(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ)
೧
ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ
ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ
ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ,
‘ಮಲಗಿದ ಜನರೇಳುವ ಮೊದಲು
ಮರೆಯಾಗುವೆ’ ನೆಂದು ಜವದೊಳು
ಪಡುವಲ ಸೀಮೆಯ ಬೆಟ್ಟದೊಳು
ಅಡಗಿದನೆಲ್ಲಿಯೊ ತೋಹಿನಲಿ-ಒಡನಿರುವ ಕತ್ತಲೆಯನಗಲಿ!
೨
ಚಿತ್ತವನು ಸೆಳೆದ ಚಂದಿರನು-ಎತ್ತಲೊ ಹೋಗಿರುವುದ ಕಂಡು
ಮತ್ತಾರನಾಶ್ರಯಿಪನೆಂದು ಅತ್ಯಂತ ಕಾತರವನುಂಡು,
ಎತ್ತಲೂ ಸುತ್ತುತಿರಲಂದು – ಹೊತ್ತಿನ ಬರವನು ಬಗೆಗೊಂಡು,
ಅವನೊಡನೆ ಬೆರೆಯಬೇಕೆಂದು
ತವಕದಿಂದ ಕತ್ತಲೆ ಬಂದು
ದಿವಸದೆರೆಯನೆಡೆ ನಿಲಲಂದು
ಕಣ್ದೆರೆದ ಕನಲಿ ಸುಚರಿತನು-ಕೆಂಡಪರಿ ಕಂಡನಾಕೆಯನು.
೩
ಭಾಸ್ಕರನ ಕೋಪವನ್ನರಿದು-ತಸ್ಕರರ ಕೆಳದಿ ಬೆದರಿದಳು.
ಮಿತ್ರನ ಮೊಗ ನೋಡಲು ಹೆದರಿ – ಸುತ್ತುತ ಗಿಡ-ಮರ-ಮೆಳೆಗಳೊಳು
ಮೈಗರೆದಳೊಂದು ತೋಹಿನೊಳು-ಹುಲಿ, ಸಿಂಗಗಳಿಹ ಕಾಡಿನೊಳು
ಕತ್ತಲೆಯ ದುಃಸ್ಥಿತಿಯನರಿದು,
ಆಕೆಯ ಅವಿವೇಕವ ನೆನೆದು,
ಕಾಡಿನರಳುಗಳು ಬಾಯ್ದೆರೆದು,
ಹಿರಿನಗೆಯನಂದು ಹೊಂದಿದುವು-ಸುರಭಿಯನೆಲ್ಲೆಡೆ ಹರಡಿದುವು.
೪
ನಿಜ ನೇಹದಿನಿಯ ನೇಸರಿನಾ-ಪಾವನತೆಯನ್ನು ತಾ ನೋಡಿ,
ಕಮಲಿನೀ ರಮಣಿ ಪ್ರೇಮದಲಿ-ಮೆಲುನಗೆಮೊಗ ಮೇಲಕೆ ಮಾಡಿ,
ಪತಿಯನ್ನು ಕೃತಜ್ಞತೆಯಿಂದ ನಿರುಕಿಸುತ ನಲಿವೊಳೀಜಾಡಿ,
‘ಪರಸತಿಯನಪೇಕ್ಷಿಸದವನು
ನಿಜಸತಿಯ ನಿಚ್ಚದೊಲುಮೆಯನು
ದೊರೆಕಿಸಿ ಚಿರಸುಖವೊಂದುವನು!’
ಎಂದಿಹ ನನ್ನಿಯ ನುಡಿಗಳನು-ಸಾರಿದಳು ಧಾರಿಣಿಗೆ ತಾನು !
೫
ವಲ್ಲಭನಿಲ್ಲದ ವೇಳೆಯಲಿ-ತನ್ನೆಡೆ ಬಂದಾರಡಿಗಳನು
ಹದಿಬದೆಯ ಹುರುಳಿನಲಿ ಬಿಗಿದು ಬಂಧಿಸಿರಲು ಕಮಲಿನಿಯದನು
ಕಾಣುತ, ಕರುಣದಿ ಭಾಸ್ಕರನು-ಕಮಲಿನಿಗೆ ಇಂತು ಉಸುರಿದನು :
‘ಬಂಧಿಸಿದಾ ಮಧುವಾಳಿಯನು
ಬಿಡು ಬಿಡು ಕೊಡು, ಗಡ ಮೋಕ್ಷವನು
ತಾಳಿಹವು ತಕ್ಕ ಶಿಕ್ಷೆಯನು…
ಸಾರ್ಥಕಗೊಳಿಸಲು ಬೇಕದನು-ಸುಮನೆಯೆಂಬ ತವನಾಮವನು;
೬
ನಲ್ಲನ ಇನಿನುಡಿಯಾಲಿಸುತ – ಫುಲ್ಲಾನನೆ ಮರುನುಡಿ ಕೊಡದೆ,
ಹೃದಯದಿ ಕರುಣದ ರಸ ಸುರಿಯೆ- ಮಧುವಾಳಿಯ ನಸು ನೋಯಿಸದೆ,
ಬಿಡುಗಡೆ ಕೊಡಲಾ ಬವರಗಳು-ತಮ್ಮಯ ಗುಂಜಾರವದಿಂದೆ-
ವನಜಾಪತಿಯುಪಕಾರವನು
ನೆನೆ-ನೆನೆದು ಹೊಂದಿ ಹರುಷವನು
ತೋರಿಸಲು ತಮ್ಮ ಹೃದಯವನು
ಇಂಚರದಲಿ ಕೊಂಡಾಡಿದುವು ಮಿತ್ರನ ಮಹಿಮೆಯ ಹಾಡಿದುವು.
೭
ತನ್ನಯ ಕಟ್ಟಳೆ ಮಾರದೆಯೆ-ಬಂಡುಣಿಗಳನ್ನು ಬಿಡಲಂದು
ಮೊಗದಲ್ಲಿ ಮೋದವನು ತಳೆದು-‘ಭಲೆಭಲೆ ಶರಜಿನಿಸತಿ’ ಎಂದು
‘ಇರುಳೆಲ್ಲ ನಿನ್ನ ನಾನಗಲಿ-ಮರುಗಿಸಿ ಕುದಿದೆನು ಮನನೊಂದು’
ಎಂದೀತೆರ ನಯನುಡಿಯಾಡಿ,
ಪ್ರೇಮಾಮೃತವನು ತಾನೂಡಿ,
ತನ್ನಯ ಕೈ ಮುಂದಕೆ ಮಾಡಿ
ಬಿಗಿದಪ್ಪಿದ ಬಾನ್ಮಣಿಯವನು- ತಾವರೆವೆಣ್ಣನು ತಣಿಸಿದನು.
೮
‘ನಿನ್ನೊಲುಮೆಗೆ ಸಲುವ ಫಲವನು-ಚೆಲುವೆಯೆ ನಿನಗೀಯದೆ ಬಿಡೆನು ;
‘ಸತಿಯರಿಗಹಿತವು ನಿಜಪತಿಯು-ಬಯಸುವುದು ಪರಾಂಗನೆಯನ್ನು
‘ಅದರಿಂದೆ ಅನ್ಯರೆನ್ನನ್ನು -ನಿಟ್ಟಿಸಲು ಅವರ ಕಂಗಳನು….’
‘ಸೀದು ಮಾಳ್ಪೆ ಕಣ್ಣಿಲಿಗಳನು,
‘ಪಾವಿತ್ರ್ಯದ ಬೆಲೆ ತೋರುವೆನು!’
ಇಂತೊರೆದು ಸರಸಿಜಾತೆಯನು….
ಸಂತಸದಲಿ ಬಾಯ್ದೆರೆಸಿದನು-ತಾನುಗ್ರತೆಯನ್ನು ವಹಿಸಿದನು.
*****