ಕಲ್ಲಿನಲ್ಲಿ ಕಠಿಣ
ಖುಲ್ಲರಲ್ಲಿ ದುರ್ಗುಣ
ಬಲ್ಲವರಲ್ಲಿ ಸುಗುಣ
ಉಂಟೆಂದೆಲ್ಲರೂ ಬಲ್ಲರು
ಇಂತೀ ಇವು ಎಲ್ಲರ ಗುಣ
ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ
ನಿಜವೆಲ್ಲಿತ್ತು ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ
[ಖುಲ್ಲರಲ್ಲಿ-ದುಷ್ಟರಲ್ಲಿ]
ಅಂಬಿಗ ಚೌಡಯ್ಯನ ವಚನ. ಕಲ್ಲಿನಲ್ಲಿ ಕಾಠಿಣ್ಯವಿದೆ, ಕೆಟ್ಟವರಲ್ಲಿ ದುರ್ಗುಣ ಇದೆ, ಬಲ್ಲವರಲ್ಲಿ ಸದ್ಗುಣ ಇದೆ ಅನ್ನುವುದು ಎಲ್ಲರಿಗೂ ಗೊತ್ತಲ್ಲವೇ? ಸರಿ ಮತ್ತೆ. ಸರಿ, ತಪ್ಪು ಎಂಬ ಹೋರಾಟವೇಕೆ? ಇರುವ ನಿಜವನ್ನು ಇರುವಂತೆ ಒಪ್ಪಿದಾಗಲೇ ಸುಖ ಅಲ್ಲವೇ?
ಗೆಲ್ಲುವ ಹಟ ಇದೆಯಲ್ಲ ಅದೇ ಸುಖಕ್ಕೆ ತೊಡಕು. ಲೋಕವನ್ನು ಬದಲಾಯಿಸಬೇಕೆಂಬ ಹಟವೂ ಅಷ್ಟೇ. ಎರಡೂ ಹೋರಾಟಗಳೇ. ಹೋರಾಟ ಇದ್ದಾಗ ಸುಖ ಎಲ್ಲಿರುತ್ತದೆ. `ಅಲ್ಲಿಗಲ್ಲಿಗೆ ಸರಿ’ ಇರುವುದೆಲ್ಲ ಇರುವ ಹಾಗೆ ಇದೆ, ಅದೇ ಸತ್ಯ ಎಂದು ಒಪ್ಪಿಕೊಂಡರೆ ಸಾಕು. ಆದರೆ ಅದೇ ಅತ್ಯಂತ ಕಷ್ಟದ ಕೆಲಸವೂ ಹೌದಲ್ಲವೇ? ನಮ್ಮ ಶಿಕ್ಷಣ, ಸಂಸ್ಕೃತಿ, ಧರ್ಮ ಎಲ್ಲವೂ ಇರುವುದನ್ನು ಇನ್ನು ಹೇಗೋ ಮಾಡಲು ಪ್ರಯತ್ನಿಸುವುದನ್ನೇ ಕಲಿಸುತ್ತವೆ!
*****