ಗುಡಿಯಲ್ಲಿ ನಡೆದಿರ್ದ್ದ ಪೂಜೆಯೇ ಸಿರಿಯಿಂದು
ಮರೆಯಾಗಿದೆ-ಎಲ್ಲ-ಮರೆಯಾಗಿದೆ!
೧
ಅಳತೆಯಿರದನಿತು ದೀವಿಗೆಯೋಳಿ ತೊಳತೊಳಗಿ,
ಬೆಳಗಿಸಿದುವಂದು ದೇವಿಯ ವರದ ಮೂರುತಿಯ ;
ಕಳೆದುಕೊಂಡಿಂದು ತಿಳಿನೇಯವನು ದೀವಿಗೆಗ-
ಳಿಳಿದು ಕರ್ಗತ್ತಲೆಯು ಕವಿದು ಮುಸುಕಿದೆ ಗುಡಿಯ.
ದೇವಿಯಾ ವರದಮೂರುತಿ ಕಾಣದಿಹುದು;
ಭಾವುಕರ ಬಳಗವದು ಬೆದರಿ ಚೆದರಿಹುದು!
೨
ಅರಳುಗಳ ಕರ್ಪುರಾರತಿಯ ಧೂಪದ ಕಂಪು
ಬೆರೆತು ಸುಳಿಗಾಳಿಯೋಳು ಹರಿದು, ದೂರದ ಜನರ
ಕರೆದೊಯ್ಯುತ್ತಿರಲಿಲ್ಲವೇ ಬಳಿಗೆ ? ಇಂದೇನು ?
ಸರಿದಿರುವ ಸೊಡರುಗಳ ಸೊವಡುಗಂಪದು ಹರಡಿ,
ಹೊರ- ಹೊರಟು ಮೂಗುಸೆಲೆ ಕೊರೆಯುತಿಹುದು,
ನೆರೆಯವರನೂ ದೂರ ಸರಿಸುತಿಹುದು !
೩
ಅಂದಿನಾ ಪೂಜೆಯವಸರದ ಮಂತ್ರಗಳೇನು !
ಒಂದೆ ದನಿಯೊಳೆ ಮೊರೆವ ಭಾವಗೀತಗಳೇನು !
ದುಂದುಭಿಯ ಡೋಳು-ಜಾಗಟೆಗಳಬ್ಬರವೇನು !
ಇಂದದೊಂದೂ ಇಲ್ಲ, ಎಲ್ಲೆಲ್ಲಿಯೂ ಮೌನ !
ನುಡಿಯುತಿಹ ಹಲ್ಲಿಗಳ ಲೊಟಲೊಟೆಂಬುಲುಹು,
ಅಡಿಗಡಿಗೆ ಮೌನತೆಯ ಸೀಳಿ ಹೊರಡುವುವು!
೪
ಹಾಲಕ್ಕಿಯೊಂದು ಹುಮ್ಮಸದಿ ಕಿಲಬಿಲಿಸುತಿದೆ ;
ಮೂಳನಾಯೊಂದು ಮನಬಂದಂತೆ ಬೊಗಳುತಿದೆ ;
ಕೇಳುತಿದೆ ಅತ್ತಿತ್ತ ನರಿಗಳೂಳಾಟ; ಬಿರುಗಾಳಿ ಬಿರು-
ಗಾಳಿ ಬಿರು-ಬಿರ್ರೆಂದು ಮೊರೆಮೊರೆದು ಬೀಸುತಿದೆ !
ಪೂಜೆಯವಸರದ ಮಂತ್ರ ಸ್ವನಗಳಿಲ್ಲ….
ಓಜೆಯಲಿ ಮೆರೆವ ವಾದ್ಯಧ್ವನಿಗಳಿಲ್ಲ!
೫
ಓ! ಅರಿದಿದೇನಿದು?… ದೇವಿಯಿರುವ ದೆಸೆಯಿಂದಿತ್ತ,
ಬರುವ ಗಾಳಿಯೊಳು ಬೆರೆತಿರುವ ಬಿಸಿಯುಸಿರೇನು ?
ಬಿಸಿಯುಸಿರ ಬೆಂಬಳಿಸಿ ಬರುವ ದನಿ ಯಾರದಿದು ?
ಬರಿಯೆ ದನಿಯಲ್ಲ; ಹುರುಳಿನ ನುಡಿಯ ಕೂಡಿಹುದು!
ಗಾಳಿ ತರುತಿಹ ನುಡಿಯಿದೇನೆಂಬಿರೇನು?
ಕೇಳಿ-ಕೇಳಿರಿ, ನಸುವೆ ಕೊಟ್ಟು ಕಿವಿಗಳನು !
೬
“ನಿತ್ಯ ಪೂಜೆಯು ಬೇಕು ! ನಿತ್ಯ ಪೂಜೆಯು ನನಗೆ !
ಕುತ್ತಗಳ ಕಳೆದುಕೊಳುವಾಶೆಯಲ್ಲವೆ ನಿಮಗೆ?
ನಿತ್ಯ ಪೂಜಿಸಲು ಬೇಸತ್ತರಾಗುವುದೇನು?
ನಿತ್ಯ ಪೂಜೆಯು ಬೇಕು; ನಿತ್ಯ ಪೂಜ್ಯಳು ನಾನು!
ಕತ್ತಲೆಗೆ ಹೆದರದಿರಿ ಕಾಲಿಡಿ ಮುಂದೆ,
ಒತ್ತರದಿ ಬನ್ನಿರೆಲ್ಲರು ಇಲ್ಲಿಗಿಂದೆ!
ಮರ-ಮರಳಿ ಸಲ್ಲಿಸಿರಿ ವೀರಪೂಜೆಯನೆನಗೆ,
ವರವಾವುದನು ಕೇಳಿ ಕೊಡುವೆ ನಾ ನಿಮಗೆ!”
*****