-ಹಸ್ತಿನಾಪುರದರಸನಾಗಿದ್ದ ಶಂತನುವಿನ ಮಗನಾದ ಯುವರಾಜ ವಿಚಿತ್ರವೀರ್ಯನು, ಹಿರಿಯನಾದ ಭೀಷ್ಮ ಮತ್ತು ತಾಯಿ ಸತ್ಯವತಿಯ ಅಪೇಕ್ಷೆಯಂತೆ ಕಾಶಿರಾಜನ ಇಬ್ಬರು ಪುತ್ರಿಯರಾದ ಅಂಬಿಕೆ ಹಾಗೂ ಅಂಬಾಲಿಕೆಯರನ್ನು ಮದುವೆಯಾದ. ಇಬ್ಬರು ರಾಜಕುಮಾರಿಯರನ್ನು ಮದುವೆಯಾದರೂ ಅವನ ಮನಸ್ಸು ಅದೇಕೋ ಬಿಕೋ ಎನ್ನುತ್ತಿತ್ತು. ಅವನ ತಾಯಿ ಮಾತ್ರ ಸೊಸೆಯಂದಿರು ಬಂದ ಆನಂದದಲ್ಲಿ ಮುಳುಗಿದ್ದಳು. ಇನ್ನು ಅರಮನೆಯಲ್ಲಿ ಅಂಬೆಗಾಲಿಕ್ಕುವ ಮಕ್ಕಳ ಹೆಜ್ಜೆಯ ಸಪ್ಪಳವನ್ನೂ ಅವರ ನಗುವನ್ನೂ ಕಣ್ಣಾರೆ ಕಾಣಬಹುದೆಂದು ಕನಸು ನಿತ್ಯವೂ ಕಾಣತೊಡಗಿದಳು. ಆದರೆ ವಿಧಿ ಅವರ ಬಾಳಲ್ಲಿ ಚೆಲ್ಲಾಟವಾಡಿತ್ತು-
ಅಂಬಿಕೆ, ಅಂಬಾಲಿಕೆಯರ ಮದುವೆಯು ವಿಚಿತ್ರವೀರ್ಯನ ಜೊತೆಯಲ್ಲಿ
ಸಂಭ್ರಮ ಸಡಗರದೊಂದಿಗೆ ನಡೆಯಿತು, ಮಂಗಳವಾಯಿತೆ ಕೊನೆಯಲ್ಲಿ?
ರಾಜಕುಮಾರನು ನೋಡಲು ಸುಂದರ, ರೋಗವು ದೇಹದ ಒಳಗೆಲ್ಲ
ಮಡದಿಯರಿಗೆ ಸರಿಯೆನಿಸಿದ ಗಂಡನು ಅವನಾಗಲು ವಿಧಿ ಬಿಡಲಿಲ್ಲ
ವಿಚಿತ್ರವೀರ್ಯನು ಕೆಲವೇ ದಿನದಲಿ ಕ್ಷಯರೋಗಕ್ಕೆ ಒಳಗಾದ
ಏನೇ ಔಷಧಿ ಮಾಡಿದರೂನೂ ಗುಣವಾಗದೆ ಬಲು ಬಡವಾದ
ದಿನಗಳು ಸರಸರ ಉರುಳುತಲಿದ್ದವು ಕಾಲನ ಓಟದ ಆಟದಲಿ
ಹೂವುಗಳೆಷ್ಟೋ ಅರುಳುತಲಿದ್ದವು ನಿತ್ಯವು ಕಾಲನ ತೋಟದಲಿ
ಅರಳಿದ ಹೂಗಳು ಬಾಡುತಲಿದ್ದವು ವಿಧಿಯಾಟದ ಕಟುನಿಯಮದಲಿ
ನಿಯಮವ ಮೀರುವರಾರಿರುವರು? ಈ ದೇವನ ಸೃಷ್ಟಿಯ ಲೋಕದಲಿ!
ಅಂಬಿಕೆ ಅಂಬಾಲಿಕೆಯರ ಸಂಗಡ ಇಲ್ಲದೆ ಸುಮಧುರ ಸಂಬಂಧ
ವಿಚಿತ್ರವೀರ್ಯನು ನರಳತೊಡಗಿದನು ವರ್ಣಿಸಲಾಗದ ನೋವಿಂದ
ಆನಂದವು ಇರದಾಯಿತು ಕೊನೆಗೆ ಹಸ್ತಿನಪುರದರಮನೆಯಲ್ಲಿ
ವಿಚಿತ್ರವೀರ್ಯನು ವಿಚಿತ್ರ ರೋಗಕೆ ಬಲಿಯಾದನು ಕೆಲದಿನದಲ್ಲಿ!
ದಾಶರಾಜ ಬಯಸಿದ್ದನು ಆ ದಿನ ಮೊಮ್ಮಕ್ಕಳಿಗಧಿಕಾರವನು
ವಿಧಿಯ ಆಟದಲಿ ಸೇರಿದರೆಲ್ಲರು ಎಂದೂ ಬಾರದ ಲೋಕವನು
ಶಂತನು ಪತ್ನಿಯು ಸಂಕಟಗೊಂಡಳು ಮಕ್ಕಳ ಅಕಾಲ ನಿಧನಕ್ಕೆ
ಭೀಷ್ಮನು, ಚಿಂತೆಯ ಮಡುವಲಿ ಮುಳುಗಿದ ಒಡೆಯರಾರು ಸಾಮ್ರಾಜ್ಯಕ್ಕೆ?
ಕುರುಸಾಮ್ರಾಜ್ಯವು ಅನಾಥವಾಯಿತು ಸಿಂಹಾಸನಕ್ಕೆ ದಿಕ್ಕಿಲ್ಲ
ಭಾರತವಂಶವು ಬರಡಾಗಿದ್ದಿತು ವಂಶೋದ್ಧಾರಕ ಅದಕಿಲ್ಲ
ಶೋಕವು ಎಲ್ಲೆಡೆ ಮಡುಗಟ್ಟಿದ್ದಿತು ಆನಂದದ ಸುಳಿವಿರಲಿಲ್ಲ
ನಗುಮುಖವಿಲ್ಲದ ಅರಮನೆ ಬದುಕಲಿ ಉಳಿದಿರುವವರಿಗೆ ಸುಖವಿಲ್ಲ!
ಶಂತನು ರಾಜನು ಅಪರವಯಸ್ಸಲಿ ತನ್ನ ಕಾಮನೆಗೆ ಬಲಿಯಾಗಿ
ಕಿರಿಯ ವಯಸ್ಸಿನ ಸತ್ಯವತಿಯ ಬಾಳಲ್ಲಿ ಬಂದಿದ್ದ ಒಲವಾಗಿ
ಮುದುಕನು ಶಂತನು ಯುವತಿ ಸತ್ಯವತಿ ಬಾಳಿನಲ್ಲಿ ಹೊಸ ಚೈತನ್ಯ
ಸಂಪತ್ತಿನ ಜೊತೆ ಅಧಿಕಾರವಿರುವಲ್ಲಿ ಏನು ನಡೆದರೂ ಅದು ಮಾನ್ಯ!
ತಂದೆ ತಾಯಿಯರ ಅಂಕೆಯು ಇಲ್ಲದೆ ಬೆಳೆದ ಮಕ್ಕಳು ಅವರಾಗಿ
ಸಣ್ಣಮಟ್ಟದಕೆ ಜಗಳವಾಡುವುದು ಚಿತ್ರಾಂಗದನಿಗೆ ಚಟವಾಗಿ
ತನ್ನದೇ ಹೆಸರ ಗಂಧರ್ವನ ಜೊತೆ ಗುದ್ದಾಡಿದ್ದನು ಹಿರಿಯವನು
ಹುರುಡು ಸ್ಪರ್ಧೆಯಲಿ ಹೋರಾಡುತ್ತಲಿ ತೆತ್ತುಬಿಟ್ಟಿದ್ದ ಜೀವವನು
ಕಿರಿಯ ಮಗನಿಗೆ ಮದುವೆ ಮಾಡಿದರೆ ಸರಿಯಾಗುವನೆಂದೆಣಿಸಿದರು
ಒಂದೇ ಬಾರಿಗೆ ಎರಡು ಹೆಂಡಿರನು ಅವನ ಬಾಳಲ್ಲಿ ಬರಿಸಿದರು
ಆದರೆ ಅವನೂ ವಿಧಿವಿಲಾಸದಲಿ ಬಲಿಯಾಗಿದ್ದನು ಒಂದು ದಿನ
ವಿಧಿಯ ಆಟವನು ಬಲ್ಲವರಾರು? ಎಲ್ಲವೂ ಅವನ ಆಧೀನ!
ಹಿರಿಯರು ತೋರಿದ ಹಾದಿಯಲ್ಲಿಯೇ ಮಕ್ಕಳು ನಡೆವುದು ಒಳ್ಳೆಯದು
ಕಿರಿಯರು ಹಿರಿಯರ ಅನುಸರಿಸುವುದೇ ಬದುಕಿನಲ್ಲಿ ಹಿತವಾಗುವುದು
ಕಿರಿಯರು ಉತ್ತಮರಾದರು ಎಂದರೆ ಹಿರಿಯರು ಹಿರಿಹಿರಿ ಹಿಗ್ಗುವರು
ಕಿರಿಯರು ದಾರಿಯ ತಪ್ಪಿ ನಡೆದರೆ ಹಿರಿಯರು ಬಹಳವೆ ಕುಗ್ಗುವರು
ರಾಜ್ಯಕೆ ವಾರಸುದಾರರು ಇಲ್ಲದೆ ಸತ್ಯವತಿಯು ಮುಮ್ಮಲ ಮರುಗಿ
ಕುರುಕುಲ ಸೊಸೆಯರು ಮಕ್ಕಳ ಪಡೆಯುವ ಭಾಗ್ಯವು ಇಲ್ಲೆನ್ನುತ ಕೊರಗಿ
ಭೀಷ್ಮನನ್ನು ಬರಹೇಳಿದ ರಾಣಿಯು ಮಮತೆಯಿಂದ ಹತ್ತಿರ ಕರೆದು
ದುಗುಡಗೊಂಡ ಮನದಲ್ಲಿಯೆ ನುಡಿದಳು ಅಂಗಲಾಚುತ್ತ ಹೀಗೆಂದು-
“ಕುಮಾರ! ಬದುಕಲಿ ಬಹಳ ನೊಂದಿರುವೆ ಬರಿಯ ಕಷ್ಟವನು ಉಂಡಿರುವೆ
ಮದುವೆಯಾದಾಗಿನಿಂದ ಇದುವರೆಗೆ ನಡೆದುದು ನೀನೇ ಕಂಡಿರುವೆ
ಶಂತನು ವಂಶವು ಬೆಳೆಯದೆ ಹೋಯಿತು ಪಾಪಿಯಾಗಿರುವ ನನ್ನಿಂದ
ಆತನ ಸಂತತಿ ಅಳಿಯದೆ ಇಳೆಯಲಿ ಉಳಿಯುವುದಾಗಲಿ ನಿನ್ನಿಂದ
ನಿನ್ನ ಪ್ರತಿಜ್ಞೆಯ ಪಕ್ಕಕೆ ಮಡಗುತ ಮದುವೆಯ ಯೋಚನೆ ಮಾಡುವೆಯಾ
ಇನ್ನಾದರು ನೀ ಹಠವನು ತೊರೆಯುತ ನನ್ನೀ ಮಾತನು ನಡೆಸುವೆಯಾ?”
ಭೀಷ್ಮನು ನುಡಿದನು- “ಅಮ್ಮಾ, ನಾನೇ ಮಾತಿಗೆ ತಪ್ಪಿ ನಡೆಯುವುದೆ?
ಧರ್ಮಮಾರ್ಗವನು ತೊರೆದದ್ದಾದರೆ ನನಗಪಕೀರ್ತಿಯು ಬರದಿಹುದೆ?
ನಿನ್ನ ವಿವಾಹದ ಸಮಯದಿ ಆ ದಿನ ಮಾಡಿದ ಪ್ರತಿಜ್ಞೆ ಮರೆಯುವೆನೆ?
ಕನ್ಯಾಶುಲ್ಕವದೆಂದೇ ಭಾವಿಸಿ ನೀಡಿದ ಮಾತನು ಮುರಿಯುವೆನೆ?
ಭೀಷ್ಮಪ್ರತಿಜ್ಞೆಗೆ ಎದುರಿರಬಾರದು, ಇರಲೇಕೂಡದು ಅನುಮಾನ
ಭೀಷ್ಮನು ಎಂದೂ ಮಾತಿಗೆ ತಪ್ಪನು ಅವನದು ಒಂದೇ ತೀರ್ಮಾನ
ಮಾತಿಗೆ ಬದ್ಧನು ಎನ್ನುತ ಭೀಷ್ಮನು ಮಾತೆಯ ಮಾತಿಗೆ ಮರುನುಡಿದ
ನೀತಿ ನಿಜಾಯಿತಿ ಎಂಬುದನೆಂದೂ ತೊರೆಯೆನೆಂದು ಹಠವನು ಹಿಡಿದ!
ಭಲೇ! ಭಲೇ! ಭಲೆ! ಭಲೇ, ಭೀಷ್ಮನೆ, ಭಲಾ! ಭಲಾ! ನೀ ನಿಸ್ಸೀಮ
ಭಲೇ! ನಿನ್ನ ಬದ್ಧತೆ ಬಲವಾದುದು, ಭಲೇ! ನಿನ್ನ ಮಾತಿನ ಧರ್ಮ
ಬಲವಂತನು ಹುಲುಮಾನವನಾಗನು ಬಲವೇ ಅವನಿಗೆ ಆಭರಣ
ಕುಲಕ್ಕೆ ಕೀರ್ತಿಯ ತರುವಂಥವ ನೀನಿದೋ ನಿನಗೆ ಲೋಕದ ನಮನ!
ಅಚಲಿತ ಪ್ರತಿಜ್ಞೆ ಮಾಡಿದ ಭೀಷ್ಮನ ಒಪ್ಪಿಸಲಾಗದೆ ಸತ್ಯವತಿ
ವಂಶೋದ್ಧಾರದ ಯೋಚನೆ ಮಾಡುತ ಸವೆದಳು ಆ ದೌರ್ಭಾಗ್ಯವತಿ
ಕಾರ್ಯಸಾಧನೆಯ ಮಾರ್ಗವ ಚಿಂತಿಸಿ ಭೀಷ್ಮನ ಸಂಗಡ ಮಾತಾಡಿ
ಹೇಗಾದರೂ ಸರಿ ಭಾರತವಂಶವ ಬೆಳೆಸುವ ನಿರ್ಧಾರವ ಮಾಡಿ
‘ಮಕ್ಕಳ ಭಾಗ್ಯವು ಇಲ್ಲದಾಗಿರುವ ವಿಚಿತ್ರವೀರ್ಯನ ಸತಿಯರಿಗೆ
ದಿಕ್ಕುಗಾಣದೆಲೆ ಕುಳಿತಿರುವಂತಹ ಭರತಕುಲದ ಆ ಸೊಸೆಯರಿಗೆ
ಯೋಗ್ಯನಾದ ಸದ್ಬ್ರಾಹ್ಮಣನಿಂದಲಿ ನಿಯೋಗಪದ್ಧತಿ ಅನುಸರಿಸಿ
ಪುತ್ರದಾನವನು ಮಾಡಿಸಬೇಕಿದೆ ಸೊಸೆಯಂದಿರ ಬಸುರನು ನಿಲಿಸಿ’
ಇಂತಹ ಬೇಡಿಕೆಯನ್ನು ಬೇಡಿದಳು ಭೀಷ್ಮನಲ್ಲಿ ನೊಂದಿದ್ದವಳು
ತುಂಬುಮನಸಿನಲಿ ಕೋರಿದಳವನನು ನಡೆಸಿಕೊಡೆನ್ನುತ ಬೆಂದವಳು
ಭೀಷ್ಮನು ತಾಯಿಯ ಮಾತಿನಂತೆಯೇ ನಡೆಸಿಕೊಡುವೆನೆಂದೊಪ್ಪಿದನು
‘ಸೂಕ್ತವಾದ ವ್ಯಕ್ತಿಯ ಹುಡುಕುವೆನು’ ಎಂದು ತಾಯಿಯಲಿ ಹೇಳಿದನು
ವಂಶವ ಬೆಳೆಸಲು ಇಂಥ ನಿರ್ಧಾರ ಕೈಗೊಂಡರು ಅರಮನೆಯಲ್ಲಿ
ಅಂಬಿಕೆ ಅಂಬಾಲಿಕೆಯರ ಕೇಳದೆ ತಾವೇ ನಿರ್ಧರಿಸಿದರಲ್ಲಿ!
-ವಿವಾಹಪೂರ್ವದ ಸಮಯದೊಳಂದು ದಾಶರಾಜ ಸುತೆ ರೂಪವತಿ
ಯಮುನಾನದಿಯಲಿ ದೋಣಿಯ ನಡೆಸುತ ಹೆಸರಾಗಿದ್ದಳು ಗಂಧವತಿ
ಒಮ್ಮೆ ಪರಾಶರನೆಂಬುವ ಮುನಿವರ ಗಂಧವತಿಯ ಸಂಧಿಸಿದಾಗ
ಒಮ್ಮತದಿಂದಲಿ ಮೊಳಕೆಯೊಡೆದಿತ್ತು ಇಬ್ಬರಲ್ಲಿಯೂ ಅನುರಾಗ
ಅನುರಾಗದ ಹೊಳೆ ಹರಿದು ಮನದಲ್ಲಿ ಮೂಡಿಬಂದಿರಲು ಹೊಸರಾಗ
ಅನುಮತಿಯೊಂದಿಗೆ ಕೂಡಿದ ಅವರಿಗೆ ಪುತ್ರನೊಬ್ಬ ಜನಿಸಿದನಾಗ
ಹರಿಯುವ ಯಮುನಾನದಿಯೊಡಲಲ್ಲಿನ ಪುಟ್ಟದಾದೊಂದು ದ್ವೀಪದಲಿ
ಹುಟ್ಟಿದ ಕಪ್ಪನೆ ಪುತ್ರನ ಕರೆದರು ‘ಕೃಷ್ಣದೈಪಾಯನ’ ಎನ್ನುತಲಿ
ಲೋಕವು ಅರಿಯುವ ಮುನ್ನವೆ ಅವನನು ಕರೆದೊಯ್ದಿದ್ದ ಪರಾಶರನು
ಲೋಕದಪವಾದ ಬರದಿರಲೆನ್ನುತ ಉಳಿಸಿದನಲ್ಲಿಯೆ ಕನ್ಯೆಯನು!
ಗಂಧವತಿಯ ಈ ಕೃತ್ಯದಿಂದಾಗಿ ತಂದೆ ದಾಶನಿಗೆ ಸಂಕಟವು
ಚೆಂದವಾದ ಮಗಳನ್ನು ತಡೆಹಿಡಿವ ದಾರಿಯೇನೆಂದು ಸಂತತವು
ಹೊಟ್ಟೆಯ ಪಾಡಿಗೆ ದೋಣಿಯ ನಡೆಸುವ ಕಾಯಕವೂ ಇರಬೇಕಿತ್ತು
ರೆಟ್ಟೆಯಲ್ಲಿ ಬಲ ಇರುವವರೆವಿಗೂ ತಾನು ದುಡಿಯಲೇಬೇಕಿತ್ತು
ಅಂದಿನಿಂದಲೇ ಗಂಧವತಿ ತನ್ನ ದುಡುಕಿಗೆ ನೊಂದಳು ಬಹುವಾಗಿ
ತಂದೆಯಾಜ್ಞೆಯನ್ನು ಮೀರದೆ ಉಳಿದಳು ತೀರದ ಮೌನಕೆ ಶರಣಾಗಿ
ತಂದೆಯು ಅವಳಿಗೆ ಬಂಧನ ಹಾಕಿದ ನಂಬದಿರೆನ್ನುತ ಯಾರನ್ನೂ
ನಿಂದೆಯು ಬೆನ್ನಿನ ಹಿಂದೆಯೇ ಬಂದು ಕೊಲ್ಲವುದೆಂದನು ಮನವನ್ನು!
ಮುಂದೆ ಒಂದು ದಿನ ಶಂತನು ರಾಜನು ಅವಳ ಅಂದಕ್ಕೆ ಮರುಳಾಗಿ
ಚೆಂದದ ಬದುಕನು ನೀಡುವೆನೆನ್ನುತ ವಚನವಿತ್ತ ಅಡಿಯಾಳಾಗಿ
ಹಸ್ತಿನಾಪುರದ ರಾಜನ ಮಡದಿಯು ಬೆಸ್ತರ ಹುಡುಗಿಯು ಗಂಧವತಿ
ಹಸ್ತಿನಪುರದರಮನೆಯನು ಸೇರುತ ಹೆಸರಾಗಿದ್ದಳು ಸತ್ಯವತಿ
ಶಂತನುರಾಜನ ಕೈಹಿಡಿದವಳು ತಾನಾದಳು ಪಟ್ಟದ ಅರಸಿ
ಮತ್ತೆ ಬದುಕಿನಲಿ ಕನಸನು ಕಂಡಳು ಮನದ ನೆಮ್ಮದಿಯನ್ನರಸಿ
ಮಂದಮತಿ ರಾಜ ಹಿಂದೆ ನಡೆದುದನು ಕೇಳುವ ಸ್ಥಿತಿಯಲಿ ಇರಲಿಲ್ಲ
ಅಂದದೆದುರಿನಲಿ ಮಂಡಿಯೂರಿತ್ತು ಹಿಂದಿನದು ಲೆಕ್ಕವಿರಲಿಲ್ಲ!
ಪರಾಶರ ಮುನಿಯು ದೈಪಾಯನನನ್ನು ಹಿಮಾಲಯದಲ್ಲಿ ಬೆಳೆಸಿದನು
ಚತುರ್ವೇದಗಳ ತಿಳಿಸುತ ಅವನಿಗೆ ಸಕಲ ವಿದ್ಯೆಗಳ ಕಲಿಸಿದನು
ಶಿಸ್ತು ಶ್ರದ್ಧೆಗಳ ಧರಿಸಿ ಎದೆಯಲ್ಲಿ ಕುಮಾರ ಕಲಿತನು ವಿದ್ಯೆಯನು
ಇಷ್ಟದಿಂದ ಎಲ್ಲವನೂ ತಿಳಿದನು ಬೆಳೆಸಿಕೊಂಡು ಸದ್ಭುದ್ಧಿಯನು
ಹಿಮವತ್ಪರ್ವತ ತಪ್ಪಲಿನಲ್ಲಿ ಮಹಾಜ್ಞಾನಿಯಾಗುತ ಬೆಳೆದ
ನಾಲ್ಕು ವೇದಗಳ ವಿಭಜಿಸಿ ಹೇಳುತ ‘ವೇದವ್ಯಾಸ’ ಹೆಸರನು ಪಡೆದ!-
ಸತ್ಯವತಿಯು ಈ ವಿಷಯವೆಲ್ಲವನ್ನು ಭೀಷ್ಮನ ಸಮ್ಮುಖ ಹೇಳಿದಳು
‘ವ್ಯಾಸನ ಕರೆಯಿಸಿ ಪುತ್ರದಾನವನು ಮಾಡಿಸು’ ಎನ್ನುತ ಬೇಡಿದಳು
ಭೀಷ್ಮನು, ಮಾತೆಯು ಹೇಳಿದ ಹಾಗೆಯೆ ಮಾಡುವೆನೆನ್ನುತ ಹೇಳಿದನು
ಹಿಮಪರ್ವತದೆಡೆ ದೂತರ ಕಳುಹಿಸಿ ಕರೆಸಿದ ವ್ಯಾಸಮಹರ್ಷಿಯನು!
ಕಪ್ಪನೆ ಬಣ್ಣದ ಕೆಂಪನೆ ಕಣ್ಣಿನ ಕುಳ್ಳನೆ ಒರಟಿನ ದೇಹದವ
ಉದ್ದನೆ ಇಳಿದಿಹ ಗಡ್ಡಮೀಸೆಗಳು ಕೆಂಜಡೆ ಹೊಂದಿದ ವೇಷದವ
ಎಡದ ಕೈಯಲ್ಲಿ ಹಿಡಿದ ಕಮಂಡಲು ಯೋಗದಂಡ ಬಲಗೈಯಲ್ಲಿ
ಎಡದ ಕಂಕುಳಲಿ ಮೃಗದ ಚರ್ಮವಿರೆ ನಡಿಗೆಯಿತ್ತು ಬಿಡುಬೀಸಿನಲಿ
ನೋಡಿದೊಡನೆಯೇ ಮನವನು ಮುದುಡಿಸುವಂತಹ ರೂಪವು ಅವನದ್ದು
ಬೀದಿಬದಿಯ ಬೈರಾಗಿಯ ತೆರದಲಿ ಕಾಣುತಲಿದ್ದನು ಯುವಗೊಡ್ಡು
ಇಂತಹ ವ್ಯಾಸಮಹರ್ಷಿಯು ಬಂದನು ಹಸ್ತಿನಾಪುರದ ಅರಮನೆಗೆ
ಮಕ್ಕಳ ಭಾಗ್ಯವ ಕರುಣಿಸಲೆನ್ನುತ ಭಾರತವಂಶದ ಸೊಸೆಯರಿಗೆ!
ಕಾಶೀರಾಜನ ಕರುಳಿನ ಕುಡಿಗಳು ಅವರಿಗೆ ಕೊರತೆಯು ಏನಂತೆ?
ಕನ್ಯೆಯರವರನ್ನು ಹೊತ್ತು ತಂದಿದ್ದ ಅವರ ಮನದಲ್ಲಿ ಬಲುಚಿಂತೆ!
ಯಾರ ಕೈಹಿಡಿದು ಹೇಗಿರುತಿದ್ದರೋ ಬಂದಿತ್ತವರಿಗೆ ಶನಿ ಕಾಟ
ಯಾರೂ ನಂಬಲು ಆಗದ ತೆರದಲಿ ಆಡಿತಿಲ್ಲಿ ವಿಧಿ ತನ್ನಾಟ!
ಸತ್ಯವತಿ ಹಿರಿಯ ಸೊಸೆಯನ್ನು ಒಪ್ಪಿಸಿ ವ್ಯಾಸನ ಜೊತೆಗೆ ನಿಯೋಗಕ್ಕೆ
ಅತ್ತೆಯ ಮಾತನು ಮೀರಲು ಆಗದೆ ಒಪ್ಪಿದ್ದಳು ಸಹಯೋಗಕ್ಕೆ
ವಂಶವ ಬೆಳೆಸುವ ಕಾಯಕವೊಂದೇ ರಾಜವಂಶದವರೆದುರಲ್ಲಿ
ಹಿಂಸೆಯಾದರೂ ಸಹಿಸಿಕೊಳ್ಳುವುದು ಸಹ್ಯವಾಗಬೇಕವರಲ್ಲಿ
ಅಂಬಿಕೆ ಮನದಲಿ ನೊಂದುಕೊಂಡಳು ಅಂದಿನ ತನ್ನಯ ಸ್ಥಿತಿಗಾಗಿ
ಕಾಶೀರಾಜನ ಪುತ್ರಿಯೆನಿಸಿದ್ದ ತನಗೊದಗಿದ ದುರ್ಗತಿಗಾಗಿ
ಮನದಲಿ ಇಷ್ಟವು ಇಲ್ಲದಿದ್ದರೂ ಅತ್ತೆಯ ಮಾತಿಗೆ ಬೆಲೆಕೊಟ್ಟು
ಕಂಗಳ ಮುಚ್ಚುತ ನಿರ್ಭಾವದಲ್ಲಿ ಮನಸಿನ ಭಾವನೆ ಅದುಮಿಟ್ಟು
ಮಾಂತ್ರಿಕಶಕ್ತಿಗೆ ಮರುಳಾದಂತೆಯೆ ನಿಯೋಗಪದ್ಧತಿ ಬಲೆಯೊಳಗೆ
ಯಾಂತ್ರಿಕವಾಗಿಯೆ ಸಹಕರಿಸಿದ್ದಳು ವ್ಯಾಸಮಹರ್ಷಿಯ ಜೊತೆಯೊಳಗೆ!
ನವಮಾಸಗಳಲಿ ಅಂಬಿಕೆ ಗರ್ಭದಿ ಜನಿಸಿದ ಪುತ್ರನು ಕುರುಡಾಗಿ
ಪುತ್ರೋತ್ಸವದ ಸಮಯಕೆ ಬಂದನು ವ್ಯಾಸಮಹರ್ಷಿಯು ತಾನಾಗಿ
ತಾಯಿಗೆ ಹೇಳಿದ “ಅಂಬಿಕೆ ಅಂದು ಕಣ್ಣು ಮುಚ್ಚಿದ್ದ ಫಲವಾಗಿ
ಕುರುಡನಾಗುವ ಮಗ ಹುಟ್ಟಿರುವನು ಉಳಿವನವನು ಅತಿಬಲನಾಗಿ”
ಕಣ್ಣುಗಳಿಲ್ಲದ ಕುರುಡನು ರಾಜ್ಯಕೆ ಆಗಲಾರ ವಾರಸುದಾರ
ಕಣ್ಣಿರುವವನನು ರಾಜನಾಗಲು ಅರ್ಹನಾಗುವನು ಸರದಾರ!
ತಾಯಿ ಸತ್ಯವತಿ ಮಗನ ಬೇಡಿದಳು- “ಆದದ್ದಾಯಿತು ನೀನೀಗ
ಅಂಬಾಲಿಕೆಗೆ ಮಗುವನು ಕರುಣಿಸು, ವಾರಸುದಾರನು ಬೇಕೀಗ”
ತಾಯಿಯ ತೀರಿಸಲೆನ್ನುತ ಒಪ್ಪಿದ ಮತ್ತೆ ನಿಯೋಗಕ್ಕೆ
ಸತ್ಯವತಿಯ ಕಿರುಸೊಸೆಯ ಜೊತೆಯಲ್ಲಿ ಮತ್ತೆ ಒಂದು ಸಹಯೋಗಕ್ಕೆ
ಅಂಬಾಲಿಕೆಯೂ ವ್ಯಾಸ ರೂಪವ ಕಂಡು ಹೆದರಿದಳು ಬಹುವಾಗಿ
ಭಯದಲಿ ಬೆದರುತ ಬಿಳಿಚಿದ ಮೊಗದಲಿ ಸಹಕರಿಸಿದ್ದಳು ಶಿಲೆಯಾಗಿ
ಫಲಿತವು ಅವಳಿಗೆ ನವಮಾಸದಲ್ಲಿ ಬಿಳುಚಿದ ದೇಹದ ಸುಕುಮಾರ
ಪರಿಪೂರ್ಣತೆಯನ್ನು ಪಡೆಯದ ಕಾರಣ ಆಗಲಾರನವ ಸರದಾರ
ಮತ್ತೆ ತಾಯಿ ಬಲವಂತ ಮಾಡಿದಳು ವ್ಯಾಸ ಮಹರ್ಷಿಯ ಇನ್ನೊಮ್ಮೆ
ಹಿರಿಯ ಸೊಸೆಯಲ್ಲಿ ವಂಶದ ಕುಡಿಯನು ಅರಳಿಸು ಎಂದಳು ಮತ್ತೊಮ್ಮೆ
ತಾಯಿಯ ಮಾತಿಗೆ ಕಟ್ಟುಬಿದ್ದವನು ಒಪ್ಪಿದ ವ್ಯಾಸನು ಈ ಬಾರಿ
ಆದರೆ ಅಂಬಿಕೆ ಇಷ್ಟವಿಲ್ಲದೆಯೆ ಹುಡುಕಿದ್ದಳು ಬೇರೆಯ ದಾರಿ
ಅತ್ತೆಗೆ ಗೊತ್ತಾಗದ ರೀತಿಯಲಿ ರಾತ್ರಿಯ ಕತ್ತಲೆ ಹೊತ್ತಿನಲಿ
ಕಳುಹಿಸಿಕೊಟ್ಟಳು ದಾಸಿಯೊಬ್ಬಳನು ವ್ಯಾಸನ ಬಳಿಗೆ ಯುಕ್ತಿಯಲಿ
ದಾಸಿಯು ಋಷಿಯನು ಭಕ್ತಿ ಭಾವದಲಿ ಸೇವಿಸಿ ಪಡೆದಳು ಮಗನನ್ನು
ವಿವೇಕಿ ಸದ್ಗುಣ ಜ್ಞಾನಿಯಾದಂಥ ಧರ್ಮಮೂರ್ತಿಯಾದವನನ್ನು!
ಹುಟ್ಟಿದ ಮಕ್ಕಳಿಗಿಟ್ಟರು ಹೆಸರನು ಅಂಬಿಕೆ ಪತ್ರನು ‘ಧೃತರಾಷ್ಟ್ರ’
ಕಣ್ಣಿನ ದೃಷ್ಟಿಯು ಇಲ್ಲದಿದ್ದರೂ ಎಲ್ಲರ ಪ್ರೀತಿಗವನು ಪಾತ್ರ
ಅಂದದ ಮಗು ಅಂಬಾಲಿಕೆ ಪುತ್ರನು ಕರೆದರವನ ಪ್ರೀತಿಯ ‘ಪಾಂಡು’
ಬಿಳಚಿದ ದೇಹದ ರೋಗವ ಹೊಂದಿದ ಅವನೆಲ್ಲರ ಮುದ್ದಿನ ಚೆಂಡು
ದಾಸಿಯ ಪುತ್ರನ ಕಡೆಗಣಿಸಿದ್ದರ ಅವನಿಗೆ ಹೆಸರಿಟ್ಟರು ‘ವಿದುರ’
ಮುದ್ದಿನ ಮಕ್ಕಳು ನಲಿಯುತಲಿರುತಿರೆ ಬಾಲಲೀಲೆಗಳು ಬಲು ಮಧುರ!
ಶಂತನು ರಾಜನ ವಂಶವು ಬೆಳೆಯಿತು ಹಸ್ತಿನಪುರದರಮನೆಯಲ್ಲಿ
ಭೀಷ್ಮನು ಅವರಿಗೆ ಕೊಡಿಸಿದ ಎಲ್ಲಾ ವಿದ್ಯೆಯ ಸೂಕ್ತ ಸಕಾಲದಲಿ
ಧೃತರಾಷ್ಟ್ರನು ತಾ ಕುರುಡನಾದರೂ ಬೆಳೆದನು ಅತಿಬಲ ತಾನಾಗಿ
ಪಾಂಡುವು ಸುಂದರ ರೂಪವಿದ್ದರೂ ಬೆಳೆದನು ರೋಗದ ಗೂಡಾಗಿ
ವಿದುರನು ದಾಸಿಯ ಆರೈಕೆಯಲ್ಲಿ ಬೆಳೆದನು ನೀತಿಯ ತವರಾಗಿ
ಹಸ್ತಿನಾಪುರದ ಅರಮನೆಯಲ್ಲಿನ ಎಲ್ಲರ ಅರಿವಿನ ಬೆಳಕಾಗಿ
ಹಿರಿಯನು ಕುರುಡನು ಆದುದರಿಂದಲಿ ಅರ್ಹನಲ್ಲ ಆಗಲು ರಾಜ
ಪಾಂಡುವು ಪಟ್ಟಕೆ ಅರ್ಹನು, ಅವನೇ ಕುರುಸಾಮ್ರಾಜ್ಯದ ಯುವರಾಜ!
*****