೧
ಅಲ್ಲಿ ಗಾಢ ವಾಸನೆಯ
ಸತ್ತ ಒಣಕಲು ಮೀನು
ಕತ್ತರಿಸಿದ ಹೊಗೆಸೊಪ್ಪಿನ
ಮುರುಕಲು ತುಂಡು
ಸುಟ್ಟ ಸುಣ್ಣದ ಕಲ್ಲು
ತುಂಡರಿಸಿ ಬಿದ್ದ
ಒಣ ಅಡಿಕೆ ಚೂರು
ಗರಿಗುಡುತಿರುವ
ಒಣ ಮೆಣಸು
ಜಜ್ಜಿ ಬೀಜ ಬೇರ್ಪಡಿಸಿದ
ಹುಣಸೆ
ಬಿಕರಿಗೆ ಬಿದ್ದಿವೆ ಸತ್ತು
ಈ ಜೀವಂತ ನೆಲದ ಮೇಲೆ
೨
ಇದರೊಂದಿಗೇ ಸದ್ದಿಲ್ಲದೇ
ಅಲ್ಲಿ ಈಗಷ್ಟೇ
ಹಿಡಿದು ತಂದ
ಮೀನಿನ ಜೀವದ ಜಿಗಿತ
ಆಗಷ್ಟೇ ಕಿತ್ತು ತಂದ
ಹಸಿ ಹಸಿ ಸೊಪ್ಪಿನ ಉಸಿರಾಟ
ಮನೆಯಿಂದಲೇ ಮೊಳಕೆಯೊಡೆಸಿ
ತಂದ ಕಾಳುಗಳ ಮೊಳೆತ
ಕಟ್ಟಿಟ್ಟ ಮಾಲೆಯ ಮೊಗ್ಗು
ಅಂಕೆಯಿಲ್ಲದೇ ಅರಳುತ್ತಾ…..
೩
ನೀರಸ ಕೊಳುವ ಕೊಡುವ
ವ್ಯವಹಾರದ ಮಧ್ಯೆಯೂ
ಮೌನದಲಿ ನಡೆದೇ ಇದೆ
ಜೀವ ವ್ಯಾಪಾರ.
೪
ಅವನಿ,
ಪಲ್ಲವಿಸುತ್ತಲೇ ಇದ್ದಾಳೆ!
*****