ಬೆಳ್ಳಕ್ಕಿ ಹಿಂಡು ಸೂರ್‍ಯ ಕಂತುವ
ಸಮಯದಲ್ಲಿ ನೆತ್ತಿ ಸವರಿ ಹಾರಿವೆ
ಅವನ ನೆನಪಲ್ಲಿ ವಿಶಾದದ ಮಬ್ಬು ಆವರಿಸಿದೆ
ದೇವರ ಮನೆಯಲ್ಲಿ ನಂದಾದೀಪ ಉರಿದಿದೆ.
ಮರಗಳ ಮೌನಗೀತೆಯನ್ನು ಹಕ್ಕಿಗಳು
ಗೂಡಿನಲ್ಲಿ ಜಪಿಸಿವೆ ಮತ್ತೆ ಪ್ರೀತಿಯ
ಪಾರಿಜಾತ ಅವನ ಒಲುಮೆಯ ದಾರಿಗೆ ಹಾಸಿವೆ
ಕೆಂಪು ಬಿಳಿ ಮಕಮಲ್ಲು ಜೀವರಸ ಹರಿದ ಸಂಧ್ಯಾರಾಗ
ಮನದ ತುಂಬ ಅವನ ಭರವಸೆಯ ಕನಸುಗಳು
ದೇಹ ಇಲ್ಲಿ ಆತ್ಮದ ಸಂಗಕೆ ಕಾದು ಕುಳಿತಿವೆ
ಅವಳು ತೊಟ್ಟಿಲು ತೂಗುತ್ತಿದ್ದಾಳೆ ನಾಳೆಯ
ಅರಳಿಸಲು ಸಂಜೆ ತಂಗಾಳಿಯ ಮಧುರ ಮಂಜುಳ.
ಖಾಲಿ ಮನೆಯಲಿ ಅವನ ಧ್ಯಾನವರಳಿ ಘಮ
ಒಲೆಯ ಮೇಲೆ ಅರಳಿದ ಬಿಳಿ ಅನ್ನ ನಿಜದ ಪ್ರೀತಿ
ಸ್ವರ್‍ಗ ಆಸೆ ಇರದ ಮನದ ನಿರ್‍ಮಲ ಪ್ರೀತಿ
ನೀಲ ಆಕಾಶದ ತುಂಬ ಸ್ವಚ್ಛಂದ ಚಿಕ್ಕಿಗಳು.
ಎಷ್ಟು ಸವೆದಿರುವೆ ದಾರಿ ದುಃಖದಲಿ ಬಳಲಿ
ನನ್ನ ನೋವಿನಲಿ ಎಷ್ಟು ಕರೆದರೂ ನೀ ಬಲುದೂರ
ಕರುಣೆಯಲಿ ಒಮ್ಮೆ ಅಪ್ಪಿಕೋ ಬೆಳದಿಂಗಳ ಸ್ಮರಿಸಿ
ಪುಟ್ಟ ಪಾದದ ಗುರುತುಗಳ ನೀ ಗಮನಿಸಬೇಕಾಗಿದೆ.
*****