ ಏನಾದರೂ ತುಳಸೀ ಪ್ರಸಾದ ತಿನ್ನಿಸಿಯೇ ಊಟಮಾಡುತ್ತಿದ್ದರು. ಸಂಜೆ ಕುದುರೆಯಿದ್ದಲ್ಲಿ ಭೂತ ಪ್ರೇತಗಳ ಕಾಟವಿಲ್ಲವೆಂದು ದೀಪ ಧೂಪ ಹಚ್ಚುತ್ತಿದ್ದರು. ಕಾಶಿಯ ಕಾಲು, ಒಳ್ಳೆಯದೆಂದು ಅವರ ಭಾವನೆ. ನಮ್ಮಣ್ಣನವರು ಅದು ಮನೆಗೆ ಬಂದಮೇಲೆ ಬಡ್ತಿ ಪಡೆದು ಎರಡು ತೊಟ್ಟಿಲು ತೂಗಿದ್ದರು.

ಹೀಗಿರುವಾಗ ಒಂದುಸಾರಿ ನವರಾತ್ರಿ ಬಂದಿತು. ಕುದುರೆಗೆ ಪೂಜೆ, ಪುರಸ್ಕಾರ, ಪ್ರಸಾದಗಳಾದವು. ಒಂದು ದಿನ ಪೀತಾಂಬರದ ಅಲಂಕಾರದಲ್ಲಿ ಕಾಶಿಗೆ ಮೆರವಣಿಗೆಯೂ ಆಯಿತು. ಈ ಗದ್ದಲದಲ್ಲಿ ಎಂಟು ದಿನಗಳವರೆಗೂ ಕಾಶಿಗೆ ಬೆಳಗಿನ ಸವಾರಿ ಇಲ್ಲವಾಯಿತು.

ಕುದುರೆಯಿಟ್ಟ ಸರ್‍ಕಾರಿ ನೌಕರರೆಲ್ಲ ಅವರವರ ಕುದುರೆಗಳನ್ನು ತಂದು ಓಡಿಸಬೇಕೆಂದೂ, ಗೆದ್ದ ಕುದುರೆಗೆ ಇನಾಮುಕೊಡುವರೆಂದೂ ಅಪ್ಪಣೆ ಬಂದುದರಿಂದ ನಮ್ಮ ಕುದುರೆಗೆ ಓಟದ ಅಭ್ಯಾಸಮಾಡಿಸಬೇಕಾಯಿತು. ಅಣ್ಣನವರು ಬೇರೆ ಯಾವುದೋ ಕೆಲಸದಲ್ಲಿದ್ದರು. ಖಾಸೀಂ ಸಾಹೇಬನೇ ಆ ಕೆಲಸಕ್ಕೆ ಒಪ್ಪಿದನು.

ಶನಿವಾರ ಸವಾರಿ ಹೊರಡಲನುವಾದ ನಮ್ಮ ಖಾಸೀಂ, ಆದರೆ ನಡುದಿನವಾದರೂ ಲಗಾಮು ಜೀನುಹಾಕಲಿಲ್ಲ. ಸುಮ್ಮನೆ ಓಡಾಡಿಕೊಂಡು ರಸ್ತೆಯಲ್ಲಿ ಏನೇನೊ ಗುರುತುಹಾಕಿಕೊಂಡು ಕಾಲಕಳೆಯುತ್ತಿದ್ದ. ನಾನೆಂದೆ-ಏನ್ರಿ ಸಾಹೇಬರೆ ಈ ದಿನ ಬಹಳ ಸಂವರಿಸುತ್ತಿದ್ದೀರಲ್ಲ. ಜಗುಲಿಯ ಮೇಲೆ ಅದೇನೇನೋ ಇದೆಯಲ್ಲ? ಅಮ್ಮಾವರಿಗೆ ಸರ್‍ಕಸ್ ಚಮತ್ಕಾರವೇನಾದರೂ ತೋರಿಸುತ್ತೀರೋ? ಈ ದಿನದ ಸವಾರೀಗೆ ಇನ್ನೂ ಏನೇನೂ ಏರ್‍ಪಾಡಾಗಿಲ್ಲವಲ್ಲ!” ಖಾಸೀಂ ಏನೂ ಮಾತಾಡದೆ ನಗುತ್ತ ಹಿಂದಿನ ಮನೆಗೆ ಹೋಗಿ ಕಾಶಿಯನ್ನು ಕರೆತಂದ. ಆ ದಿನ ಮನೆಯಲ್ಲಿ ಕರಿಗಡಬು ಕರಿದಿದ್ದರು. ಮನೆಯೆಲ್ಲ ಅದೇ ವಾಸನೆ. ಕಾಶಿಗೆ ಆ ದಿನ ಪ್ರಸಾದ ಸಿಕ್ಕಿತ್ತೊ ಇಲ್ಲವೋ ಕಾಣೆ. ಅದು ಕೊಸರಿಕೊಂಡು ಒಳಮನೆಕಡೆಗೆ ನುಗ್ಗಿತು. ಖಾಸೀಂ ಕೈಬಿಟ್ಟು ಆ ಕಡೆ ಬಾಗಿಲಿಗೆ ಬಂದು ನಿಂತು ನಮ್ಮ ತಾಯಿಯವರಾಗಲೀ, ಅತ್ತಿಗೆಯವರಾಗಲಿ ಅಡಿಗೆಮನೆ ಬಾಗಿಲುತೆಗೆದು ಕಾಶಿಗೆ ತಿಂಡಿಕೊಡಲಿಲ್ಲ. ಕಾಶಿ ಅಲ್ಲಿ ಇಲ್ಲಿ ಮೂಸಿ ನೋಡಿ ಗೊರಸಿನ ಪಟ್ಟ ಪಟ್ಟ ಶಬ್ದ ಮಾಡಿ ಹೊರಬಾಗಿಲಿಗೆ ಬಂತು. ಖಾಸೀಂ ಅದನ್ನು ಹಿಡಿದುಕೊಂಡು ಮೆಟ್ಟಿಲು ಇಳಿಸಿದ. ಬೆನ್ನು ಮೇಲೇರಿದ. ಕಾಶಿ ನಡುಗೆ ಹೊರಟಿತು. ಹಿಂತಿರುಗಿ ಬರುವಾಗ ಕುಕ್ಕುಲೋಟದಲ್ಲಿ ಬಂತು, ಮತ್ತೊಮ್ಮೆ ನಾಗಾಲೋಟದಲ್ಲಿ ಹೊರಟಿತು. ಅಗ್ರಹಾರದ ತುದಿಗೆ ಹೊರಟುಬಿಟ್ಟಿದ್ದ ಖಾಸೀಂ, ನಮ್ಮಮ್ಮ ಕರಿಗಡಬು ಕೊಡೋಣ ವೆಂದು ಹೊರಕ್ಕೆ ಬಂದರು. “ಕರಿಗಡಬು ಆಮೇಲೇನೋ, ಅದೇ ಸರಿ! ಓಟ ಮೊದಲು, ಊಟ ಆಮೇಲೆ, ಕರಿಗಡುಬು ಒಳಗಿಡಮ್ಮ, ಕಾಶಿ ಒಂದು ಸುತ್ತು ಬರಲಿ. ಅದೇನೋ ಹೊಸಮಾದರಿ ಓಟ ಕಲಿಸ್ತಿದಾನಂತೆ, ನೋಡೋಣ” ಎಂದೆ.

ಕುದುರೆ ಭರಾಟಿಯಿಂದ ಭರ್ರೆಂದು ಹೊರಟಿತ್ತು. ಅಮ್ಮ ಅತ್ತಿಗೆ ಜಗುಲಿಯಲ್ಲಿ ನೋಡುತ್ತಿದ್ದರು. ಕೇರಿಯ ಜನರೆಲ್ಲ ಹೊರಬಂದು ನೋಡುತ್ತ ನಿಂತರು. ಕುದುರೆ ಹೋಗಿ ಹಿಂತಿರುಗಿ ಬಂತು. “ಏಕ್, ದೋ, ಲಾಫ್” ಎಂದು ಖಾಸೀಂ ಕೂಗಿದುದು ಮಾತ್ರ ಕೇಳಿತು. ಆಗಾಗಲೇ ಕುದುರೆ ಎದುರುಮನೆ ಮಕ್ಕದಲ್ಲಿದ್ದ ತಂತಿ ಕಂಭಕ್ಕೆ ಕಟ್ಟಿದ್ದ ಗಳುವನ್ನು ಹಾರಿ ದಾಟಿಹೋಗಿತ್ತು. “ಅಚ್ಚಾ, ಬೀಬೀ!” ಎಂದು ಖಾಸೀಂ ಮತ್ತೆ ಕೂಗಿದನು. ಮತ್ತೊಮ್ಮೆ ನಾಗಾಲೋಟದಿಂದ ಬರುವಾಗ ಮನೆಯ ಬಳಿ- “ಏಕ್, ದೊ, ಲಾಫ್!” ಎಂದಹಾಗೆ ಕೇಳಿಸಿತು. ಆದರೆ ಕುದುರೆ ಕಾಶಿಯು ತಟಕ್ಕನೆ ನಿಂತುಬಿಟ್ಟು ನಾಲ್ಕು ಹೆಜ್ಜೆ ಮುಂದೆಹೋಗಿ ಹಿಂದಕ್ಕೆ ಬಂದು ಜಗುಲಿಯಮೇಲೆ ತಟ್ಟೆಯಲ್ಲಿಟ್ಟಿದ್ದ ಕರೆಗಡುಬುಗಳನ್ನು ತಿನ್ನುತ್ತ ನಿಂತುಬಿಟ್ಟಿತು.

ಈ ವೇಳೆಗೆ ರಸ್ತೆಯಲ್ಲಿ ಓಡಾಟವೆಲ್ಲ ನಿಂತು, ಎಲ್ಲೆಲ್ಲಿಯವರೆಲ್ಲ ಅಲ್ಲಲ್ಲಿ ನಿಂತು ಜಗುಲಿಗಳಲ್ಲಿ ಗುಂಪು ಒತ್ತರಿಸಿತ್ತು. ಕಾಶಿಯಿತ್ತು, ಆದರೆ ಖಾಸೀಂ ಖಾಸ್ತಾರನೇ ಇಲ್ಲ. ಏನಾದ ಅವನು? ಕುದುರೆಯ ಮೇಲೆ ಇದ್ದ ಹಾಗೇ ಇತ್ತಲ್ಲ, ರಸ್ತೆಯ ಆ ಕಡೆ ಈ ಕಡೆಯೆಲ್ಲ ನೋಡಿದರು ಜನ. ನಾನು ಕೂಗಿಯೇ ಕೂಗಿದೆ-ಉತ್ತರವಿಲ್ಲ. ಕುದುರೆ ಕಾಶಿಯ ಓಟದ ಆರ್‍ಭಟದಲ್ಲಿ ನಮಗೇನೇನೂ ತೋಚಿರಲಿಲ್ಲ. ಅಷ್ಟು ಹೊತ್ತಿಗೇ ಅದೆಲ್ಲಿತ್ತೊ ಮೋಡ, ಮಳೆಬರಲಾರಂಭಿಸಿತು. ಕಾಶಿ ನೆನೆದು ಮೈಕೊಡವಿಕೊಂಡು ಕೂಗುಹಾಕಿತ್ತು. ಆಗ ಯಾರೋ ನರಳಿದಂತೆ ಕೇಳಿಸಿತು. ನಾನು ಜಗುಲಿ ಇಳಿದುಹೋಗಿ ಸ್ವಲ್ಪ ದೂರದಲ್ಲಿದ್ದ ಕಸದ ಡಬ್ಬದಲ್ಲಿ ನೋಡಿದೆ- ಮುದುರಿಕೊಂಡು ಮುದ್ದೆಯಾಗಿ ಬಿದ್ದಿದ್ದ ಖಾಸೀಂ. ಮುಕ ಕೆಳಗಾಗಿತ್ತು. ತೊಟ್ಟಿಯನ್ನು ಉರುಡಿಸಿದೆ. ಬಾಳೆ ಎಲೆ, ಮುತ್ತುಗದ ಎಲೆ, ಕಾಗದ, ಪರಕೆಗಳ ಸಂಗಡ ಈಚೆಗೆ ಬಂದ ಉರುಡಿಕೊಂಡು ಕುದುರೆ ಸವಾರ. ಅವನೊಂದು ಸಾರಿ ನರಳಿ ನಿಟ್ಟುಸಿರುಬಿಟ್ಟ. ಕೂಡಲೆ ಕಾಶಿಯು ಏನೂ ಅರಿಯದವಳಂತೆ ಹತ್ತಿರಬಂದು ಹಸೀ ಎಲೆಯೊಂದು ವಸಡಿನಲ್ಲಿ ಕಚ್ಚಿ ಹಿಡಿದು ಕೊಡವುತ್ತ ನಿಂತು ಕಾಲು ಕೆರೆಯಲಾರಂಭಿಸಿತು.

ಅದರರ್‍ಥವೇನೋ ನಾಕಾಣೆ, ಖಾಸೀಮನಿಗೆ ಅರ್‍ಥವಾಗಿರಬೇಕು. ಅವನೋ ಹಾಗೆ ಹೀಗೆ ಮೈಕೈ ನೀವಿಕೊಂಡ. ನಾನೊಂದಿಷ್ಟು ಮೈಕ್ಕೆ ವರಸಿ ಉಜ್ಜಿ- “ಏಳು ಒಂದಿಷ್ಟು ನೀರಾದರೂ ಹೋಯ್ದುಕೊ ಸಾಕು ಈ ಸರ್‍ಕಸ್” ಎಂದೆ. ನಮ್ಮ ತಾಯಿ- “ಅಯ್ಯೋ ಪಾಪ ಒಂದಿಷ್ಟು ಬಿಸಿನೀರಿದೆ ತಪ್ಪಲೆಯಲ್ಲಿ ಮೈ ಮೇಲೆ ಸುರಿದಾದರೂ ಸುರಿ! ಏನು ಹಾಳು ಕುದುರೆಯೋ!” ಎಂದರು. “ಈ ದಿನ ಯಾರ ಮೋರೆಯೊ ನೋಡಿದ್ದೆ. ಹಾಳು ಮೋರೆ; ಅದಕ್ಕೇ ಹೀಗಾಗಿದೆ. ಏಳಪ್ಪ ಏಳು!” ಹೀಗೆಂದು ಎಬ್ಬಿಸಿದೆ.

ಖಾಸೀಂ ಎದ್ದು ನಿಂತಾಗ ನಮಗೆಲ್ಲ ಬಹಳ ಆನಂದ. ಎಲ್ಲೆಲ್ಲೂ ಗಾಯವಾದಂತಿರಲಿಲ್ಲ. ಅವನು ಹಿಂದುಗಡೆ ಮನೆಗೆ ಹೋದನೆಂದು ನಾನು ಕುದುರೆಲಗಾಮು ಸರಿಮಾಡಿ ಕೊಟ್ಟಿಗೆಗೆ ಕಳಿಸಿಬಿಡೋಣವೆಂದುಕೊಂಡೆ. ಆದರೆ ಅದಕ್ಕೆ ಮುಂಚೆ ಲಗಾಮುಹಿಡಿದು ಅದರ ಕಪಾಲಕ್ಕೆರಡೆರಡು ಏಟು ಕೊಡುತ್ತ ಬುದ್ದಿ ಹೇಳುವ ಸಡಗರದಲ್ಲಿದ್ದೆ. ಅಷ್ಟು ಹೊತ್ತಿಗೆ ಖಾಸೀಂ ಬಂದ. ಎರಡೇ ನಿಮಿಷಗಳಲ್ಲಿ ಜೀನುಹಾಕಿ ಹೊಟ್ಟೆಗೆ ಪಟ್ಟಿ ಬಿಗಿದ, ರಿಕಾಪು ಸರಿಮಾಡಿಕೊಂಡ. ಬರೀ ಕಾಲಿಗೇ ಹಿಮ್ಮಡಿಮುಳ್ಳು ಬಿಗಿದುಕೊಂಡ. ಬಾರುಕೋಲು ತೆಗೆದುಕೊಂಡ. ಕುದುರೆಯ ಮೇಲೆ ಹಾರಿಕೊಂಡ. ಅವನು ಕಾಶಿಯ ಮೇಲೆ ಕೂತಾಗ, ಹಣೆಗೆ ಬಟ್ಟೆ ಕಟ್ಟಿದ್ದು ಕಂಡೆ, ಅದು ರಕ್ತದಿಂದ ಹಣೆಯ ಬಳಿ ನೆನೆದುದನ್ನು ಕಂಡೆ. ಅದರೆ ಆಗ ಅವನನ್ನು ತಡೆಯುವುದು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಪ್ರಯತ್ನ ಪಡಲೂ ಇಲ್ಲ. ಖಾಸೀಂ ಹೊರಟೇಹೋದ ಹಲ್ಲುಮುಡಿ ಕಚ್ಚಿಕೊಂಡು ಕುದುರೆ ನಾಗಾಲೋಟದಲ್ಲಿ ದೌಡು ಹೊಡೆಯಿತು. ಆ ರಸ್ತೆಯನ್ನೇ ಬಿಟ್ಟು ಹೊರಟ. ಹಿಂತಿರುಗಲಿಲ್ಲ.

ಅತ್ತಿಗೆಯವರು-“ಅವರೇ ಸರಿ, ಅದನ್ನು ಮೆತ್ತಗೆ ಮಾಡುವುದಕ್ಕೆ, ಇವನು ಏಕೆ ಹೀಗೇ ವಿಷಪರೀಕ್ಷೆಮಾಡುತ್ತಾನೋ!” ಎಂದು ಒಳಗೆ ಹೊದರು. ನಾನು ಜಗುಲಿಯ ಮೇಲೇ ನಮ್ಮ ತಾಯಿಯವರ ಸಂಗಡ ಮಾತಾಡುತ್ತಾ ಕುಳಿತುಬಿಟ್ಟೆ. ಏನುಮಾಡುವುದಕ್ಕೂ ತೋಚಲಿಲ್ಲ.

ಅರ್‍ಧಗಂಟೆಯಾದ ಮೇಲೆ ನಮ್ಮ ಅಣ್ಣಂದಿರು ಕಾಶಿಯ ಕತೆ ಕೇಳಿ ವ್ಯಥೆಪಟ್ಟು-“ಏನೋ ಕೆಟ್ಟ ಚಾಳಿ ಕಲಿತುಬಿಟ್ಟಿದೆ. ಯಾರ ಪ್ರಾಣಕ್ಕೆ ಸಂಚಕಾರವೋ ಕಾಣೆ!” ಎಂದು ಆಫೀಸು ಕೋಣೆಗೆ ಹೋದರು. “ಏನು ಬಂತಮ್ಮ ಲಕ್ಷ್ಮಿಯ ಹಾಗೆ ಇದ್ದ ಕುದುರೆಗೆ ಈ ದಿನ ಖಾಸೀಮನಿಗೆ ಹೋದ ಜೀವ! ಅದೇನೋ ಎಂತೋ ಬದುಕಿಕೊಂಡ!” ಎಂದು ಜಗುಲಿಯ ಬಳಿಗೆ ಮತ್ತೆ ಹೋದರು.

_”ಯಾರ ಸುದ್ದಿಯೂ ಇಲ್ಲ. ಖಾಸೀಮನಾಗಲೀ ಕುದುರೆ ಯಾಗಲೀ ಯಾರ ಸುದ್ದಿಯೂ ಇಲ್ಲ”-ಎಂದು ಒಳಗೆ ಬಂದು ಉದ್ದಿನ ಬೇಳೆ ಆರಿಸಲಾರಂಭಿಸಿದರು.

ನಮ್ಮ ಅಣ್ಣ ಎಂದರು ಸುಮಾರು ನಾಲ್ಕು ಘಂಟೆ ಸಮಯದಲ್ಲಿ “ಕುದುರೆ ವಾಸನೆ ಬರುತ್ತೆ. ಕಾಶಿ ಬಂತೇನೋ ನೋಡೇ!” ಎಂದರು. ನಮ್ಮತಿಗೆಯವರು ಜಗುಲಿಗೆ ಹೋದರು. ಯಾವ ಸುದ್ದಿಯೂ ಇಲ್ಲವೆಂದು ಹಿಂತಿರುಗಿದರು. ಆದರೆ ಆ ದಿನ ನನಗೇಕೋ ಗಡಿಯಾರ ನೋಡುವಂತೇ ಆಗುತ್ತಿತ್ತು. ನಿಮಿಷಗಳನ್ನೇ ಎಣಿಸುತ್ತಿದ್ದೆ. ನಮ್ಮ ತಾಯಿ ಯವರು ಕೂಗಿದರು-ಲೋ ಯಾರಪ್ಪ, ಒಲೆ ಬಿಡುವಾಗಿದೆ ಹುರುಳಿ ತಂದುಕೊಡಿ, ಕಾಶೀಗೆ ಬೇಯಿಸಬೇಡವೆ ಹುರುಳಿ!”

– “ಕಾಶೀ, ಕಾಶಿಯಲ್ಲಿದೆ ಕಾಶೀ!”-ಎಂದೆ. ಕೂಡಲೆ ಕಾಶಿ “ಹು ಹು ಹೂ!” ಎಂದ ಸದ್ದು ಕೇಳಿಸಿತು. ಹಿತ್ತಲು ಬಾಗಿಲಲ್ಲಿ ಹೋಗಿ ನೋಡಿದರೆ ಕಾಶಿ, ಏನೂ ಅರಿಯದ ಹಸುಳೆಯಂತೆ ಒಳಗೆಬಂದು ಕೊಟಿಗೆಗೆ ಹೋಗಿ ನೀರು ಹೀರುತ್ತ ನಿಂತಿತ್ತು. ನಾನು ಕಟ್ಟಿ ಹಾಕುವ ಮುನ್ನ ಲಗಾಮು ತಗೆದು, ಜೀನುಬಿಚ್ಚಿಟ್ಟು ಒಳಗೆಬಂದು ಹೇಳಿದೆ. ಕೂಡಲೆ ನಮ್ಮಗ್ರಜರು ಜಗುಲಿಗೆ ಹೋಗಿ ಆ ಕಡೆ ಈ ಕಡೆ ನೋಡಿದರು, ಏನೇನೂ ಕಾಣಲಿಲ್ಲ. ಕೂಡಲೆ ಬೈಸಿಕಲ್ ಹತ್ತಿ ಎಲ್ಲಿಯೋ ಹೋದರು. ಇತ್ತ ಕಡೆಯಿಂದ ಸ್ವಲ್ಪ ಸಮಯದಲ್ಲೇ ಒಂದು ಗಾಡಿಬಂತು. ಅದರೊಳಗೆ ಖಾಸೀಂ ಮಲಗಿದ್ದನು. ಗಾಡಿಯಾತನು ಅವನನ್ನು ಇಳಿಸುವುದರಲ್ಲಿದ್ದನು. ಆದರೆ ನಾನು ಮೆಟ್ಟಿಲಿಳಿದು ಹೋಗಿ ನೋಡಿದೆ. ಖಾಸೀಂ ಎಚ್ಚರಿಲ್ಲದೆ ಮಲಗಿದ್ದ. ತಲೆಯೊಡೆದುಹೋಗಿತ್ತು, ಕೈಗಳಿಗೆ ಏಟು ಬಿದ್ದಿತ್ತು. ಹಿಮ್ಮಡಿ ಮುಳ್ಳು ತೊಡೆಗೆ ಚುಚ್ಚಿ ಶರಾಯೆಲ್ಲ ಹರಿದೇ ಹೋಗಿತ್ತು. ನಮ್ಮತಿಗೆ ಮತ್ತು ತಾಯಿಯವರಿಗೆ ಹೇಳಿ ಅದೇ ಗಾಡಿಯಲ್ಲಿ ಖಾಸೀಂನನ್ನು ಆಸ್ಪತ್ರೆಗೆ ಸಾಗಿಸಿದೆ. ಅಲ್ಲಿಗೆ ನಾನು ತಲುಪುದರಲ್ಲೇ ನಮ್ಮಣ್ಣಂದಿರು ಬೈಸಿಕಲ್ಲಲ್ಲಿ ಬಂದು ಕಾದಿದ್ದರು. ಕುದುರೆ ನೋಡಿಕೋ ಹೊಗೆಂದು ನನ್ನ ಕಳುಹಿಸಿದರು. ನಾನು ಮನೆಗೆ ಬಂದು ವಿವರಗಳೆಲ್ಲ ವರದಿಮಾಡಿ, ಕುದುರೆ ನೋಡಹೋದೆ. ಕುದುರೆಗೇನೂ ಆಗಿರಲಿಲ್ಲ.

ರಾತ್ರಿ ಬಹಳ ಹೊತ್ತಿನ ಮೇಲೆ ಅಣ್ಣಂದಿರು ಮನೆಗೆ ಬಂದರು. ನಮ್ಮ ತಾಯಿ ಕರೆದು ಹೀಗೆಂದರು. ‘ಕಾಶಿ ನಮ್ಮನೆಗೆ ಬಂದು ಏಳು ವರ್ಷ ವಾಯಿತಲ್ಲವೆ! ಸರಿ ಅದರ ಋಣಾನುಬಂಧ ತೀರಿತೇನೋ! ನನ್ನ ಯತ್ನ ಏನು ನಡೆಯುತ್ತೆ!’

ನಮ್ಮ ತಾಯಿ-“ಅದೇಕೋ ಹೀಗಾಡುತ್ತಿ?” ಅಣ್ಣನವರು-“ಇಂಥಾ ಕೆಟ್ಟ ಚಾಳಿಯ ಕುದುರೆ ನಮ್ಮಲ್ಲಿಗೆ ಯೋಗ್ಯವಲ್ಲ ಬಿಡು!”

ತಾಯಿ- “ಆದುದಾದರೂ ಏನಪ್ಪ? ಸವಾರಿ ಮಾಡಲೇಬರದಿದ್ದ ಹಠಗಾರ ಆ ಮುಸಲ್ಮಾನನ ಕೈಲಿ ಹಾಗೆ ಮಾಡಿತು. ನಿಂಗೇನಾದರೂ ಮಾಡಿತೇನಪ್ಪ, ಅವನಿನ್ನು ಹತ್ತುವುದೇ ಬೇಡ!”

ಅಣ್ಣ- “ಹಾಗಲಮ್ಮ! ಯಾರಿಗಾದರೇನು? ಎಲ್ಲರಿಗೂ ಹಾಗೇ ಅದು! ಅದು ಬಲು ಕೆಟ್ಟ ಚಾಳಿ. ಜೋರಾಗಿ ಓಡುತ್ತ ಇದ್ದು, ಇದ್ದಕ್ಕಿದ್ದ ಹಾಗೇ ನಿಂತರೆ ಯಾರು ತಾನೆ ಬೆನ್ನ ಮೇಲೆರಬಲ್ಲರು?” ತಾಯಿ-“ಹಾಗಾದರೇನು ಮಾಡುತ್ತಿ!”

ಅಣ್ಣ- “ಮಿಲಿಟಿರಿಯಲ್ಲಿ ಡೂಂಮ್ಸ್ ಡೇ ಮಾಡುತ್ತಾರಂತೆ ಮುಂದಿನ ಶುಕ್ರವಾರ, ಅಲ್ಲಿಗೆ ಕಳಿಸಿಬಿಡುತ್ತೇನೆ.”

ತಾಯಿ- “ಅವರೇನು ಕೊಡುತ್ತಾರೆ?”

ಅಣ್ಣ- “ಅವರೇನೂ ಕೊಡುವುದಿಲ್ಲ! ನಾವೇ ಐದು ರೂಪಾಯಿ ಕೊಡಬೇಕು! ನಮ್ಮ ಕುದುರೆ ಫೋಟೋ ಬೇಕಾದರೆ.”

ತಾಯಿ- “ಹಾಗೆಂದರೇನಪ್ಪ. ಕುದುರೆ ಫೋಟೋ ಯಾತಕ್ಕೆ. ಕುದುರೆಯೇ ಇರುತಲ್ಲ.”

ಅಣ್ಣ- “ಕುದುರೆ ಇರುವುದಿಲ್ಲ. ಅದಕ್ಕಾಗಲೇ ಹದಿನೈದು ವಯಸ್ಸೂ ಆಗಿದ್ದೆ. ಮುಕ್ಕಾಲು ಆಯಸ್ಸೇ ಕಳೆದಿದೆ. ಅದಕ್ಕೆ ಅದನ್ನು ಡೂಂಸ್ ಡೇಗೆ ಕಳಿಸಿಬಿಡೋಣ!”

ತಾಯಿ- “ಅದೇನೋ ಅರ್‍ಥವಾಗುವುದಿಲ್ಲಪ್ಪಾ ನಿನ್ನ ಮಾತು.”

ಅಣ್ಣ- “ಇನ್ನು ಯಾರೂ ಸವಾರಿಮಾಡುವಂತಿಲ್ಲ ಅದರ ಮೇಲೆ. ಅದನ್ನು ಕಳಿಸಿಬಿಡುವುದೇ ಲೇಸು. ಅದು ಇದ್ದರೆ ನಾವು ಇರುವಂತಿಲ್ಲ.”

ತಾಯಿ- “ಇಷ್ಟು ದೊಡ್ಡ ಮನೆಯಲ್ಲಿ, ಇಷ್ಟೆಲ್ಲ ಸಂಪಾದನೆಯಲ್ಲಿ ಅದಕ್ಕೆ ಜಾಗವಿಲ್ಲವೆ? ಅದರ ಪಾಡಿಗೆ ಅದಿರಲಿ.”

ಅಣ್ಣ- “ನಿನಗೆ ತಿಳಿಯದಮ್ಮಾ ಅದನ್ನು ಷೂಟ್ ಮಾಡಿಸಿದರೇ ಕ್ಷೇಮ ಬೇಕಾದರೆ ಅದರ ಫೋಟೋ ಇಟ್ಟು ಕೊಂಡಿರು ಮನೆಯಲ್ಲಿ, ನಿನ್ನ ಪೂಜೆ ಪುರಸ್ಕಾರಕ್ಕೆ.”

ನಮ್ಮ ತಾಯಿಯವರಿಗೆ ಅದೇನೂ ಅರ್‍ಥವಾಗದೆ ತಮ್ಮ ಹತ್ತಿ ಬುಟ್ಟಿ ಎತ್ತಿಕೊಂಡು ಈಚೆಗೆ ಬಂದು ನನ್ನ ಕೇಳಿದರು. ನನಗೆ ಬಹಳ ಸಂಕಟವಾಗಿತ್ತು. ಏನೂ ಹೇಳದೆ ಕಣ್ಣೊರಸಿಕೊಂಡು, ಹಿತ್ತಲಿಗೆ ಹೋಗಿ ಕಾಶಿಯ ಬಳಿ ನಿಂತೆ. ಅದೇಕೋ ಅದರ ಕಣ್ಣಲ್ಲಿ ನೀರಿಳಿಯುತ್ತಿತ್ತು. ನನ್ನ ಮೂಸಿನೋಡಿ ಆಕಡೆ ತಿರುಗಿಕೊಂಡಿತು. “ಹುಲ್ಲು ತಿನ್ನಲಿಲ್ಲ. ಬೆಲ್ಲ ತೋರಿಸಿದರೂ ಮಿಸಿಕಾಡಲಿಲ್ಲ. ಹತ್ತಿರಹೋಗಿ ಮೈ ತಡವರಿಸಿದೆ. ಬೆನ್ನು ತಟ್ಟಿದೆ ಕೈಕಾಲು ತಿಕ್ಕಿದೆ. ಅದರ ತಲೆಯನ್ನು ತಬ್ಬಿಕೊಂಡೆ ನನಗೇಕೋ ಬಹು ದುಃಖವಾಯಿತು. ಬಿಕ್ಕಿ ಬಿಕ್ಕಿ ಅತ್ತು ಬಿಟ್ಟೆ.

ಆ ರಾತ್ರಿ ಊಟದ ಸಮಯದಲ್ಲಿ ನಮ್ಮ ತಾಯಿ ಮತ್ತೆ ಪ್ರಶ್ನೆ ಮಾಡಿದರು, ಸಾಮತಿ ಹೇಳಿದರು. ಅವರಿವರ ವಿಚಾರ ಸೂಚಿಸಿದರು. ಅಣ್ಣಂದಿರು ಅಸೆಂಬ್ಲಿ ಅಧ್ಯಕ್ಷರಂತೆ-“ಹಾ, ಹೂ, ನೋಡಲಾಗುತ್ತೆ, ವಿಚಾರಿಸಲಾಗುತ್ತೆ, ಆಹಾ, ಊಹೂ”-ಎಂತಲೇ ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಸೂಚಿಸುತ್ತ ಊಟಮಾಡಿದರು. ಆದರೂ ನಮ್ಮಮ್ಮ ತೃಪ್ತಿ ಪಡದೆ ಇದ್ದರು. ಮಾರನೆ ಬೆಳಗ್ಗೆ ಆಸ್ಪತ್ರೆಯಲ್ಲಿದ್ದ ಖಾಸೀಂನಿಗೆ ಹೇಳಿಕಳುಹಿಸಿದರು. ಖಾಸೀಂ, ತಾನೆರಡೇ ದಿನ ಬಿಟ್ಟು ಬರುವುದಾಗಿಯೂ, ಅದುವರೆಗೆ ಏನೂ ಮಾತಾಡಬಾರದಾಗಿಯೂ ಹೇಳಿಕಳುಹಿಸಿದನು. ಅಣ್ಣಂದಿರು ನಿಶ್ಚಯಿಸಿ ಬಿಟ್ಟಿದ್ದರು. ಕುದುರೆ ಹೋಗಲೇಬೇಕು. ಬದುಕಿದ್ದರೆ ಅದಕ್ಕೂ ಕಷ್ಟ ನಮಗೂ ಕಷ್ಟ. ನಿಮಗೆ ಲಕ್ಷ್ಮಿಯಂತಾದರೆ ಒಂದು ಬೆಳ್ಳಿ ಪ್ರತಿಮೆಮಾಡಿಸಿಕೊಳ್ಳಿ ಪೂಜೆಮಾಡುವುದಕ್ಕೆಂದು ಕಡೆಯ ಮಾತನ್ನೇ ಖಂಡಿತ ಹೇಳಿಬಿಟ್ಟರು. ಮರಣದಂಡನೆಗೆ ಗುರಿಯಾದವನ ಸಂಗಡ ವಾಸಮಾಡುವಂತೆ ನಾವೆಲ್ಲರೂ ಗಂಟೆಗಳನ್ನೆಣಿಸುತ್ತಾ ಕಾಲಕಳೆಯುತ್ತಿದ್ದೆವು.

ಖಾಸೀಂ ಬಂದ. ಅವನು ನೇರವಾಗಿ ಕುದುರೆಯ ಬಳಿಗೆ ಹೋದ, ಕುದುರೆ ಕಾಲುಕೆರೆದು ಕೂಗಿತು. ಖಾಸೀಂ ಹತ್ತಿರ ಹೋದಹೊರತು ಬಿಡದೆ ಕುಣಿದಾಡಿತು. ಅವನು ಹತ್ತಿರಹೋದ ಕೂಡಲೆ ಮೈಕೈಯೆಲ್ಲ ಮೂಸಿತು. ಮುತ್ತು ಕೊಡುವ ಸಂಜ್ಞೆ ಮಾಡಿತು. ಖಾಸೀಂ ನಿಲ್ಲಲಾರದೆ ಕುಳಿತುಬಿಟ್ಟ, ಕುದುರೆ ಅವನ ಹೆಗಲಮೇಲೆ ಮುಸುಡಿ ಇಟ್ಟು ನಿಂತಿತು. ನಿಂತು ನಿಂತು ಸಾಕಾಗಿ ನಾನು ಒಳಕ್ಕೆ ಹೋದೆ. ನಮ್ಮಣ್ಣನವರು ಊಟ ಮಾಡಿದನಂತರ ಕುದುರೆ ಮನೆಗೆ ಹೋಗಿ ನೋಡಿದರು. ಕುದುರೆಯಾಗಲೀ ಖಾಸೀಮನಾಗಲೀ ಅವರತ್ತ ತಿರುಗಲಿಲ್ಲ. ಧನಿ ಕೊಡಲಿಲ್ಲ. ಅವರು ಸ್ವಲ್ಪ ನಿಂತು ಹಿಂತಿರುಗಿದರು.

ಇನ್ನು ಮೂರು ದಿನಕ್ಕೆ ಕುದುರೆಗೆ ಮರಣದಂಡನೆ, ಖಾಸೀಮನನ್ನು ಎತ್ತಿಹಾಕಿದ್ದಕ್ಕೆ ಮತ್ತು ಮುದಿಯಾದ ತಪ್ಪಿತಕ್ಕೆ. ಇನ್ನು ಐದು ದಿನಕ್ಕೆ ಕುದುರೆ ಜೂಜು, ನೌಕರ ಮಾನೇರ ಕುದುರೆಜೂಜು ಮುಂದು ಹಾಕಲ್ಪಟ್ಟಿತ್ತು. ಆದರೆ ನಮ್ಮ ಕುದುರೆ ಆ ಜೂಜಿಗೆ ಹೋಗುವ ಅದೃಷ್ಟ ಪಡೆದಿರಲಿಲ್ಲ. ಅಯ್ಯೋ! ಕುದುರೆಯೆ! ಎಂಥಾ ಹಣೆಬರಹ ನಿನ್ನದು! ಯಾಕಾದರೂ ನಮ್ಮ ಮನೆಗೆ ಬಂದು, ನಮ್ಮನ್ನೆಲ್ಲಾ ಇಷ್ಟು ಹಚ್ಚಿಕೊಂಡಿದ್ದು, ಈಗ ನಮ್ಮ ಕಣ್ಣೆದುರಲ್ಲೇ ಸತ್ತು ಪ್ರತಿಮೆಯಾಗುವೆಯಲ್ಲ!-ಹೀಗೆಂದು ಬಹಳ ಸಂಕಟಪಟ್ಟು ಕುಳಿತಿದ್ದೆ. ಮತ್ತೆದ್ದು ಹೋದೆ, ವಳಗೆ ನಮ್ಮತ್ತಿಗೆಯ ಬಳಿಗೆ. ಅವರು ದೇವರಮುಂದೆ ಚೀಟಿಹಾಕಿದ್ದರು. ನಾನೊಂದು ತೆಗೆದು ಓದಿ ಹೇಳಿದೆ. ಅದರಲ್ಲಿ “ಸಾವಿಲ್ಲ” ಎಂದು ಸೂಚನೆ ಬಂತು, ನಮ್ಮ ತಾಯಿ ಊರ ಜೋಯಿಸರಲ್ಲಿ ಹೋಗಿ ಕೇಳಿಕೊಂಡು ಬಂದಿದ್ದರು. ಕೆಂಪನೆಯ ಮನುಷ್ಯಬಂದರೆ ಭಯವಿಲ್ಲವೆಂದರಂತೆ. ಅಂತೂ ಕುದುರೆ ಜೀವಕ್ಕೂ ಸಾವಿಗೂ ನಡುವೆ ತೂಗಾಡುತ್ತಿತ್ತು. ನಮ್ಮಣ್ಣಂದಿರೇನೋ ನಿರ್‍ಧಾರಮಾಡಿದ್ದರು. ಅವರ ನಿರ್‍ಣಯಕ್ಕೆ ತಕ್ಕಂತೆ ಮಿಲಿಟರಿ ಆಫೀಸಿನಿಂದ ಪತ್ರ ಬಂದಿತು. ಇವರೂ ತಸಬೀರಿಗಾಗಿ ಐದು ರೂಪಾಯ ಕಳಿಸಿದ್ದರು. ಮತ್ತು ಕುದುರೆ ಪ್ರತಿಮೆಯೂ ಅಗಸಾಲಿಯ ಬಳಿ ಸಿದ್ಧವಾಗುತ್ತಲಿತ್ತು, ನಾಳೆ ಏನೋ, ಎಂತೋ, ಎಂದು ನಿರ್ಧಾರವಾಗಿರಲಿಲ್ಲ.

ಅರ್‍ಧ ರಾತ್ರಿ ಸಮಯದಲ್ಲಿ ಯಾರೋ ಕೂಗಿದಂತಾಯಿತು. ನಾನು ಮುಂಬಾಗಿಲು ನೋಡಿದೆ. ಯಾರೂ ಇರಲಿಲ್ಲ. ನಮ್ಮ ತಾಯಿ ಹಿಂದುಗಡೆ ಬಾಗಿಲಿಂದ ಹೋದರು. ಖಾಸೀಂ ದೀಪ ತರಹೇಳಿದ. ನಾನೂ ಸಂಗಡ ಹೋದೆ, ಕಾಸಿ ಕುದುರೆ ಮಲಗಿತ್ತು. ಖಾಸೀಂ ದೀಪದ ಬೆಳಕಲ್ಲಿ ಕುದುರೆ ಸುಳಿಗಳನ್ನೆಲ್ಲ ಪರೀಕ್ಷೆಮಾಡಿದ. ನಮ್ಮ ತಾಯಿ ಕೇಳಿದರು “ಏನಪ್ಪಾ ಕಾಸೀಂ! ನೀನು ಕೆಂಪಗಿದ್ದೀ ಎಂದು ನಾನು ಕಂಡೇ ಇರಲಿಲ್ಲ. ನೋಡು ನಿನ್ನಿಂದಲೇ ಕುದುರೆ ಬದುಕಬೇಕೆಂತ ಕಾಣುತ್ತೆ. ಸುಳಿಗಳೆಲ್ಲ ಏನನ್ನುತ್ತವೆ ಹೇಳಿಬಿಡು. ನಿನ್ನಿಂದಲೇ ಬದುಕಬೇಕು. ಯಾಕೆಂದರೆ ನಿನಗೆ ಅಪರಾಧಮಾಡಿಯೇ ಅದು ಸಾಯುವಂಥ ಶಿಕ್ಷೆ ಪಡೆದಿದೆ!”

ಆಗ ಖಾಸೀಂ ಎದ್ದು ಕುದುರೆ ಸುತ್ತ ತಿರುಗಿಬಂದು ನಮ್ಮ ತಾಯಿಯವರಿಗೆ ಮುಖ್ಯ ಸುಳಿಗಳನ್ನೆಲ್ಲ ತೋರಿಸಿದ. ಆ ಸುಳಿಗಳ ಪ್ರಭಾವದಿಂದ ಆ ಕುದುರೆ ಆಗ ಸಾಯುವಂತಿರಲಿಲ್ಲ. ತನ್ನ ಯಜಮಾನನಿಗೆ ಒಳ್ಳೇ ಅಧಿಕಾರ ಕೊಡಿಸಿ, ಶಾಭಾಸ್‌ಗಿರಿ ದೊರಕಿಸಿ, ಒಂದು ಮರಿ ಪಡೆದುಕೊಂಡು ಸುಖವಾಗಿರುವಂತೆ ಸೂಚಿತವಾಯಿತು. ಈ ವಿವರಗಳಿಂದ ನನಗೂ ನಮ್ಮ ತಾಯಿಯವರಿಗೂ ಧೈರ್‍ಯ ಬಂತು. ಖಾಸೀಂ ಕುದುರೆಯನ್ನೊರಗಿ ಕಂಬಳಿ ಎಳೆದುಕೊಂಡ. ಮೆತ್ತನೆ ಸೈಜು ಹುಲ್ಲಮೇಲೆ ಕುದುರೆಯಂಥ ಬೆಚ್ಚನೆ ಗೆಳೆಯನ ಸಂಗಡ ನಿದ್ದೆ ಮಾಡುವುದೊಂದು ಸೌಖ್ಯದ ಅನುಭವ. ಒಂದು ಭಾಗದಲ್ಲಿ ತೀವ್ರ ಯುದ್ಧದ ವಾತಾವರಣ, ಇನ್ನೊಂದು ಕಡೆ ಶತಮಾನಗಳ ಹಿಂದಿನ ಸಂಚಾರಿ ಜನಾಂಗದ ಅನುಭವ. ಖಾಸೀಮನಿಗೆ ಎರಡೂ ಒಪ್ಪುತ್ತಿತ್ತು.

ಅಣ್ಣನವರು ಸ್ಥಿರವಾಗಿದ್ದರು ಕುದುರೆಯನ್ನು ಗುಂಡಿನ ಬಾಯಿಗೆ ಕಳುಹಿಸುವುದಕ್ಕೆ. ನಾಳೆ ಕಳಿಸುವುದೆಂದಾಗ್ಗೆ, ಈ ದಿನ ಕುದುರೆ ಪ್ರತಿಮೆ, ಕುದುರೆಯ ಪೋಟೋ ಸಹ ಬಂದವು. ತುಂಬ ಹೂವು, ಹಣ್ಣು, ಓಲಗ ತರಿಸಿ, ಮರವಣಿಗೆಗೆ ಏರ್‍ಪಾಡು ಮಾಡಿದರು. ಅಣ್ಣಂದಿರಿಗೆ ಕುದುರೆ ಹಂಬಲ ಬಹಳವಾದರೂ ಹೊರಗೆ ತೋರಿಸುತ್ತಿರಲಿಲ್ಲ, ಬಹಳ ಬಿಗುಮಾನ. ಆದರೂ ಎದುರಿಗೆ ನಿಂತು ಅಲಂಕಾರಮಾಡಿಸಿದರು. ಹಿಂಗಾಲು ಮುಂಗಾಲು ಕಿವಿ ಬಾಲಗಳಿಗೆಲ್ಲ ಆಭರಣಗಳು, ಮೈಮೇಲೆ ಪೀತಾಂಬರ ಮತ್ತೆ ಬೆಳ್ಳಿ ತಟ್ಟೆಯಲ್ಲಿ ಕದಲಾರತಿ- ಹೀಗೇ ಏನೇನೆಲ್ಲ ವೈಭವ ನಡೆದ ಮೇಲೆ ಯಾರೋ ಕೇಳಿದರು. “ಇದೇನಿರೇ ಇದೆಲ್ಲ!” ನಮ್ಮಮ್ಮ ಹೇಳಿದರು “ಕಾಶಿ ಕನ್ಯೆಯಾಗಿದ್ದಾಳೆ, ಅವಳೀಗ ಮದುವೆಗೆ ಹೊರಟಿದ್ದಾಳೆ. ಅವಳು ವರನ್ನ ಹುಡುಕಿಕೊಂಡು ಹೋಗುವಳಮ್ಮಾ!” ಇನ್ನಾರೋ ಕೇಳಿದರು- “ಏನ್ರೀ ಸ್ವಾಮಿ! ಇದೇನೆಲ್ಲ ವೈಭವ?” ನಮ್ಮ ಅಣ್ಣ ಹೇಳಿದರು. “ನಮ್ಮ ಮಿಲಿಟೆರಿ ಕುದುರೆಗೆ ಇದು ಹುಟ್ಟಿದ ದಿನ. ಅದಕ್ಕೆ……..!” ಹೀಗೆಂದವರು ಒಳಗೆ ಹೋದರು. ಇನ್ನಾರೋ ಕೇಳಿದರು. “ಏನೋ ಸ್ವಾಮಿ ಯಾಕೆ ಇದೆಲ್ಲ?” ನಾನು “ಖಾಸೀಮನ್ನ ಬೀಳಿಸಿತ್ತಲ್ಲ, ಅದಕ್ಕೆ, ಈ ಮೆರವಣಿಗೆ ಇಲ್ಲಿ ನಾಳೆ ಅಲ್ಲಿ, ಕಾಶೀಗೆ, ಮಿಲಿಟರಿಯವರು…….!” ಇಷ್ಟಕ್ಕಿಂತ ಹೆಚ್ಚು ಹೇಳಲಾರದೆಹೋದೆ. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದೆ. ಅವರೇನೋ ತಿಳಿದುಕೊಂಡು ಹೋದರು. ಕುದುರೆ ಬಿಟ್ಟಿರಲಾರದೆ ಅಳುತ್ತಾನೆಂದು! ಅದು ಯುದ್ಧಕ್ಕೆ ಹೋಗಿ ಬಾಂಬೇಬಿದ್ದು ಚಕಣಾ ಚೂರಾಗಿದ್ದರೂ ಪರವಾಗಿರಲಿಲ್ಲ. ಆದರೆ ಹೀಗೆ ಎಲ್ಲಾದರೂ ಉಂಟೆ- ಮುದಿ ಕುದುರೆಗಳ ಸಂಗಡ ನಿಲ್ಲಿಸಿ, ಒನ್, ಟೂ, ತ್ರೀ ಹೇಳಿ ಗುಂಡು ಹೊಡೆದು ಕೊಲ್ಲಿಸುವುದೇ-ಹೀಗೆಲ್ಲ ಸಾವಿರಬಾರಿ ಚಿತ್ರಿಸಿಕೊಂಡು ಬಹುವಾಗಿ ಅತ್ತುಬಿಟ್ಟೆ. ನಾನು ಯಾರಗೋಜಿಗೂ ಹೋಗದೆ ಹಿತ್ತಲ ದಾಳಿಂಬೆ, ಮರದ ಬುಡದಲ್ಲಿ ಕೂತುಬಿಟ್ಟೆ,
ಆದರೆ ಖಾಸೀಮನು ಮೆರವಣಿಗೆಯನ್ನು ಇನ್ನೂ ಸ್ವಲ್ಪ ದೂರ ಸಾಗಿಸಿಕೊಂಡು ಹೋಗಿ, ದೊಡ್ಡ ಅಧಿಕಾರಿಗಳು ಬರುವ ಕಡೆ ನಿಲ್ಲಿಸಿದನಂತೆ. ಅವರು ತಮ್ಮ ಕುದುರೆ ನಿಲ್ಲಿಸಿ, ವಿಚಾರಿಸಿದರಂತೆ. ಅನಂತರ “ಏನಯ್ಯಾ, ನೌಕರ, ಜೂಜಿನಲ್ಲಿ ಗೆಲ್ಲುವುದಕ್ಕೆ ಮುಂದಾಗಿಯೇ ಮೆರವಣಿಗೆ ಮಾಡಿಸಿದ್ದೀಯ! ನಿಮ್ಮ ಯಜಮಾನರಿಗೆ ಹೇಳು. ಈ ಕುದುರೆ ಜೂಜಿಗೆ ಬರಲಿ. ಇದನ್ನ, ಅದೆಲ್ಲಿಗೋ ಬರಕೊಂಡಿದ್ದರಲ್ಲ, ಅಲ್ಲೆಲ್ಲಿಗೂ ಕಳಿಸ ಕೂಡದಂತೆ ಎಂತ ಹೇಳೋ, ಬೇಕೂಫಾ! ಎಂಥಾ ಕುದುರೆ, ಭಲೆ! ನೀನೇನೋ ಬಿದ್ದವನು? ಥೂ ನಿನ್ನ! ಜಿಗಣೆ ಹಿಡಿದ ಹಾಗೆ ಹಿಡಿದಿರ ಬೇಕೋ ಇಲ್ಲೋ! ಇರಲಿ ನಡಿ ನಾನು ಹೇಳಿದೆ ಎಂತ ಹೇಳು. ಈ ಚೀಟಿ ಕೊಡು. ಇದರಲ್ಲಿ ನಿಮ್ಮ ಕುದುರೆ ತೂಕ, ಹೆಸರು, ವಯಸ್ಸು ಬರೆಸಿ ಕೊಂಡು ಬಾ!” ಎಂದು ಅವರು ಹೊರಟು ಹೋದರಂತೆ.

ಆ ಮೆರವಣಿಗೆ ಆದ ನಂತರ, ಆ ಪ್ರತಿಮೆಪೂಜೆಗೆ ಬಂದನಂತರ ಮತ್ತು ಆ ಫೋಟೋ ತೂಗುಹಾಕಿದನಂತರ ಎಲ್ಲ ಬದಲಾಯಿತು. ಸಾವಿನ ಉಬ್ಬ ರಜಲ ತಾನೇತಾನಾಗಿ ಇಳಿದುಹೋಯಿತು.

ಜೂಜಿನಲ್ಲಿ ಗೆದ್ದುದಕ್ಕೆ ಇನ್ನೊಂದು ಮೆರವಣಿಗೆ ಸರ್‍ಕಾರಿ ಖರ್‍ಚಿನಲ್ಲಾಯಿತು. ಕಾಶಿ ಅನಂತರ ಕುಣಿಗಲು ಫಾರಂನಲ್ಲಿ ಗಂಡನನ್ನು ಹುಡುಕಿಕೊಂಡು, ನಾಲ್ಕು ದಿನ ಸುಖವಾಗಿದ್ದು ಖಾಸೀಮನ ಸಂಗಡ ದೇಶವೆಲ್ಲ ತಿರುಗಿ ನಮ್ಮಲ್ಲಿಗೆ ತಿರುಗಿಬಂತು. ನಮ್ಮ ಅಣ್ಣನವರು ಬೈಸಿಕಲ್ ತೆಗೆದುಕೊಂಡರು. ಕಾಶಿಗೆ ಕಾಲಕ್ರಮದಲ್ಲಿ ಕೂಸಾಯಿತು. ಆ ಕೂಸು ಹಾಲುಕುಡಿದು ಚಿನ್ನಾಟವಾಡಿದರೆ ನನಗೆಷ್ಟೋ ಸಂತೋಷ. ನಾನು ಹಿತ್ತಲಲ್ಲೇ ಬಹಳ ಹೊತ್ತು ಕುಳಿತರೆ ನಮ್ಮ ತಾಯಿ ಒಮ್ಮೆ ಕೂಗುವರು. ಮತ್ತೆ ತಾವೇ ಬಂದುನಿಂತು ನೋಡಿ ಹೇಳುವರು. “ನೋಡಪ್ಪಾ ನಿಮ್ಮಣ್ಣ ಕಾಶಿಗೆ ಗುಂಡು ಹೊಡಿಸೇಬಿಟ್ಟ! ಆ, ನೋಡಿದೆಯಾ ! ಈ ಮರೀಗೆ ಗುಂಡೂ ಎಂತಲೇ ಹೆಸರಿಡು. ನೋಡಿದನೋ, ನಿಮ್ಮಣ್ಣ ಮರೀನ, ಏನೋ ಹೆಣ್ಣು ಕುದುರೆ ಸ್ವಲ್ಪ ತಂಟೆ ಮಾಡಿದ್ದಕ್ಕೆ ಗುಂಡು ಹೊಡಿಸಿಬಿಡುತ್ತೇನಮ್ಮ! ಎಂದ. ಯಾರ ಹಠ ಸಾಗಿಸು, ಕಾಶೀ ಏನಂತೀಯೇ! ತೊಟ್ಟಿಲೇ ಬೇಕೇನೇ ಮಗೀಗೆ” ಹಿಂಗೆಂದು ನಗುತ್ತಾ ಹೋಗುವರು. ಹೀಗೆ ಎಷ್ಟೋ ಬಾರಿ ಅವರ ಹಗರಣೆ ಮಾತು ಕೇಳಿದೆ, ನಮ್ಮ ಅಣ್ಣನವರೂ ಕೇಳಿರಬಹುದು, ಕಾಶಿ ಕುದುರೆಯೂ ಕೇಳಿರ ಬಹುದು. ಖಾಸೀಮನಂತೂ ಕೇಳಿಯೇ ಇದ್ದಾನೆ.
* * *

ನಾನು ಮುಂದೆ ಓದುವುದಕ್ಕೆ ಹೊರಟುಹೋದೆ. ಹಿಂತಿರುಗಿದಾಗ ಆ ಸಂಸಾರದ ಕನ್ನಡಿಯೇ ಒಡೆದುಹೋಗಿತ್ತು. ಶಿವರಾಂಪೇಟೆಗೆ ಹೋಗಲು ಮನಸ್ಸಾಗದೆ ಹಿಂತಿರುಗಿದೆ.
* * *

ಇಷ್ಟು ಬರೆದಮೇಲೆ ಖಾಸೀಂ ನನ್ನನ್ನು ಕಾಡಿಸುವುದಿಲ್ಲ. ಅವನ ಕುದುರೆ ನನ್ನ ಮೆದುಳಲ್ಲಿ ಗೊರಸೂರುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೯
Next post ಹೂಡಬೇಡ ಬಾಣ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…