ಒಕ್ಕಲಿಗರೆಲ್ಲ ಸೀಗೆ ಹುಣ್ಣಿಮೆ ಹಾಗೂ ಎಳ್ಳು ಅಮಾಸಿಗೆ ಹೊಲದ ಲಕ್ಷ್ಮಿಗೆ ನೈವೇದ್ಯ ಕೊಂಡೊಯ್ಯುತ್ತಾರೆ. ಹೊಲವುಳ್ಳವರು ಹೊಲವಿಲ್ಲದವರನ್ನು ತಮ್ಮೊಡನೆ ಹೊಲಕ್ಕೆ ಕರೆದೊಯ್ದು ಊಟಮಾಡಿಸಿ ಕಳಿಸುವರು. ಅಮಾಸಿಗೆ ಉಳ್ಳಿಕ್ಕೆ ಕರೆಯದವರಾರು” ಎಂಬ ಲೋಕೋಕ್ತಿಯೇ ಹುಟ್ಟಿಕೊಂಡಿದೆ.
ವಾಡಿಕೆಯಂತೆ ಸಜ್ಜಿಯ ಕಡುಬು, ಹಿಂಡಿಪಲ್ಲೆ, ಪುಂಡಿಪಲ್ಲೆ, ಬದನೆಕಾಯಿಪಲ್ಲೆ ಅಲ್ಲದೆ ಹೋಳಿಗೆ ಅನ್ನ ಮೊದಲಾದ ಸಾಮಗ್ರಿಗಳು ಸಿದ್ದವಾಗಬೇಕು. ಅವುಗಳನ್ನೆಲ್ಲ ಒಂದು ಡೊಳ್ಳುಹೆಡಿಗೆಯಲ್ಲಿ ವ್ಯವಸ್ಥಿತವಾಗಿ ಇರಿಸಿಕೊಂಡು, ಗೃಹಿಣಿಯು ಅದನ್ನು ನೆತ್ತಿಯ ಮೇಲೆ ಹೊತ್ತು ಹೊಲದ ಹಾದಿ ಹಿಡಿಯಬೇಕು.
ಜೀನ ಒಕ್ಕಲಿಗನೊಬ್ಬನು ಹೆಂಡತಿಗೆ ಬೊಗಸೆ ಗೋದಿ, ಸೆರೆ ಅಕ್ಕಿ ತೆಗೆದು ಕೊಟ್ಟು ಎಳ್ಳು ಅಮಾಸಿಯ ಅಡಿಗೆ ಮಾಡಲು ಹೇಳಿದನು. ಅಡಿಗೆ ಸಿದ್ದವಾಯಿತು. ಊರ ಒಕ್ಕಲಿಗರೆಲ್ಲ ತಂತಮ್ಮ ಹೊಲದಹಾದಿ ಹಿಡಿದರು. ನೆರೆಹೊರೆಯವರನ್ನು ಊಟಕ್ಕೆಂದು ಹೊಲಕ್ಕೆ ಕರಕೊಂಡು ನಡೆದರು. ಎಲ್ಲರೂ ಹೋದಬಳಿಕ ಜೀನನ ಎಡೆ ಹೊರಬಿತ್ತು. ಮುಂಚಿತ ಹೊರಬಿದ್ದರೆ ನೆರೆಹೊರೆಯವರನ್ನು ಊಟಕ್ಕೆ ಕರೆಯಬೇಕಾಗುತ್ತಿತ್ತು. ಔಪಚಾರಿಕವಾಗಿ ಕರೆಯುವಷ್ಟರಲ್ಲಿ ಬಂದೇ ಬಿಟ್ಟರೆ ಗತಿಯೇನೆಂದು ತಡಮಾಡಿ ಹೊಲಕ್ಕೆ ಹೊರಟನು. ಹೆಂಡತಿಯನ್ನು ಸಹ ಕರೆದೊಯ್ಯಲಿಲ್ಲ.
ಚರಗದ ಬುಟ್ಟಿಯನ್ನು ಅಟ್ಟದ ಕೆಳಗಿಟ್ಟು ಅಲ್ಲಿಯೇ ತುಸುಹೊತ್ತು ಒರಗುವಷ್ಣರಲ್ಲಿ ಜಂಪು ಹತ್ತಿತು. ಬಹಳ ಹೊತ್ತಿನ ಮೇಲೆ ನಿದ್ದಯಿಂದ ಗಡಬಡಿಸಿ ಎದ್ದು ನೋಡುತ್ತಾನೆ – ಇದ್ದಷ್ಟು ಅಡಿಗೆಯನ್ನು ಗುಬ್ಬಿ ಕಾಗೆಗಳು ತಿಂದು ಚೆಲ್ಲಾಡಿದ್ದವು. ಮಗಿಯಲ್ಲಿಟ್ಟ ನೀರಿಗೆ ಹದ್ದು ಬಾಯಿ ಹಾಕಿ ಉರುಳಿಸಿದೆ. ಇನ್ನೇನುಣ್ಣುವುದು, ಇನ್ನೇನು ತಿನ್ನುವುದು ಎಂದು ಮೋರೆ ಒಣಗಿಸಿಕೊಂಡು ಕುಳಿತಾಗ ಅತ್ತಕಡೆಯಿಂದ ಒಬ್ಬ ಜೋಗತಿ ಬಂದಳು ಉಧೋ ಉಧೋ ಎನ್ನುತ್ತ. ಆಕೆ ಬಂದುದು ಭಿಕ್ಷೆ ಬೇಡುವ ಸಲುವಾಗಿ.
ಜೋಗತಿ ಭಿಕ್ಷೆ ಹಾಕು ಎಂದಾಗ ಜೀನನಿಗೆ ಸಿಟ್ಟೇ ಬಂತು “ನೀಡುವದಿಲ್ಲ” ಎಂದರೂ ಆಕೆ ತನ್ನ ಚೌಡಿಕಿ ಬಾರಿಸುವದನ್ನು ಬಿಡಲಿಲ್ಲ. ಜೀನನು ಎದ್ದವನೇ ಎರಡು ಹಸಿದಂಟು ಕಿತ್ತಿ ಜೋಗತಿಯ ಬೆನ್ನಮೇಲೆ ಬಾರಿಸತೊಡಗಿದನು.
“ಹೊಡಿಯಬೇಡೋ ಮಾರಾಯಾ, ಹೊಡಿಯಬೇಡ. ಬಂದ ಹಾದಿಯಿಂದ ಹೋಗ್ತೇನೆ” ಎನ್ನುತ್ತ ಜೋಗತಿ ಜೀನನ ಹೊಲವನ್ನು ಹೊಕ್ಕಳು. ಅಲ್ಲಿ ತನ್ನ ಕಣ್ಣ ಕಾಡಿಗೆಯನ್ನು ಉದುರಿಸಿದಳು. ಜೀನನು ಬೆನ್ನು ಹತ್ತಿಯೇ ಬರುವದನ್ನು ಕಂಡು ಹತ್ತಿಯ ಹೊಲವನ್ನು ಹೊಕ್ಕು ಅಲ್ಲಿ ಕೈ ಮೇಲಿನ ಗಂಧವನ್ನು ಜಾಡಿಸಿದಳು. ಅಷ್ಟಕ್ಕೇ ಬಿಡದೆ ಗೋದಿಯ ಹೊಲದಲ್ಲಿ ಹಾಯ್ದು, ಉಡಿಯೊಳಗಿನ ಭಂಡಾರವನ್ನು ತೂರಿದಳು- ಕಡಲೆಯ ಹೊಲದಲ್ಲಿ ಹಾಯ್ದು ಹಣೆಯ ಮೇಲಿನ ಕುಂಕುಮವನ್ನು ಈಡಾಡಿದಳು. ಅಂತೂ ಆಕೆಯನ್ನ ಬೆನ್ನಟ್ಟಿದ ಜೀನನು ಹೊಲದ ಸೀಮೆ ದಾಟಿಸಿಯೇ ಅಟ್ಟದ ಕಡೆಗೆ ಮರಳಿದನು.
ಉಣ್ಣದೆ ತಿನ್ನದೆ, ಬರಿದಾಗಿ ಕುಳಿತ. ಡೊಳ್ಳು ಹೆಡಿಗೆಯನ್ನು ಹೊತ್ತುಕೊಂಡು ಜೀನನು ಸಂಜೆಗೆ ಮನೆಗೆ ಹೋಗಿ ಮುಸುಕು ಎಳೆದುಕೊಂಡು ಮಲಗಿಯೇ ಬಿಟ್ಟನು.
* * *
ಬೆಳೆಭರಕ್ಕೆ ಬರುವ ಸಂದರ್ಭದಲ್ಲಿ ಹೊಲಕ್ಕೆ ಹೋಗಿ ಬೆಳೆಯಲ್ಲಿ ತಿರುಗಾಡಿ ನೋಡಿದರೆ ಎಲ್ಲವೂ ಅವಲಕ್ಷಣ. ಜೋಳದ ಬೆಳೆಗೆಲ್ಲ ಕಾಡಿಗೆ ರೋಗ ಬಿದ್ದಿದೆ. ಹತ್ತಿಯ ಬೆಳೆ, ಗೋದಿಯ ಬೆಳೆ, ಕಡಲೆಯ ಬೆಳೆಗಳೆಲ್ಲ ಭಂಡಾರ, ಇಟ್ಟಂಗಿ, ಸಿಡಿ, ಕೊಳ್ಳೆ ರೋಗಗಳಿಗೆ ಈಡಾಗಿದ್ದನ್ನು ಕಂಡು, ಹೊಲದಲ್ಲಿ ಒಂದು ಕ್ಷಣ ಸಹ ನಿಲ್ಲದೆ, ಮನೆಗೆ ಬಂದವನೇ ಕಂಬಳಿ ಹೊದೆದುಕೊಂಡು ಜಗಲಿಗೆ ತಲೆಕೊಟ್ಟು ಮಲಗಿದನು.
ಹೆಂಡತಿ ಬಂದು ಊಟಕ್ಕೆ ಎಬ್ಬಿಸಿದಳು. ಇನ್ನೇನುಣ್ಣಲಿ, ಇನ್ನೇನು ತಿನ್ನಲಿ ಹತ್ತುಖಂಡಗ ಜೋಳವೆಲ್ಲ ಕಾಡಿಗೆ, ಹತ್ತುಖಂಡಗ ಹತ್ತಿಯೆಲ್ಲ ಬಂಜೆ, ಹತ್ತುಖಂಡಗ ಗೋದಿಗೆಲ್ಲ ಸೊಳ್ಳು ಹಾಯ್ದಿದೆ. ಹತ್ತುಖಂಡಗ ಕಡಲೆಗೆಲ್ಲ ಕೊಳ್ಳಿ ಹಾಯ್ದಿದೆ – ಎಂದು ಗೋಳಿಟ್ಟನು.
ಅಟ್ಟ ಮೇಲೆ ಒಲೆ ಉರಿದಂತೆ ಹಿಂದುಗಡೆ ಆತನ ಲಕ್ಷಕ್ಕೆ ಬಂತು. ಅಂದು ಹೊಲದಲ್ಲಿ ಉದೋ ಉದೋ ಎನ್ನುತ್ತ ಭಿಕ್ಷೆಗೆ ಬಂದವಳು ಜೋಗಿತಿಯಾಗಿರದೆ ಎಲ್ಲಮ್ಮ ದೇವಿಯೇ ಆಗಿರಬಹುದೇ ? ಆಕೆ ಎಲ್ಲ ಬೆಳೆಗಳಲ್ಲಿಯೂ ಓಡಾಡಿದಳು. ಓಡಾಡುತ್ತ ಕಣ್ಣ ಕಾಡಿಗೆ, ಕೈಯ ಗಂಧ, ಹಣೆಯ ಕುಂಕುಮ ಭಂಡಾರ ತೂರಾಡಿದ್ದರಿಂದ ಬೆಳೆಗಳೆಲ್ಲ ಹಾಳಾಗಿ ಹೋಗಿವೆ.
ತನ್ನ ಜೀನತನ ಬಿಡಿಸುವ ಸಲುವಾಗಿಯೇ ಎಲ್ಲಮ್ಮನು ಹೀಗೆ ಮುನಿಸಿದಳೆಂದು ಬಗೆದು ಅಂದಿನಿಂದ ಜಿಪುಣತನವನ್ನು ಬಿಟ್ಟು ಉದಾರನಾಗುತ್ತ ಹೋದನು.
*****