ಮೂರು ಮೊಗಗಳು ಮಾತ್ರ ಎದುರಿಗೆ ಕಂಡರೂ
ನಾಲ್ಕನೆಯ ಮೊಗ ಇದ್ದೇ ಇರುವುದು
ಕಾಣುವುದರಾಚೆಗೇ ಕಾಣದುದು ಇರುವುದು
ಕಾಣುವುದೆ ಮರೆ ಕಾಣದಿರುವುದಕೆ
ಓ ಧರ್ಮಚಕ್ರವೇ
ಕೈಹಿಡಿದು ನಡೆಸೆನ್ನನು
ಸತ್ಯಮೇವ ಜಯತೆ
ಒಂದು ಹಕ್ಕಿಯು ತಿನ್ನುತಿದ್ದರು
ಇನ್ನೊಂದು ಹಕ್ಕಿಯು ನೋಡುತಿದ್ದರು
ಒಂದು ಹಕ್ಕಿಗೆ ಹೇಗೆ ಗೊತ್ತು
ಇನ್ನೊಂದು ಹಕ್ಕಿ ಹೊರಡಲು ಯೋಚಿಸಿರುವುದು
ಒಟ್ಟಿಗೇ ಅವು ರೆಕ್ಕೆ ಬಿಚ್ಚಿ
ಆಕಾಶದಲ್ಲದೊ ಹಾರುತಿರುವುವು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ
ಹಗಲಿಗಿರುಳನು ಕಂಡರಾಗದು
ಇರುಳಿಗೆ ಬಳಕೆಂದರಾಗದು
ಆದರೂ ಅವು ಒಬ್ಬನೇ ನಟ
ಎರಡು ಪಾತ್ರಗಳ ಮಾಡಿದಂತೆ
ಒಂದು ವೇಷವ ಕಳಚದೇ ಇ-
ನ್ನೊಂದು ರಂಗಕೆ ಬರುವುದುಂಟೆ
ಹಗಲು ಯಾವುದು ಇರುಳು ಯಾವುದು
ಒಂದ ಚುಚ್ಚಿದರಿನ್ನೊಂದು ನೋಯುವುದು
ಓ ಧರ್ಮಚಕ್ರವೇ
ಸತ್ಯಮೇವ ಜಯತೆ
ತಿಳಿನೀರಿನೊಳಗೆ ಮಳೆನೀರಿನೊಳಗೆ
ಬಚ್ಚಲ ನೀರಿನೊಳಗೆ ಹಬೆಯ ಕನ್ನಡಿಯೊಳಗೆ
ಅಂಗಡಿಕಿಟಿಕಿಗಳ ಗಾಜಿನೊಳಗೆ
ಎಲ್ಲೆಲ್ಲೂ ಬಿಂಬವೆ ಪ್ರತಿಯೊಂದು ಬಿಂಬವೆ
ಪ್ರತಿಸಲವು ನೋಡಿದರು ಪ್ರತಿಸಲವು ಸೋಜಿಗವೆ
ಈ ಪ್ರತಿರೂಪಕೇನರ್ಥ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ
ಪುಣ್ಯಕೋಟಿಯ ಕತೆಯ ಕೇಳಿ
ಕಣ್ಣೀರು ಕರೆಯದ ಮನುಜನಿರುವನೆ
ಮಾತು ಮರೆಯದ ಮಾತಿಗಾಗಿಯೊ
ಮಮತ ಮರೆಯದ ಮಾತೆಗಾಗಿಯೊ
ಕಟ್ಟು ಕತೆಯೋ ಸತ್ಯಕತೆಯೊ
ಎಲ್ಲ ಕತೆಗಳ ಒಟ್ಟುಕತೆಯೋ
ಓ ಧರ್ಮಚಕ್ರವೇ
ಸತ್ಯಮೇವ ಜಯತೆ
*****