ನಿಂತಿವೆ ಬಿಂಬಗಳು ತಿರುವು ತಿರುವುಗಳಲ್ಲಿ
ನೆಟ್ಟ ನೋಟಗಳಲ್ಲಿ
ಯುಗ ಯುಗಗಳಲ್ಲೂ
ಯಾರಿಗೊ ಕಾಯುತ್ತಿವೆ ದಾರಿ ನೋಡುತ್ತಿವೆ
ಬರಬೇಕಾದವರಿನ್ನೂ ಬಂದಿಲ್ಲವೇ
ಯಾವ ದೇವರ ಶಾಪ ಇವು ಹೀಗೇ ಇರಬೇಕೆ
ಬಿಡುಗಣ್ಣುಗಳ ಕ್ಷಣವೂ ಮುಚ್ಚಲಾರವೇ
ಮುಚ್ಚಿದರೆ ಮರೆವಿನಲಿ ಮರೆತುಹೋಗುವ ಭಯವೆ
ಬಂದವರ ಕಾಣದಿರುವಾತಂಕವೆ
ಗಾಯಗೊಂಡಿವೆ ಮೈ ಪ್ರಸಾಧನಗಳೆಂದೊ ಮಾಯ್ದಿವೆ
ಆದರು ಅದೇನೊ ನಿರೀಕ್ಷೆಯಲ್ಲಿ ಕಾಯುತ್ತಿವೆ
ತ್ರಿಭಂಗಿಗಳು ಮನಮೋಹಕ ಭಂಗಿಗಳು
ಕುಣಿಯಲು ಕಾಲೆತ್ತಿದ ಮಧುರಂಗಿಗಳು
ಕೇಳುವ ಕಿವಿಗಷ್ಟೇ ಕೇಳುವ ವಾದ್ಯಗಳು
ನೋಡುವ ಕಣ್ಣಿಗಷ್ಟೇ ಕಾಣುವ ಸೌಂದರ್‍ಯಗಳು
ಮಾತಾಡಿಸಬಹುದೇ ಈ ಕಲಾವತಿಯರ-ಭಾಷೆಯ ಹಂಗಿಲ್ಲದೇ
ಆಹಾ! ಮಾತಾಡಿಸಲಾರದ ಈ ಅಂತರವೇ ಯುಗಾಂತರ
ನಮ್ಮ ನಡುವೆ
*****