ಬಿರಿಬಿರಿದ ಬಕುಲ ಪರಿಮಳ ಸೂಸಿಚೆಲ್ಲಿ
ಹರವಿರುವ ಹಾಲ್ಬೆಳ್ಳಿ ಬೆಳದಿಂಗಳಲ್ಲಿ
ತರುಲತೆಯ ಕಿರುಶಬ್ದ ಸುಳಿಗಾಳಿಯಲ್ಲಿ
ಮರಿಕೋಗಿಲೆಯ ಕೂಗು ಮಧುರಧ್ವನಿಯಲ್ಲಿ
ಝರಿಯೊಂದು ಚಿಮ್ಮುತಿದೆ ಗಿರಿಶಿಖರದಲ್ಲಿ
ದರಿಯಲ್ಲಿ ಹರಿಯುತಿದೆ ಬಹುದೂರದಲ್ಲಿ
ಹರವಿಕೊಂಡಿದೆ ಹಸರು ಧರುಣಿಯಲ್ಲಿ
ಸುರರಿಗೀ ಸುಖವಿಲ್ಲ ಸುರಲೋಕದಲ್ಲಿ
* * * *
ಸವಿಗಾರನಗಲಿಕೆಗೆ ಬಿರಿಬಿರಿಯುತಿತ್ತು
ಸವಿಯೆಲ್ಲ ಕಹಿಯಾಗಿ ತೋರುತಿತ್ತು
ಸುಳಿಗಾಳಿ ಬಿಸಿಯುಸಿರ ಸೆಲೆ ಕಾರುತಿತ್ತು,
ತಿಳಿಗಣ್ಣು ಕಳೆ ಹೀನವಾಗಿ ಕುಳಿತಿತ್ತು
* * * *
ಮಿಂಚೊಂದು ವಿಂಚಿ ಆ ಕ್ಷಣ ಮಾಯವಾಯ್ತು
ಮಿಂಚಿನಲಿ ಸವಿಗಾರನನು ಕಂಡುದಾಯ್ತು
ತೋರುತಿಹುದೆಲ್ಲ ಜಗ ಗುರುರೂಪದಲ್ಲಿ
ಬೀರುತಿದೆ ಅಸುಕಾಂತಿ ಜಡಸೃಷ್ಟಿಯಲ್ಲಿ
*****