ಮನುಜ ಕೋಟಿಯ ತಣಿಸಿ ಸವಿಯಮೃತಮನ್ನುಣಿಸಿ
ಬೆಳೆಸುತಿಹ ತಾಯಾಗಿ ಬೆಳಕು ಹರಿಸಿ.
ಎಲ್ಲ ದೇವತೆಗಳನು ಎಲ್ಲ ಜ್ಞಾನಂಗಳನು
ಧರ್ಮದೇವತೆಯಾಗಿ ನೀನು ಧರಿಸಿ
ಸಕಲ ಬೆಳೆಗಳ ಬಿತ್ತು ಸಕಲ ಜೀವದ ಮುತ್ತು
ನಿನ್ನಿಂದ ಬಾಳ್ಮೊದಲು ಬದುಕು ಸರಸಿ
ರಸದುಂಬಿ ಮೈಯೆಲ್ಲ ರಸಗೆರೆವೆ ಜಗವೆಲ್ಲ
ರಸವೊಡಿ ಕಾಪಿಡುವೆ ಸುಖವ ಬೆಳೆಸಿ.
ಆವ ಭೇದವ ಕಾಣ ಸಕಲ ತತ್ವದ ಜಾಣೆ
ಏಕಮೇವಾದ್ವಿತಿಯಮೆಂಬುದರಿತು
ನಿನ್ನ ನೋಡಲಿ ಬಿಡಲಿ ಕಾಪಿಡಲಿ ಹಿಂಸಿಸಲಿ
ಗಣಿಸದದ ಪಾಲ್ಗರೆವೆ ಕರೆದರೆನಿತು
ತಾಯಿ ಯೋಗಿನಿ ನೀನು ಅನಪೇಕ್ಷಯಿಂ ಪೊರೆವೆ
ನೆಲದ ಸುಧೆಯಂ ಹೀರಿ ಕೊಡುವುದರಿತು
ನಿನ್ನ ಮೈರಸದಂತೆ ನಿನ್ನ ಗುಣ ಹಸನಹುದು
ದಿವಮಾದುದು ನಡತೆ ಸುಗುಣವೆನಿತು.
ಓ ದೇವಿ ನಿನ್ನ ಮೈ ಅಮೃತಧಾರೆಯ ಸುರಿಸು
ಸುಜ್ಞಾನ ಸಂಪತ್ತು ಪೌರುಷಂಗಳ ಬೆಳಕು.
*****