ಅದು ಕೋಟೆಯಂತೆ ಕಟ್ಟಿದ ಗೋಡೆ
ದಪ್ಪ ದಪ್ಪ ಕಪ್ಪು ಕಲ್ಲಿನ ಕೋಟೆ
ಗೋಡೆಯಾಚೆಗೆ ಸ್ವಚ್ಛಂದ ಪಾರಿವಾಳ
ಗೋಡೆಗಳ ಮಧ್ಯ ನಾನು ಸಮಾಧಿ.
ಬದುಕು ಕಬ್ಬಿಣದ ಕಠಿಣ ಹಾದಿ
ಹಿಮಾಲಯದ ಹಿಮನೀರು ನಾನಾದರೆ
ಬಿಸಿನೀರ ಬುಗ್ಗೆಯಂತೆ ಕುದಿವ ನೀರವನು
ಕಿಲುಬುಗಟ್ಟಿದ ಸಂದು ಗೊಂದುಗಳಲ್ಲಿ
ನನಗಿಲ್ಲ ರಕ್ಷಣೆಯ ಭದ್ರ ಬುನಾದಿ.
ಮೂರು ಮಡದಿಯರಿಟ್ಟು
ನಾಲ್ಕನೆಯವಳ ಮೇಲೆ ಕಣ್ಣು ನೆಟ್ಟು
ಆಕಳಿಸಿ ಕಿಟಕಿಯಲ್ಲಿ ಇಣುಕಿದರೂ ಸಾಕು
ಭಯಗೊಂಡು ಚಿಟ್ಟನೆ ಕಿರುಚುತ್ತಾನೆ.
“ಬೇಗಂ ನನ್ನ ಹುಕ್ಕಾ ಎಲ್ಲಿ?
ತಲೆ ಕೆಟ್ಟಿದೆಯಾ ಪರದೆ ಇಳಿ ಬಿಡು.”
ಇಣುಕಿದೆಯಾ ಜೋಕೆ, ತಲ್ಲಾಕಿನ ಕತ್ತಿ
ತೂಗುತ್ತಿದೆ ನೆತ್ತಿ ಮೇಲೆ ಗೊತ್ತಿಲ್ಲವೆ?
ಚಂದ್ರನ ಹಾಲು ಬೆಳದಿಂಗಳಿಲ್ಲ
ವಸಂತನ ಆಗಮನದ ಸಂಭ್ರಮವಿಲ್ಲ
ನಿಷೇಧದ ಗೋಡೆಗಳ ಮಧ್ಯದಿಂದ
ನಿರಾಸೆಯ ಗೂಡಿನ ಬಂಧಿಸಿ ಒಮ್ಮೆ
ಕೊಡವಿ ಕೇಳಿದಳು “ಹೆದರಿಸದಿರು ನನಗೆ
ತಲ್ಲಾಕಿನ ಕತ್ತಿಯನು” ತಿವಿದು.
ಪಹರೆ ಗೋಡೆಗಳ ಕಲ್ಲು ಶಿಥಿಲವಾಯ್ತು
ಸೋತ ನನ್ನ ಕೈಗಳಲ್ಲೀಗ ಶಕ್ತಿ ಸಂಚಾರವಾಯ್ತು
ಬಂಧನ ಕಳಚಿ ತಿರುಗಿ ನಿಂತು ಕೇಳಿತು.
ನಿನಗೆ ಜನ್ಮ ಕೊಟ್ಟ ತಾಯಿ ನಾನು
ಹೆದರಿಸದಿರು ತಲ್ಲಾಕಿನ ಕತ್ತಿಯಿಂದ
ನೀನವಳ ಮಡಿಲ ಕೂಸು ತಾನೇ.
*****