ಇಂದಿನ ಯುವ ಪೀಳಿಗೆ ಬಗ್ಗೆ ಕೇಳಿದರೆ, ಓದಿದರೆ, ನೋಡಿದರೆ ‘ಅಯ್ಯೋ ಪಾಪ!’ ಅನಿಸುವುದು.
ದುಡ್ಡಿಗಾಗಿ ಏನೆಲ್ಲ ಮಾಡುತ್ತಿರುವರು… ಎಂದಾಗ ಇಲ್ಲಿ ಬರೆಯಲು ಮನಸ್ಸು ಬರುತ್ತಿಲ್ಲ. ಆ ರೀತಿ ನಡೆದುಕೊಳ್ಳುತ್ತಿರುವರು. ದುಡ್ಡೇ ದೊಡ್ಡಪ್ಪ. ದುಡ್ಡಿನ ಮುಂದೆ ಬೇರೆ ದೇವರಿಲ್ಲವೆಂದು ಕೆಲವರು ಭಾವಿಸಿ, ದುಡ್ಡಿಗಾಗಿ, ಪಾಕೆಟ್ ಮನಿಗಾಗಿ, ಸ್ಮಾರ್ಟ್ ಫೋನಿಗಾಗಿ ಏನೆಲ್ಲ ಕಳೆದುಕೊಳ್ಳಲು ಸಿದ್ಧರು, ಬದ್ಧರು. ಶತಸಿದ್ಧರಾಗಿ ನಿಂತಿರುವರು.
ಇದು ಬರಿಯ ಲಖನೌದ ಕೊಯ್ಲಿಯಲ್ಲಿ ಜರುಗಿದ ಕಥೆ ವ್ಯಥೆಯಲ್ಲ. ಎಲ್ಲ ಕಡೆ ಜರುಗುತ್ತಿದೆ. ಇದನ್ನು ಬೆಳಕಿಗೆ ಬಂದಿಲ್ಲ ಅಷ್ಟೇ
ಶಾಲಾ ಕಾಲೇಜು ಮಕ್ಕಳು ಕೆಲವರಿಗೆ ಸ್ಮಾರ್ಟ್ ಫೋನ್ ಅಂದ್ರೆ ಜೀವ. ಕೊಳ್ಳಲು ಕಾಸಿಲ್ಲ. ಯಾರನ್ನು ಕೇಳುವುದು? ಅವರಿವರ ಕೈಯಲ್ಲಿ ಫೋನ್ ನೋಡಿ ತಾವೆ ಕೊಳ್ಳಲು ಮಾರ್ಗ ಹುಡುಕಿದರು! ಕೇವಲ ೫೦೦ ರೂಪಾಯಿಗೆ ರಕ್ತ ಮಾರಿಕೊಂಡರು. ವಯಸ್ಸು ೧೪ ವರ್‍ಷ ಮಾತ್ರ.
ಈ ರೀತಿ ಮೂರು ಜನ ತಮ್ಮ ರಕ್ತ ಮಾರಿದರು. ದಲ್ಲಾಳಿಗಳು ರಕ್ತ ನಿಧಿಗೆ ಕರೆದೊಯ್ಯುವರು. ಹಣ ಕೊಟ್ಟು ರಕ್ತ ಬಸಿದು ಕಳಿಸಿದರು. ನಾಲ್ಕು ವರ್ಷದ ಹಿಂದೆ ಇದೇ ಸಂಜಯ್‌ನ ಅಪ್ಪ ತೀರಿ ಹೋದ, ಕ್ಲಿನಿಕ್‌ನಲ್ಲಿ ಅಮ್ಮ ದುಡಿದರೆ ೩೦೦೦ ರೂಪಾಯಿ, ಸಂಜಯ್ ಬಟ್ಟೆ ಅಂಗಡಿಲಿ ೨೦೦೦ ರೂಪಾಯಿ ದುಡಿದರೂ ಹೊಟ್ಟೆ ಬಟ್ಟೆ ಮನೆ ಬಾಡಿಗೆ ಸಾಲುತ್ತಿರಲಿಲ್ಲ. ಹೀಗೆ ಸಂಜಯ್-ವಿನೂತ್-ಪುನೀತ್ ರಕ್ತ ನೀಡಿರುವರು.
ರಕ್ತದಾನ ಮಾಡಲು ಕಡ್ಡಾಯವಾಗಿ ೧೮ ವರ್‍ಷ ತುಂಬಿರಬೇಕು. ಆರೋಗ್ಯವಂತನಾಗಿರಬೇಕು.
ಹಿಮೊಗ್ಲೋಬಿನ್ ಮಟ್ಟ ಕನಿಷ್ಠ ೧೩ ಇರಲೇಬೇಕು. ಈಗಾಗಲೇ ರಕ್ತ ನೀಡಿ ೩ ತಿಂಗಳಾಗಿರಬೇಕು!
ಹೀಗಾಗಿ ಲಖನೌದ ಕೊಯ್ಲಿಯಲ್ಲಿರುವ ರಕ್ತ ನಿಧಿಗೆ ಬೀಗ ಹಾಕಿರುವ ಪೊಲೀಸರು ಮೂವರು ಏಜೆಂಟರನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡು ತಪ್ಪಿತಸ್ಥರನ್ನು ಕಟಕಟೆಗೆ ಹತ್ತಿಸಿರುವರು.
ಆದ್ದರಿಂದ ಮಕ್ಕಳೆ ಓದುವಾಗ ಓದಬೇಕು.
ಓದುವಾಗ ಗಳಿಕೆ ಸಲ್ಲ. ವಾಮ ಮಾರ್ಗದಿಂದ ಗಳಿಸಿದ್ದು ನರಕದ ಸಮಾನ.
*****