ಮೊನ್ನೆನಾಗ ಸಿ.ಎಂ. ಕೊಮಾರಸ್ವಾಮಿ ತೆಗ್ದು ರಾಜೀನಾಮೆ ಒಗೆದೇ ಬಿಟ್ರು ಅಂತ ಧರ್ಮು, ಖರ್ಗೆ, ಸಿದ್ರಾಮು, ಬಂಗಾರಿ ಎಲ್ಲರಿಗೂ ಖುಸಿಯೋ ಖುಸಿ. ಚುನಾವಣೆ ನೆಡ್ಡಂಗೆ ತಾವೆಲ್ಲಾ ನಿಂತು ಗೆದ್ದಂಗೆ ಎಲ್ಲಾ ಪಕ್ಷಗಳೂ ಸೇರ್ಕೊಂಡು ಕಾಂಗ್ರಸ್ನೋರ ಸಂಗಡ ಸರ್ಕಾರವಾ ರಚನೆ ಮಾಡ್ಡಂಗೆ ‘ಡ್ರೀಮ್’ ಕಂಡಿದ್ದೇ ಕಂಡಿದ್ದು. ಇದನ್ನ ಕಂಡ ಕೊಮಾರಣ್ಣ ‘ಡಾಗು ದೇವಲೋಕದ ಡ್ರೀಮ್ ಕಂಡಂಗೆ’ ಅಂತ ನಗಾಡೋದೆ! ಇವರೆಲ್ಲಿ ಎರಡು ತಿಂಗಳಿಂದ ಬ್ಯಾಡ್ ಡ್ರೀಮ್ಸ್ ಕಾಣ್ತವೆ ಅದ್ಕೆ ಗುಡ್ ಡ್ರೀಮ್ಸ್ ಕಾಂಬ್ಲಿ ಅಂತ ಮಾತಲ್ಲೇ ರಾಜಿನಾಮೆ ಒಗಾಯಿಸ್ದೆ ಅನ್ನಬೇಕೆ. ಆದರೇನು ಬಿಜೆಪಿಯ ಗೋಡ ಅಲವತ್ತುಕೊಂಡಿದ್ದಂತೂ ದಿಟವೆ. ನಾಮ ನಿರ್ದೇಶನದಲ್ಲಿ ತಮ್ಮ ಪಕ್ಷಕ್ಕೆ ಶ್ಯಾನೆ ಅನ್ಯಾಯವಾಗಿದೆ ಮಾರಾಯ್ರೆ. ನಮಗೇನು ಮಂಡೆ ಸರಿಯಿಲ್ಲವಾ? ಹಂಡ್ರೆಂಡ್‍ನಾಗೆ ಎಪ್ಪತ್ತೆಂಟು ಪ್ಲೇಸ್ನಾಗೆ ಜೆಡಿಎಸ್ ನಾಮ ನಿರ್ದೇಶಕರೇ ಇರಲಿಕ್ಕುಂಟಾ? ಮೆಜಾರಿಟಿನಲ್ಲಿರೋ ಭಾರೀ ಪಕ್ಷ ನಮ್ಮದಾಗಿದ್ರೂ ನಾವೆಂತ ಮಾಡ್ಲಿಕ್ಕೂ ಸಾಧ್ಯವಿಲ್ಲವೆಂದ ಮೇಲೆ ಗೋಡ್ರ ದರ್ಬಾರದಲ್ಲಿ ನಾವೆಂತಕ್ಕೆ? ಬುರನಾಸು. ಆಪದಿಲ್ಲೆ ಆಪದಿಲ್ಲೆ – ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಅವಾಜ್ ಹಾಕಿಯೇ ಬಿಡಬೇಕೆ. ತನ್ನ ವಿರುದ್ದ ಉಸಿರೆತ್ತೋ ದಮ್ಮನ್ನು ಎಂದೋ ಕಳ್ಕೊಂಡು ಯಡ್ಡಿಯೇ ತೆಪ್ಪಗಿರೋವಾಗ ಈ ಹಳೆ ಚಡ್ಡಿ ಯಾವ ಲೆಕ್ಕ ಕೋಳಿಪುಕ್ಕ ಎಂದು ಅಂಗಾರಾದ ಕೊಮಾರಸಾಮಿ ಉಗ್ರಪ್ರತಾಪಿಯಾಗಿ ‘ಯಾರು ತಿಳಿಯರು ನನ್ನ ಭುಜಬಲದ ಪರಾಕ್ರಮ ನೀವೆಂದೂ ಅರಿಯಲಾರಿರೋ ನನ್ನ, ನನ್ನಪ್ಪನ ವಿಜಯಗಳ ಮರ್ಮ’ ಎಂದು ಆರ್ಭಟಿಸುತ್ತಾ ನಾನು ಯಲಕ್ಷನ್ಗೂ ರೆಡಿ. ತೆವಲಿಗೆ ಸಿ.ಎಂ. ಆಗೋನಲ್ಲ ಯಾರಿಗೂ ಹೆಡ್ ಬೆಂಡ್ ಮಾಡೋನಲ್ಲ ಎಂದು ಹೂಂಕರಿಸಿ ತನ್ನ ಒರಿಜಿನಲ್ ಫೇಸ್ ಕಟ್ ತೋರಿಯೇಬಿಟ್ಟ. ಆದ್ರೆ ಬಿಜೆಪಿ ಗೋಡ್ನೂ ಮೇಟ್ ಮಾಡ್ಲಿಲ್ಲ. ನಾವೂ ಯಲಕ್ಷನ್ಗೆ ಸ್ಟಾಂಡ್ ಆಗ್ತಿವೇಳಿ ಅಂತ ತೊಡೆ ತಟ್ಟಿದ. ‘ಸಮರದೋಳ್ ಬಿಜೆಪಿಯನ್ನು ಕೆಣಕಿ ಉಳಿದವರಿಲ್ಲ ಅಬ್ಬರಿಸಿ ಬೊಬ್ಬರಿದರೆ ಕೀಳಲು ನಾ ಯಡಿಯೂರಪಿಯಲ್ಲ’ ಅಂತ ಸಣ್ಣ ಗೋಡ್ರಿಗೇ ಸವಾಲ್ ಎಸೆದ. ಇಬ್ಬರ ಜಗಳದಾಗೆ ನಡುಗಿಹೋದ ಮೂರನೆ ಆಸಾಮಿ ಯಾರೆಂದರೆ ಕೂಗುಮಾರಿ ಯಡೂರಿ! ತಾಯಿ ಗರ್ಭದಿಂದಾಚೆಗೆ ಬಂದು ಬಿಜೆಪಿ ತೊಟ್ಟೆಲ್ನಾಗೇ ಬೆಳೆದು ಮುದುಕನಾದ್ರೂ ಮಂತ್ರಿಯಾಗದ ತನ್ನಂತ ದುರಾದೃಷ್ಟ ಪಿಶಾಚಿಯನ್ನು ಡಿಸಿಎಂ ಮಾಡಿದ ಅಣ್ಣ ಕೊಮಾರಣ್ಣನಿಗಿಂತ ತನ್ನ ಆನಂದವನ್ನೇ ಭಸ್ಮ ಮಾಡಲು ಹೋದ ಸದಾನಂದ ಹೆಚ್ಚೆ? ಹಿಂಗೆಲ್ಲಾ ಯೋಚಿಸಿದ ಯಡೂರಿ ಸಡನ್ ಆಗಿ ದೊಡ್ಡ ಗೋಡ್ರ ಸಣ್ಣ ಗೋಡ್ರ ಮನೆಗೆ ಹೋಗಿ ಬಕ್ಕು ಬೋರ‍್ಲು, ಬಿದ್ದು ಗಳಗಳ ಅತ್ತು ಬಿಟ್ಟಿತಂತೆ. ಆ ದೇವರೆಂಬ ದೇವರೆ ಬಂದು ಸಿಎಂ ಮೋಸ ಮಾಡ್ತಾ ಅವ್ನೆ ಕಣ್ಲಾ ಯಡ್ಡಿ ಅಂತ ಬೊಗಳಿದರೂ ನಾನ್ ನಂಬಾಕಿಲ್ಲ. ಅಷ್ಟೆ ಯಾಕ್ರಿ ಸಣ್ಣ ಗೋಡ್ರೇ ಖುದ್ ಲೌಡ್ ಸ್ಪೀಕರ್ನಾಗೆ ಮೋಸ ಮಾಡ್ತಿನಲೆ ನಿನ್ಗೆ ಯಡ್ಡಿ ಅಂತ ಅಸೌನ್ಸ್ ಮಾಡಿದ್ರೂ ನಂಬಾಕಿಲ್ಲ ಕಣ್ರಿ ಎಂದು ಯಡೂರಿ ಗುಟುರು ಹಾಕಿದ್ದು ಕೇಳಿ ಕೂಮಾರಣ್ಣ ಖುಷ್ ಆಗೋದ. ೨೦ ತಿಂಗಳು ಮುಗಿಯೋದ್ರಾಗೆ ಮಸಲತ್ತು ಮಾಡಿ ಬಿಜೆಪಿ ಅತ್ರುಪ್ತ ಸ್ಯಾಸಕರನ್ನು ತನ್ನತ್ತ ಸೆಳ್ಕಂಬಿಟ್ರೆ ಜೆಡಿಎಸ್ಗೆ ಅಪಾಯಿಲ್ಲ. ಬಿಜೆಪಿಗೆ ತಳಪಾಯಿಲ್ಲ. ಇನ್ನು ಉಳಿದ ಎಕ್ಸಟ್ರಾ ಪಿರಿಯಡ್ಡು ನಾನೇ ಸಿಯಮ್ಮು. ಯಡ್ಡಿಗೆ ಡಿಸಿಯಮ್ಮು ಪ್ಲೇಸ್ ಬಿಟ್ಟು ಕೊಟ್ಟರಷ್ಟೇ ಸಾಕು ಅಂಬೋದು ಕೊಮಾರಣ್ಣನ ಸದ್ಯದ ಪಿಲಾನು.
‘ಬೆಚ್ಚನೆಯ ಸೀಟಿರಲು ವೆಚ್ಚಕ್ಕೆ ಫೈನಾನ್ಸ್ ಇಲಾಖೆ ಕೈಲಿರಲು ಇಚ್ಛೆಯನರಿತು ನಡೆವ ಕೊಮಾರನೇ ಸತಿಯಾಗಿರಲು ಬಿಜೆಪಿಗೆ ಕಿಚ್ಚು ಹಚ್ಚೆಂದ ಯಡೂರಿ’ ಅಂತ ಯಡ್ಡಿ ರಿವರ್ಸ್ ಗೇರಲ್ಲಿ ಸಾಂಗ್ ಹಾಡಿದ್ದನ್ನು ಕೇಳಿದ ಚಡ್ಡಿಗಳಿಗೀಗ ಒಳಗೇ ವಂದ ಮಾಡಿಕೊಳ್ಳುವ ದುಸ್ಥಿತಿ ಬಂದೇತ್ರಿ. ಅಟ್ ದಿ ಲಾಸ್ಟ್ ಕೊಮಾರಣ್ಣ ಸದಾನಂದಣ್ಣನ ರಾಜಿ ಡ್ರಾಮ ನಡೆದೋತು. ಈ ರಾಜಿಗೆ ಅಂಡಗ್ರೌಂಡ್ ವರ್ಕ್ ಮಾಡಿದೋರು ದೊಡ್ಡ ಗೋಡ್ರೇಯಾ. ಆತುರಬೇಡ ಮೈ ಸನ್ನು; ಟೈಂ ನೋಡಿ ಬಿಜೆಪಿನೋರ್ನ ಬೇರುಸುಮೇತ ಬೇರೆ ಬೇರೆ ಮಾಡೋಣ. ಸಿದ್ದುಗಿರೋದು ಜಾತಿ ಸಫೋಲ್ಟು, ರೊಕ್ಕದ ಬಲ ಇಲ್ಲ. ಬಂಗಾರಿತಾವ ರೊಕ್ಕ ಇದ್ದರೂ ಬಿಚ್ಚಲ್ಲ. ಯಾಕಂದ್ರೆ ಆ
ಪಕ್ಷ ಇನ್ನೂ ಚಿಗಿತ್ಕಂಡೇ ಇಲ್ಲ. ಸಂಯುಕ್ತ ಜನತಾ ದಳ್ದಾಗೆ ಇರೋರು ಮೂವರ್ನಾಗೆ ಒಂದರ ಮುಸುಡಿ ಅತ್ತ ಇನ್ನೊಂರ್ದದು ಇತ್ತ. ಬಿಜೆಪಿ ದೊಡ್ಡ ಪಕ್ಷ ಆದ್ರೂವೆ ದೊಡ್ಡ ಮನಸ್ಸಿನೋರೇ ಇಲ್ಲ. ಅಧಿಕಾರ ಸಿಗೋದಾದ್ರೆ ಅವರಿಗೆ ರಾಮಾನೂ ಬ್ಯಾಡ ಅಡ್ವಾಣಿಯೂ ಬ್ಯಾಡ. ಸನ್ನೆ ಮಾಡಿದ್ರೆ ಸಾಕು ಸ್ಯಾಸಕರ ದಂಡೇ ಬಂದು ಬೀಳ್ತದೆ ಮಗಾ ಅಂತ ದೊಡ್ಡ ಗೋಡ್ರೇ ಮಗನ ಕಿವಿಯಾಗೆ ಊದವರೆ. ಈಗಂತು ಮಗನ ಗುಣಗಾನ ಮಾಡ್ತಾ ಎಲ್ಲಂದರಲ್ಲಿ ಕಣ್ಣೀರ ಕೋಡಿ ಹರಿಸ್ಲಿಕತ್ತಾರೆ. ನನ್ನ ಮಗ್ನ ಪಕ್ಷ ಉಳಿಸೋಕಾಗಿ ತಂದೆಯ ಪ್ರೀತಿನೇ ತ್ಯಾಗಮಾಡಿದ ತ್ಯಾಗಮಯಿ. ಅಧಿಕಾರ ಸಿಕ್ಕ ಮೇಲೂ ಔರಂಗಜೇಬನಾಗದೆ ನನ್ನ ಜೇಬ್ನಾಗೆ ಇರೋ ಪ್ರೇಮಮಯಿ. ಹಗಲುರಾತ್ರಿ ಊಟ ತಿಂಡಿ ಮಾಡ್ದೆ ೨೪ ಗಂಟೆ ಜರ್ನಿ, ೧೮ ಗಂಟೆ ಫೈಲ್ಸ್ ಗಳಿಗೆ ಸಹಿ ಮಾಡ್ತಾನೆ. ಅವನಿಗೆ ಪೈಲ್ಸ್ ಬಂದ್ರೇನು ಗತಿ? ನಾಳೆ ಗ್ಯಾಸ್ಟ್ರಿಕ್ ಬಂದ್ರೇನು ಸ್ಥಿತಿ? ಕಾಂಗ್ರೆಸ್ನೋರು ಪ್ರೆಶರ್ ಹಾಕೋದ್ರಿಂದ ಬ್ಲಡ್ ಪ್ರೆಶರ್, ಬಿಜಿಪಿನೋರ ಟ್ರೆಸ್ನಿಂದಾಗಿ ಶುಗರ್ ಅಟಾಯಿಸಿಕೊಂಡ್ರೆ ಸಿಹಿ ತಿನ್ನೋ ಕಾಲ್ದಾಗೆ ನನ್ನ ಸನ್ನು ಸಿಹಿ ತಿನ್ನದಂಗೆ ಅಗ್ಬೇಕ? ಹೀಗೆಂದು ದೊಡ್ಡ ಗೋಡ್ರು ಮಗನ ಜನಸೇವೆಯನ್ನು ವಾಚಾಮಗೋಚರವಾಗಿ ಹೊಗಳುತ್ತಲೇ ಸಭೆಯೊಂದರಲ್ಲಿ ಗ್ಲಿಸರಿನ್ ಸಹಾಯವಿಲ್ಲದೆ ಬಕೀಟುಗಟ್ಟಲೆ ಕಣ್ಣೀರು ಸುರಿಸಿ ಮಹಾನ್ ನಟರೆನ್ನಿಸಿಕೂಂಡರು. ಸಿಎಂ ಏನು ಕಡಿಮೆ? ತಂದೆಯೋರ್ಗೆ ಭಾಳ ನೋವು ಕೊಟ್ಟೀನಿ. ಅರ್ಧ ರಾಗಿಮುದ್ದೆ ತಿಂದು ಬದುಕೋ ಸ್ಥಿತಿಗೆ ತಂದಿದ್ದು ನಾನೇ. ಅಪ್ಪಾಜಿ ಅಗ್ದಿ ವೀಕ್ ಆಗವರೆ ಅಂತ ಗಳಗಳನೆ ಬಿಕ್ಕಿಯೇ ಬಿಡೋದೆ! ಇದನ್ನು ಕಂಡು ದಿಗ್ಭ್ರಾಂತರಾದ ಮಾಜನತೆ ತಾವೂ ಕಣ್ಣೀರು ಸುರಿಸಿ ಸಾಥ್ ಕೊಟ್ಟರು. ಇದನ್ನ ತಂದೆ ಮಕ್ಕಳ ನಾಟ್ಕ ಅಂತ ಅನ್ನೋದಾದ್ರೆ ಅಂದ್ಕೊಳಿ. ಬರೆಯೋರು ಬರ್ಕೊಳಿ. ‘ಖರ್ಗೆ ಕೂಗಾಡಲಿ…. ಸಿದ್ದುವೇ ಹೋರಾಡಲಿ… ನಿನ್ನ ನೆಮ್ಮದಿಗೆ ಭಂಗವಿಲ್ಲ.. ಸಿಎಂ ನಿನಗೆ ಸಾಟಿಯಿಲ್ಲ …’ ಅಂತ ಕೊಮಾರಣ್ಟನೀಗ ಹಾಡಿ ಅಭಿಮಾನಿ ಮತದಾರ ದೇವರುಗಳಿಂದ ಚಪ್ಪಾಳೆ ಗಿಟ್ಟಿಸ್ತಾ ಅವ್ನೆ ಕಣ್ರಿ. ಇನ್ನೇನು ಜೆಡಿಎಸ್-ಬಿಜೆಪಿ ಎಲ್ಡು ಹೋಳು ಆಗೇ ಹೋತಲ್ಲ ಅನ್ನೋ ಅಗ್ದಿ ಖುಷಿನಾಗಿದ್ದ ಕಾಂಗ್ರೆಸ್, ಎಬಿಪಿಜೆಡಿ ಈಗ ನಿಜವಾಗ್ಲೂ ಕಣ್ಣೀರುಕೋಡಿ ಹರಿಸ್ಲಿಕತ್ತಾವೆ ಅಂಬೋದು ಲೇಟೆಸ್ಟ್ ನ್ಯೂಸ್. ನಂಬಿದರೆ ನಂಬಿ ಬಿಟ್ಟರೆ ಬಿಡಿ.
*****
( ದಿ. ೧೮-೦೫-೨೦೦೬)