ಉರಿಯಿಲ್ಲ ಬಿಸಿಯಿಲ್ಲ
ಉರಿಬಿಸಿಲ ಬೇಗೆ ಬವಣೆಗಳಿಲ್ಲ
ಕಿಡಿಸಿಡಿವ ಕೆಂಡದುಂಡೆಯಂತುದಯಕ್ಕೆ
ಅಸ್ತಕ್ಕೆ ರಕ್ತದೋಕುಳಿಯಿಲ್ಲ
ಅವನಂತೆ ನಿಂತಲ್ಲೇ ನಿಂತು ಜಗವೆಲ್ಲ ತನ್ನನ್ನೇ ಸುತ್ತಿ
ಠಳಾಯಿಸಲೆಂಬ ಠೇಂಕಾರದವನಲ್ಲ.
ಏನಾದರೂ ಹೋದರು ಲೆಖ್ಖಿಸಿದೆ ಬೆಳಗು ಬೈಗಿನ ಕಾಲಚಕ್ರದ
ನಿಷ್ಠುರಕ್ಕೆ ನಿಷ್ಠನಾಗಿ ಸದಾ ಹೊತ್ತಿಕೊಂಡುರಿವ ಅಮಾನುಷನಲ್ಲ
ಅಹರ್ನಿಶಿ ನಮ್ಮ ಸುತ್ತ ಪ್ರೀತಿಯಲಿ ಸುತ್ತುತ್ತಲೇ ಇರುವ
ಪರಿವೀಕ್ಷಕ ನಿರಂತರ ಪರಿಕ್ರಮದ ಸಜೀವ ಮಾನುಷ್ಯಕಾಯ
ಈ ಇಳೆಯ ನಿಜಗೆಳೆಯ ಅಜಾತ ಶತ್ರು; ಲಕ್ಷ ನಕ್ಷತ್ರಗಳ
ರಾಜಾಧಿರಾಜ.
ಓ ಮನಃಕಾರಕನೇ
ಮನುಜನೊಳಗಿನ ಮನಸು
ನೂರಾರು ಕನಸು ಪ್ರೀತಿ ಪ್ರೇಮ
ನಿನ್ನದೇ ಸೋಮ, ನಮ್ಮೊಳಗಿನೆಲ್ಲ ಚಿತ್ರ ವಿಚಿತ್ರ ಬಯಕೆ ಕಾಮ.
ಧೀಶಕ್ತಿ, ಚಿತ್ರ ವೃತ್ತಿ, ಅನುರಕ್ತಿ ತೃಪ್ತಿ ಸಂತುಷ್ಟಿ
ಭಾವ ರಾಗ ಅನುರಾಗ ಭಾವಾವೇಶ
ಅನ್ಯೊನ್ಯದನುಬಂಧ, ಆತ್ಮೀಯದೊಲುಮೆ ಮೈತ್ರಿಬಾಂಧವ್ಯ
ಭೂಮಿಯೊಳಗಣ ನೀರು
ಸಸ್ಯ ಔಷಧ ವನಸ್ಪತಿ
ಜ್ಞಾನ, ವಿಜ್ಞಾನ ರಸ ರಸಾಯನ ಋತುಮಾನದಧಿಪತಿ
ಎಂದೆಂದೂ ಆರದಂತಮೃತದೆಣ್ಣೆಯನೆರೆದು
ಬೆಣ್ಣೆಮುದ್ದೆಯ ಒಳಗೆ ಯಾರೋ ಹಚ್ಚಿ ಬಚ್ಚಿಟ್ಟ
ಆಕಾಶದದ್ಭುತ ದೀಪ, ನೀನು ಓ ತಿಂಗಳು
ತಂಗಳು ಕೈತುತ್ತಿನನ್ನಕ್ಕು ಇನ್ನಿರದ ರುಚಿಕೊಡುವ
ನಿನ್ನ ಬೆಳ್ಳಿ ಬೆಳದಿಂಗಳು.
ಮಧು ನಿನ್ನದು; ಮುದ ನಿನ್ನದು
ನಿನ್ನದೇ ಅದು; ಗಂಡು ಹೆಣ್ಣುಗಳ ಹೃದಯ
ಕವಾಟಗಳ ಕದ ತೆಗೆವ ಮಧುಚಂದ್ರ.
ವೃದ್ಧಿ ಕ್ಷಯ, ಭರತ ಕುಸಿತ, ಏರಿಳಿತ
ಎಲ್ಲ ನಮ್ಮಂತೆಯೇ ಅನ್ನು;
ಎಂದಮಾತ್ರಕ್ಕೆ ಓ ಚಗಚ್ಚಕ್ಷುವೇ
ದೇವರಲ್ಲವೆನ್ನುವರುಂಟೇ ನಿನ್ನನ್ನು
ಇರಬಹುದು ಬಿಡು ಸೂರ್ಯ ಅವನೊಬ್ಬನೆ
ಆದರೆ ಓ ಇಂದುವೇ, ಪೃಥ್ವಿಗತಿಸನಿಹದ ಬಂಧುವೇ
ಇಂದು, ಮುಂದು, ಎಂದೆಂದೂ,
ನಮಗೆ ನಮ್ಮ ಪ್ರೀತಿಯ ಚಂದ್ರ ನೀನೊಬ್ಬನೆ
ಚಂದ್ರನೆಂಬುವನೊಬ್ಬನೆ
ಚಂದ್ರ ನೀನೊಬ್ಬನೆ.
*****