ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ
ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲನವ್ವಾ
ಮನಸುಳ್ಳವರು ನೀವು ಪುಣ್ಯಗೈದಿರವ್ವಾ
ಮಹಾಲಿಂಗ ಗಜೇಶ್ವರನನಗಲಿದಡೆ
ನಿದ್ರೆಯೆಮಗಿಲ್ಲ
ಕನಸಿನ್ನೆಲ್ಲಿ ಬಹುದವ್ವಾ
[ದಿಟವಾದಡೆ-ನಿಜವಾದರೆ]
ಉರಿಲಿಂಗದೇವನ ವಚನ. ತನ್ನನ್ನು ಹೆಣ್ಣು ಎಂದು ಭಾವಿಸಿಕೊಂಡು ಹೇಳಿರುವ ವಚನ.
ನೀವು ಪುಣ್ಯವಂತರು. ನಲ್ಲ ಅಗಲಿದರೆ ಅವನ ಕನಸು ಕಂಡು ಸುಖಿಯಾಗುತ್ತೀರಿ. ಕನಸು ದಿಟವಾದರೆ ಮಾತ್ರ ನನ್ನ ನಲ್ಲ ನಿಜ. ನೀವು ಪುಣ್ಯವಂತರು. ಯಾಕೆಂದರೆ ನಿಮ್ಮ ಮನಸ್ಸು ನಿಮ್ಮ ಬಳಿ ಇದೆ, ಇಲ್ಲದ ನಲ್ಲನ ಕನಸು ತೋರುತ್ತದೆ. ಮನಸ್ಸನ್ನು ಮಹಾಲಿಂಗ ಗಜೇಶ್ವರನಿಗೆ ಕೊಟ್ಟಿರುವುದರಿಂದ ನನಗೆ ಮನಸ್ಸೂ ಇಲ್ಲ, ಆದ್ದರಿಂದಲೇ ಕನಸೂ ಇಲ್ಲ.
ಮನಸ್ಸು ಕೊಟ್ಟೆ. ಅವನು ಸಿಗಲಿಲ್ಲ. ಅವನೊಡನೆಯೇ ನನ್ನ ಮನಸೂ ಕನಸೂ ಹೋಗಿಬಿಟ್ಟಿವೆ ಎಂಬುದು ಕೇವಲ ಚೆಲುವಾದ ಮಾತುಗಳು ಮಾತ್ರವಲ್ಲ. ಅನುಭವದ ಬಗ್ಗೆ ಮಾತನಾಡಿಕೊಳ್ಳುವುದರ ಸುಳ್ಳುತನವನ್ನು ಕುರಿತದ್ದು. ಮತ್ತೂ ಮನಸು, ಕನಸು ಎರಡೂ ಇಲ್ಲವಾದ ತಹತಹ, ತಳಮಳವನ್ನು ಕುರಿತದ್ದು.
ಕೇವಲ ಅಕ್ಕ ಮಾತ್ರವಲ್ಲ, ಅನೇಕ ವಚನಕಾರರು ತಮ್ಮನ್ನು ಹೆಣ್ಣು ಎಂದು ಭಾವಿಸಿ ತಮ್ಮ ಮತ್ತು ದೇವರ ಸಂಬಂಧ ಕುರಿತು ಹೇಳಿಕೊಂಡಿದ್ದಾರೆ. ಭಕ್ತಿಯ ಹೆಣ್ಣು ಮುಖ ಅರಿಯಲು ಹೆಣ್ಣೆ ಯಾಕಾಗಬೇಕು, ಹೆಣ್ಣು ಮನಸು ಸಾಕು!
*****