ಅಮ್ಮ ಒಳಗೊಳಗೇ ಬಂದಳು ಬೆಳೆಸಿದಳು
ಕಠಿಣ ಕಬ್ಬಿಣದ ಕಷ್ಟ ನೋವುಗಳ ಸಹಿಸಿ.
ಕರಗಿಸಿಕೊಂಡಳು ಒಡಲೊಳಗೆ ಕುದಿವ ಲಾವಾ
ಶತಶತಮಾನಗಳ ತಂಪು ತಗುಲಿ ತಂಗಾಳಿ
ತಣ್ಣಗಾಗುತ್ತ ಭೂಮಿಯಾದಳು ಅಮ್ಮ
ಬೆಳೆಸಿದಳು ಮಹಾ ವೃಕ್ಷಗಳ ಅವಳು
ಬೇರು ಬಿಡಿಸಿದಳು ಒಡಲಲ್ಲಿ
ಲೋಕಕ್ಕೆ ತಂಪು ನೀಡಿದಳು
ಗುಡ್ಡಗಾಡುಗಳಲ್ಲಿ ಬುಡಕಟ್ಟುಗಳ ನೆಲೆ
ಪೋಷಿಸಿದಳು ತಂಪೆರೆದಳು ಅವಳು
ಜೀರುಂಡೆಗಳ ಝೇಂಕಾರ ಕೇಳುತ್ತ
ಹಲಸು ಕಿತ್ತಳೆ ಮಾಮರಗಳ ಬೆಳೆಸಿದಳು
ಋತುಮನಗಳ ಪರಿಮಳ ಸೂಸಿದಳು
ಒಣಗಿದೆಲೆಗಳ ಕೊಳೆತ ವಾಸನೆಯಲ್ಲಿ
ನಾಗರೀಕತೆಗಳ ಸುಳಿವಿಲ್ಲ
ಅಮ್ಮನ ಶಾಂತ ಸೆರಗು ಮಾತ್ರ
ದೂರದೂರದ ತನಕ ಹಬ್ಬಿದ ಶಾಂತತೆ
ಹುಲ್ಲು ಹಾಸಿನ ಮೇಲೆ ಅವ್ವನ ಸರಳ ಮುಗ್ಧತೆ
ಬಣ್ಣಬಣ್ಣದಲಿ ಕಣ್ಣು ಮಿಟುಕಿಸುವ ಕಮನಬಿಲ್ಲು
ನೆರಳು ನೀಡಲಾರದು ಭೂತಾಯಿ ಒಡಲಿಗೆ
ಮೋಡಗಳ ನೆರಳು ಬೆಳಕಿನಾಟ ಮಧ್ಯಾಹ್ನ
ಅಮ್ಮನ ಏಕಾಕಿತನಗಳಿಗೆ ತಿವಿಯುವ ಖಾಲಿತನವಿಲ್ಲ
ಬೇಸರವಿಲ್ಲ ಬೆಟ್ಟಕ್ಕೆ ಎಂದಿಗೂ ಕಾಲ ಹೊರೆಯಾಗಿಲ್ಲ
ಒಂದೇ ತರಹದ ಏಕತಾನತೆಯ ಚಿಂತೆ ಅವಳಿಗಿಲ್ಲ
ಅವಳು ಹೆತ್ತು ಹೊತ್ತ ಗರ್ಭದ ಹೊಕ್ಕಳಬಳ್ಳಿ
ಅನನ್ಯ ತಲಸ್ಪರ್ಶಿ ತಾಯ್ತನದ ಮುಖಕಾಂತಿ,
ಅಮ್ಮ ತಟ್ಟಿದ ರೊಟ್ಟಿ ಸುಡುವ ಹೆಂಚಿನ ತಳದಲ್ಲಿ
ಮಿಂಚು ಬಳ್ಳಿಯ ಸರಿದಾಟ, ಕಣ್ಣಮುಚ್ಚಾಲೆ
ಉರಿವ ಕಟ್ಟಿಗೆಯ ಬಿಸಿ ತುಂಬಿದ ಸುವಾಸನೆ
ಆಪ್ತ ದೀಪದ ಬುಡ್ಡಿಯ ಮಂದ ಬೆಳಕು,
ಚಿತ್ರಿಸುವ ತರತರದ ನೆರಳ ಚಿತ್ತಾರಗಳು
ನೋವು ಸಂಕಟಗಳ ಮದ್ಯ ಮಿನುಗಿ
ಲಯವಾದ ಸೂರ್ಯ ಕಿರಣಗಳನ್ನು
ಮುತ್ತಿಟ್ಟು ಋತುಗಳ ಅಪ್ಪುಗೆಯಲ್ಲಿ
ಪ್ರಕೃತಿ ಮಲಗಿತ್ತು ಸುಖ ನಿದ್ರೆಯಲ್ಲಿ
ಅಮ್ಮನ ಮೆಚ್ಚಗಿನ ಮೃದು ಹಚ್ಚಡವ ಹೊದ್ದು
ಒಲೆಯಲ್ಲಿನ ನಿಗಿನಿಗಿಸುವ ಬೆಂಕಿ ಕೆಂಡದಲ್ಲಿ
ಅಮ್ಮನ ನೋವಿನ ನೆಲೆಗಳ ಪ್ರತಿಫಲನವಿತ್ತು
ದೈತ್ಯ ನಿಸರ್ಗದ ನಿಡಿದಾದ ಟೊಂಗೆಗಳಲ್ಲಿ
ಅಮ್ಮನ ಪ್ರೀತಿಯ ಜೀವಜಾಲವಿತ್ತು
ಬೆಟ್ಟದ ನಿಶ್ಚಲ ಕಲ್ಲು ಮಣ್ಣುಗಳಲ್ಲಿ
ಧರ್ಮದರ್ಶಿಗಳ ನೆರಳಿತ್ತು
ಶತಶತಮಾನಗಳಿಂದ ಗಟ್ಟಿಯಾಗಿ ನಿಂತ
ಧೃಢಚಿತ್ತದ ಬೆಟ್ಟದ ಕಲ್ಲುಗಳಲ್ಲಿ
ಅಮ್ಮ ಕಟ್ಟಿದ ಬುಡಕಟ್ಟುಗಳಿದ್ದವು.
*****