ಆಳುತನದ ಮಾತನೇರಿಸಿ ನುಡಿದಡೆ
ಆಗಳೆ ಕಟ್ಟಿದೆನು ಗಂಡುಗಚ್ಚೆಯ
ತಿಗುರನೇರಿಸಿ ತಿಲಕವನಿಟ್ಟು
ಕೈದುವ ಕೊಂಡು ಕಳನೇರಿದ ಬಳಿಕ
ಕಟ್ಟಿದ ನಿರಿ ಸಡಿಲಿಸಿದಡೆ ಇನ್ನು ನಿಮ್ಮಾಣೆ
ಕಾಣಾ ಚೆನ್ನಮಲ್ಲಿಕಾರ್ಜುನಾ
[ತಿಗುರನೇರಿಸಿ-ಪರಿಮಳ ಲೇಪಿಸಿ, ಕೈದುವ-ಆಯುಧವ, ಕಳ-ಅಖಾಡ]
ಅಕ್ಕ ಮಹಾದೇವಿಯ ವಚನ. ಇಲ್ಲಿ ಆಕೆ ತನ್ನ ಮೇಲೆ ಪುರುಷತ್ವವನ್ನು ಆರೋಪಿಸಿಕೊಂಡಿದ್ದಾಳೆ. ನನ್ನ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿದರೆ ಇಗೋ ಗಂಡುಗಚ್ಚೆ ತೊಟ್ಟು, ತಿಗುರನ್ನೇರಿಸಿ(ಪರಿಮಳ? ತಿಲಕ?), ಕೈಯಲ್ಲಿ ಆಯುಧಹಿಡಿದು, ಅಖಾಡ (ಕಳ)ಕ್ಕೆ ಏರಿದೆ, ಇನ್ನು ಕಟ್ಟಿದ ನಿರಿಗೆ ಸಡಲಿಸಿದರೆ ನಿಮ್ಮಾಣೆ ಅನ್ನುತ್ತಾಳೆ.
ಆಧ್ಯಾತ್ಮ ಸಾಧನೆ ಕೇವಲ ಪುರುಷರಿಗೆ ಮಾತ್ರ ಮೀಸಲಾದದ್ದು ಅನ್ನುವ ಧೋರಣೆಗೆ ಪ್ರತಿಕ್ರಿಯೆಯಾಗಿ ಹೀಗೆ ಹೇಳುತ್ತಿದ್ದಾಳೋ ಅಥವಾ ವಚನಗಳಲ್ಲಿ ಸಾಮಾನ್ಯವಾಗಿರುವಂತೆ ಆಧ್ಯಾತ್ಮದ ಸಾಧನೆಯನ್ನು ಪುರುಷರ ದೈವಿಕ ಸಾಮರ್ಥ್ಯ, ಬೇಟೆ, ಹಿಂಸೆಗಳ ಪರಿಭಾಷೆಯನ್ನು ಬಳಸುತ್ತಿದ್ದಾಳೆಯೋ? ಅದು ಹೇಗೇ ಇದ್ದರೂ ಸ್ತ್ರೀ ಸಂವೇದನೆಯ ಉತ್ತುಂಗವೆಂದು ಭಾವಿಸಿರುವ ಅಕ್ಕ ಪುರುಷತ್ವದ ಆರೋಪಣೆಯನ್ನು ಮಾಡಿಕೊಳ್ಳುವುದೂ ಗಜೇಶ ಮಸಣಯ್ಯ, ಉರಿಲಿಂಗದೇವ ತಮ್ಮ ಮೇಲೆ ಸ್ತ್ರೀತ್ವವನ್ನು ಆರೋಪಿಸಿ ಕೊಳ್ಳುವುದೂ ಗಮನಾರ್ಹ.
*****