ಘಾತಕ್ಕೊಳಗಾಗಿ ಪತರುಗುಟ್ಟುತ್ತಿದ್ದ
ನನ್ನ ನಿರಾಕಾರ ಮಾನಕ್ಕೆ
ಸೊಕ್ಕೆಂಬುದು ನೀವಿಟ್ಟ ಹೆಸರು.
ಎತ್ತೆತ್ತಲಿಂದಲೂ ನೀವೆಷ್ಟೇ ಬೆಂಕಿ ಇಟ್ಟರೂ
‘ಅದು’ ದಹಿಸಿ ಹೋಗದ್ದಕ್ಕೆ
ಕ್ಷಮೆ ಇರಲಿ ನನಗೆ.
ಗವ್ವೆನುವ
ಕತ್ತಲ ಗವಿಯೊಳಗೆ
ನನಗೆಂದೇ ಹಚ್ಚಿಟ್ಟ
ಆ ದೀಪಕ್ಕೆದುರಾದ
ವಿಲಗುಟ್ಟುವ ನನ್ನ ಮಾನ
ಸುಮ್ಮನಿದ್ದರೂ ಇರಲಾಗದೇ
ಮಿಡುಕುತ್ತಾ ಹೊಯ್ದಾಡುತ್ತಿದೆ
ಕಿಚ್ಚಿಗೆ ಬೆಂಕಿಯಾಗಿ
ಉರಿದು ಹೋಗಬಹುದಿತ್ತು….
ನುಡಿಯ ತುಂಬಿ ಬಸಿರಾಗಿ
ಇಳಿಯತೊಡಗಿದೆ ದೀಪದಾಳಕ್ಕೆ
ಮೊದಲು ಎಣ್ಣೆ ಬೋಗುಣಿಗೆ
ನಿಧಾನಕ್ಕೆ ಬತ್ತಿಗೆ
ಕೈ ಬಡಿದು ಈಜುತ್ತಾ
ಬತ್ತಿಯನ್ನೇರಿ ತುತ್ತತುದಿಗೆ
ಉರಿಯುತ್ತಿದ್ದ ಸೊಡರಿನ
ಮಧ್ಯಬಿಂದುವಿಗೆ.
ಉರಿಯಲೇಬೇಕಿದೆ ನನಗೆ
ಬೆಂಕಿಯಾಗಲ್ಲ ದೀಪವಾಗಿ
ರೆಪ್ಪೆ ಅಲುಗದಂತೆ ಉರಿಯಬೇಕಿದೆ
ದೀಪವೇ ಆಗಿ.
*****