ಅಮ್ಮ ನಾನು ನೀನು
ಸುತ್ತೋಣ ಬೆಟ್ಟ ಕಾನು
ಎಲ್ಲೆಲ್ಲೂ ಮರಗಳ ಗುಂಪು
ಅವುಗಳ ನೆರಳದು ತಂಪು
ಮರವನು ತಬ್ಬಿದ ಬಳ್ಳಿ
ಕೆರೆಯಲ್ಲಿದೆ ಮಿಂಚುಳ್ಳಿ
ಜಲ ಜಲ ಜಲ ಜಲ ಧಾರೆ
ಇವೆಲ್ಲಾ ಮಾಡ್ದೋರ್‍ಯಾರೆ
ಕಣ್ಣಿಗೆ ಹಸಿರಿನ ಹಬ್ಬ
ಹತ್ತೋಕೆ ಕಷ್ಟ ದಿಬ್ಬ
ಭಾರಿ ಗಾತ್ರದ ಗಜ
ನೋಡೋಕೆಷ್ಟೊಂದ್ ಮಜ
ಜುಳು ಜುಳು ಹರಿವ ತೊರೆ
ಅಲ್ಲಿ ಬಿಳುಪಿನ ನೊರೆ
ಈಜಲು ಭಾರಿ ಮೋಜು
ಎಚ್ಚರ ತಪ್ಪಿದ್ರೆ ಗೋಜು
ಚಿಲಿಪಿಲಿ ಹಕ್ಕಿಯ ಗೂಡು
ಕಿಚ ಕಿಚ ಕೋತಿಯ ನೋಡು
ಹಾರೋ ಹಕ್ಕಿಯ ಸಾಲು
ನಮಗಿಂತ ಎಷ್ಟೋ ಮೇಲು
ಪುರ್ರನೆ ಹಾರೋ ಹಕ್ಕಿ
ಕಿಲ ಕಿಲವೆಂದು ನಗುವುಕ್ಕಿ
ಕಾನನವೆಲ್ಲಾ ಸುತ್ತಾಡಿ
ಕೈ ಕೈ ಹಿಡಿದು ನಲಿದಾಡಿ
ಗುಂಯ್ಯ ಗುಟ್ಟೋ ಎಷ್ಟೊಂದ್ ಜೇನು
ಮನುಜ ಹಾಗಿರ್‍ತಾನೇನು
ಒಗ್ಗಟ್ಟೇ ಅವುಗಳ ಗುಟ್ಟು
ಮಾಡೇಡ ಅವಕೆ ಪೆಟ್ಟು
ಸರಸರ ಬಂತು ಹಾವು
ಕಚ್ಚಿದ್ರೆ ಅಯ್ಯೋ ಸಾವು
ಬಾನೆತ್ತರ ಬೆಳೆದ ಬಿದಿರು
ಹುಟ್ಟು ಸಾವಿನ ಮೊಹರು
ಇರಲಿರಲಿ ಹೀಗೆ ಕಾಡು
ನಮ್ಮೆಲ್ಲರ ನೆಚ್ಚಿನ ಬೀಡು
ಭುವಿಯಾಗಲಿ ಹಸಿರ ತಾಣ
ಉಳಿಯಲಿ ಜೀವಿಯ ಪ್ರಾಣ.
*****