ಆ ಜಾತ್ರೆಯ ತುಂಬೆಲ್ಲಾ ಮಣ್ಣ ವಾಸನೆ
ಹರ್ಷ ಗೆಲವು ಅತಿರೇಕಗಳು ತೊಟ್ಟಿಕ್ಕುವ
ನಾಟಕಗಳು ಅಂಕದ ಪರದೆ, ಹೆಜ್ಜೆಗಳ ಮೇಲೆ
ಅವರಿವರ ಪಾದದ ಗುರುತುಗಳು.
ಆಶ್ಚರ್ಯ ಆಸಕ್ತಿಯ ಪರದೆಯ ಕತ್ತಲು
ಬೆಳಕಿನಲಿ ಮಾರಾಟಕ್ಕೆ ಇವೆ ನಿರ್ಗತಿಕನ ಕನಸುಗಳು.
ಗುಂಪಿನ ಮಧ್ಯದ ಒಂದು ಗದ್ದಲಲಿ ಎಲ್ಲ
ದರ್ಶನಗಳು, ತಲೆಮಾರು ದಾಟಿದ ಬೆಳಕ ಕಿರಣಗಳು.
ಕೂಗಾಟ, ಹರ್ಷ, ಜೂಜು, ಬಾಜಿ ಎಲ್ಲರೂ ಖುಷಿ
ಮನರಂಜನೆಯ ಲೋಕಪ್ರಿಯ, ತಮ್ಮ ಪಾಲಿಗೆ
ದಕ್ಕಿದ ಕ್ಷಣಗಳ ಉಸಿರಾಡುತ್ತಿದ್ದಾರೆ. ಮತ್ತೆ ಡೊಂಬರಾಟ
ನಡೆದಿದೆ. ಸೂರ್ಯ ಎದ್ದ ಧೂಳಿಗೆ ಮಂಕಾಗಿದ್ದಾನೆ.
ರಾಶಿ ಹಾಕಿದ ಗುಂಪಿನಲಿ ಮಗುವಿನ ಗೊಂಬೆ,
ಅಳುತ್ತಿದೆ ಹಾಲಿಗಾಗಿ, ಎಲ್ಲರೂ ವ್ಯಾಪಾರದ ಭರಾಟೆಯಲಿ,
ಕಷ್ಟದ ನಷ್ಟ ತುಂಬವ ಲೆಕ್ಕಾಚಾರದಲಿ ತೊಡಗಿದ್ದಾರೆ.
ಅವಳು ನೋಡುತ್ತಿದ್ದಾಳೆ ಗಾಳಿ ಬೀಸಿದತ್ತ ಚದುರುವ ಜನಗಳ,
ಒಂದು ಊಟ, ಒಂದು ಆಟದ ಸಾಮಾನು ಮಗಳಿಗೆ
ಕೊಡಿಸಬಹುದಾಗಿತ್ತು, ಆದರೆ ಆತುರದ ಜೀವ
ಹಸಿದ ಪ್ರಾಣಿಯಂತೆ, ಅವಳ ಹಿಂಬಾಲಿಸಿ ಸನ್ನೆ ಮಾಡುತ್ತಿತ್ತು.
ಕಣ್ಣೀರಿನಿಂದ ಸುಟ್ಟ ಅವಳ ಕಣ್ಣುಗಳಲಿ ಬಹಳಷ್ಟು ವರ್ಷಗಳ ದುಃಖ.
ಜಾತ್ರೆ ಜನಜಂಗುಳಿಯ ಮಧ್ಯೆ ಸಂತಳ ನೆರಳು ಹರಡಿತ್ತು.
*****