ಕತ್ತಲು, ಕತ್ತಲು, ಸುತ್ತಲು ಕವಿದಿದೆ
ಬೆಳಕೆಂಬುವದನು ತೂರುವಿರಾ ?
ಅಪಾರ ಗಗನವು ಇರತಿಹುದಂತೆ !
ತಾರಾಗಣದಿಂ ತೋರುವುದಂತೆ !
ಕಾರ್‍ಮೋಡಗಳಿ೦ ಮುಸುಕಿಹುದಂತೆ !
ಚಂದ್ರ ಸೂರ್‍ಯರಲ್ಲಿರುತಿಹರಂತೆ !
ಜಗವನು ಬೆಳಗಲು ನಿಂದಿಹರಂತೆ !
ರಾಹು ಕೇತುಗಳು ಪೀಡಿಪವಂತೆ !
ಇಲ್ಲದ ಸೌಖ್ಯವು ಅಲ್ಲಿಹುದಂತೆ !
ಕಣ್ಣುಗಳಿಲ್ಲದ ಕುರುಡನು ನಾನಿಹೆ,
ಕತ್ತಲು, ಕತ್ತಲು, ಸುತ್ತಲು ಕವಿದಿದೆ
ಬೆಳಕೆಂಬುವದನು ತೋರುವಿರಾ ? ||೧||
ಭಾರತ ನಾಡೊಂದಿರುತಿಹುದಂತೆ !
ಹಳ್ಳಿಗಳಿಂದದು ತುಂಬಿಹುದಂತೆ !
ಕಷ್ಟದಿ, ತಾಪದಿ, ಬಳಲುವುದಂತೆ !
ಗಾಂಧಿ, ಜವಾಹರರಿರುತಿಹರಂತೆ !
ದೀನೋದ್ಧಾರಕೆ ಹೆಣಗುವರಂತೆ !
ಅರಿಗಳ ತಾಪವ ಸಹಿಸುವರಂತೆ !
ರಾಟಿಯ ತಿರುಹಲು ಬೋಧಿಪರಂತೆ !
ಹೊಲೆಯರ ಮುಟ್ಟಲು ಹೇಳುವರಂತೆ !
ಸ್ವಾತಂತ್ರ್ಯವ ಸಲೆ ಗಳಿಸುವರಂತೆ !
ಕಣ್ಣುಗಳಿದ್ದೂ ಕುರುಡನು ನಾನಿಹೆ,
ಕತ್ತಲು, ಕತ್ತಲು, ಸುತ್ತಲು ಕವಿದಿದೆ
ಬೆಳಕೆಂಬುವದನು ತೋರುವಿರಾ ? || ೨ ||
*****