ಯಾರೋ ಬರೆದ ಕವನ
ಕಾಡಿತ್ತು ಎಡೆಬಿಡೆದೆನ್ನ ಮನ
ನಿಂತಲ್ಲಿ ಕುಳಿತಲ್ಲಿ ಮಲಗಿದಲ್ಲಿ
ಬೆನ್ನು ಹತ್ತಿದ ನಕ್ಷತ್ರಿಕನಂತೆ
ಕಣ್ಣಾಡಿಸಿದೆ ಅರ್ಥವಾಗಲಿಲ್ಲ
ನವ್ಯವೋ ನವೋದಯವೋ
ಏನೋ ತೋಚಿದ್ದು ಗೀಚಿದ್ದು
ಭಟ್ಟಿ ಇಳಿಸಿದ್ದಾರೆ.
ಓದಿದೆ ಒಂದಲ್ಲ ಹತ್ತಾರು ಸಲ
ಜ್ಞಾನ ಚಕ್ಷುಗಳಿಂದ
ಪದಗಳ ಪದರವ
ನಯವಾಗಿ ಬಿಡಿಸಿದೆ.
ಅಂಟು ಅಂಟು ಬ್ರಹ್ಮಗಂಟು
ಸಾಮರಸ್ಯದ ಸವಿನಂಟು
ಒಳಹೊಕ್ಕಾಗ ವಿಸ್ಮಯ
ಶಬ್ದಲಂಕಾರದ ಚಾತುರ್‍ಯ
ಅದ್ಭುತ ಮಾಯಾಜಾಲ
ಕಳಿತ ಹೊನ್ನಿನ ಫಲ
ಒಂದೊಂದರಲ್ಲಿ ಅದೇನು ಅರ್‍ಥ
ಭಾವಾರ್‍ಥ ಗೂಢಾರ್‍ಥ
ಬೆರಗಾದೆ ಬಳಸಿದ ರೀತಿಗೆ
ಪದಗಳಿಂದ ಪದಗಳು
ಪದಗಳಲ್ಲಿ ಪದಗಳು
ಪದ್ಯವಾದದ್ದಾದರೂ ಹೇಗೆ?
ಬಾಯಿಮಾತಿನ ಮಾತಲ್ಲಿ ಬಿಡಿ
ಕಡಲ ಮಂಥನದಿಂದ
ಅಮೃತ ಹೊರ ಹೊಮ್ಮಿದಂತೆ
ಹೃದಯಾಂತರಾಳದ ಭಾವ
ಚಿಲುಮೆ ಚಿಮ್ಮಿದಂತೆ
*****