ಪರಮಾವಧಿ ಬಿಂದುವಿನ
ಕಾದೆಣ್ಣೆಗೆ ಬಿದ್ದರೂ
ಚೀಕಲು ಸಾಸಿವೆ
ಎಂದಿಗೂ ಸಿಡಿಯುವುದಿಲ್ಲ
ಬದಲಿಗೆ ಸುಟ್ಟು ಕರಕಲಾಗುತ್ತದಷ್ಟೇ!
ನಿಜ ಗರಿಷ್ಟ
ಕಾವಿಗೇರಿದ ನೀರು
ಕೊತಕೊತನೆ ಕುದಿಯುತ್ತದೆ
ಆದರೆ ಹಾಲು…
ಸದ್ದಿಲ್ಲದೇ ಉಕ್ಕುತ್ತದೆ!
ಒಲೆಯ ಮೇಲೆ
ಗಂಟೆಗಟ್ಟಲೆ ಕಾದ ಪಾತ್ರೆ
ಸುಡುತ್ತದೆನ್ನುವುದು
ಮುಟ್ಟಿ ನೋಡಿಯೇ
ತಿಳಿಯಬೇಕಿಲ್ಲ!
ನೆನಸಿ ಬಟ್ಟೆಯಲ್ಲಿ
ಕಟ್ಟಿ ಭಾರ ಹೇರಿಟ್ಟ
ಹೆಸರು ಕಾಳು
ಮೊಳಕೆಯೊಡೆಯುವುದು
ಉಸಿರು ಕಟ್ಟಿಸುವ ಕಾವಿಗೆ ಹೆದರಿ!
ಕೆಂಪಗೆ ಮಿರಮಿರ
ಮಿಂಚುವ ಮೆಣಸಿನಕಾಯಿಗೆ
ಕಾವು ಕೊಟ್ಟರಷ್ಟೇ
ಘಾಟುಕ್ಕಿಸುವ ಹುಮ್ಮಸ್ಸು
ಪುಟಿದೇಳುವುದು.
ಕಾವಿನ ಕುರಿತ
ಎಲ್ಲ ತರ್ಕ
ಸೀಮಿತ ಚೌಕಟ್ಟಿನೊಳಗಿನ
ಗಿರಕಿ
ಹೊಳೆಯುತ್ತವೆ ತಾರೆಗಳು
ತೆರೆದಷ್ಟೂ ಕಿಟಕಿ
ಕಾವು…
ವ್ಯಾಖ್ಯೆಗೆ ಸಿಗಲಾರದ್ದು
ಮಿತಿಗಳೊಳಗೆ ಬರಲಾರದ್ದು!
*****