ಬೇಡಾದವನು

ಬೇಡಾದವನು

ನನಗಿಂತಹ ಪರಿಸ್ಥಿತಿ ಬರುತ್ತದೆಂದು ಕನಸಲ್ಲೂ ಅಂದುಕೊಂಡವನಲ್ಲ. ಎಲ್ಲರೂ ನನ್ನ ಸಾವನ್ನು ಬಯಸುತ್ತಿದ್ದಾರೆ; ನಾನೇ ಸಾವನ್ನು ಬಯಸುತ್ತಿದ್ದೇನೆಯೇ; ನನಗರ್ಥವಾಗುತ್ತಿಲ್ಲ. ಯಾರಿಗೆತಾನೆ ಸಾಯಲು ಇಷ್ಟ? ಅಷ್ಟಕ್ಕೂ ನನಗಿನ್ನೂ ಅರವತ್ತರ ಹತ್ತಿರ ಹತ್ತಿರ, ರಿಟೈರ್ ಆಗಿ ಎರಡು ವರ್ಷ ಆದಂತಿಲ್ಲ. ಪೆರಾಲಿಸಸ್ ಸ್ಟ್ರೋಕ್ ಆಗಿ ಬಲಭಾಗ ಪೂರಾ ಬಿದ್ದು ಹೋಗಿದೆ. ಬಾಯಿ ಸೊಟ್ಟಗಾಗಿರಲೂಬಹುದು. ಮಾತು ಗಂಟಲಿನಿಂದ ಈಚೆ ಬರುತ್ತಿಲ್ಲ. ಬ್ರೇನ್‌ಗೆ ಕೂಡ ಧಕ್ಕೆಯಾಗಿರುವುದರಿಂದ ಬಹಳಷ್ಟು ದಿನ ಎಚ್ಚರವಾಗಲಿಲ್ಲವಂತೆ. ಆಮೇಲೆ ಪರಸ್ಥಿತಿಯೇನೂ ಬದಲಾದಂತಿಲ್ಲ. ನರ್ಸಿಂಗ್ ಹೋಮ್‌ಗೆ ದಾಖಲಾಗಿ ಮೂರು ತಿಂಗಳಾಗಿರಬಹುದು. ಅವರಿವರು ಬೇಸರದಿಂದ ಹೇಳುವಾಗ ಕೇಳಿಸಿಕೊಂಡಿದ್ದೇನೆ. ಮೂಗಿನಿಂದ ಆಹಾರ ಕೊಡುತ್ತಿದ್ದಾರೆ. ಅದೂ ದಕ್ಕಲ್ಲ. ಪದೆಪದೆ ಬುಗ್ಗನೆ ವಾಂತಿಯಾಗುತ್ತೆ. ಸ್ವಾಧೀನವಿಲ್ಲದ ಭಾಗಬಿಟ್ಟರೆ ಉಳಿದಂತೆ ಮೈಕೈಯೆಲ್ಲಾ ಸೂಜಿ ಚುಚ್ಚಿದಂತಾಗುತ್ತದೆ. ಬೆನ್ನುಹುರಿಯಲ್ಲಿ ಒಮ್ಮೊಮ್ಮೆ ಮಿಂಚುಹರಿಯುತ್ತೆ. ಸ್ಕಲ್ ಎಕ್ಸ್‌ರೇ ಕೂಡ ಮಾಡಿಯಾಗಿದೆ ‘ಹಾಸಿಗೆಗೆ ಹತ್ತಿಹೋಗಿಬಿಟ್ಟಿದ್ದಾನೆ’ ಅಂತ ನನ್ನ ತಾಯಿ ಮುಸು ಮುಸು ಅಳುತ್ತಾಳೆ. ನನಗೇಕೋ ಹಾಗನಿಸುತ್ತಿಲ್ಲ: ಮಾತಾಡಲು ಶಕ್ತಿ ಬಂದುಬಿಟ್ಟರೆ ಎಲ್ಲಾ ಹೇಳಿಕೊಂಡೇನು. ಎಷ್ಟು ಪ್ರಯತ್ನಿಸಿದರೂ ಬಾಯಲ್ಲಿ ಬುಸು ಬುಸು ಗಾಳಿ ಬಂದು, ಉಸಿರುಗಟ್ಟಿ, ಪ್ರಾಣಹಿಂಡುತ್ತದೆ. ಮಾತನಾಡುವ ಪ್ರಯತ್ನವೇ ತ್ರಾಸು ಅನ್ನಿಸಿ ಕಣ್ಣು ಮುಚ್ಚುತ್ತೇನೆ. ಬಿ.ಪಿ. ಇರೋರಿಗೆ ಸ್ಟ್ರೋಕ್ ಹೊಡೆಯೋದು ಸಾಮಾನ್ಯ. ನನಗೋ ಡಯಾಬಿಟೀಸ್ ಬೇರೆ, ಮಗಳ ಮಗುವಿನ ನಾಮಕರಣದ ಖುಷಿಯಲ್ಲಿ ಒಂದಿಷ್ಟು ಹೋಳಿಗೆ ತಿಂದೆ. ಮುಷ್ಟಿಯಲ್ಲಿ ಮಾತ್ರೆಗಳನ್ನೂ ತಿಂದೆ. ಆದರೂ ವಾರ ಕಳೆದಿಲ್ಲ ಬೆಳಗಿನಜಾವ ಎದ್ದರೆ ಬಲಭಾಗ ಮಾತೇ ಕೇಳುತ್ತಿಲ್ಲ! ಅಲ್ಲಿಂದ ನರ್ಸಿಂಗ್ ಹೋಮ್‌ವಾಸ. ಬಹಳಷ್ಟುದಿನ ಎಚ್ಚರವೇ ಇಲ್ಲ. ಎಚ್ಚರ ಬಂದ ದಿನ ನನ್ನವರೆಲ್ಲಾ ಸುತ್ತಲೂ ಇದ್ದರು. ಎಲ್ಲರ ಕಣ್ಣಲ್ಲೂ ನೀರು, ಅದನ್ನು ನೋಡಿಯೇ ಬಲ ಬಂದಂತಾಗಿತ್ತು. ನಾನು ಕಣ್ಣು ಬಿಟ್ಟು ಬಡಬಡಿಸಿದ ಮಾತ್ರಕ್ಕೆ ಎಲ್ಲರ ಮೋರೆಯಲ್ಲೂ ಹರ್ಷ, ಕಣ್ಣುಗಳಲ್ಲಿ ಮಿಂಚು. ತಮ್ಮ ಶ್ರಮ ಸಾರ್ಥಕವಾದಂತೆ ಡಾಕ್ಟರ್ ಮುಖದಲ್ಲೂ ಗೆಲುವು. ನನಗೋ ಕತ್ತು ಹೊರಳಿಸಲೂ ಆಗದು. ಬಳಲಿಕೆಯೋ ಎಂತದೋ? ಜೋಂಪು ಬಂತು.

ಮರುದಿನ ಎಚ್ಚರವಾದಾಗ ಇ.ಸಿ.ಜಿ. ಮಾಡುತ್ತಿದ್ದಾರೆ. ‘ಹಾರ್ಟ್ ಅಟ್ಯಾಕ್ ಆಗೋ ಛಾನ್ಸ್ ಇದೆ. ಈಗ್ಗೆ ಏನೂ ಹೇಳೋಕಾಗೋಲ್ಲ’ ಡಾಕ್ಟರ ಗೊಣಗಾಟ. ನನ್ನ ಮಗ ಬಡಬಡಿಸುತ್ತಾನೆ. ಜೀವ ಹೋದಂತಾಗುತ್ತದೆ. ಹೃದಯದಲ್ಲಿ ತಟ್ಟನೆ ನೋವು ಜಿನುಗಿದಂತಾಗಿ ಕಣ್ಣುಗಳಲ್ಲಿ ನೀರಿನ ಬುಗ್ಗೆ, ‘ಏನು ಆಗೋದಿಲ್ಲ ಹೆದರ್‍ಬೇಡಿ. ಧೈರ್‍ಯವಾಗಿರಿ….. ದೇವರಿದಾನೆ’ ಹೆಂಡತಿ ಅಳುತ್ತಾಳೆ. ಡಾಕ್ಟರ್ ಬರೆದುಕೊಟ್ಟ ಔಷಧಿ ತರಲು ಮಗ ಓಡುತ್ತಾನೆ. ಇವಳು ರಾಘವೇಂದ್ರ ರಾಘವೇಂದ್ರ ಅಂತ ದೇವರ ಧ್ಯಾನ ಮಾಡುತ್ತಾಳೆ.

‘ದೇವರಂತೆ ದೇವರು. ಎಲ್ಲಿದಾನೆ ದೇವರು?’ ಮಗಳು ಸಿಡುಕುತ್ತಾಳೆ. ‘ಅಪ್ಪಾಜಿ ಅದೆಷ್ಟು ದೇವರ ಸೇವೆ ಮಾಡ್ಲಿಲ್ಲ. ಇವರಿಗಾ ಹೀಗೆ ಆಗೋದು?’ ಬಿಕ್ಕುತ್ತಾಳೆ. ಇವರಿಗೆಲ್ಲಾ ನನ್ನ ಬಗ್ಗೆ ಅದೆಷ್ಟು ಕಾಳಜಿ ಅನ್ನಿಸಿದಾಗ ಕಣ್ಣೀರು ಕೆನ್ನೆ ಮೇಲೆ ಇಳಿಯುತ್ತವೆ. ಸೊಂಟದಲ್ಲಿನ ಕರ್ಚಿಫ್ ತೆಗೆದು ಇವಳು ಕಣ್ಣೊರೆಸುತ್ತಾಳೆ. ಬುಗ್ಗನೆ ವಾಂತಿಯಾಗುತ್ತದೆ. ಕಿಡ್ನಿ ಟ್ರೇ ಒಡ್ಡುತ್ತಾಳೆ ಆದರೂ ಮೈಮೇಲೆಲ್ಲಾ ಆಗಿರುತ್ತದೆ. ಸ್ವಲ್ಪವೂ ಅಸಹ್ಯಪಡದೆ ಹೆಂಡತಿ, ಮಗಳು ಸೇರಿ ಸ್ವಚ್ಛ ಮಾಡುತ್ತಾರೆ. ಆಗಲೆ ನನಗೆ ತಿಳಿದದ್ದು ಮೂಗಿನಲ್ಲಿ ನಳಿಕೆ ಇದೆ ಅಂತ. ಸಂಕಟವಾಗುತ್ತೆ. ಹೆಂಡತಿ ನನ್ನ ಅಂಗೈಯನ್ನು ಮೃದುವಾಗಿ ನೇವರಿಸುತ್ತಾಳೆ ಜೀವ ತುಂಬುವಂತೆ, ಮಗಳು ನನ್ನ ಚಿಕ್ಕ ತಲೆಯನ್ನೇ ತಡುವುತ್ತಾಳೆ. ಅಕ್ಕರೆಯಿಂದ ನರ್ಸ್ ಒಬ್ಬಳು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿದ್ದ ಔಷಧಿಗಳನ್ನೆಲ್ಲಾ ಎತ್ತಿ ಬೆಡ್‌ಸೈಡ್ ಲಾಕರ್ ಮೇಲೆ ಅಲಂಕಾರವಾಗಿಡುತ್ತಾಳೆ. ಅದರಲ್ಲಿಂದ ವೆಯಿಲ್ ಎತ್ತಿ ಸಿರೇಂಜ್ ರೆಡಿಮಾಡಿ ‘ಸೊಂಟಕ್ಕೆ ಮಾಡೋಣ….. ಆ ಕಡೆ ತಿರುಗಿಸಿ’ ಅಂತಾಳೆ. ಮಗ ನೋವಾಗದಂತೆ ನನ್ನನ್ನು ನಿಧಾನವಾಗಿ ಒಂದು ಬದಿಗೆ ತಿರುಗಿಸುತ್ತಾನೆ. ನರಳುತ್ತೇನೆ. ನರ್ಸ್ ತನ್ನ ಕೆಲಸ ಮುಗಿಸಿ ಹೊರಟು ಹೋಗುತ್ತಾಳೆ.

‘ನಾನು ಡ್ಯಾಡಿ ಹತ್ತಿರ ಇರ್ತಿನಿ….. ನೀವ್ ಊಟಕ್ಕೆ ಹೋಗಿ ಬನ್ನಿ’ ಅಂತಾನೆ ಮಗ. ‘ನಾನ್ ಇರ್ತಿನಿ ನೀನ್ ಹೋಗಣ್ಣ’ ಮಗಳ ಹಠ.

‘ನಾನಂತೂ ಇವರನ್ನ ಬಿಟ್ಟು ಎಲ್ಲೂ ಕದಲೋದಿಲ್ಲ. ಊಟ ಯಾರಿಗೆ ಬೇಕು’ ಇವಳು ಅಳುತ್ತಾಳೆ. ಇಲ್ಲಿಗೆ ಊಟ ತರ್ತಿನಿ ಅಂತ ಹೇಳಿದ ಮಗ ತಂಗಿಯೊಂದಿಗೆ ಹೊರಟು ಹೋಗುತ್ತಾನೆ. ಬೈಕ್ ಹೋದ ಸದ್ದು. ಇವಳು ನನ್ನ ಕೈ ಹಿಡಿದೆ ಕೂತುಬಿಡುತ್ತಾಳೆ. ನನಗರಿವಿಲ್ಲದೆ ದೊಡ್ಡದಾದ ನಿಟ್ಟಿಸಿರು ಹೊರಬಂದ ರಭಸಕ್ಕೆ ಹೃದಯ ಹಿಡಿದಂತಾಗಿ ವಿಲಿವಿಲಿ ಒದ್ದಾಡುತ್ತೇನೆ- ಒಳಗೇ, ದೇಹ ಮಾತ್ರ ಕೊರಡು. ನನ್ನ ನರಳಾಟ ನನ್ನನ್ನೇ ಭಯಪಡಿಸುತ್ತದೆ. ಇವಳಂತೂ ಗುಬ್ಬಚ್ಚಿಯಂತಾಡುತ್ತಾಳೆ.

‘ಸಿಸ್ಟರ್….. ಸಿಸ್ಟರ್’ ಅಂತ ಚೀರಾಡುತ್ತಾಳೆ. ನಿಧಾನವಾಗಿ ಬಂದ ನರ್ಸ್ ನನ್ನನ್ನೊಮ್ಮೆ ನೋಡಿ ‘ಹಿ ಈಸ್ ಆಲ್ ರೈಟ್, ಸುಮ್ನೆ ಗಾಬರಿಯಾಗ್ಬೇಡಿ’ ಅಂತ ಗದರುವ ರೀತಿ ಸಾಂತ್ವನಿಸಿ ಹೊರಟು ಹೋಗುತ್ತಾಳೆ. ‘ಏನಾಗ್ತಿದೇರಿ ಹೇಳಿ….. ಮಾತಾಡ್ರಿ’ ಇವಳು ನನ್ನ ಗಲ್ಲ, ಕೆನ್ನೆ ಸವರುತ್ತಾ ಗಳಗಳನೆ ಅಳುತ್ತಾಳೆ. ಇವಳಿಗೆ ನೋವಾಗಬಾರದೆಂದು ನರಳಾಟವನ್ನು ಕಡಿಮೆ ಮಾಡಲು ಭಯಂಕರ ಶ್ರಮಿಸುತ್ತೇನೆ. ವ್ಯರ್ಥವಾಗುತ್ತದೆ.

ಮಗ, ಮಗಳ ಜೊತೆ ಈಸಲ ಸೊಸೆಯೂ ಬಂದಿದ್ದಾಳೆ. ದೂರವೇ ನಿಂತಿದ್ದಾಳೆ. ‘ಅಪ್ಪನಿಗೆ ಗುಣವಾದ್ರೆ ಮಂತ್ರಾಲಯಕ್ಕೆ ಹೋಗೋಣ’ ಖಿನ್ನವದನನಾಗುತ್ತಾನೆ ಮಗ. ಇರುವಷ್ಟು ಹೊತ್ತು ಸೊಸೆ ದೂರವೇ ಇದ್ದು ಒಂದೂ ಮಾತನಾಡದೆ ಹೊರಟು ಹೋಗುತ್ತಾಳೆ. ಹೆಂಡತಿ ಮಂಚದ ಬಳಿಯೇ ಹಾಸಿಕೊಳ್ಳುತ್ತಾಳೆ. ಹೀಗೆ ಅದೆಷ್ಟೋ ದಿನಗಳು. ರಾತ್ರಿಗಳು ಕಳೆದಿವೆ. ಸಲೈನ್ ಬಾಟಲಿಯಾಗುವುದನ್ನೇ ದಿಟ್ಟಿಸುವುದು. ನಿಧಾನವಾಗಿ ಬೀಳುವ ಹನಿಗಳನ್ನೇ ಲೆಕ್ಕ ಮಾಡುವುದು. ಬಂದವರ ಮುಖ ನೋಡುವುದು ಇಷ್ಟೇ ಕೆಲಸ. ಯಾರೇ ಬರಲಿ ಅಳಬಾರದೆಂದು ಅದೆಷ್ಟು ತಡೆದರೂ ಕಣ್ಣುಗಳು ಕೊಳಗಳಾಗಿಬಿಡುತ್ತವೆ. ಎಲ್ಲರಿಗೂ ಭಾರವಾದೆನೆಲ್ಲಾ ಎಂಬ ಹಿಂಸೆ. ಎಲ್ಲರಿಗೂ ಬೇಡವಾಗಿಬಿಟ್ಟರೆ? ಒಳಗೇ ತರಗುಟ್ಟಿ ನಡುಗುತ್ತೇನೆ. ಕಾಯಿಲೆ ಗುಣವಾಗಿ ಮನೆ ಸೇರುವುದೆಂದು?
* * * *

ಇಂತಹ ಕಾಯಿಲೆ ಇರೋರೆಲ್ಲಾ ಬೇಗ ರಿಕವರ್ ಆಗೋಲ್ಲ ಸಾರ್. ನಿಧಾನವಾಗುತ್ತೆ…. ತಾಳ್ಮೆ ಬೇಕು. ನೀವು ಎಷ್ಟು ಚೆನ್ನಾಗಿ ನೋಡ್ಕೊಂಡ್ರೆ ಅಷ್ಟು ಬೇಗ ಸುಧಾರಿಸ್ತಾರೆ’ ಡಾಕ್ಟರ್ ಹೇಳುತ್ತಾರೆ.

‘ಇನ್ನೂ ಹೇಗೆ ಚೆನ್ನಾಗಿ ನೋಡ್ಕೊಳ್ಳೋದು ಡಾಕ್ಟ್ರೆ, ಅಮ್ಮ ಅಂತು ಬೆಡ್‌ಪ್ಯಾನ್ ಕೊಟ್ಟು ಕೊಟ್ಟೆ ಸುಸ್ತಾಗಿದಾಳೆ. ನಾವಾದ್ರೂ ಆಫೀಸ್ ಬಿಟ್ಟು ಎಷ್ಟು ದಿನ ಹೀಗೆ ಓಡಾಡ್ಲಿಕ್ಕೆ ಆಗುತ್ತೆ’ ಮಗ ಬೇಸರದಿಂದ ಮೋರೆ ಕಿವುಚಿಕೊಳ್ಳುತ್ತಾನೆ? ನನ್ನ ಎದೆಬಡಿತ ಒಮ್ಮೆಲೆ ಹೆಚ್ಚಿದಂತಾಗುತ್ತದೆ. ಆಗಲೆ ಮಗಳು ಮಗುವಿನೊಂದಿಗೆ ಬರುತ್ತಾಳೆ. ಅವಳ ಅಲಂಕಾರ ಎಂದಿಗಿಂತ ಹೆಚ್ಚಿದೆ. ಅಳಿಯ ಬೇರೆ ಊರಿಂದ ಬಂದಿದ್ದಾನೆ! ‘ಹೇಗಿದೀರಿ ಮಾವ?’ ಅಂತ ಕೈ ತಟ್ಟುತ್ತಾನೆ.

‘ಬರ್ತಿನಿ ಡ್ಯಾಡಿ……’ ಮಗಳು ಅಳುತ್ತಾಳೆ. ಗಂಡನ ಮನೆಗೆ ಹೊರಟಳೇನೋ?
‘ಹೋಗ್ಬೇಡ ಕಣೆ…… ನನ್ನನ್ನು ಬಿಟ್ಟು’ ಅನ್ನಲು ಯತ್ನಿಸುತ್ತೇನೆ. ತುಟಿಗಳಷ್ಟೆ ಕಂಪಿಸುತ್ತವೆ.

‘ಬರ್ತಿನಿ…. ಧೈರ್ಯ ಕಳ್ಕೊಬೇಡಿ’ ಬಿಕ್ಕುತ್ತಾಳೆ. ತಲೆಯಾಡಿಸುತ್ತೇನೆ. ‘ಹೋಗು ಅಂತಿದಾರೆ’ ಇವಳು ನಿಡುಸುಯ್ಯುತ್ತಾಳೆ. ಚೀರಾಡಬೇಕೆನಿಸುತ್ತದೆ. ‘ಅಣ್ಣಾ, ಸರಿಯಾಗಿ ನೋಡ್ಕೊಳೋ ಅಪ್ಪಾಜಿನಾ’ ಮಗಳ ಕಕ್ಕುಲತೆ. ‘ಬಾಯಲ್ಲಿ ಹೇಳೋಕೇನು. ನೀನಂತೂ ಹೊರಟುಬಿಟ್ಟೆ; ಅಮ್ಮ ಮನೆಗೆ ಹೋದ್ರೆ ಇಲ್ಲಿ ಇರೋರು ಯಾರೆ?’ ಸಿಡುಕುತ್ತಾನೆ.

“ನಿನ್ನ ಹೆಂಡತಿ ಇದ್ದಾಳಲ್ಲೋ” ಮಗಳೂ ವ್ಯಂಗ್ಯವಾಡುತ್ತಾಳೆ.
“ಅವಳು ಮನೇಲಿ ಬೇಯಿಸಿ ಹಾಕೋದೂ ಅಲ್ದೆ, ಇಲ್ಲಿ ಬಂದು ಬೇರೆ ಸೇವೆ ಮಾಡಬೇಕೇನೇ” ಇವನು ರೇಗಿಯೇಬಿಡುತ್ತಾನೆ.

‘ಹಿರೇರ ಸೇವೆ ಮಾಡಿದ್ರೆ ಅವಳ ಕೈಯೇನೂ ಸವೆಯೋಲ್ಲ. ಮಾವನೆಂದ್ರೆ ತಂದೆ ಸಮಾನ’ ‘ಒಂದು ತಿಂಗಳ ಎರಡು ತಿಂಗ್ಳೆ? ಎಷ್ಟು ಅಂತ ಮಾಡೋದು’
‘ನೀನೇನ್ ಮಾಡ್ತಿರೋದು. ಮಾಡ್ತಿರೋಳು ಅಮ್ಮ’.
‘ಖರ್ಚು ಮಾಡ್ತಿರೋನ್ ನಾನ್‌ಕಣೆ. ಐವತ್ತು ಸಾವಿರ ಕೈ ಬಿಟ್ಟಿದೆ.’
‘ಅಪ್ಪಾಜಿ ದುಡ್ಡು ಇಟ್ಟಿರಲಿಲ್ವೇನೋ. ಅವರ ದುಡ್ಡು, ಅವರ ಕಾಯಿಲೆ ಕಸಾಲೆಗೆ ಇಲ್ವೇನು?’
‘ಏನಾದ್ರೂ ಮಾಡಿದ್ರೆ ಪ್ರಯೋಜನವಾಗೋಕು ಕಣೆ.’
‘ನಿನ್ಹಾಗೆ ಅಪ್ಪಾಜಿನೂ ಯೋಚ್ನೆ ಮಾಡಿದಿದ್ದರೆ ನೀನ್ ದೊಡ್ಡ ಎಂಜಿನೀರ್ ಆಗ್ತಿರಲಿಲ್ಲ.’

‘ಹುಶ್… ಸುಮ್ನಿರಿ. ಕಾಯಿಲೆ ಮಲಗಿರೋರ ಮುಂದೆ ನಿಮ್ಮದೆಂತ ಜಗಳ?’ -ಹೆಂಡತಿ ಕನಲುತ್ತಾಳೆ. ‘ಅವರಾದ್ರೂ ಏನ್ ಅಂದ್ಕೊಂಡಾರು?’ ಭೀತಳಾಗುತ್ತಾಳೆ.

‘ಅವರಿಗೆಂತದೂ ತಿಳಿಯೋದಿಲ್ಲ ಬಿಡಿ ಅತ್ತೆ. ಬ್ರೇನ್ ಜಖಂ ಆಗಿದೆ ಅಂದಿದಾರೆ ಡಾಕ್ಟ್ರು’ ಅಳಿಯ ನಗೆಯಾಡುತ್ತಾನೆ. ‘ಸಾಕು ನಡೀರಿ….. ಎಲ್ಲಿ ಏನ್ ಮಾತಾಡ್ಬೇಕು ಅಂತ ತಿಳಿಯೋದಿಲ್ಲ ನಿಮ್ಗೆ’ ಮಗಳು ನನ್ನತ್ತ ಒಮ್ಮೆ ನೋಡಿ ಗಂಡನನ್ನು ಹೊರಡಿಸಿಕೊಂಡು ಹೊರಡುತ್ತಾಳೆ. ಅವಳನ್ನು ಕಳಿಸಿಬರಲು ಎಲ್ಲರೂ ಹೊರ ಹೋಗುತ್ತಾರೆ ಲಕ್ಷಗಟ್ಟಲೆ ಖರ್ಚುಮಾಡಿ ಲೆಕ್ಚರರ್‌ಗೆ ಮದುವೆ ಮಾಡಿಕೊಟ್ಟಿದ್ದು ಸಾರ್ಥಕವಾಯಿತು. ಸರಿಯಾಗಿಯೇ ಜಾಡಿಸಿದ್ದು ಈ ಹೆಂಡತಿ ಮುಠಾಳನಿಗೆ. ಇವನನ್ನು ಎಂಜನೀರ್ ಮಾಡಲು ನಾನೇನು ಕಡಿಮೆ ಕಷ್ಟಪಟ್ಟೆನೆ?

ಪಿ.ಡಬ್ಲ್ಯು.ಡಿ. ಕಛೇರಿಯಲ್ಲಿ ಆರ್‍ಡಿನರಿ ಗುಮಾಸ್ತ ನಾನು. ಮೇಲಿನ ಇನ್ – ಕಂ ಇದ್ದದು ನಿಜ. ಆದರೆ ಇವನನ್ನ ಓದಿಸಬೇಕು ಅಂತ ಹಾದಿಬಿಟ್ಟು ಹೋಗಿದ್ದೂ ಇದೆ. ಕಡೆಗೆ ಡಾಂಬರ್ ಡಬ್ಬಗಳನ್ನೂ ಕಂಟ್ರಾಕ್ಟರ್‌ಗಳಿಗೆ ಮಾರಿಕೊಂಡೆ ಸಿಮೆಂಟ್‌ಗೆ ಬೂದಿ ಬೆರೆಸಿದೆ. ಸ್ವಾಮೀಜಿನಗಳ ಕಾಲಿಗೆ ಬಿದ್ದು ಬೇಡಿದರೂ ಡೊನೇಶನ್ ಲಕ್ಷಗಟ್ಟಲೆ ಕಕ್ಕಿದ ಮೇಲೇ ಸೀಟ್ ಗಿಟ್ಟಿದ್ದು. ಪ್ರತಿವರ್ಷ ಇವನದೇ ಲಕ್ಷದವರೆಗೂ ಖರ್ಚು. ಖರ್ಚು ಮಾಡಿದ್ದಕ್ಕೂ ಓದಿದ. ಎಂಜನೀರೂ ಆದ ಮಾಮೂಲಿ ತೆಗೆದುಕೊಳ್ಳುವುದರಲ್ಲಿ ನನಗಿಂತಲೂ ಪ್ರಚಂಡ. ರಸ್ತೆ ರಿಪೇರಿ ಸೇತುವೆಗಳ ನಿರ್ಮಾಣ, ಸರ್ಕಾರಿ ಕಟ್ಟಡಗಳ ದುರಸ್ತಿ ಎಲ್ಲದರಲ್ಲೂ ಹೆಂಗೆ ದುಡ್ಡು ಮಾಡಬೇಕಂತ ಚೆನ್ನಾಗಿ ತಿಳ್ಕೊಂಡಿದಾನೆ. ನನ್ನದೂ ಗೈಡೆನ್ಸ್ ಇದೆ. ಮೀನಿನ ಮರಿಗೆ ಈಜೋದನ್ನ ಕಲಿಸಬೇಕೆ.

ಇವಳು ಒಬ್ಬಳೆ ಒಳಗೆ ಬರುತ್ತಾಳೆ. ಮೋರೆ ಕೆಳಹಾಕಿ ಕೂರುತ್ತಾಳೆ. ನೆಲ ಸೋಪಾ ಮಾಡಲು ಆಯ ಒಳಬರುತ್ತಾಳೆ. ಇವಳೆದ್ದು ಆಚೆ – ಹೋಗುತ್ತಾಳೆ. ಈಚೆಗೆ ಇವಳು ನನ್ನ ಬಳಿ ಇರೋದಕ್ಕಿಂತ ಹೊರಗೇ ಇರುತ್ತಾಳೆ. ಅಕ್ಕ ಪಕ್ಕದ ವಾರ್‍ಡ್‍ನ ಹೆಂಗಸರನ್ನು ಪರಿಚಯ ಮಾಡಿಕೊಂಡು ಅವರ ಕಷ್ಟಸುಖಗಳ ವಿಚಾರಣೆ ನಡೆಸುತ್ತಾಳೆ. ರೂಮು ತುಂಬಾ ಕತ್ತಲಾವರಿಸುತ್ತದೆ. ಇವಳು ಪತ್ತೆ ಇಲ್ಲ. ಚಡಪಡಿಸುತ್ತೇನೆ. ಯಾವಾಗಲೋ ಅತ್ತ ಬಂದ ನರ್ಸ್ ದೀಪ ಹಾಕುತ್ತಾಳೆ. ಮಗ ಕ್ಯಾರಿಯರ್ ಹಿಡಿದು ಬರುತ್ತಾನೆ. ಅಮ್ಮ ಎಲ್ಲಿಗೆ ಹೋದ್ಳೋ ಅಂತ ಧಾವಂತಪಡುತ್ತಾನೆ. ನನ್ನ ಕಡೆ ಒಮ್ಮೆಯೂ ನೋಡದೆ ದೀಪಕ್ಕೆ ಮುತ್ತಿದ ಹುಳಗಳನ್ನ ಎಂದೂ ನೋಡದವನಂತೆ ನೋಡುತ್ತಾ ಕೂತುಬಿಡುತ್ತಾನೆ. ‘ಯಾವಾಗ ಬಂದ್ಯೋ?’ ಗಡಬಡಿಸಿ ಬರುತ್ತಾಳೆ, ಇವಳು. ‘ಟಿ.ವಿ. ನಲ್ಲಿ ಯಾವುದೋ ಸಿನೆಮಾ ಬರ್ತಾ ಇತ್ತು ನೋಡ್ತಾ ಕೂತುಬಿಟ್ಟೆ ಕಣೋ’ ದನಿಯಲ್ಲಿ ಅಳಕು.

‘ಊಟ ತಂದು ಇಟ್ಟಿದೀನಿ, ಇಲ್ಲಿ ಕೂತು ಏನ್ಮಾಡ್ತಿ, ಸಿನಿಮಾ ನೋಡ್ಕಂಡು ಬಾಮ್ಮ, ನಾನ್ ಹೋಗ್ತಿನಿ’ ಇವನಿಗೆ ಆತುರ. ರೂಮು ತುಂಬಾ ಗಬ್ಬು ವಾಸನೆ ಆವರಿಸಿಕೊಳ್ಳುತ್ತದೆ. ‘ಕಕ್ಕಸು ಮಾಡಿದ್ನೇನೋ ನೋಡು’ ಅಸಹ್ಯಿಸುತ್ತಾನೆ. ಇವನದೆಷ್ಟು ಸಲ ನನ್ನ ತೊಡೆಯ ಮೇಲೆಯೇ ಹೇತಿಲ್ಲ. ನಾನದನ್ನು ಶ್ರೀಗಂಧದಂತೆ ಎತ್ತಿಲ್ಲ.

‘ಕರ್ಮ…. ಕರ್ಮ. ಬಾರೋ ಕಾಲ್ನಾದ್ರೂ ಎತ್ತು…..’ ಇವಳ ಹಪಹಪಿಕೆ. ಕೊಳೆಬಟ್ಟೆ ತೆಗೆಯುತ್ತಾರೆ. ಇವನ ಹಾರಾಟಕ್ಕೆ ನರ್ಸ್ ಓಡುತ್ತಾ ಬೇರೆ ಬಟ್ಟೆ ತರುತ್ತಾಳೆ. ನನ್ನನ್ನು ಆಚೀಚೆ ಉರುಳಿಸಿ ಹಾಸುತ್ತಾರೆ.

‘ಬೆಡ್ ಸೋರ್ ಆದೀತು. ಹುಷಾರಾಗಿ ನೋಡ್ಕೊಳ್ಳಿ’ ಹೆದರಿಸುತ್ತಾಳೆ ನರ್ಸ್.
‘ಬರ್ತಿನಮ್ಮ…..’ ಮಗನಿಗೋ ಒಂದೇ ಅವಸರ.
‘ಎಷ್ಟು ದಿನ ಅಂತ ನಾನ್ ಹೀಗೆ ಸಾಯ್ಲೋ’ ಇವಳ ದನಿ ತೇವವಾಗಿದೆ.
‘ಹಿಂಗೆ ಒಂದೆರಡು ತಿಂಗ್ಳು ಕಳೆದ್ರೆ ಇವರಿಗಿಂತ ಮೊದ್ಲು ನಾನ್ ಗೊಟಕ್ ಅಂತೀನಷ್ಟೆ’ ಸದ್ದು ಮಾಡಿ ಬುಳು ಬುಳು ಅಳುತ್ತಾಳೆ.
‘ನಂಗೊಂದು ಐಡಿಯಾ ಬಂದಿದೆ ಕಣಮ್ಮ’
‘ಏನೋ ಅದು!’ ‘ಅಜ್ಜೀನಾ ಕರೆಸಿಬಿಡೋಣ ಕಣೋ.’
‘ನಮ್ಮ ಅಮ್ಮನ್ನೇ?’ ‘ಅಲ್ವೋ ಇವರ ಅವ್ವನ್ನ….’ ಇವಳು ಕೊಂಚ ಹೊತ್ತು ಮೌನ ಧರಿಸುತ್ತಾಳೆ. ಇದ್ದಾಗ ನಾವು ಸರಿಯಾಗಿ ನೋಡ್ಕೊಳ್ಳಲಿಲ್ಲ. ಒಂದು ತುತ್ತು ಅನ್ನ ಹಾಕ್ದೆ ಓಡಿಸಿದ್ವಿ. ಈಗ ಕರೆದರೆ ಬರುತ್ತೇನೋ ಮುದ್ಕಿ?’

‘ಖಂಡಿತ ಬರುತ್ತೆ. ಮುದ್ಕಿಗೆ ಮಗ ಅಂದ್ರೆ ಪ್ರಾಣ.’
‘ಹಾಗಾದ್ರೆ ನಾಳೆನೇ ಟೆಲಿಗ್ರಾಂ ಕೊಟ್ಟುಬಿಡು’ ಆತುರಪಡುತ್ತಾಳೆ.

ತಾಯಿಯ ನೆನಪಾಗುತ್ತೆ. ಟೈಲರಿಂಗ್ ಮಾಡಿ ಯಾರದ್ದೋ ಹೊಲದಲ್ಲಿ ಕೂಲಿ ಕೆಲಸ ಮಾಡಿ ನನ್ನನ್ನು ಡಿಗ್ರಿ ಮಾಡಿಸಿದವಳು. ಅಮ್ಮ, ತಂಗಿ ಇಬ್ಬರು ಉಪವಾಸವಿದ್ದರೂ ನನಗೆ ಹೊಟ್ಟೆ ತುಂಬಾ ಬಡಿಸುತ್ತಿದ್ದವರು ತಾವು ಹರಕಲ ಸೀರೆನಲ್ಲಿದ್ದರೂ ನನಗೆಂದೂ ಮಾಸಿದ ಬಟ್ಟೆ ತೊಡಲು ಬಿಡದವರು. ಕಾಲಿಗೆ ಚಪ್ಪಲಿ ತೊಟ್ಟವರಿಗೆ ಗೊತ್ತಿಲ್ಲ. ನನಗೆ ಮಾತ್ರ ಬಾಟಾ ಶೂಸು. ನನಗೆ ಕೆಲಸ ಸಿಕ್ಕ ಒಂದೆರಡು ವರ್ಷಗಳಲ್ಲಿ ಮದುವೆಯೂ ಆದೆ. ಸುಂದರನಾಗಿದ್ದೆ. ಎಲ್ಲರೂ ಹಿಂದಿನಟ ಧರ್ಮೇಂದ್ರನ ಪಡಿಯಚ್ಚು ಅನ್ನೋರು. ಇವಳೂ ಅದಕ್ಕೆ ಒಪ್ಪಿಕೊಂಡಳೇನೋ, ಸಿರಿವಂತರ ಮನೆ ಹೆಣ್ಣು ಆನೆ ಸಾಕಿದಂತೆ ಪ್ರಯಾಸ. ಲಂಚ ಮುಟ್ಟಬೇಡ ಪರರ ನೋಯಿಸಬೇಡ ಅಂತಿದ್ದ ಅವ್ವನ ಮಾತಿಗೆ ತಿಲಾಂಜಲಿ ನೀಡಿದೆ. ಇವಳ ಲೆವಲ್‌ಗೆ ನಿಲ್ಲಲು ಮಾಮೂಲಿನ ಮಾಮೂಲಿ ಗುಮಾಸ್ತನಾದೆ. ತೆಳ್ಳಗೆ ಬೆಳ್ಳಗೆ ದಂತದ ಗೊಂಬೆಯಂತಿದ್ದಳು. ಇವಳನ್ನು ಒಂದು ದಿನವೂ ಬಿಟ್ಟಿರಲಾರದ ವ್ಯಾಮೋಹ. ಎಲ್ಲಾ ಒಟ್ಟಿಗೆ ಆನಂದವಾಗಿಯೇ ಇದ್ದೆವು. ಆದರೆ ವರ್ಷದಲ್ಲೆ ಇವಳ ಬಣ್ಣ ಬಯಲಾಗಿತ್ತು. ಇವಳಿಗೆ ನಾನು ಮಾತ್ರ ಬೇಕು. ಅತ್ತಿಗೆ ನಾದಿನಿ ಜಗಳ ಶುರು. ಅಪ್ಪ ಮಗಳ ಪರ. ಅವರ ಅರಚಾಟಕ್ಕೆ ನನಗೆ ಹುಚ್ಚು ಹಿಡಿಯುವುದೊಂದೇ ಬಾಕಿ. ಇವಳ ಮೇಲೆ ಚಾಡಿ ಹೇಳದ ದಿನವಿಲ್ಲ.

‘ನೀನು ಓದಿದವಳು ಅವಳಿಗೆ ಬುದ್ಧಿಸಾಲ್ದು, ಹಳ್ಳಿಹೆಂಗ್ಸು’ ಅಂತ ವಿಧ ವಿಧವಾಗಿ ಹೇಳಿದರೂ ದುಸುಮುಸು ತಪ್ಪಲಿಲ್ಲ. ‘ಮನೆಗೆಲ್ಸ ಎಲ್ಲಾ ಅವ್ವ, ಮಗಳೇ ಮಾಡ್ತಾರೆ. ರಾಣಿಯಾಗಿರೋಕೇನ್ ಧಾಡಿ ನಿನ್ಗೆ’ ಅಂದೂ ನೋಡಿದೆ. ‘ಕೆಲಸದವರ್‍ನ ಇಟ್ಕೊಳ್ಳೋಣ. ಇವರ ಸಾವಾಸ್ವೇ ಬೇಡ….. ಈ ಮನೇಲಿ ನಾನಿರಬೇಕು. ಇಲ್ಲ ನಿಮ್ಮವ್ವ, ತಂಗಿ ಇರಬೇಕು’ ಎಂದು ಸೂಟ್‌ಕೇಸ್ ಹಿಡಿದೇಬಿಟ್ಟಳು. ಅವ್ವ ಅಡ್ಡ ತರುಬಿದಳು. ರಪ್ಪನೆ ಇವಳ ಕೆನ್ನೆಗೂ ಹೊಡೆದಳು. ಇವಳು ಸೂರು ಹಾರಿಹೋಗುವಂತೆ ಚೀರಿದಾಗ ಆತಂಕಗೊಂಡ ನಾನು ಆವೇಶದಲ್ಲಿ ಅವ್ವನಿಗೆ ಹೊಡೆದು ದಬ್ಬಿದ್ದೆ. ಅವ್ವ ಒಂದೂ ಮಾತನಾಡಲಿಲ್ಲ. ಗರಬಡಿದವಳಂತೆ ನಿಂತಳು. ನಾಚಿದೆ. ಭೂಮಿಗಿಳಿದು ಹೋದೆ. ಪರಿತಪಿಸಿದೆ. ‘ಅವ್ವಾ, ಅಣ್ಣನ ಸುಖ ನಮಗೆ ಮುಖ್ಯ. ನಮ್ಮಿಂದಾಗಿ ಅವನಿಗೆ ಸುಖವಿಲ್ಲ. ನಾನ್ ಕೂಲಿಮಾಡಿ ಸಾಕ್ತಿನಿ. ನಡಿಯವ್ವ…….. ಹಳ್ಳಿಗೋಗೋಣ’ ಇವರು ಹಳ್ಳಿ ಸೇರಿಕೊಂಡರು.

ಇವಳು ಬಸುರಿಯಾದಳು. ನನಗೆ ಬಡ್ತಿ ಸಿಕ್ಕಿತು. ‘ಶನಿಗಳು ತೊಲಗಿದ್ಮೇಲೇ ಒಳ್ಳೆದಾಗಿದ್ದು’ ಇವಳು ಅಂದಳು ನನಗೂ ಹಾಗೇ ಅನ್ನಿಸಬೇಕೆ! ನನ್ನ ತಂಗಿ ನನ್ನಂಗೆ ಚಲುವಿ. ಹಳ್ಳಿ ರೈತನೊಬ್ಬ ಮದುವೆಯಾದ. ಕಾಸು ಖರ್ಚಿಲ್ಲದೆ ಮದುವೆಯಾದಾಗ ನಿಟ್ಟುಸಿರು ಬಿಟ್ಟಿದ್ದೆ. ‘ನಿಮ್ಮವ್ವ ಮತ್ತೆಲ್ಲಿ ಬಂದು ವಕ್ಕರಿಸ್ತಾಳೋ ಕಣ್ರಿ’ ಅಂತ ಇವಳು ಹೌಹಾರಿದಳು. ಆದರೆ ಅವ್ವ ಮಗಳ ಮನೇಲೇ ಉಳಿದಳು. ಟೆಲಿಗ್ರಾಂ ತಲುಪಿದ ಕೂಡಲೇ ಅವ್ವ ಓಡಿಬಂದಿದ್ದಳು. ತಂಗಿನೂ ಅವಳ ಗಂಡನೂ ಬಂದಿದ್ದರು. ಮೈದಡವೋದೇನು, ಕೈಕಾಲು ಹಿಡಿದು ಅಳೋದೇನು, ಕಣ್ಣೀರು ಒರೆಸೋದೇನು. ಅದೆಂತ ನಿರ್ವ್ಯಾಜ್ಯ ಪ್ರೀತಿ! ‘ಅತ್ತು ರಂಪ ಮಾಡ್ಬೇಡಿ, ಇದೇನ್ ಸರ್ಕಾರಿ ಆಸ್ಪತ್ರೆ ಅಲ್ಲ’ – ಹೆಂಡತಿಯ ಗದರಿಕೆ. ‘ಯಾರ್ ಸತ್ತಿದಾರೇ ಅಂತ ಹೀಗ್ ಅಳ್ತಿರಿ….. ಹುಶ್ ಸದ್ದು’ ಮಗನ ಗತ್ತು. ‘ಮಾತಾಡೋ ಮಗಾ’ ಅಂತ ಅವಳು ಅತ್ತಿದ್ದೂ ಅತ್ತಿದ್ದೆ. ಮಾತಾಡಲು ಬಾಯಿಬಾರದು. ಸನ್ನೆ ಮಾಡಲೂ ತ್ರಾಣವಿಲ್ಲ, ಯಮಯಾತನೆ. ಅವ್ವನನ್ನು ಬಿಟ್ಟು ತಂಗಿ ಅವಳ ಗಂಡ ಅಂದೇ ಹೊರಟರು. ಇವರು ಇರಿ ಅನ್ನಲಿಲ್ಲ. ಅವರ ಹಿಂದೆಯೇ ಹೆಂಡತಿ, ಮಗನೂ ಹೊರಟುಹೋದರು. ಆ ಮೇಲೆ ಇವರುಗಳು ನನ್ನನ್ನು ನೋಡಲು ಬಂದದ್ದು ಕಡಿಮೇನೆ. ಕೆಳಗಿರೋ ಕ್ಯಾಂಟಿನ್‌ನವರಿಗೆ ಹೇಳಿ ನನ್ನವ್ವನ ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಿಬಿಟ್ಟಿದ್ದರು.

ಅವ್ವ ನನ್ನ ಕಾಲು ಒತ್ತುತ್ತಾ ಕೂರೋಳು, ತಲೆ ಒತ್ತೋಳು, ಕೈ ಹಿಡಿದೇ ಕೂತಿರೋಳು. ವಾಸನೆ ಬಂದೊಡನೆ ಹೇಲು ಉಚ್ಚೆ ತೆಗೆದು ಶುಚಿ ಮಾಡೋಳು, ವಾಂತಿ ಮಾಡಿದರೆ ಬೊಗಸೆಯಲ್ಲೇ ಹಿಡಿಯೋಳು. ಅವಳಿಗೆ ಅಸಹ್ಯ ಅನ್ನೋದೇ ಗೊತ್ತಿಲ್ಲ! ಆದರೆ ನನ್ನ ನೋವನ್ನು ಮಾತ್ರ ತೆಗೆದುಕೊಳ್ಳುವವರಿಲ್ಲ. ಎದೆಬಡಿತ ತೀವ್ರವಾದಾಗ ಸತ್ತುಹೋಗುತ್ತೇನೆಂಬ ಭಯ, ಹೆಂಡತಿಯನ್ನು ನೋಡಬೇಕೆನಿಸುತ್ತಿತ್ತು.

ನರ್ಸಿಂಗ್ ಹೋಮ್ ಬಿಲ್ ಕಟ್ಟಲು ಮಗ ಒಮ್ಮೆ ಬಂದ. “ನಿಮ್ಮ ತಾಯಿ ಬರ್‍ದೇ ತುಂಬಾ ದಿನವಾಯ್ತಲ್ಲ…..” ಡಾಕ್ಟರೇ ಪ್ರಶ್ನಿಸಿದ್ದರು. ನನ್ನ ಕಿವಿ ನಿಮಿರಿತ್ತು. ಅವರಿಗೆ ಮೈ ಹುಷಾರಿಲ್ಲ…. ಪಾಪ” ಮಗನ ನಿರ್ಲಿಪ್ತ ಭಾವ. “ನನ್ನ ಮಗನ್ನ ಹೆಂಗಾರ ಬದುಕಿಸಿ ಡಾಕ್ಟ್ರೆ” ಅವ್ವ ನೂರನೇ ಬಾರಿ ಸೆರಗೊಡ್ಡಿ ಬೇಡುತ್ತಿದ್ದಳು. ಡಾಕ್ಟರನಿಗೂ ಅವ್ವ ಎಂದರೆ ತಾತ್ಸಾರ. ಮಾತನಾಡದೆ ಸೆಟೆದುಕೊಂಡು ಹೋದ. “ದೇವ್ರೇ, ನನ್ನ ಈ ಮಗೀಗೆ ನನ್ನ ಆಯಸ್ಸು ಕೊಡು ನನ್ ತಂದೆ. ಅವನ ಉಳ್ಸು” ದೇವರಲ್ಲಿ ದಿನನಿತ್ಯ ಅವ್ವನ ಮೊರೆ. ಅವಳ ಮೊರೆ ಕೇಳಲಿಲ್ಲ. ನನ್ನ ಹೊಟ್ಟೆ ಉಬ್ಬುತ್ತಾ ಹೋಯಿತು. ಮೂತ್ರ ಈಚೆ ಬರುತ್ತಿಲ್ಲ. ಕಿಬ್ಬೊಟ್ಟೆಯಲ್ಲಿ ಕತ್ತರಿ ಆಡಿಸಿದಂತೆ ನೋವು, ಪ್ರಾಣಾಂತಿಕ ನೋವಿಗೆ ಎಡಭಾಗವೆಲ್ಲಾ ತುಯ್ದಾಡ ಹತ್ತಿತು. ಕೈ ಎತ್ತಿ ಸನ್ನೆ ಮಾಡುವಷ್ಟು ಬಲ ಬಂತು. ಅವ್ವ ಓಡಿ ಡಾಕ್ಟರನನ್ನು ಕರೆತಂದಳು. ಪರೀಕ್ಷೆ ಶುರು. ನರ್ಸ್‌ಗಳೂ ಬಂದರು. ಕೆಥೆಡ್ರಾ ಏರಿಸಿದರು. ಆದರೂ ಒಂದುಹನಿ ಮೂತ್ರ ಬಾರದು. ತೇಲುಗಣ್ಣು ಮಾಡಿದೆ. “ಮನೆಗೆ ಫೋನ್ ಮಾಡ್ತೀವಜ್ಜಿ” ಡಾಕ್ಟರ್ ಓಡಿದ. ಹಿಂದೆಯೇ ಹೆಂಡತಿ ಮಗ ಸೊಸೆ ಕಾರಲ್ಲಿ ಬಂದರು. “ಕಿಡ್ನಿ ಸರಿಯಾಗಿ ವರ್ಕ್ ಮಾಡ್ತಿಲ್ಲ. ಐ ಟ್ರೈ ಮೈ ಬೆಸ್ಟ್ …. ಯೂರಿನ್ ಪಾಸಾದ್ರೆ ಸೇಫ್” ಡಾಕ್ಟರ್ ವಿವರಿಸಿದರು.

“ಕಂಡೀಷನ್ ಹೇಗೆ ಅಂತೀರಾ?”

“ನೋ ಚಾನ್ಸ್ ಅನ್ಸುತ್ತೆ. ದೇವರಿದಾನೆ ಡೋಂಟ್‌ವರಿ” ಡಾಕ್ಟರ್‌ ಎಂದಿನ ನುಡಿ. “ಹಾಗಾದ್ರೆ ತಂಗಿ ರಜನಿಗೆ ಫೋನ್ ಮಾಡಿ ಬಿಡ್ತೀನಿ” ಮಗನೆಂದ.

ಸಂಜೆಗೆ ಮಗಳು ರಜನಿ ಬಂದಳು. ಯೂರಿನ್‌ ಪಾಸ್ ಆಯಿತು. ಕಿಬ್ಬೊಟ್ಟೆಗೆ ಹತ್ತಿದ ಬೆಂಕಿ ಆರಿತ್ತು. ಡಾಕ್ಟರ್ ಬಂದು ನೋಡಿದರು – ನಗಲಿಲ್ಲ. “ಹೀ ಈಸ್ ಔಟ್ ಆಫ್ ಡೇಂಜರ್” ಅಂದರು. ಒಬ್ಬರ ಮುಖದಲ್ಲೂ ನಗುವಿಲ್ಲ. ಅವ್ವನ ಮೋರೆ ಊರಗಲ. ಮಾರನೆ ದಿನದಿಂದ ಮಗಳೂ ಇಲ್ಲ ಯಾರೂ ಇಲ್ಲ. ನನ್ನ ಕೈ ಕಾಲು ಒತ್ತುತ್ತಾ ದೇವರ ಧ್ಯಾನ ಮಾಡುವ ಅವ್ವ. ದೆವ್ವದಂತೆ ಮಲಗುವ ನಾನು. ಅದೇ ವಾರ ನನ್ನ ಅತ್ತೆ ಮಾವ ಅಂತಿಮ ದರ್ಶನಕ್ಕೆಂಬಂತೆ ಬಂದರು. “ಏನಾಗಿದೆ ಸಾರ್ ಈವಯ್ಯನಿಗೆ?” ಇಲ್ಲದ ಕಾಳಜಿಯಿಂದ ಡಾಕ್ಟರರನ್ನು ಪೀಡಿಸಿದರು. ‘ವಯಸ್ಸಾದವರು ಚೆನ್ನಾಗಿದ್ದಾರೆ. ಈ ಡಾಕ್ಟರನ ತಲೆಯೂ ನೆರೆತಿದೆ. ಎಂತಹ ತಾತ್ಸಾರ! ವಯಸ್ಸಾದವರಿಗೆ ಚಿಕಿತ್ಸೆ ಬೇಡವೆ? ಅವರಿಗೆ ಬದುಕು ಬೇಡವೆ? ‘ಕಂಡೀಷನ್ ಹೇಗೆ ಅಂತೀರಾ?’ ಮತ್ತೆ ಅವರ ಕಾಳಜಿ, ‘ವರಸ್ಟ್ ಕಂಡೀಷನ್. ಹೋದ್ರೇನೇ ವಾಸಿ. ಹೀಗಿದ್ದು ಏನ್ ಉಪಯೋಗ ಹೇಳಿ, ಟೈಂ, ಮನಿ ಸರ್ವಿಸ್ ಎಲ್ಲಾ ವೇಸ್ಟ್’ ತೋಳಿಗೆ ದನಕ್ಕೆ ಎಟ್ಟಿದಂತೆ ಸೂಜಿ ಎಟ್ಟಿದ. ನಿದ್ದೆಗೆ ಜಾರುತ್ತೇನೆ. ಎದೆಯಲ್ಲಿ ಭರ್ಜಿ ಹಾಕಿ ಇರಿದಂತಾದಾಗ ಎಚ್ಚರವಾಗಿಬಿಡುತ್ತದೆ. ಒದ್ದಾಡುತ್ತಾನೆ. ಅವ್ವ ಕಂಗಾಲಾಗುತ್ತಾರೆ. ಡಾಕ್ಟರ್ ಬಂದು ಪರೀಕ್ಷಿಸುತ್ತಾರೆ. ಕ್ಷಣದಲ್ಲೇ ಬೆವರಿನ ಮುದ್ದೆಯಾಗುತ್ತೇನೆ. “ಓ! ಗಾಡ್! ಹಾರ್ಟ್ ಅಟ್ಯಾಕ್ ಆಗಿದೆ” ಎನ್ನುತ್ತಾ ನರ್ವ್‌ಗೆ ಇಂಜೆಕ್ಷನ್‌ ದೂಡುತ್ತಾ ಮುಖ ಕೆಡಿಸಿಕೊಳ್ಳುತ್ತಾರೆ. ಅವ್ವನ ಲಬಲಬೋ, ಮೂರ್ಛೆ ಬರುತ್ತದೇನೋ ಅನ್ನಿಸಿದಾಗ ಎಚ್ಚರ ತಪ್ಪಿದರೆಲ್ಲಿ ಸಾಯುತ್ತೇನೋ ಎಂದಂಜುತ್ತೇನೆ. ಕಣ್ಣುಗುಡ್ಡೆಗಳು ಮೇಲೇರಿ ಕತ್ತಲೆಗೂಡಿಸುತ್ತವೆ.
* * *

ಕಣ್ಣು ತೆರೆಯಲಾಗದಷ್ಟು ನಿಶ್ಯಕ್ತಿ, ಮಂದ ಬೆಳಕಿನಲ್ಲಿ ಮನೆಯವರೆಲ್ಲಾ ಕಾಣುತ್ತಾರೆ – ಸಾವಿಗಾಗಿ ಕಾದು ನಿಂತವರಂತೆ ಎಚ್ಚರ ಹೋಗಿ ಎರಡು ಮೂರು ದಿನವೇ ಆಗಿರಬಹುದು. ಮಗಳು ಅಳಿಯ ಬೇರೆ ಬಂದಿದ್ದಾರೆ. ಸೊಸೆ ಕಾಣುತ್ತಾಳೆ. ಸಾಯುತ್ತೇನೆಂದು ಎಲ್ಲರೂ ಸೇರಿದರೆ? ಗಾಬರಿಗೊಳ್ಳುತ್ತೇನೆ. ಅವ್ವ ಮಾತ್ರ ಕೈ ಹಿಡಿದೇ ಕೂತಿದ್ದಾಳೆ. ಹೆಂಡತಿಯ ಕಣ್ಣಲ್ಲೂ ನೀರು ಕಂಡಾಗ ನೆಮ್ಮದಿ.

“ಗಾಬರಿಯಾಗ್ಬೇಡಿ. ಮೊದಲಿಗಿಂತ ಕಂಡೀಷನ್ ಬೆಟರ್ ಇದೆ” – ಇವಳಿಗೆ ಡಾಕ್ಟರ್ ಹೇಳುವಾಗ ಬದುಕುವ ಆಶೆ ಹೆಮ್ಮರವಾಗುತ್ತದೆ.

“ನನ್ನ ಮಗೀನ ಬದ್ಲು ನನ್ನ ತಗೊಂಡೋಗಪ್ಪಾ ಸಿವ್ನೆ, ನಿನ್ನ ಕಣ್ಣಾಗೆ ಮಣ್ಣು ಹೊಯ್ಯಾ”. ಅವ್ವನದು ನಿರಂತರ ಬಡಬಡಿಕೆ.

ಮರುದಿನ ಬೆಳಿಗ್ಗೆಯೇ ಸೂಟ್‌ಕೇಸ್ ಹಿಡಿದ ಮಗಳು ಅಳಿಯ ಕಾಣುತ್ತಾರೆ. “ಹೊರಟುಬಿಟ್ಯಲ್ಲೇ?” ಇವಳ ಎದೆಗುದಿ.

“ಅವರಿಗೆ ಎಕ್ಸಾಂ ಟೈಮು. ರಜಾ ಸಿಗೋಲ್ಲಮ್ಮ, ಪದೇ ಪದೇ ಯಾಕೆ ಸೀರಿಯಸ್ ಅಂತ ಟೆಲಿಗ್ರಾಂ ಕೊಡಿಸ್ತೀ?”

“ಮತ್ತೇನು ಮಾಡು ಅಂತೀಯ?” ಮಗ ರೇಗುತ್ತಾನೆ.

“ಒಂದೇ ಸಲ ಹೋದಾಗ ತಿಳಿಸಿಬಿಡಿ. ಮೈಸೂರಿಂದ ಪದೇಪದೇ ಬರೋಕೆ ಆಗುತ್ತಾ. ಬಸ್ ಚಾರ್ಜ್ ಎಷ್ಟು ಆಗುತ್ತೆ ಗೊತ್ತಾ?”

“ಎಲೈ ಪಾಪಿ” ನಿಟ್ಟುಸಿರು ಬಿಡುತ್ತೇನೆ.

“ಎಷ್ಟೊಂದು ಗಬ್ಬು ವಾಸ್ನೆಬರ್ತಾ ಇದೆ ಡಾಕ್ಟ್ರೇ. ಬೆಡ್ ಚೇಂಜ್ ಮಾಡಬಾರ್ದ?” ಮಗಳ ಆಕ್ಷೇಪಣೆ.

“ಬೆಡ್‌ಸೋರ್ ಆಗಿದೆಯಮ್ಮ ಬೆನ್ನಲ್ಲಿ. ದಿನಾ ಪೌಡರ್ ಹಾಕಿ ಕ್ಲೀನ್ ಮಾಡ್ತಾ ಇದೀವಿ” ಡಾಕ್ಟರದು ನಿರ್ಭಾವ.

“ಏನಜ್ಜಿ? ಹಿಂಗಾ ನೋಡ್ಕೊಳ್ಳೋದು. ಹುಳ ಬಿದ್ದರೇನ್ ಗತಿ…… ಸೆನ್ಸ್ ಬೇಡ್ವಾ ನಿಂಗೆ?” ಅವ್ವನ ಮೇಲೆ ಹರಿ ಹಾಯುತ್ತಾಳೆ ಮಗಳು. ವಾಕರಿಸುವಂತೆ ಮುಖ ಮಾಡುತ್ತಾಳೆ. ಚಿಕ್ಕಂದಿನಲ್ಲಿ ಇವಳಿಗೆ ಮೈಮೇಲೆಲ್ಲಾ ಕಜ್ಜಿಯಾಗಿ ವ್ರಣವಾದಾಗ ಕಿರಿ ಕಿರಿ ಮಾಡುವ ಇವಳನ್ನು ಎದೆಯ ಮೇಲೆಯೇ ಬೆಳತನಕ ಮಲಗಿಸಿಕೊಂಡಿರಲಿಲ್ಲವೆ? ಗಾಯ ತೊಳೆದು ಮುಲಾಮು ಹಚ್ಚಿ ಕೈಗಳನ್ನು ತೊಳೆಯದೆ ಅನೇಕ ಬಾರಿ ತಿಂಡಿ ತಿಂದದ್ದೂ ಇದೆ. ಅಳು ಒತ್ತರಿಸಿಕೊಂಡು ಬರುತ್ತದೆ. ತನ್ನ ಒರಟು ಕೈಗಳಿಂದ ಅವ್ವ ಕಣ್ಣು ಒರೆಸುತ್ತಾಳೆ. ಕ್ಷಣದಲ್ಲೇ ರೂಮ್ ಖಾಲಿ. ಅವ್ವ ನಾನು ಇಬ್ಬರೆ. ಜೊತೆಗೆ ನಿಧಾನವಾಗಿ ಡ್ರಿಪ್‌ನಿಂದ ಬೀಳುವ ಹನಿ ದೊಡ್ಡದಾಗಿ ಶಬ್ದ ಮಾಡಿ ಹೆದರಿಸುತ್ತದೆ.

ರಾತ್ರಿ ಸುಮಾರಿಗೆ ತಂಗಿ ಗಂಡನೊಂದಿಗೆ ಬರುತ್ತಾಳೆ. ಒಂದಿಷ್ಟು ಹೊತ್ತು ಮುಸು ಮುಸು ಅಳುತ್ತಾಳೆ. ತಾಯಿಯೊಂದಿಗೆ ಗುಸುಗುಟ್ಟುತ್ತಾಳೆ. “ಮನೇಲಿ ಮಕ್ಳನ್ನ ನೋಡಿಕೊಳ್ಳೋರಿಲ್ಲ ಬಾ ಕಣವ್ವ” ಗಂಟು ಬೀಳುತ್ತಾಳೆ. “ಈ ಸ್ಥಿತಿನಾಗೆ ಇವನ್ನ ಹೆಂಗೆ ಬಿಟ್ಟು ಬರ್‍ಲಿ” ಗದ್ಗದಿತಳಾಗುತ್ತಾಳೆ ಅವ್ವ.

“ಹಂಗಂತ ಏಟು ದಿನ ಇರ್ತಿ, ಇವನಿಗೇನ್ ಹೆಡ್ತಿ ಮಕ್ಳು ಇಲ್ವ…… ನೋಡ್ಕೊತಾರೆ ಬಾರವ್ವ.”

“ಇವನು ಉಳಿಯೋ ಮಟಗಿಲ್ಲವ್ವ, ಮಂಜಿನ ಕೊಲ್ಡ ನಂಗೆ ಬಿದ್ಕಂಡವ್ನೆ ಒಂದೆಲ್ಡು ದಿನ ತಾಳ್ಮಗ” ಅವ್ವ ಅಂಗಲಾಚುತ್ತಾಳೆ. ನನ್ನ ಎದೆ ಭಾರವಾಗುತ್ತದೆ. ರಾತ್ರಿಯ ಬಸ್ಸಿಗೆ ತಂಗಿ, ಅವಳ ಗಂಡ ಹೊರಟು ಹೋಗುತ್ತಾರೆ. ಎದೆಯಲ್ಲಿ ಒಂದೇ ಸಮನೆ ನೋವು. ಬೆಂಗಳೂರಿಗಾದ್ರೂ ಕರೆದೊಯ್ದರೆ ಉಳಿದೇನು. ಇಷ್ಟು ತಾತ್ಸಾರ ಮಾಡಿದ್ರೂ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲವೆ? ಎಂಥ ಮೋಹ!

ಆಕ್ಸಿಜನ್ ಹೋಗ್ತಾ ಇದ್ದರೂ ಯಾಕೋ ಉಸಿರಾಟ ಕಷ್ಟವಾಗಿದೆ. ಹೇಳಲಾಗುತ್ತಿಲ್ಲ. ತುಟಿಗಳು ನಡುಗುತ್ತವೆ. ಆದರೂ ನನ್ನದೇನಂತಹ ಗಂಭೀರ ಪರಿಸ್ಥಿತಿಯಲ್ಲ. ಬ್ರೇನ್ ಜಖಂ ಆಗಿದೆ ಅಂತ ನಂಬಿದಾರೆ. ನನಗೆಲ್ಲಾ ತಿಳೀತಾ ಇದೆ. ಪ್ರಜ್ಞೆ ಇದೆ. ಹೀಗಿರುವಾಗ ನನಗೆ ಸಾಯುವಂತದ್ದೇನಾಗಿದೆ. ಎಷ್ಟು ಮಂದಿ ಹೀಗಾಗಿ ಚೇತರಿಸಿಕೊಂಡಿಲ್ಲ. ಹಾಸಿಗೆಯಲ್ಲಿ ತಟ್ಟನೆ ಒಂದೂ, ಎರಡೂ ಆಗಿಬಿಡುತ್ತದೆ. ತಾಯಿ ಗೊಣಗುತ್ತಲೇ ಶುಚಿ ಮಾಡುತ್ತಾಳೆ. ಇತ್ತೀಚೆಗೆ ಅವ್ವನ ಗೊಣಗಾಟವೂ ಹೆಚ್ಚಿದೆ. ಕೈ ತೊಳೆಯಲು ಬಾತ್‌ರೂಮ್‌ಗೂ ಹೋಗದೆ ಸೀರೆಗೆ ಒರೆಸಿಕೊಳ್ಳುತ್ತಾಳೆ. ನನ್ನ ಹೊರಳಾಟಕ್ಕೆ ಬೆದರಿದ ಅವ್ವ ಡಾಕ್ಟರನ್ನು ಕರೆತರುತ್ತಾಳೆ. ಇಂಜಕ್ಷನ್‌ಗಳಾಗುತ್ತವೆ. ಎದೆ ಮಸಾಜ್ ನಡೆಯುತ್ತದೆ. “ಮನೆಯವರಿಗೆಲ್ಲಾ ಈಗ್ಲೆ ಫೋನ್ ಮಾಡಿ” ಡಾಕ್ಟರ್ ದನಿಯಲ್ಲಿ ಗಾಬರಿ ನರ್ಸ್ ಓಡುತ್ತಾಳೆ.

ಗಂಟೆಗಳುರುಳಿದರೂ ಯಾರೊಬ್ಬರೂ ಬರುವುದಿಲ್ಲ. ಎದೆ ಹಿಡಿದಂತಾಗುತ್ತದೆ. ನಾನು ಬದುಕುಳಿದರೆ ಇವರಿಗೆಲ್ಲಾ ಸರಿಯಾದ ಪಾಠ ಕಲಿಸುತ್ತೇನೆ. ಆತ್ಮಸ್ತೈರ್‍ಯ ಕುದುರಿಸಿಕೊಳ್ಳುತ್ತೇನೆ. ನರ್ಸ್ ಬಂದು ಡ್ರಿಪ್ ಬದಲಿಸುತ್ತಾಳೆ. “ಹೆಂಗವ್ವಾ? ನನ್ನ ಮಗ ಬದುಕಿ ಉಳಿದಾನಾ?” ಅವ್ವನ ಯಾತನೆ. “ದೇವರ ದಯೆ ಇದ್ದರೆ ಉಳಿದಾರು ಅಜ್ಜಿ” ಲೊಚಗುಟ್ಟುತ್ತಾಳೆ ನರ್ಸ್. “ಅವ್ವಾ, ಇವ್ನ ಸಂಕಟ ನೋಡಲಾರೆ ಕಣವ್ವ. ದೇವರು ಬ್ಯಾಗ ಇವ್ನ ಕಣ್ಣು ಮುಚ್ಚಿದ್ರೆ ಸಾಕ್ ಅನಸ್ತದೆ. ನಾನ್ ಏಗ್ಲಾರೆ ಸಿವ್ನೆ” ಕೈ ಜೋಡಿಸಿ ಮೇಲೆ ನೋಡುತ್ತಾಳೆ – ನನ್ನ ಸಾವಿಗಾಗಿ ಪ್ರಾರ್ಥಿಸುವವಳಂತೆ. ನನಗೆ ಒಮ್ಮೆಲೆ ಅಳು ನುಗ್ಗಿ ಬರುತ್ತದೆ. ಕಣ್ಣಲ್ಲಿ ನೀರೇ ಇಲ್ಲ. ಹೆತ್ತವ್ವನೂ ಹಿಂಗಂದ ಮೇಲೆ ಬದುಕುವ ಆಸೆಯೇ ಬತ್ತುತ್ತದೆ. ಬದುಕಲು ನಾಚಿಕೆಯುಂಟಾಗಿ ಸಾಯಲು ಸಿದ್ಧನಾಗುತ್ತೇನೆ. ಕಾಯುತ್ತೇನೆ ರೆಪ್ಪೆ ಬಡಿಯದೆ ಸಾವಿಗಾಗಿ.
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಡ
Next post ನಾನಿಲ್ಲವಾಗುವೆ !

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…