ಉತ್ತರ ಕರ್ನಾಟಕದ ಪ್ರತಿ ಊರಿನಲ್ಲಿಯೂ ಗುಡಿ, ಕಟ್ಟೆ, ರಸ್ತೆ ಎಲ್ಲೆಂದರಲ್ಲಿ ಬೇವಿನ ಮರವನ್ನು ಬೆಳೆಸುತ್ತಾರೆ. ಇದು ಅಲ್ಲಿಯ ಸೆಕೆಯುಳ್ಳ ಕಾಲದ ಜನಕ್ಕೆ ತಂಪೆರೆಯುವ ಮರವೂ ಹೌದು. ಜನಪದ ಕವಿಕೂಡ “ಬ್ಯಾಸಗಿ ದಿವಸಕ ಬೇವಿನ ಮರತಂಪ, ಭೀಮಾರತಿ ಎಂಬ ಹೊಳೆತಂಪ” ಎಂದು ಪದವನ್ನೇ ಕಟ್ಟಿದ್ದಾನೆ. ಈ ಗಿಡದಿಂದಾಗುವ ಅಮೂಲ್ಯ ಉಪಯೋಗಗಳನ್ನು ಕೂಡ ಉತರ ಕರ್ನಾಟಕದ ಜನಕ್ಕೆ ಗೊತ್ತಿದೆ. ಬಾಣಂತಿಯರಿಗೆ ಇದನು ಬಳಸುತ್ತಾರೆ. ಇದರ ವಾಸನೆ ಬಡಿದರೆ ಕ್ರಿಮಿಕೀಟಗಳು ಹತ್ತಿರಬರುವುದಿಲ್ಲ, ಜತೆಗೆ ಈ ಮರವನ್ನು ಕಡಿದಾಗ ಮನೆಗೆ ತೊಲೆ ಸೌದೆಗಳಿಗೆ ಬಳೆಸಬಹುಡು. ಇದರಬೀಜಗಳು ಹಣ್ಣಾಗಿ ಉದುರಿದಾಗ ಸಂಗ್ರಹಿಸಿ ಇದರಿಂದ ಬೇವಿನ ಎಣ್ಣೆಯನ್ನು ತಯಾರಿಸಿ ಔಷಧಿ ಮಾಡುತ್ತಾರೆ. ಈ ಕಾರಣವಾಗಿ ಬೇವಿನಮರವನ್ನು ಸಹಜವಾಗಿ ಮನೆಮುಂದೆ ಬೆಳೆಸಲಾಗುತ್ತದೆ. ಇದರಿಂದ ಬೀಸಿಬರುವ ತಂಗಾಳಿ ಇನ್‌ಫ್ಲೂಯಾಂಜಾ ದಂತಹ ಸಾಂಕ್ರಾಮಿಕ ಜಾಡ್ಯವನ್ನು ಹೋಗಲಾಡಿಸುತ್ತದೆ. ಶೀತ ನೆಗಡಿಗೆ ಇದರ ವಾಸನೆ ಹೇಳಿ ಮಾಡಿಸಿದ ಔಷಧಿ. ಇದರ ಎಲೆಗಳ ಹೊಗೆಯನ್ನು ಮೂಗಿಗೆ ಹಿಡಿದರೆ ಸೀತದಂತಹ ಕಾಯಿಲೆಗಳು ದೂರವಾಗುತ್ತವೆ. ಇದರ ಕಡ್ಡಿಯನ್ನು ಬ್ರೆಶ್‌ನಂತೆ ಮಾಡಿ ಪ್ರತಿದಿನ ಹಲ್ಲುಗಳನ್ನು ಉಜ್ಜುತ್ತಾ ಬಂದರೆ ವಸಡುಗಟ್ಟಿಯಾಗುವುದಲ್ಲದೇ ದಂತಕ್ಷಯ ಮುಂತಾದ ಬಾಯಿ ಹುಣ್ಣುಗಳು ವಾಸಿಯಾಗುತ್ತವೆ. ಹಲ್ಲುಗಳೂ ಸಹ ಹೊಳೆಯುತ್ತವೆ.
ಬೇವಿನ ಎಲೆ, ಕಾಯಿ, ಕಡ್ಡಿ ಎಲ್ಲವೂ ಔಷಧಿ ಗುಣವನ್ನು ಹೊಂದಿರುತ್ತದೆ. ಬೇವಿನ ಎಲೆಗಳನ್ನು ಆಹಾರಧಾನ್ಯಗಳಲ್ಲಿ ಇಲ್ಲವೆ ಪುಸ್ತಕಗಳಲ್ಲಿರಿಸಿದರೆ ಅವು ಹುಳಗಳನ್ನು ದೂರ ಇರಿಸುತ್ತವೆ.
*****