ಸುಮ್ಮನೆ ಬಿದ್ದಿರುವ ಉದ್ದುದ್ದ ಸರಹದ್ದು
ಎತ್ತೆರತ್ತರಕ್ಕೆ ಬೆಳೆದ ದೇವದಾರುಗಳು
ಅಸ್ತಿತ್ವ ಅಲುಗಾಡುವ ಯಾತನೆಗಳ ಮಧ್ಯೆ
ಶಬ್ದ ಮೀರಿದ ಸಂಕಟಗಳ ನುಂಗಿ
ದೀರ್ಘ ಬದುಕಿನ ವಿಷಾದಗಳ ಮರೆತು
ಗುನಿಗುನಿಸಿ ಹಾಡುತ್ತಿದೆ ನೋಡು ಗಡಿಯಲ್ಲಿ
ಸರಹದ್ದುಗಳೇ ಇಲ್ಲದ ಮಹಾಕಾವ್ಯ.
ನನ್ನ ಕಾವ್ಯದ ಒಂದೊಂದು ಅಕ್ಷರವೂ
ನೂರಾರು ಪ್ರತಿಮೆಗಳ ಮೂಡಿಸುತ್ತಲೇ
ಅರ್ಥವಿಲ್ಲದ ಸರಹದ್ದುಗಳ ಅಳಿಸುತ್ತದೆ
ಮಾನವ ಕಾವ್ಯದ ಒಂದೊಂದು ಸ್ವರವೂ
ಅನಂತ ಆಗಸದಲಿ
ಸ್ನೇಹದ ಬಣ್ಣ ಹರಡುತ್ತಿದೆ.
ಸರಹದ್ದುಗಳೇ ಇಲ್ಲದ ಕಾವ್ಯ
ಗುನುಗುನಿಸಿ ಹಾಡುತ್ತಿದೆ.
ಎರಡು ದೇಶಗಳ ಮಧ್ಯೆ ಎಳೆದ ರೇಖೆಗಳನು
ಎಡಬಿಡದೇ ಸುರಿದ ಮಳೆ ಅಳಿಸಬಹುದೆ?
ಗುನುಗುನಿಸಿ ಹಾಡಿದ ನನ್ನ
ಮೇಘ ಮಲ್ಹಾರದ ರಾಗ
ಹೇಗೆ ಮುರಿಯುತ್ತದೆ ನೋಡು
ಗಡಿಗಳ ಗೋಡೆ ಸರಹದ್ದು ಸರಪಳಿಗಳನು
ಲೋಕವೇ ನಿದ್ದೆಯ ತೆಕ್ಕೆಗೆ ಜಾರಿರಲು
ಗಸ್ತು ನಿಂತಿದೆ ನೋಡು ಗಡಿಯಲ್ಲಿ ಕಾವ್ಯ.
ಬೇಕಿಲ್ಲ ಗನ್ನು ಬಂದೂಕು ಮಿಸಾಯಿಲ್ಲು ನನಗೆ
ಹೃದಯ ಬೆಸೆಯುವ ಜೀವಂತ ಕಾವ್ಯವಿದೆಯಲ್ಲ?
ನನ್ನವರ ಹಾಡಿಗೆ ಗಡಿಯಾಚೆಗಿನ
ಅವರೂ ಹಾಡುತ್ತಿದ್ದಾರೆ
ನೋಡು, ನನ್ನವರ ಹೆಜ್ಜೆಯೊಂದಿಗೆ
ಅವರೂ ಕುಣಿಯುತ್ತಿದ್ದಾರೆ
ಹೇಗೆ ಅರಳುತ್ತಿದೆ ನೋಡು ಗಡಿಯಲ್ಲಿ
ನಿರ್ಭಂಧಗಳೇ ಇಲ್ಲದ ಮಾನವ ಕಾವ್ಯ.
*****