ಹೊತ್ತು ಮೂಡುವ ಮುನ್ನ
ಕೂಡಿ ಹಾಕಿಕೊಂಡ ಕನಸುಗಳನ್ನು
ಎಳೆ ಬಿಸಿಲಿನಲ್ಲಿ ವಿಮಾನವೇರಿದ
ಕೇರಳಿ, ಬಂಗ್ಲಾ, ಪಾಕಿಸ್ತಾನಿ, ಫಿಲಿಫೈನ್ (ಏಕಾಂಗಿ)
ಕೆಲಸಿಗರು ಉರಿಬಿಸಿಲಿನಲಿ ಬಂದಿಳಿಯುವರು
ಬಿಸಿಲಿಗೆ ಹಸಿರು ಕನಸು ಬಿಚ್ಚುತ್ತ
ಬಣ್ಣಬಣ್ಣದ ಹೂವುಗಳೂಡೆಸುತ್ತ ಕುಣಿಯುವರು
ಶತ ಶತಮಾನದಿ ಕೂಡಿ ಬಿದ್ದ
ಧರ್ಮ, ಬಸಿಲಿನ ಹೊಡೆತ, ಮರುಭೂಮಿ,
ಒಂದಕ್ಕೊಂದು ಸ್ಪರ್ಧಿಸುತ
ಅರ್ಥ ಹುಡುಕುವುದರಲ್ಲಿ ಬಿದ್ದಿರುವಾಗ
ಬಂಜರು ಭೂಮಿ ಸಾವಿರ ಸಾವಿರ
ಲಕ್ಷ ಲಕ್ಷ ಜನರನ್ನು ದತ್ತುಕೊಂಡಿದೆ.
ಹಸಿದು ಹಂಬಲಿಸಿದ ಬಂಜೆಯೊಡಲು
ತುಂಬದೆ ತೆಕ್ಕೆ ಬದ್ದಿದೆ
ಒತ್ತಾಗಿ ಬೆಳೆಯುತಿದೆ
ಏನೋ! ನಿಜ, ಈಗ…
ಮಾಳಿ, ಮೇಸ್ತ್ರಿ ಡ್ರೈವರ್, ದೋಬಿ…
ನಿಟ್ಟಿಸಿರಿಡುವರು.
ಹೆಂಡತಿಯ ಮೃದು ಮಾತು ಬಣ್ಣದ ಬಳೆಗಳಲ್ಲಿ
ಮಕ್ಕಳ ಕಿರುಚಾಟ ತುಂಟಾಟಗಳಲ್ಲಿ
ತಾಯಿ ಕೈತುತ್ತಿನಲಿ
ಚಿತ್ರಗಳು ಒಂದೊಂದೇ ಮೂಡಿಸಿಕೊಂಡು
ಹಗಲು ಧಗೆಯಾಗಿ ರಾತ್ರಿ ನೀರಸವಾಗಿ
ಅಬ್ಬರದ ಉಬ್ಬರದ ಅರಬ್ಬರ
ತೊತ್ತುಗಳಾಗಿ
ಪ್ರವಾಹದೇರುಬ್ಬದಲಿ ಸೆಣಸಾಟ
ಬದುಕು ಅಪೂರ್ಣ
ಊರಿನ ಪತ್ರಗಳು
ಮದುವೆ ಮುಂಜುವೆ ಹಬ್ಬ ಹರಿದಿನಗಳು
ಮನದಾಳ ಬಿರಿದು ಬಿಸಿಲಿಗೆ ತತ್ತರಿಸುವುದು
ಬಂಧುಗಳ, ಕರುಳುಗಳ ಸಾವಿನ ಸುದ್ದಿ
ಗಳ ಗಳನೇ ಕಣ್ಣೀರುರುಳಿ
ಅನಾಥ ಪ್ರಜ್ಞೆಯ ನೋವು ಕೂಡಾ
ಅನಾಥವಾದಾಗ
ಯಾವ ಕನಸು ಚಿಗಿತು ಚಿತ್ತಾರವಾಗಿ
ನಿಂತು ಮನ ಆರಳಿಸಿಯಾವು!
ಇವರು ಅನಾಥರು
ಮರಳುಗಾಡಿನ ಮರೀಚಿಕೆ
ಭಾವನೆಗಳು ಅಲ್ಲೇ ಹರಿದು ಕಮರಿ
ಮುಚ್ಚಿ ಬಿಡುವುವು
ತಾನಿಲ್ಲಿ ಯಂತ್ರ, ಗೊತ್ತಾದಾಗ
ಆಸೆ ಸತ್ತು ಕಣ್ಣು ಬತ್ತಿ
ದಿನ ರಾತ್ರಿಗಳಿಗೆ ಬದುಕೇ ಇಲ್ಲ
ನಿಟ್ಟಿಸಿರಿಡುವಾಗ
ದೂರದ ತಾಯ್ನಾಡು ಕೈ ಬೀಸಿ ಕರೆಯುತಿದೆ
ಬಾ ಬಾ ಎಂದು
ಅಂಗಲಾಚುತ್ತಿದೆ ಹೆಂಡತಿಯ
ಏಕಾಂತದ ಕಣ್ಣೀರು
ಬಿಸಿಲಿನುಬ್ಬುಬ್ಬರ ಇಳಿಸಿ ಸೂರ್ಯ
ಕಡಲು ಸೇರಲೇಬೇಕು
ಸತ್ತು ಬದುಕಿಯೋ
ಬದುಕಿ ಸತ್ತೋ
ಕೊನಗೆ ಸಮಾಧಿಗೆ ಬರುತ್ತಾರೆ
ತಾಯ್ನಾಡಿಗೆ
*****