ಕತ್ತಲವೆ ಇತ್ತು ಇನ್ನೂನು ದಾರುಣಾರಣ್ಯದಂತೆ ಎಲ್ಲ
ಅದರಲ್ಲಿ ಅಲ್ಲಿ ಬದಲಿಲ್ಲ ಇಷ್ಟು ಅದರಾಶೆ ಕೂಡ ಇಲ್ಲ
ಸತ್ತ ಶಾಶ್ವತಿಯ ಸಾಯದಿರುವ ನಿಃಸತ್ತ್ವ ಭೂತವಲ್ಲ!
ಕರಿಕನಸು ಇರುವ ಬರಿಮನೆಯ ಕೆಳಗೆ ಹುಸಿಬದುಕು ಮಾಡುವವರು
ಇಲ್ಲೆಂಬ ನಾಡಿಗೆತ್ತೇನೊ ಹೊರಟ ಆ ಕುರುಡು ದಾರಿಯವರು
ಗೊತ್ತಿಲ್ಲ ಎತ್ತ ಗುರಿಗೆಲ್ಲೆಯಿಲ್ಲ, ಓ ಹೊರಟೆ ಹೊರಟರವರು
ತಮದಿಂದ ಹೊರಟು ಅತಿತಮದ ಒಳಗೆ ಹುಸಿಮರಣದೊಳಗೆ ಮರಣ
ಕಡು ಅಸತ್ತಿನುದ್ದೇಶರಹಿತ ಬಯಲಲ್ಲಿ ನಡೆದು ಚರಣ
ನಿರಾಕಾರ ನಿರ್ಗಮನಶೂನ್ಯ ನಿಸ್ತಬ್ಧನಿರಾವರಣ
ಪರಿಣತಿಯು ಇರದ ಹತವೀರಪ್ರಭೆಯ ಗತಿಗೆಟ್ಟ ಛಾಯೆ ಬಳಲಿ
ಆಶೆಯಳಿದ ನಿಶೆಯಲ್ಲಿ ಬಿಟ್ಟುಬಿಡದವರ ಹೆಜ್ಜೆಗಳಲಿ
ಕಳೆದ ಜಯದ ಉಳಿದೊಂದು ಸ್ಮೃತಿಯ ತೆರ ಬರುತಲಿತ್ತು ತೊಳಲಿ
*****