ಬೆಳಕು
ಬೇಡವಾದರೆ
ಇಲ್ಲ
ಇಲ್ಲಿ ಏನೂ ಆಗಿಯೇ ಇಲ್ಲ
ಆಗಿದ್ದು ಆಟವಷ್ಟೇ
ಲೆಕ್ಕವಲ್ಲ
ಜಮಾ ಆಗಿಲ್ಲ
ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ
ಎಲ್ಲಾ ಕೊಡವಿ
ಎದ್ದು ಹೋಗಿಬಿಡಬಹುದು
ಕತ್ತಲು
ಬೇಡದ್ದೆಲ್ಲಾ ಒಪ್ಪಿ
ತೋಳ್ತೆರೆದು ಅಪ್ಪಿ
ತುಂಬಿ ತುಂಬಿ
ಮೇಲೇರಿ ಬರುವ
ಎಲ್ಲ ಅಮಲುಗಳ
ಒಳಕದುಮಿ ಗುದ್ದಿ
ಹೇಗೆ ಬರೆಯುವುದು
ಪರಂಪರಾಗತವಲ್ಲದ
ಶಾಸ್ತ್ರೋಕ್ತವಲ್ಲದ
ಛಂದೋಬದ್ಧವಲ್ಲದ
ಆದರೂ ಅರ್ಥಪೂರ್ಣ ಕವಿತೆ!
ಬೆಳಕು
ಬಿಡು ಮನಸು ಮಾಡಿದರೆ
ಸಮುದ್ರಗಳನ್ನೇ ದಾಟಿಬಿಡಬಹುದು
ಕತ್ತಲು
ಹೌದು. ಆದರೆ ಎಲ್ಲಕ್ಕೂ ಮೊದಲು
ದಾಟಬೇಕು ಹೊಸಿಲು !
ಹೊಸಿಲಿನೊಳಗಿಂದ ಜಗ್ಗುವ
ಗೋಜಲು ಬೇರುಗಳು
ಹೊರಗಿನಿಂದ ಸೆಳೆಯುವ
ಆಕಾರವಿಲ್ಲದ ಅಸ್ಪಷ್ಟಾಕಾರಗಳು.
ಬೆಳಕು
ಇಲ್ಲಿ ಯಾವುದೂ
ಪರಿಪೂರ್ಣ ಆಕಾರವಲ್ಲ
ನಿರಾಕಾರಕ್ಕೆ ಆಕಾರ ಕೊಡುವುದೇ
ಕರಗಳ ಕೆಲಸವೆಲ್ಲ
ಇತಿಹಾಸವಾಗಿ ಬಿಡುತ್ತದೆ
ಆಕಾರವಾದದ್ದೆಲ್ಲ.
ಕತ್ತಲು
ಹೊಸಿಲು ದಾಟಿದವರಿಗೆಲ್ಲ
ಒಂದೋ ಪ್ರಪಾತ
ಇಲ್ಲವೇ ಆಕಾಶ
ಬೇರೆಲ್ಲಿದೆ ಅವಕಾಶ?
ಎರಡು ಅತಿಗಳ ನಡುವೆ
ಇದೆಯೇ ಎಲ್ಲೆ ಮೀರುವ ಮಿತಿ?
ಬೆಳಕು
ಸವಕಲಾದ ಬೊಟ್ಟಿನ
ತೂಗುವ ತಕ್ಕಡಿಯ
ಅಳತೆಗಾಗಿಯೇ
ಬದುಕಲಾಗುವುದಿಲ್ಲ
ಅತೀತರೆಲ್ಲ ಅಳತೆಗೆ ಸಿಕ್ಕುವುದಿಲ್ಲ
ಅಳತೆಗಳ ಮಿತಿಗೆ ಬಿದ್ದವರು
ಬಿಡು ಅತೀತರಾಗುವುದಿಲ್ಲ!
*****