ಮುಗಿಯಿತೆ ನಾಟಕವು
ಪರದೆ ಕೆಳಕ್ಕಿಳಿಯಿತೆ
ಪ್ರೇಕ್ಷಕರೆದ್ದು ಹೋಗಿಯಾಯಿತೆ
ನೇಪಥ್ಯ ಬರಿದಾಯಿತೆ
ವೇಷ ಕಳಚಬೇಕು ನಟರು
ಮುಖವ ತೊಳೆಯಬೇಕು ಅವರು
ತೊಳೆದರೂನು ಬಣ್ಣವು
ಮೋರೆಯಲ್ಲಿ ಇನ್ನುವು
ಇನ್ನೂ ಏನೊ ಉಳಿದಂತೆ
ಕತೆಯಿನ್ನೂ ಮುಗಿಯದಂತೆ
ಮಾತು ಅರ್‍ಧವು
ಮಾತಿನರ್‍ಥ ಅರ್ಧವು
ಯಾವುದು ತಾನೆ ನಾಟಕ
ಯಾವುದು ತಾನೆ ಜೀವನ
ಯಾವುದರಲಿ ಯಾವುದೆಂದು
ತಿಳಿಯದಂತು ಗೊಂದಲ
ಕೊನೆಯಾದರೂ ಕೊನೆಯಿಲ್ಲ
ಅಂಕ ದೃಶ್ಯ ಮರೆತಿತಲ್ಲ
ಮನಸು ಆಗಲೇ
ರಂಗ ಮಧ್ಯದಲ್ಲೇ
ಬಣ್ಣ ಬದಲಾಯಿಸಿ
ವೇಷ ಬದಲಾಯಿಸಿ
ಸತ್ತವನೆದ್ದು ಬರಬಹುದೆ
ಮಿಂಚುವನೆ ಇಲ್ಲ ಕುಸಿಯುವನೆ
ಅಂಕ ಬದಲಾಗುವುದು
ನಾಟಕ ಬದಲಾಗುವುದು
ನೋಡುವ ಜನರು ಬದಲಾಗುವರು
ಬದಲಾಗದಿರುವರೇನು ಆಡುವವರೂ ಆಡಿಸುವವರೂ
ಇದ್ದರದಕೆ ದೃಶ್ಯವೆಂದು
ಇಲ್ಲದಿದ್ದರೆ ಅದೃಶ್ಯವೆಂದು
ನಟರ ನಟ ನಟರಾಜನೆ
ದಿಗ್ದರ್‍ಶಕ ನೀ ಸದಾಶಿವ ಸದಾ ಕಣ್ಮರೆ
*****