ಕೇಳುತ್ತಿರುವುದೊಂದು ದನಿಯು
ಏಕನಾದದಿಂದ ನುಡಿಯು
ನೇತಿ ನೇತಿ ಎಂಬ ನಿಗಮ
ನೀತಿ ಕೇಳುತಿರುವದಮ್ಮ
ಮಿಡಿವುದೇಕೊ ಏಕನಾದ
ನುಡಿವುದೇನೊ ಹಲವು ವಾದ.
ಒಂದು ತಂತಿಯಿಂದ ಹಲವು
ನಾದವೊಡೆದು ರಾಗರಸವು
ಹಳೆಯದನ್ನು ಹೊಸದು ಮಾಡಿ
ಹೂಸದ ಹಳಯದಾಗಿ ಮಾಡಿ
ಧರ್‍ಮವುರುಳೆ ಕರ್‍ಮ ಸಡಿಲೆ
ಸತ್ಯ ಸೊರಗಿಹೋಯ್ತು ಮೇಲೆ.
ಲೋಕದಿರವ ಹಾಡುತಿಹುದು
ಭಿಕ್ಷವನ್ನು ಬೇಡುತಿಹುದು
ಜೀವ ಮಿಡಿದು ನೋಡುತಿಹುದು
ಮಧುರ ಶ್ರುತಿಗೆ ಹೇಳುತಿಹುದು
ರಾಗ ರಚನೆ ರಸ-ವಿಹಾರ
ವೊಂದರೊಳಗೆ ನೆರೆ ಗಭೀರ.
ಲಜ್ಜೆ ಭೀತಿಯಿಲ್ಲದಿರುವ
ತಂತಿಯರಿತು ಜೀವ ಭಾವ
ನುಡಿಯುತಿಹುದು ಲೋಕಕೂಲವ
ಏಳಮಾರ್‍ಗ ನೋಟ ಹಲವ
ಚಿತ್ರ ತೋರಿ ಹಾಡುತಿರುವ
ತಂತಿಗೊಲಿದು ಕುಣಿತ ಕುಣಿವ.
ಒಂದೆ ರಾಗ ಒಂದೆ ಸ್ವರ
ಒಂದೆ ಮೇಳ ನಾದವಮರ
ಹೃದಯದೊಳಗೆ ಒಳಗೆ ಒಳಗೆ
ಇರುವ ದೇವ ನಲಿದು ಹೊರಗೆ
ದರುಶನವ ನೀಡೆ ಬಂದ
ತಂತಿ ಮಿಡಿದು ಹಾಡು ಎಂದ.
*****