ಎಲ್ಲರೂ ಓದುವುದು ವಚನಂಗಳು
ಎಲ್ಲರೂ ನುಡಿವರು ಬೊಮ್ಮವ
ಎಲ್ಲರೂ ಕೇಳುವುದು ವಚನಂಗಳು
ಹೇಳುವಾತ ಗುರುವಲ್ಲ
ಕೇಳುವಾತ ಶಿಷ್ಯನಲ್ಲ
ಹೇಳಿಹೆ ಕೇಳಿಹೆನೆಂಬನ್ನಕ್ಕರ
ವಿರಕ್ತಿಸ್ಥಲಕ್ಕೆ ಭಂಗ ನೋಡಾ
[ಬೊಮ್ಮ-ಬ್ರಹ್ಮ]
ಅಮುಗೆ ರಾಯಮ್ಮನ ವಚನ. ಎಲ್ಲರೂ ವಚನ ಓದುತ್ತಾರೆ, ಎಲ್ಲರೂ ವಚನ ಕೇಳುತ್ತಾರೆ, ಬ್ರಹ್ಮ ಪರಮಾತ್ಮ ಇತ್ಯಾದಿ ಎಲ್ಲರೂ ಮಾತಾಡುತ್ತಾರೆ. ಆದರೆ ಹೇಳುವವನು ಗುರುವಲ್ಲ, ಕೇಳುವವನು ಶಿಷ್ಯನಲ್ಲ. ಹೇಳಿದೆ, ಕೇಳಿದೆ ಎಂಬ ಭಾವ ಇರುವವರೆಗೆ ವಿ-ರಕ್ತಿ, ಲೋಕದ ವ್ಯವಹಾರಗಳಿಗೆ ಭಾವಗಳಿಗೆ ಅಂಟಿಕೊಳ್ಳದೆ ಇರುವ ಗುಣ, ಸಾಧ್ಯವಾಗುವುದಿಲ್ಲ.
ನಮ್ಮ ನಿಮ್ಮಂಥವರನ್ನೇ ಕುರಿತು ಹೇಳುತ್ತಿದ್ದಾಳೆ ಅಲ್ಲವೇ ರಾಯಮ್ಮ!
*****